ಟಿಪ್ಪರ್ ಲಾರಿ ಢಿಕ್ಕಿ: ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ

Update: 2025-01-12 14:51 GMT

ಶಂಕರನಾರಾಯಣ, ಜ.12: ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ಬೈಕ್ ನಿಲ್ಲಿಸಿ ಮಾತನಾಡುತಿದ್ದ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ವೆ ಗ್ರಾಮದ ಕಾರಿಕೊಡ್ಲು ಕ್ರಾಸ್ ಬಳಿ ಜ.11ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ನಾಲ್ಕೂರು ಗ್ರಾಮದ ಅರೇಕಲ್ಲು ನಿವಾಸಿ, ಬೈಕ್ ಸವಾರ ಉದಯ ಎಂದು ಗುರುತಿಸಲಾಗಿದೆ. ಸಹಸವಾರ ಕೃಷ್ಣ ಎಂಬವರು ಗಂಭೀರ ವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋಳಿಯಂಗಡಿ ಕಡೆಯಿಂದ ಕಾಡಿಕೊಡ್ಲು ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯು ಒಮ್ಮಲೇ ಯಾವುದೇ ಸೂಚನೆಯನ್ನು ನೀಡದೆ ಕಾರಿಕೊಡ್ಲು ಕಡೆಗೆ ಚಲಾಯಿಸಿದ್ದು ಈ ವೇಳೆ ಅಲ್ಲೆ ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತ ನಿಂತಿದ್ದ ಉದಯ ಹಾಗೂ ಕೃಷ್ಣ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ.

ಇದರ ಪರಿಣಾಮ ಲಾರಿಯು ಇಬ್ಬರನ್ನು ಬೈಕ್ ಸಮೇತ ಉಜ್ಜಿಕೊಂಡು ರಸ್ತೆಯಲ್ಲಿ ಮುಂದಕ್ಕೆ ಹೋಗಿದ್ದು, ಬಳಿಕ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾದನು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಉದಯ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳಿಕ ಪೊಲೀಸರು ಪರಿಶೀಲಿಸಿದಾಗ ಟಿಪ್ಪರ್ ಲಾರಿಯಲ್ಲಿ ಎರಡೂವರೆ ಯುನಿಟ್ ಮರಳು ಇರುವುದು ಕಂಡುಬಂದಿದ್ದು ಟಿಪ್ಪರ್ ಚಾಲಕ ಕಿರಣ್ ಎಂಬಾತ ಅಕ್ರಮವಾಗಿ ಈ ಮರಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಎಂದು ದೂರಲಾಗಿದೆ. ಟಿಪ್ಪರನ್ನು ವಶಪಡಿಸಿಕೊಂಡಿರುವ ಶಂಕರನಾರಾಯಣ ಪೊಲೀಸರು ಈ ಬಗ್ಗೆಯೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News