ಅಂಬರ್ ಗ್ರೀಸ್ ಜಾಲಕ್ಕಾಗಿ ಮಾರುವೇಷದಲ್ಲಿ ಕಾರ್ಯಾಚರಣೆ| ತಪ್ಪಾಗಿ ತಿಳಿದ ಸ್ಥಳೀಯರಿಂದ ಅರಣ್ಯ ಅಧಿಕಾರಿಗಳಿಗೆ ಹಲ್ಲೆ: ಆರೋಪ

Update: 2024-12-18 14:57 GMT

ಕುಂದಾಪುರ, ಡಿ.18: ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಮಾರಾಟ ಜಾಲದ ಪತ್ತೆಗಾಗಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳ ಬಗ್ಗೆ ಸ್ಥಳೀಯರು ತಪ್ಪಾಗಿ ತಿಳಿದು ಹಲ್ಲೆ ನಡೆಸಿರುವ ಘಟನೆ ಕೋಡಿ ಸಮೀಪದ ಎಂ.ಕೋಡಿ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ.

ಅಂಬರ್ ಗ್ರೀಸ್ ಮಾರಾಟ ಜಾಲ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದವರು ಕಾರ್ಯಾಚರಣೆ ನಡೆಸಿ, ಶಂಕಿತರನ್ನು ವಶಕ್ಕೆ ಪಡೆದು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಅಧಿಕಾರಿಗಳು ಮಾರುವೇಷದಲ್ಲಿ ಇದ್ದುದರಿಂದ ಸ್ಥಳೀಯರು ನಕಲಿ ಅಧಿಕಾರಿಗಳು ಇರಬೇಕೆಂದು ತಪ್ಪು ಭಾವಿಸಿ, ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾದರು.

ಕಾರ್ಯಾಚರಣೆ ತಂಡದಲ್ಲಿ ಮಂಗಳೂರಿನಿಂದ ಬಂದಿದ್ದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಹಿತ ಐವರು ಇದ್ದರು ಎನ್ನಲಾಗಿದೆ. ಇದೇ ವೇಳೆ ಇಲಾಖೆಯ ಬಾತ್ಮಿದಾರರು ಎನ್ನಲಾದ ಇನ್ನಿಬ್ಬರಿಗೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಗಾಯಗೊಂಡವರು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನಾ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಕೂಡಲೇ ಆಗಮಿಸಿದ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ವೇಳೆ ಕುಂದಾಪುರ ನಗರ ಠಾಣಾ ಎಸ್‌ಐ ನಂಜ ನಾಯ್ಕ್, ಸಿಬಂದಿ ಹಾಜರಿದ್ದರು. ಮಾರುವೇಷದಲ್ಲಿ ಬಂದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಇಲ್ಲಿಗೆ ಬಂದು ತಮಗೆ ಪಿಸ್ತೂಲ್ ತೋರಿಸಿ, ಬೆದರಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಭಯಗೊಂಡು ಈ ಘಟನೆ ನಡೆದಿದ್ದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News