ಮಣಿಪುರ ಹಿಂಸಾಚಾರ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

Update: 2023-07-25 14:29 GMT

ಕುಂದಾಪುರ, ಜು.25: ಮಣಿಪುರದಲ್ಲಿ ನಡೆಯುತ್ತಿರುವ ಅಮಾನುಷ ಘಟನೆಗಳನ್ನು ಖಂಡಿಸಿ ಕುಂದಾಪುರ ಸಹಬಾಳ್ವೆ, ಸಮುದಾಯ, ಕಥೊಲಿಕ್ ಸಭಾ, ಮಹಿಳಾ ಸಂಘಟನೆ, ತಾಲೂಕು ದಲಿತ ಸಂಘರ್ಷ ಸಮಿತಿ ಸಹಿತ ಹಲವು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಪ್ರತಿಭಟನಾ ಹಮ್ಮಿಕೊಳ್ಳಲಾಗಿತ್ತು.

ಕಾಂಗ್ರೆಸ್ ಮುಖಂಡ ಕೆ.ವಿಕಾಸ್ ಹೆಗ್ಡೆ ಮಾತನಾಡಿ, ಪ್ರಪಂಚದಾದ್ಯಂತ ಈ ರೀತಿಯ ಹಲವು ಜನಾಂಗೀಯ ಕಲಹ ಹಾಗೂ ಘರ್ಷಣೆಗಳು ನಡೆದಾಗ ಅಲ್ಲಿನ ಆಳುವ ಸರಕಾರಗಳು ಅವುಗಳನ್ನು ಹತೋಟಿಗೆ ತಂದಿರುವ ನಿದರ್ಶನ ಗಳಿವೆ. ಆದರೆ ಮಣಿಪುರದಲ್ಲಿ ಸುದೀರ್ಘ ಅವಧಿಯಿಂದ ಘರ್ಷಣೆ ಹಾಗೂ ಪ್ರಾಣ ಹಾನಿ ಸಂಭವಿಸುತ್ತಿದ್ದರೂ, ಆಳುವ ಸರಕಾರಗಳು ಪರಿಣಾಮಕಾರಿ ನಡೆಯನ್ನು ತೋರಿಸಿಲ್ಲ. ಆದುದರಿಂದ ಇದು ಸರಕಾರಿ ಪ್ರಯೋಜಿ ತವೇ ಎಂಬ ಅನುಮಾನ ಮೂಡಿಸುತ್ತಿದೆ ಎಂದರು.

ಹಿರಿಯ ಪತ್ರಕರ್ತ ಶಶಿಧರ ಹೆಮ್ಮಾಡಿ ಮಾತನಾಡಿ, ಮಣಿಪುರದಲ್ಲಿ ನಡೆದ ಘಟನೆಗೆ ದೇಶವೇ ತಲೆ ತಗ್ಗಿಸಬೇಕಾಗಿದೆ. ಬುಡಕಟ್ಟು ಜನಾಂಗವೊಂದರ ಮೇಲೆ ನಡೆದ ಭಯಾನಕ ಕೌರ್ಯದ ಮಾಹಿತಿಯಿದ್ದರೂ ಸರಕಾರ ಹಾಗೂ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಂಡಿರಲಿಲ್ಲ. 5 ಸಾವಿರಕ್ಕೂ ಹೆಚ್ಚು ಮನೆ ಗಳನ್ನು ಸುಟ್ಟು ಹಾಕಿದ್ದರೂ, ಲೆಕ್ಕವಿಲ್ಲದಷ್ಟು ಚರ್ಚುಗಳನ್ನು ನಾಶ ಮಾಡಿದ್ದರೂ, ಮೌನಕ್ಕೆ ಶರಣಾಗಿರುವ ಇಲ್ಲಿನ ಸರ್ಕಾರಗಳ ವೈಫಲ್ಯ ಜಗತ್ತಿಗೆ ಸ್ಪಷ್ಟವಾಗುತ್ತಿದೆ ಎಂದರು.

ಸಹಬಾಳ್ವೆ ಕುಂದಾಪುರದ ಸಂಚಾಲಕ ವಿನೋದ್ ಕ್ರಾಸ್ತಾ, ಉಡುಪಿ ಸಹಬಾಳ್ವೆ ಸಮಿತಿಯ ಹುಸೇನ್ ಕೋಡಿಬೆಂಗ್ರೆ, ಸಿಪಿಐ ಮುಖಂಡ ವಿ.ಚಂದ್ರ ಶೇಖರ ಮಾತನಾಡಿದರು. ಕುಂದಾಪುರ ರೋಮನ್ ಕೆಥೊಲಿಕ್ ವಲಯದ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ, ಕೆಥೊಲಿಕ್ ಸಭಾ ವಲಯ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಸಹಬಾಳ್ವೆಯ ಸಂಚಾಲಕ ರಫೀಕ್, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಮಿತಿ ಅಧ್ಯಕ್ಷ ಮಂಜುನಾಥ ಗಿಳಿಯಾರ್, ಮಾನವ ಬಂಧುತ್ವ ವೇದಿಕೆ ಘಟಕದ ಸಂಚಾಲಕ ಬರ್ನಾಡ್ ಡಿಕೋಸ್ತಾ, ಪುರಸಭೆಯ ಮಾಜಿ ಅಧ್ಯಕ್ಷೆ ದೇವಕಿ ಪಿ ಸಣ್ಣಯ್ಯ, ಸಿಪಿಎಂ ಅಧ್ಯಕ್ಷ ಹೆಚ್. ನರಸಿಂಹ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಬ್ಬು ಅಹ್ಮದ್, ಅಶ್ಬಕ್ ಕೋಡಿ, ಸಮುದಾಯ ಸಂಘಟನೆಯ ಸದಾನಂದ ಬೈಂದೂರು, ಉದಯ್ ಗಾಂವ್ಕರ್, ವಾಸುದೇವ ಗಂಗೇರ್, ಬಾಲಕೃಷ್ಣ, ಕಾಂಗ್ರೆಸ್ ಪಕ್ಷದ ಬಿ.ಹಾರೋನ್ ಸಾಹೇಬ್, ಚಂದ್ರ.ಎ. ಅಮೀನ್, ಗಣೇಶ್ ಶೇರೆಗಾರ್, ಅಬ್ದುಲ್ಲಾ ಕೋಡಿ, ರೇವತಿ ಶೆಟ್ಟಿ, ಶಾಲೆಟ್ ರೆಬೆಲ್ಲೊ, ಶೋಭಾ ಸಚ್ಚಿದಾನಂದ, ಶಾಂತಿ ಪಿರೇರಾ, ಆಶಾ ಕರ್ವಾಲ್ಲೊ, ಕೇಶವ್ ಭಟ್, ರೋಶನ್ ಶೆಟ್ಟಿ, ಅಭಿಜಿತ್ ಪೂಜಾರಿ, ಜ್ಯೋತಿ ನಾಯ್ಕ್,ಸುನೀಲ್ ಪೂಜಾರ ಕೋಡಿ, ಶಿವಕುಮಾರ್, ಕುಮಾರ್ ಖಾರ್ವಿ, ಜ್ಯೋತಿ, ಅಶೋಕ್ ಸುವರ್ಣ, ರೋಶನ್ ಬರೆಟ್ಟೊ, ಮುನಾಫ್, ಯಾಸಿನ್ ಹೆಮ್ಮಾಡಿ, ಗಂಗಾಧರ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಕ್ಯಾಂಡಲ್ ಬೆಳಗುವ ಮೂಲಕ ಮಣಿಪುರದ ಹಿಂಸಾಚಾರ ದಲ್ಲಿ ಮೃತರಾದವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಕುಂದಾಪುರ ವಲಯದ ವಿವಿಧ ಚರ್ಚ್‌ಗಳ ಕ್ರೈಸ್ತ ಧರ್ಮಗುರುಗಳು, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳು, ಧರ್ಮಭಗಿನಿಯರು ಸಭೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News