ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಯಕ್ಷಗಾನ ಪ್ರಸಂಗಕೃತಿ ಅನಾವರಣ

Update: 2024-12-24 13:21 GMT

ಉಡುಪಿ, ಡಿ.24: ಯಕ್ಷಗಾನ ಪ್ರಸಂಗಸಾಹಿತ್ಯಕ್ಕೆ ಸುಮಾರು ಏಳುನೂರು ವರ್ಷಗಳ ಇತಿಹಾಸವಿದೆ. ಸಾವಿರಕ್ಕೂ ಅಧಿಕ ಕವಿಗಳು ಪ್ರಸಂಗ ರಚಿಸಿದ್ದಾರೆ. ಎಲ್ಲ ಪ್ರಸಂಗಗಳೂ ರಂಗದಲ್ಲಿ ಯಶಸ್ವಿಯಾಗಿಲ್ಲ. ಪ್ರಸ್ತುತ ಛಂದಸ್ಸಿನ ತಿಳಿವಳಿಕೆ ಇಲ್ಲದವರೂ, ಪದ್ಯರಚಿಸಲು ಬಾರದವರೂ ಪ್ರಸಂಗಕರ್ತರೆನಿಸಿಕೊಳ್ಳುತ್ತಿದ್ದಾರೆ ಎಂದು ಸುಜೀಂದ್ರ ಹಂದೆ ಹೇಳಿದ್ದಾರೆ.

ಉಪ್ಪಿನಕುದ್ರು ಶ್ರೀದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್, ಗೊಂಬೆಮನೆ ಆಶ್ರಯದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ, ಕಲಾವಿದ ಡಾ.ಶಿವಕುಮಾರ ಅಳಗೋಡು ರಚಿಸಿದ ರಾಜ್ಯಮಟ್ಟದ ಯಕ್ಷಗಾನ ಪ್ರಸಂಗರಚನಾ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ವಿಜೇತ ಯವಕ್ರೀತ ವೃತ್ತಾಂತ ಹಾಗೂ ಶ್ರೀಕೃಷ್ಣ ಕಾರುಣ್ಯ ಪೌರಾಣಿಕ ಪ್ರಸಂಗಕೃತಿಯನ್ನು ರವಿವಾರ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.

ಶಿಕ್ಷಕಿ, ಹವ್ಯಾಸಿ ಯಕ್ಷಗಾನ ಕಲಾವಿದೆ ನಾಗರತ್ನಾ ಹೇರ್ಳೆ, ಗಿಳಿಯಾರು ಪ್ರಸಂಗಕೃತಿಗಳನ್ನು ಪರಿಚಯಿಸಿ, ಅಳಗೋಡು ಅವರ ಪ್ರಸಂಗಗಳ ಸಾಹಿತ್ಯ, ಛಂದಸ್ಸು ಶ್ರೇಷ್ಠಮಟ್ಟದಲ್ಲಿದೆ. ಈ ಪ್ರಸಂಗಗಳಲ್ಲಿ ಸುಮಾರು 80ರಷ್ಟು ಛಂದಸ್ಸನ್ನೂ, ಅನೇಕ ಪ್ರಯೋಗಾತ್ಮಕವಾದ ಸಮೀಕೃತ ಬಂಧಗಳನ್ನೂ ರಚಿಸಿ ಸಾಹಿತ್ಯಲೋಕಕ್ಕೆ ಕಾಣ್ಕೆಯಾಗಿ ನೀಡಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಹಾಗೂ ಗೊಂಬೆಯಾಟ ಕಲಾವಿದ ಆಗಿರುವ ಭಾಸ್ಕರ ಕೊಗ್ಗ ಕಾಮತ್ ವಹಿಸಿದ್ದರು. ಕೃತಿಯ ಪ್ರಕಾಶಕ ಉಮೇಶ ಶಿರೂರು ಸ್ವಾಗತಿಸಿದರು. ಕೃತಿಕಾರ ಡಾ.ಶಿವಕುಮಾರ ಅಳಗೋಡು, ಉಡುಪಿಯ ತರಂಗಿಣಿ ಭಜನಾ ಮಂಡಳಿಯ ಸುಲೇಖಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News