ಸಂತೆಕಟ್ಟೆ ರಾ.ಹೆದ್ದಾರಿ ಸರ್ವಿಸ್ ರಸ್ತೆ ಕುಸಿತ; ಹೊಣೆಹೊತ್ತು ಸಂಸದೆ ಶೋಭಾ ಕರಂದ್ಲಾಜೆ ರಾಜಿನಾಮೆ ನೀಡಲಿ: ಪ್ರಖ್ಯಾತ್ ಶೆಟ್ಟಿ
ಉಡುಪಿ, ಜು.19: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾ ಗುತ್ತಿರುವ ಅಂಡರ್‌ಪಾಸ್ ಕಾಮಗಾರಿ ಅವೈಜ್ಞಾನಿಕವಾಗಿದ್ದರ ಪರಿಣಾಮ ಅದರ ಒಂದು ಭಾಗದ ಸರ್ವಿಸ್ ರಸ್ತೆ ಕುಸಿತ ಕಂಡಿದ್ದು, ಇದರಿಂದ ಕರಾವಳಿಯ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 66 ತುಂಡಾಗುವ ಅಪಾಯ ವಿದೆ. ಇದಕ್ಕೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಲು ವಿಫಲರಾದ ಕೇಂದ್ರ ಸಚಿವೆ ಹಾಗೂ ಉಡುಪಿ-ಚ್ಕಿಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಜವಾಬ್ದಾರಿ ಹೊತ್ತು ರಾಜಿನಾಮೆ ನೀಡುವಂತೆ ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಸಂತೆಕಟ್ಟೆ ಪರಿಸರದ ಸಾರ್ವಜನಿಕರು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಖ್ಯಾತ್ ಶೆಟ್ಟಿ, ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲವಾದರೆ ಸ್ಥಳೀಯ ನಾಗರಿಕರೊಂದಿಗೆ ಸೇರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದರು.
ಉಡುಪಿ ಸಂಸದೆ ಕೇವಲ ಎಲ್ಲಿಯಾದರೂ ಹೆಣ ಬಿದ್ದಾಗ ಬಂದು ಬೊಬ್ಬೆ ಹೊಡೆಯುವುದನ್ನು ಬಿಟ್ಟರೆ, ಜನರ ಸಮಸ್ಯೆಗಳು ಎದುರಾದಾಗ ತುಟಿ ಬಿಚ್ಚದೆ ಮೌನವಾಗಿರುತ್ತಾರೆ. ಇತ್ತೀಚೆಗೆ ಉಡುಪಿಯಲಿಲ ಭಾರೀ ಮಳೆಯಿಂದ 7ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಕೋಟ್ಯಾಂತರ ರೂ.ನಷ್ಟವಾಗಿದೆ. ಇದರ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲದೇ ಮಿಜೋರಾಂ ಹಾಗೂ ಇತರ ರಾಜ್ಯಗಳ ಪ್ರವಾಸದಲ್ಲಿದ್ದರು ಎಂದವರು ದೂರಿದರು.
ಸಂತೆಕಟ್ಟೆಯಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ತೆಗೆದ ಗುಂಡಿಯ ಮಣ್ಣನ್ನು ಸಂಸದೆಯ ಹಿಂಬಾಲಕರೇ ಸಾಗಿಸಿದ್ದಾರೆ. ಇದರ ಲೆಕ್ಕ ಯಾರ ಬಳಿಯೂ ಇಲ್ಲ. ಕಳೆದ ತಿಂಗಳು ಬಂದ ಸಂಸದೆ ಈಗಾಗಲೇ ತೆಗೆದಿರುವ ಗುಂಡಿಯನ್ನು ಮುಚ್ಚಲು ಆದೇಶಿಸಿ ತೆರಳಿದ್ದರು. ಆದರೆ ಗುಂಡಿ ಮುಚ್ಚಲು ತೆಗೆದ ಮಣ್ಣು ಎಲ್ಲಿದೆ ಎಂಬುದಕ್ಕೆ ಅವರು ಉತ್ತರ ನೀಡಬೇಕಿದೆ ಎಂದು ಪ್ರಖ್ಯಾತ ಶೆಟ್ಟಿ ನುಡಿದರು.
ಈಗಾಗಲೇ ಕುಸಿತ ಕಂಡಿರುವ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳಿದ್ದು, ಸರ್ವಿಸ ರಸ್ತೆ ತುಂಡಾಗಿರುವುದರಿಂದ ಸ್ಥಳೀಯವಾಗಿ 300ಕ್ಕೂ ಅಧಿಕ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಹೀಗಾಗಿ ಈ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿ ಪ್ರತಿಭಟಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಗರಸಭಾ ಸದಸ್ಯ ಜಯಾನಂದ, ಅಖಿಲೇಶ್ ಕರ್ಕೇರ, ಸೂರಜ್, ಪ್ರದೀಪ್ ಅಂಚನ್ ಉಪಸ್ಥಿತರಿದ್ದರು.