ಮುಖ್ಯ ಖನಿಜ, ಉಪಖನಿಜಗಳ ಸಾಗಾಣಿಕೆಗೆ ‘ಒನ್ ಸ್ಟೇಟ್ ಒನ್ ಜಿಪಿಎಸ್’ ತಂತ್ರಾಂಶದಲ್ಲಿ ನೊಂದಣಿ ಕಡ್ಡಾಯ
ಉಡುಪಿ, ಸೆ.28: ರಾಜ್ಯದಲ್ಲಿ ಅನಧಿಕೃತ ಉಪಖನಿಜ ಮತ್ತು ಮುಖ್ಯ ಖನಿಜಗಳ ಸಾಗಾಣಿಕೆಯನ್ನು ತಡೆಗಟ್ಟುವ ಸಂಬಂಧ ಸರಕಾರ ‘ಒನ್ ಸ್ಟೇಟ್ ಒನ್ ಜಿಪಿಎಸ್’ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಉಪ ಖನಿಜ ಮತ್ತು ಮುಖ್ಯ ಖನಿಜ ಸಾಗಾಣಿಕೆ ಮಾಡುವ ಎಲ್ಲಾ ವಾಹನಗಳಿಗೆ ಎಐಎಸ್ 140 ಪ್ರಮಾಣೀಕೃತ ಜಿಪಿಎಸ್ (ಗ್ಲೋಬಲ್ ಪೋಜಿಷನಿಂಗ್‌ಸಿಸ್ಟಮ್) ಉಪಕರಣ ಅಳವಡಿಸಿಕೊಂಡು ‘ಒನ್ ಸ್ಟೇಟ್ ಒನ್ ಜಿಪಿಎಸ್’ ತಂತ್ರಾಂಶದಲ್ಲಿ ಸಂಯೋಜನೆಗೊಳ್ಳುವುದು ಕಡ್ಡಾಯ ವಾಗಿದೆ.
ಹೀಗೆ ಸಂಯೋಜನೆಗೊಳಿಸಿದ ನೊಂದಾಯಿತ ವಾಹನಗಳಿಗೆ ಮಾತ್ರ ಖನಿಜ ಸಾಗಾಣಿಕೆ ಪರವಾನಿಗೆ ವಿತರಿಸಲು ಕಳೆದ ಜನವರಿ 20ರಂದು ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ (ಗಣಿ) ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಉಪಖನಿಜ ಹಾಗೂ ಮುಖ್ಯ ಖನಿಜವನ್ನು ಸಾಗಾಣಿಕೆ ಮಾಡುವ ಎಲ್ಲಾ ವಾಹನ ಗಳು, ಲಾರಿ, ಟಿಪ್ಪರ್‌ಗಳು ಜಿಪಿಎಸ್ ಅಳವಡಿಸಿಕೊಂಡು ‘ಒನ್ ಸ್ಟೇಟ್ ಒನ್ ಜಿಪಿಎಸ್’ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
‘ಒನ್ ಸ್ಟೇಟ್ ಒನ್ ಜಿಪಿಎಸ್’ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಮ್‌ನ ದೂರವಾಣಿ ಸಂಖ್ಯೆ:0820- 2001103, 080-22341135 ಹಾಗೂ ಹಿರಿಯ ಭೂವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಕಚೇರಿಯ ದೂರವಾಣಿ ಸಂಖ್ಯೆ 0820-2572333ನ್ನು ಸಂಪರ್ಕಿಸುವಂತೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಭೂವಿಜ್ಞಾನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.