‘ಅಂಬಲಪಾಡಿ ಹೆದ್ದಾರಿ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ವಿರೋಧ ಇಲ್ಲ’
ಉಡುಪಿ: ಅಂಬಲಪಾಡಿ ಹೆದ್ದಾರಿ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ವಿರೋಧ ಮಾಡುವುದಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕೀರ್ತಿ ಶೆಟ್ಟಿ ಅಂಬಲಪಾಡಿ ಸ್ಪಷ್ಟ ಪಡಿಸಿದ್ದಾರೆ.
ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಜನ ವಿರೋಧಿ ಹಾಗೂ ಅಭಿವೃದ್ದಿ ವಿರೋಧಿ ಪಕ್ಷ ಎಂದು ಪ್ರಚಾರ ಮಾಡಲಾಗುತಿದ್ದು, ಇದು ಸತ್ಯಕ್ಕೆ ದೂರವಾದ ಸುಳ್ಳು ಸುದ್ದಿ ಎಂದು ಅಂಬಲಪಾಡಿ ಹೆದ್ದಾರಿ ಹೋರಾಟ ಸಮಿತಿಯ ಸದಸ್ಯರೂ ಆಗಿರುವ ಕೀರ್ತಿ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು, ವಾಹನ ಸವಾರರು ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ನಲ್ಲಿ ಅನುಭವಿಸಿದ ಸಮಸ್ಯೆ, ಅಪಘಾತ, ದುರ್ಘಟನೆ, ಜೀವಹಾನಿಗಳನ್ನು ದಿನನಿತ್ಯ ನೋಡಿದ ನಾವು ಇಲ್ಲಿ ಫ್ಲೈ ಓವರ್ ರಸ್ತೆಯ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದು ಅದು ಈಗ ಕಾರ್ಯರೂಪಕ್ಕೆ ಬಂದಿದೆ ಎಂದರು.
ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಸ್ವಯಂ ಲಾಭಕ್ಕೆ ರಾಜಕೀಯ ಮುಖಂಡರನ್ನು ಛೂಬಿಟ್ಟು ಕಾಮಗಾರಿಗೆ ತಡೆ ಒಡ್ಡುವುದನ್ನು ಹೆದ್ದಾರಿ ಅಭಿವೃದ್ಧಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಯಾವುದೇ ಬೆದರಿಕೆಗೆ ಮಣಿಯದೆ ಸಾರ್ವಜನಿ ಕರ ಅನುಕೂಲಕ್ಕಾಗಿ ಈಗ ನಿರ್ಮಾಣ ಪ್ರಾರಂಭ ಗೊಂಡಿರುವ ಕಾಮಗಾರಿ ಭರದಿಂದ ಸಾಗುವ ನಿಟ್ಟಿನಲ್ಲಿ ಸ್ಥಳೀಯರ ನೆಲೆಯಲ್ಲಿ ನಾವು ಸರಕಾರದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.