ಜು.23ರಂದು ಸೌಜನ್ಯಾ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಉಡುಪಿ, ಜು.21: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯಬದ್ಧವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ಜು.23ರಂದು ಬೆಳಗ್ಗೆ 10.30ಕ್ಕೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಬೋರ್ಡ್ ಹೈಸ್ಕೂಲ್ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಯ ಹೈಕೋರ್ಟ್ ವಕೀಲ ಶ್ರೀನಿವಾಸ್, ಜನಪರ ಹೋರಾಟಗಾರ ಜಯನ್ ಮಲ್ಪೆ, ಬೆಳ್ತಂಗಡಿಯ ಪ್ರಗತಿಪರ ಹೋರಾಟಗಾರ ಶೇಖರ್ ಲಾಯಿಲ, ಚಿಂತಕ ಶ್ರೀರಾಮ ದಿವಾಣ ಭಾಗವಹಿಸಲಿರುವರು ಎಂದು ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮತ್ತು ದಯಾನಂದ ಕಪ್ಪೆಟ್ಟು ತಿಳಿಸಿದ್ದಾರೆ.
ಕಳೆದ 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆ ಗೀಡಾದ ಅಪ್ರಾಪ್ತ ಬಾಲಕಿ ಸೌಜನ್ಯಾ ಪ್ರಕರಣದ ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಹಾಗಾದರೆ ನಿಜವಾದ ಆರೋಪಿಗಳು ಯಾರು ಎಂದು ಪತ್ತೆ ಹಚ್ಚಲು ಈ ಪ್ರಕರಣವನ್ನು ಮರುತನಿಖೆಗೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.