ಪ್ರತಿಭಟನೆ ತಪ್ಪಲ್ಲ, ಪ್ರಚೋದನಕಾರಿಯಾಗಿ ಮಾತನಾಡುವುದು ತಪ್ಪು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2023-08-05 12:50 GMT

ಉಡುಪಿ: ಉಡುಪಿ ವಿಡಿಯೋ ವಿವಾದಕ್ಕೆ ಸಂಬಂಧಿಸಿ ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ ಪ್ರತಿಭಟನೆಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅವರು ತಪ್ಪು ಮಾತನಾಡಿದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಎಸ್ಪಿ ಜೊತೆಗೂ ಮಾತನಾಡಿದ್ದೇನೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ. ಎಲ್ಲಾ ಜಾತಿ ಧರ್ಮ ದವರು ಒಟ್ಟಿಗೆ ಇರಬೇಕು. ಬಿಜೆಪಿಯವರೇ ರಾಮ ರಾಜ್ಯದ ಪರಿಕಲ್ಪನೆ ಹೇಳುತ್ತಾರೆ. ರಾಮ ರಾಜ್ಯ ದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಇರಬೇಕು ಎಂಬುದು ಕಾಂಗ್ರೆಸ್ ಸಿದ್ಧಾಂತವಾಗಿದೆ ಎಂದರು.

ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ಆಗುವಂತೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನೋಡಿಕೊಳ್ಳುತ್ತೇನೆ. ಒಬ್ಬ ಮಹಿಳೆಯಾಗಿ ಯಾವುದೇ ಹೆಣ್ಣು ಮಕ್ಕಳ ಮೇಲೆ ಅನ್ಯಾಯವಾದರೂ ಸಹಿಸಲು ಸಾಧ್ಯವಿಲ್ಲ. ಇದರಲ್ಲಿ ವಿದ್ಯಾರ್ಥಿನಿಯರ ಭವಿಷ್ಯದ ಪ್ರಶ್ನೆ ಇರುವುದರಿಂದ ತನಿಖೆ ಆಗುವವರೆಗೆ ಕಾಯಬೇಕಾಗಿದೆ ಎಂದು ಅವರು ತಿಳಿಸಿದರು.

ಗೃಹ ಜ್ಯೋತಿ ಬಹಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರಾಜ್ಯದಲ್ಲಿ ಒಂದು ಕೋಟಿ 4 ಲಕ್ಷ ಕುಟುಂಬಗಳಿಗೆ ಈ ಯೋಜನೆ ಅನ್ವಯ ಆಗುತ್ತದೆ. ಈಗಾಗಲೇ ಒಂದು ಕೋಟಿ 4 ಲಕ್ಷ ಕುಟುಂಬಗಳು ನೋಂದಣಿ ಮಾಡಿ ಕೊಂಡಿವೆ. ಕುಟುಂಬಗಳಿಗೆ ಜೀರೋ ಪರ್ಸೆಂಟ್ ಬಿಲ್‌ನ ಪ್ರಯೋಜನ ಸಿಗುತ್ತದೆ. ನುಡಿದಂತೆ ನಡೆದ ಸರಕಾರ ನಮ್ಮದು ಎಂದು ಅವರು ಹೇಳಿದರು.

ಗೃಹ ಲಕ್ಷ್ಮೀ ಯೋಜನೆಗೆ ಒಂದು ಕೋಟಿ 2 ಲಕ್ಷ ಕುಟುಂಬ ನೋಂದಣಿ ಆಗಬೇಕು. ಈಗಾಗಲೇ ಒಂದು ಕೋಟಿ ಕುಟುಂಬ ಗಳು ನೋಂದಣಿ ಮಾಡಿ ಕೊಂಡಿವೆ. ಆ.18 ಅಥವಾ 20 ರಂದು ಸೋನಿಯಾ ಗಾಂಧಿ ಮತ್ತು ಖರ್ಗೆ ಅವರ ದಿನಾಂಕ ಕೇಳಿದ್ದೇವೆ. ಆ.18 ಅಥವಾ 20ರಂದು ಡಿ ಬಿ ಟಿ ಮುಖಾಂತರ ಮನೆಯ ಯಜಮಾನಿಗೆ ಹಣ ಹಾಕುತ್ತೇವೆ ಎಂದು ಸಚಿವರು ತಿಳಿಸಿದರು.

ಕುಮಾರಸ್ವಾಮಿ ಆರೋಪಗಳಿಗೆ ಉತ್ತರಿಸಿದ ಸಚಿವೆ ಹೆಬ್ಬಾಳ್ಕರ್, ಕುಮಾರಸ್ವಾಮಿ ಬಹಳಷ್ಟು ಅನುಭವಸ್ಥರು. ರಾಜ್ಯದಲ್ಲಿ ಎರಡು ಬಾರಿ ಮುಖ್ಯ ಮಂತ್ರಿ ಆಗಿದ್ದವರು. ನಮ್ಮ ಸರಕಾರ ನುಡಿದಂತೆ ನಡೆಯುತ್ತಿಲ್ಲ ಎಂದು ಹೇಳುತ್ತಾರೆ. ಧೈರ್ಯ ವಿದ್ದರೆ ‘ಈ ಯೋಜನೆಗಳಿಂದ ಜನರಿಗೆ ಲಾಭ ಇಲ್ಲ, ಅದನ್ನು ಮುಚ್ಚಿ ಬಿಡಿ’ ಎಂದು ಮುಂದೆ ಬಂದು ಹೇಳಲಿ. ನಾವು ಐದು ಗ್ಯಾರಂಟಿಗಳನ್ನು ಕೂಡ ಜಾರಿಗೊಳಿಸುತ್ತೇವೆ ಎಂದರು.

ಮೋದಿಗೆ ಕುಮಾರಸ್ವಾಮಿ ದೂರು ನೀಡುವುದನ್ನು ನಾವು ಸ್ವಾಗತ ಮಾಡುತ್ತೇವೆ. ಅದರ ಬಗ್ಗೆ ನಾನು ಚರ್ಚೆಗೆ ಹೋಗಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಬಹಳ ಗೌರವವಿದೆ. ಮುಖ್ಯಮಂತ್ರಿ ಆಗಿದ್ದಾಗ ನಾನು ಶಾಸಕಿಯಾಗಿ ಕೆಲಸ ಕೂಡ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಹಿಟ್ ಆಂಡ್ ರನ್ ಕೇಸು ಮಾಡಲು ಹೋಗಬಾರದು ಎಂದು ಸಚಿವರು ತಿಳಿಸಿದರು.

‘ಸೌಜನ್ಯ ಪ್ರಕರಣ ಮಾತ್ರವಲ್ಲ ಯಾವುದೇ ಪ್ರಕರಣ ಇರಲಿ ಕಾನೂನಿಗೆ ಎಲ್ಲರೂ ತಲೆಬಾಗಬೇಕು. ಸಣ್ಣ ಪ್ರಕರಣ ಕೂಡ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ’

-ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News