ಪರಶುರಾಮ ಥೀಮ್ ಪಾರ್ಕ್ ವಂಚನೆ ಪ್ರಕರಣ: ಆರೋಪಿ ಶಿಲ್ಪಿ ಕೃಷ್ಣ ನಾಯಕ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Update: 2024-11-08 14:05 GMT

ಫೈಲ್‌ ಫೋಟೊ 

ಉಡುಪಿ: ಕಾರ್ಕಳ ಬೈಲೂರಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚಿಸಿರುವ ಪ್ರಕರಣದ ಆರೋಪಿ ಶಿಲ್ಪಿ ಕೃಷ್ಣ ನಾಯಕ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತಿರಸ್ಕರಿಸಿ ಆದೇಶ ನೀಡಿದೆ.

ಆರೋಪಿ ಕೃಷ್ಣ ನಾಯಕ್ ‘ಕೃಷ್ ಆರ್ಟ್ ವರ್ಲ್ಡ್’ ಎಂಬ ಸಂಸ್ಥೆಯ ಮೂಲಕ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂ. ಹಣ ಪಡೆದುಕೊಂಡು ಕಾಮಗಾರಿ ನಡೆ ಸಿದ್ದು, ನಂತರ ಆರೋಪಿ ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ನಲ್ಲೂರಿನ ಕೃಷ್ಣ ಶೆಟ್ಟಿ ಜೂನ್ ತಿಂಗಳಲ್ಲಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ಆರೋಪಿ ಕೃಷ್ಣ ನಾಯಕ್, ಈ ಪ್ರಕರಣವನ್ನು ರದ್ಧುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಅ.21ರಂದು ಆರೋಪಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು.

ಈ ಹಿನ್ನೆಲೆಯಲ್ಲಿ ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಸಮಿವುಲ್ಲಾ, ಆರೋಪಿ ಅರ್ಜಿಯನ್ನು ವಜಾ ಗೊಳಿಸಿ ಆದೇಶ ನೀಡಿದರು. ಸರಕಾರದ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News