‘ಕನ್ನಡ ವೈಚಾರಿಕ ಚಿಂತನೆಗೆ ಕಾರಂತರ ಕೊಡುಗೆ ಅಪೂರ್ವ’

Update: 2025-01-13 15:06 GMT

ಉಡುಪಿ: 20ನೇ ಶತಮಾನದ ಭಾರತೀಯ ಸಾಹಿತ್ಯದಲ್ಲಿ ಡಾ.ಶಿವರಾಮ ಕಾರಂತರು ಸದಾ ಸ್ಮರಣೀಯರು. ಸಾಹಿತ್ಯ ಮತ್ತು ಸಂಸ್ಕೃತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದವರು. ಅವರು ತಮ್ಮ ಬರಹಗಳ ಮೂಲಕ ಕನ್ನಡ ವೈಚಾರಿಕ ಚಿಂತನೆಗೆ ನೀಡಿದ ಕೊಡುಗೆ ಅಪೂರ್ವವಾದದ್ದು ಎಂದು ಚಿಂತಕ ಡಾ.ಸುಧಾಕರ ದೇವಾಡಿಗ ಹೇಳಿದ್ದಾರೆ.

ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅರಿವಿನ ಬೆಳಕು:ಉಪನ್ಯಾಸ ಮಾಲೆ-1ರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಜಿ, ಕಾರಂತರ ಬರಹಗಳು ಯುವ ಜನತೆಗೆ ಚೈತನ್ಯವನ್ನು ನೀಡುವ ಶಕ್ತಿ ಹೊಂದಿದೆ. ಕಾರಂತರು ಜೀವನದ ಎಲ್ಲಾ ಘಟ್ಟದಲ್ಲೂ ತಮ್ಮನ್ನು ತಾವು ಪ್ರಯೋಗಶೀಲತೆಗೆ ಒಡ್ಡಿಕೊಂಡು ಸಾಧನೆ ಮಾಡಿದ ವ್ಯಕ್ತಿ. ಅವರ ಸಾಹಿತ್ಯ, ಬದುಕು ಪ್ರತಿ ಯೊಬ್ಬರಿಗೂ ಆರ್ದಶವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಕಾರಂತರು ಸಾಹಿತ್ಯ, ಸಂಸ್ಕೃತಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಮಾಡಿದ ವೈಚಾರಿಕ ಕ್ರಾಂತಿ ಎಲ್ಲರಿಗೂ ಅನುಕರಣೀಯ ಎಂದರು.

ಟ್ರಸ್ಟ್‌ನ ಸದಸ್ಯ ಸಂಚಾಲಕಿ ಡಾ.ಭಾರತಿ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಸದಸ್ಯರಾದ ಡಾ.ಪ್ರಸಾದ್ ರಾವ್, ಸತೀಶ್ ಕೊಡವೂರು, ಜಿ.ಎಂ ಶರೀಫ್ ಹೂಡೆ ಉಪಸ್ಥಿತರಿದ್ದರು.

ಟ್ರಸ್ಟಿನ ಕಾರ್ಯಕ್ರಮದ ಸದಸ್ಯ ಸಂಚಾಲಕ ಡಾ.ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಉದಯ್‌ಕುಮಾರ್ ಶೆಟ್ಟಿ ಕಾಳವಾರ ಕಾರ್ಯಕ್ರಮ ನಿರೂಪಿ ಸಿದರು. ಕನ್ನಡ ಉಪನ್ಯಾಸಕ ಶಂಕರ ನಾಯ್ಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News