ನೀನಾಸಂ ನಾಟಕಗಳ ಪ್ರದರ್ಶನ ‘ಅಂಬಲಪಾಡಿ ನಾಟಕೋತ್ಸವ’ ಉದ್ಘಾಟನೆ
ಉಡುಪಿ, ಜ.12: ರಂಗಭೂಮಿ ಸಮಾಜದ ಪ್ರತಿಬಿಂಬವಾಗಿದ್ದು, ಬದುಕಿಗೆ ಮೌಲ್ಯ ತುಂಬಿ ಮಾರ್ಗದರ್ಶನ ನೀಡುವ ಪ್ರಭಾವಿ ಮಾಧ್ಯಮ ಇದಾಗಿದೆ ಎಂದು ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಉಡುಪಿ ರಂಗಭೂಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಎರಡು ದಿನಗಳ ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ ‘ಅಂಬಲಪಾಡಿ ನಾಟಕೋತ್ಸವ’ ವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ರಂಗಭೂಮಿ ಯಿಂದ ಆರಂಭಿಸಲಾಗಿರುವ ರಂಗ ಶಿಕ್ಷಣವನ್ನು ಇನ್ನಷ್ಟು ಶಾಲೆಗೆ ವಿಸ್ತರಿಸುವ ಉದ್ದೇಶವನ್ನು ಹೊಂದ ಲಾಗಿದೆ. ಈ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ರಂಗ ಪ್ರೇಕ್ಷಕರಾಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಗುಂಡಿಬೈಲು, ಎಂಜಿಎಂ ಕಾಲೇಜಿನ ಪ್ರಾಂಶು ಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಮಾತನಾಡಿದರು. ರಂಗಭೂಮಿ ಉಪಾಧ್ಯಕ್ಷರಾದ ಎನ್.ಆರ್.ಬಲ್ಲಾಳ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.
ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಸ್ವಾಗತಿಸಿದರು. ಶ್ರೀಪಾದ ಹೆಗಡೆ ವಂದಿಸಿದರು. ವಿವೇಕಾನಂದ ಎನ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭವಭೂತಿ ರಚಿತ ಮಾಲತೀ ಮಾಧವ ನಾಟಕ ಪ್ರದರ್ಶನಗೊಂಡಿತು.