ಅಕ್ರಮ ಕಟ್ಟಡದಲ್ಲಿ ಮತಾಂತರ ಆರೋಪ: ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ- ಗದ್ದಲ

Update: 2024-12-24 12:20 GMT

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ಅಕ್ರಮ ಪ್ರಾರ್ಥನ ಕೇಂದ್ರದಲ್ಲಿ ನಡೆಯುತ್ತಿದೆ ಎನ್ನಲಾದ ಮತಾಂತರ ವಿಚಾರವು ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಚರ್ಚೆ ಹಾಗೂ ಗದ್ದಲಕ್ಕೆ ಕಾರಣವಾಯಿತು.

ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ವಿಜಯ ಕೊಡವೂರು, ನಗರದ ಜೋಡುಕಟ್ಟೆ ಸಮೀಪ ಇರುವ ಮನೆಯೊಂದರಲ್ಲಿ ಅಕ್ರಮವಾಗಿ ಪ್ರಾರ್ಥನಾ ಕೇಂದ್ರ ನಡೆಸಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಉಡುಪಿಯಲ್ಲಿ ಮತಾಂತರ ಕೇಂದ್ರಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ. ಇಲ್ಲಿನ ಕಾನೂನು ಬಾಹಿರ ಕಟ್ಟಡವನ್ನು ತೆರವು ಮಾಡಬೇಕು. ಮುಂದೆ ಏನೇ ಅನಾಹುತ ನಡೆದರೂ ಅಧಿಕಾರಿಗಳೇ ಜವಾಬ್ದಾರರು. ಈ ಕಟ್ಟಡದಲ್ಲಿ ಹಾಕಿರುವ ಪ್ರಚೋದನಾಕಾರಿ ಪೋಸ್ಟರ್‌ನ್ನು ತೆರವುಗೊಳಿಸಬೇಕು ಎಂದರು.

ಇದೊಂದು ಮನೆಯಾಗಿದ್ದು, ಇಲ್ಲಿ ಒಂದು ಸಾವಿರ ಚದರ ಅಡಿ ವಿಸ್ತ್ರೀರ್ಣ ವನ್ನು ಇದೀಗ 4ಸಾವಿರಕ್ಕೇರಿಸಲಾಗಿದೆ. ಈ ಸಂಬಂಧ ನೋಟೀಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ಈ ರೀತಿ ಅಕ್ರಮ ಕಟ್ಟಡಗಳು ಎಲ್ಲ ಧರ್ಮಗಳ ಕೇಂದ್ರಗಳಲ್ಲಿಯೂ ಇವೆ. ಸಿಆರ್‌ಝೆಡ್ ನಿಯಮ ಉಲ್ಲಂಘಿಸಿಯೂ ಕೆಲವು ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸ ಲಾಗಿದೆ. ಆದುದರಿಂದ ಈ ರೀತಿ ಒಂದು ಕೇಂದ್ರವನ್ನು ಗುರಿಯಾಗಿರಿಸಿ ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ. ಇಲ್ಲಿ ಬಲವಂತದ ಮತಾಂತರ ನಡೆದಿದ್ದರೆ ಕ್ರಮ ತೆಗೆದುಕೊಳ್ಳಿ ಎಂದರು.

ಈ ಹಿಂದೆ ಐದು ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ ಯಾವುದೇ ಕ್ರಮ ತೆಗೆದುಕೊಳ್ಳದ ನೀವು ಈಗ ಯಾಕೆ ಮಾತನಾಡುತ್ತೀರಿ ಎಂದು ರಮೇಶ್ ಕಾಂಚನ್ ಟೀಕಿಸಿದರು. ಈ ವಿಚಾರವಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ವಾಗ್ವಾದ ನಡೆದು ಗದ್ದಲ ಉಂಟಾಯಿತು.

ಕಲ್ಸಂಕದಲ್ಲಿ ಸ್ಟೀಲ್ ಬ್ರಿಡ್ಜ್: ವಿಜಯ ಕೊಡವೂರು ಮಾತನಾಡಿ, ಅಂಬಲಪಾಡಿ ಜಂಕ್ಷನ್‌ನಲ್ಲಿನ ಮೇಲ್ಸೇತುವೆ ಕಾಮಗಾರಿ ಯಿಂದ ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣ ಹಾಗೂ ಕಲ್ಸಂಕಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಆದರೆ ಟ್ರಾಫಿಕ್ ನಿರ್ವಹಣೆ ಯನ್ನು ಸರಿಯಾಗಿ ಮಾಡದೆ ತೊಂದರೆ ಆಗುತ್ತಿದೆ ಎಂದು ದೂರಿದರು.

ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ಅಂಬಲಪಾಡಿ, ಸಂತೆಕಟ್ಟೆ, ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದ ರಿಂದ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲ ಕಡೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಹಾಕಲಾದ ಟ್ರಾಫಿಕ್ ಸಿಗ್ನಲ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ, ಅಭಿವೃದ್ಧಿ ಕಾಮಗಾರಿ ನಡೆಯುವಾಗ ಟ್ರಾಫಿಕ್ ಸಮಸ್ಯೆ ಆಗುವುದು ಸಾಮಾನ್ಯ. ಸುಗಮ ಸಂಚಾರಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದ ಸಂಚಾರ ವ್ಯವಸ್ಥೆ ಬಗ್ಗೆ ಹೊಸ ವಿನ್ಯಾಸವನ್ನು ತಯಾರಿಸ ಲಾಗುತ್ತಿದೆ. ಕಲ್ಸಂಕ ಜಂಕ್ಷನ್‌ನಲ್ಲಿ ಗುಂಡಿಬೈಲು ಕಡೆ ಲೆಫ್ಟ್ ಪ್ರೀ ಮಾಡಲು ಸ್ಟೀಲ್ ಬ್ರಿಜ್ಡ್ ನಿರ್ಮಿಸಲಾಗುತ್ತದೆ. ಇದರಿಂದ ಇಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡಬಹುದಾಗಿದೆ. ಇಲ್ಲಿನ ಸಿಗ್ನಲ್ ಲೈಟ್‌ಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈಗಾಗಲೇ ಕೆಲವು ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿರುವ ಸಿಗ್ನಲ್ ಕಂಬಗಳನ್ನು ತೆರವುಗೊಳಿಸಲು ಗುತ್ತಿಗೆದಾರರ ಟೆಂಡರ್ ಟರ್ಮಿನೆಟ್ ಮಾಡ ಬೇಕಾಗಿದೆ. ಅದು ಆದ ಕೂಡಲೇ ಎಲ್ಲ ಕಂಬಗಳನ್ನು ತೆರವುಗೊಳಿಸಲಾಗು ವುದು ಎಂದು ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಯಶ್ವಂತ್ ಪ್ರಭು ಹೇಳಿದರು.

ಮೂಲಭೂತ ಸೌಲಭ್ಯಕ್ಕೆ ಆಗ್ರಹ: ಹೆರ್ಗಾದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡ ವಸತಿ ಸಮುಚ್ಛಯ ದಲ್ಲಿ ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ ಜನ ತೊಂದರೆ ಅನುಭವಿಸುತ್ತಿದ್ದಾರೆಂದು ಸದಸ್ಯೆ ವಿಜಯ ಲಕ್ಷ್ಮೀ ದೂರಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಕಟ್ಟಡ ನಿರ್ಮಿಸುವ ಮೊದಲೇ ದಾರಿ ವ್ಯವಸ್ಥೆ ಮಾಡ ದಿರುವುದು ನಮ್ಮ ತಪ್ಪಾಗಿದೆ. ಆದರೆ ಈಗ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಇಲ್ಲಿನ ನಿವಾಸಿಗಳಿಗೆ ಮಾಡಿಕೊಡಬೇಕಾಗಿದೆ ಎಂದರು.

ನಿಟ್ಟೂರು ಎಸ್‌ಟಿಪಿಗೆ ಕೇಂದ್ರದಿಂದ ಅನುದಾನ ಬಿಡುಗಡೆಯಾದರೂ ಕಾಮಗಾರಿ ಆರಂಭಿಸದ ಬಗ್ಗೆ ಸದಸ್ಯರು ಸಭೆಯಲ್ಲಿ ದೂರಿದರು. ಇದರಿಂದ ಕೊಳಚೆ ನೀರಿನಿಂದ ಇಂದ್ರಾಣಿ ನದಿಯ ತಟದಲ್ಲಿರುವ ಜನರ ಬದುಕು ದುಸ್ತರ ಎನಿಸಿದೆ. ಹಲವು ಮಂದಿ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಸದಸ್ಯರು ಆರೋಪಿಸಿದರು. ಈ ಬಗ್ಗೆ ಟೆಂಡರ್ ಹಂತದಲ್ಲಿದ್ದು, ಈ ಪ್ರಕ್ರಿಯೆ ಮುಗಿಯಲು ಆರು ತಿಂಗಳ ಸಮಯ ಬೇಕಾಗಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಡಾ. ಉದಯ ಶೆಟ್ಟಿ ಹಾಜರಿದ್ದರು.

‘ಇದು ಬಿಜೆಪಿ ಕಚೇರಿಯಲ್ಲ...ಸದನ’

ಸಭೆಯಲ್ಲಿ ನಗರಸಭೆ ಬಂದಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನ ಬಗ್ಗೆ ಚರ್ಚೆ ನಡೆದು, ಕಾಂಗ್ರೆಸ್ -ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ಉಂಟಾಯಿತು.

ರಾಜ್ಯ ಸರಕಾರದಿಂದ ನಯಾ ಪೈಸೆ ಅನುದಾನ ಬರುತ್ತಿಲ್ಲ ಎಂದು ಸದಸ್ಯ ಕೃಷ್ಣರಾಜ್ ಕೊಡಂಚ ಆರೋಪಿಸಿದರೆ, ಜಿಎಸ್‌ಟಿ ಮೂಲಕ ಹಣ ಸಂಗ್ರಹಿಸುವ ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಅಮೃತಾ ಕೃಷ್ಣ ಮೂರ್ತಿ ಆಚಾರ್ಯ ದೂರಿದರು.

‘ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ತಿಂಗಳು ಕೋಟಿ ಹಣ ಕ್ಷೇತ್ರದ ಜನತೆಗೆ ಬರುತ್ತಿದೆ. ಆದರೆ ನಗರಸಭೆಯಿಂದ ತೆರಿಗೆ ಏರಿಕೆ ಮಾಡಿ ಜನರ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ರಮೇಶ್ ಕಾಂಚನ್ ಆರೋಪಿಸಿದರು. ಈ ವೇಳೆ ಮಾತನಾಡಲು ಅಡ್ಡಿ ಪಡಿಸಿದ ಬಿಜೆಪಿ ಸದಸ್ಯರಿಗೆ ರಮೇಶ್ ಕಾಂಚನ್, ಇದು ಬಿಜೆಪಿ ಕಚೇರಿಯಲ್ಲ, ಸದನ. ಇಲ್ಲಿ ನಿಮಗೆ ಮಾತ್ರವಲ್ಲ ಎಲ್ಲರಿಗೂ ಮಾತನಾಡಲು ಅವಕಾಶ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಬಲಪಾಡಿ ಮೇಲ್ಸೇತುವೆ ಬಗ್ಗೆ ಚರ್ಚೆ

ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ರಮೇಶ್ ಕಾಂಚನ್ ವಿರೋಧ ವ್ಯಕ್ತಪಡಿಸಿರುವುದನ್ನು ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಸಭೆಯ ಗಮನಕ್ಕೆ ತಂದರು. ಒಂದು ವರ್ಷಗಳ ಹಿಂದೆ ಮಂಜೂರಾದ ಈ ಕಾಮಗಾರಿಗೆ ಈಗ ವಿರೋಧ ಯಾಕೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕಾಂಚನ್, ನಾವು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿಲ್ಲ. ಈ ಕಾಮಗಾರಿಯಿಂದ ಉಡುಪಿ ಮತ್ತು ಅಂಬಲಪಾಡಿ ಇಬ್ಭಾಗ ಆಗುವುದನ್ನು ತಪ್ಪಿಸಲು ಪಿಲ್ಲರ್ ಹಾಕಿ ಓವರ್ ಬ್ರಿಜ್ಡ್ ನಿರ್ಮಿಸುವಂತೆ ಒತ್ತಾಯಿಸಿ ದ್ದೇವೆ ಎಂದರು. ಬಿಜೆಪಿಯವರೇ ಸಮಾಲೋಚನಾ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರವಾಗಿ ಎರಡು ಪಕ್ಷಗಳ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆ ಯಿತು. ಇದಕ್ಕೆ ಉತ್ತರಿಸಿದ ಶಾಸಕರು, ಯಾವುದೇ ಕಾರಣಕ್ಕೂ ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ನಿಲ್ಲುವುದಿಲ್ಲ. ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸ ಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News