ಮಣಿಪಾಲ ಮ್ಯಾರಥಾನ್-2024ಕ್ಕೆ ಅ.15ರಿಂದ ನೊಂದಣಿ ಆರಂಭ

Update: 2023-09-29 16:04 GMT

ಉಡುಪಿ, ಸೆ.29: ದೇಶದ ಪ್ರಮುಖ ಹಾಗೂ ಪ್ರತಿಷ್ಠಿತ ಮ್ಯಾರಥಾನ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಮಣಿಪಾಲ ಮ್ಯಾರಥಾನ್‌ನೇ ಆರನೇ ಅಧ್ಯಾಯಕ್ಕೆ ಅ.15ರಿಂದ ನೊಂದಣಿ ಪ್ರಾರಂಭ ಗೊಳ್ಳಲಿದ್ದು, ಈ ಬಾರಿ ದೇಶ-ವಿದೇಶಗಳಿಂದ 15,000ಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಣಿಪಾ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಸಹಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ಮುಂದಿನ ವರ್ಷದ ಫೆ.11ರಂದು ಈ ಪ್ರತಿಷ್ಠಿತ ಮ್ಯಾರಥಾನ್ ನಡೆಯಲಿದೆ. ಈ ಬಾರಿಯ ಮ್ಯಾರಥಾನ್‌ನ್ನು ‘ಪ್ರಾಣಾಂತಿಕ ಕಾಯಿಲೆಯನ್ನು ಎದುರಿಸುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ’ ಎಂಬ ಉದಾತ್ತ ಧ್ಯೇಯದೊಂದಿಗೆ ನಡೆಯಲಿದೆ ಎಂದರು.

ಈ ಬಾರಿಯೂ ಇಥಿಯೋಪಿಯಾ, ಕಿನ್ಯಾ, ಇಂಗ್ಲೆಂಡ್, ನೇಪಾಲ, ಮಲೇಶ್ಯಾ, ಅಮೆರಿಕ ಹಾಗೂ ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳಿಂದ ಮ್ಯಾರಥಾನ್ ಪಟುಗಳು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ವಿವಿಧ ರಾಜ್ಯ ಗಳಿಂದ ದೇಶದ ಪ್ರಮುಖ ದೂರ ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಮಣಪಾಲ ಮ್ಯಾರಥಾನ್-2024 ಒಟ್ಟು 15 ಲಕ್ಷ ಬಹುಮಾನ ಮೊತ್ತವನ್ನು ಹೊಂದಿರುತ್ತದೆ. 42.2 ಕಿ.ಮೀ. ದೂರದ ಮ್ಯಾರಥಾನ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗಗಳೆರಡಲ್ಲೂ ಮೊದಲ ಮೂರು ಸ್ಥಾನ ಪಡೆಯುವ ವಿಜೇತರಿಗೆ ಕ್ರಮವಾಗಿ 50,000ರೂ., 40,000ರೂ. ಹಾಗೂ 30,000ರೂ. ನಗದು ಬಹುಮಾನ ದೊರೆಯಲಿದೆ. ಅಲ್ಲದೇ ಪ್ರತಿ ವಿಭಾಗದ ವಿಜೇತರಿಗೂ ನಗದು ಬಹಮಾನಗಳನ್ನು ನೀಡಲಾಗುತ್ತದೆ ಎಂದರು.

ಮಣಿಪಾಲ ಮ್ಯಾರಥಾನ್‌ನಲ್ಲಿ 42.2ಕಿ.ಮೀನ ಫುಲ್ ಮ್ಯಾರಥಾನ್, 21.1ಕಿ.ಮೀ. ದೂರದ ಹಾಫ್ ಮ್ಯಾರಥಾನ್ ಅಲ್ಲದೇ 10ಕಿ.ಮೀ, 5ಕಿ.ಮೀ. ಹಾಗೂ 3ಕಿ.ಮೀ. ದೂರದ ಓಟ ವಿವಿಧ ವಯೋಮಾನದ ಸ್ಪರ್ಧಿಗಳಿಗೆ ನಡೆಸಲಾಗುತ್ತದೆ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೂ ಪ್ರತ್ಯೇಕ ವಿಭಾಗವಿರುತ್ತದೆ ಎಂದು ಮಾಹೆಯ ಕ್ರೀಡಾ ಮಂಡಳಿಯ ಕಾರ್ಯದರ್ಶಿ ಡಾ.ವಿನೋದ ನಾಯಕ್ ವಿವರಿಸಿದರು.

ಕೆಎಂಸಿಯ ಡೀನ್ ಹಾಗೂ ಉಪಶಾಮಕ ಮತ್ತು ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರದ ಮುಖ್ಯಸ್ಥ ಡಾ.ನವೀನ್ ಸಾಲಿನ್ಸ್ ಮಾತನಾಡಿ, ಮಾಹೆಯು ಪ್ರಾಣಾಂತಿಕ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಉಪಶಾಮಕ (ಪೆಲೇಟಿವ್ ಕೇರ್) ಚಿಕಿತ್ಸೆಯಅತ್ಯಾಧುನಿಕ ಆಸ್ಪತ್ರೆಯೊಂದನ್ನು ನಿರ್ಮಿಸುತಿದ್ದು, ಅದು ಇನ್ನೊಂದು ವರ್ಷದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಇದರ ಜಾಗೃತಿಗಾಗಿ ಮ್ಯಾರಥಾನ್ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ. ವೆಂಕಟೇಶ್, ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ಕೆಂಪರಾಜ್, ಗೌರವ ಸಲಹೆಗಾರ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್, ರಾಜ್ಯ ಅಸೋಸಿಯೇಷನ್‌ನ ಉಪಾಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News