ಜು.28ರಂದು ಉಡುಪಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್

Update: 2023-07-26 12:33 GMT

ಉಡುಪಿ, ಜು.26: ಉಡುಪಿ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜು.28ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಎಸ್ಪಿ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯ ವಿಡಿಯೋ ಹರಿದಾಡಿರುವ ಬಗ್ಗೆ ಎಸ್ಪಿ ನೇತೃತ್ವದ ಬದಲು ವಿಶೇಷ ತಂಡ ರಚನೆ ಮಾಡಿ ತನಿಖೆ ಮಾಡಬೇಕು. ಇದು ಕೇರಳ ಸ್ಟೋರಿ ಮಾದರಿಯ ಘಟನೆಯಾಗಿದೆ. ಎಸ್‌ಐಟಿ ಮೂಲಕ ತನಿಖೆ ಮಾಡಬಹುದು. ರಾಜ್ಯ ಸರಕಾರ ಮಾಡದಿದ್ದರೆ ಕೇಂದ್ರದ ಗಮನ ಸೆಳೆಯುತ್ತೇವೆ. ಇದು ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿನಿಯರು ಭಯಭೀತರಾಗಿದ್ದಾರೆ ಎಂದರು.

ಇದು ಏಕೈಕ ಘಟನೆ ಅಲ್ಲ, ಇಂತಹ ಘಟನೆಗಳು ಏಳೆಂಟು ತಿಂಗಳಿಂದ ನಡೆಯುತ್ತಿದೆ ಎಂಬ ಸಂಶಯ ಇದೆ. ಸಂತ್ರಸ್ತೆಯ ಬಾಯಿ ಮುಚ್ಚಿಸುವ ಕೆಲಸ ಪೊಲೀಸರಿಂದ ಆಗಿದೆ. ಈ ಘಟನೆ ಉಡುಪಿಗೆ ಕಳಂಕ. ಈ ಪ್ರಕರಣದಲ್ಲಿ ಆಡಳಿತ ಮಂಡಳಿ ಅವರನ್ನು ಕೂಡ ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಅಂಬಲಪಾಡಿ ಶಿವಕುಮಾರ್ ಉಪಸ್ಥಿತರಿದ್ದರು.

‘ವಾರದ ನಂತರ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ. ವಿದ್ಯಾರ್ಥಿಗಳ ಎಲ್ಲ ಮೊಬೈಲ್ ವಶಕ್ಕೆ ಪಡೆದುಕೊಳ್ಳಬೇಕು. ಡಿಲೀಟ್ ಮಾಡಿದ ಫೋಟೋ ವಿಡಿಯೋಗಳನ್ನು ರಿಕವರ್ ಮಾಡಬೇಕು. ಮಹಿಳಾ ಆಯೋಗದ ಸೂಚನೆ ಮೇರೆಗೆ ಸೆಕ್ಷನ್ ಹಾಕಬೇಕು. ರಾಜ್ಯ ಮತ್ತು ಕೇಂದ್ರ ಜಂಟಿಯಾಗಿ ತನಿಖೆ ಮಾಡಬೇಕು. ಕಾಲೇಜಿನ 10 ದಿನದ ಸಿಸಿಟಿವಿ ಫೂಟೇಜ್ ಪಡೆದು ಕೊಳ್ಳಬೇಕು’

-ಯಶ್‌ಪಾಲ್ ಸುವರ್ಣ, ಶಾಸಕರು, ಉಡುಪಿ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News