ಶಿವಪುರ: ರಾಷ್ಟ್ರಿಯ ಹೆದ್ದಾರಿ ಬೇಕಾಬಿಟ್ಟಿ ಕಾಮಗಾರಿಗೆ ಯುವಕ ಬಲಿ
ಹೆಬ್ರಿ, ಜ.9: ತಾಲೂಕಿನ ಶಿವಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥ ಕಾಮಗಾರಿ ನಡೆಯುತಿದ್ದು, ಗುತ್ತಿಗೆದಾರರ ಬೇಜವಾಬ್ದಾರಿ ಯಿಂದಾಗಿ ಯುವಕರೊಬ್ಬರು ಜ.4ರಂದು ನಡೆದ ರಸ್ತೆ ಅಘಾತದಲ್ಲಿ ಮೃತಪಟ್ಟಿದ್ದು, ಸಮರ್ಪಕ ಸೂಚನಾ ಫಲಕವನ್ನು ಹಾಕದಿರುವುದೇ ಅಪಘಾತಕ್ಕೆ ಕಾರಣವೆಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗ ಬೇಕಾಬಿಟ್ಟಿಯಾಗಿ ಕಾಮಗಾರಿಯನ್ನು ನಡೆಸುತಿದ್ದು, ಅಗತ್ಯವಿರುವಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದರಿಂದ ಬೈಕ್ ಸವಾರರಾದ ಸಂಘಪರಿವಾರದ ಸಕ್ರಿಯ ಕಾರ್ಯಕರ್ತ ಅಪಘಾತಕ್ಕೆ ಬಲಿಯಾಗುವಂತಾಯಿತು ಎಂದು ಶಿವಪುರದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ವ್ಯವಸ್ಥೆಯ ವಿರುದ್ಧ ಅಸಮಧಾನ ಹೊರಹಾಕಿದ ಸ್ಥಳೀಯರು, ಈ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್ ಗಳು, ಕಾರ್ಲ ಕನ್ಸ್ಟ್ರಕ್ಷನ್ನ ಗುತ್ತಿಗೆದಾರರು ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು.
50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ: ಕಾಮಗಾರಿ ನಡೆದಿರುವ ಹೆದ್ದಾರಿ ಯಲ್ಲಿ ವಾಹನಗಳ ಸಂಚಾರಕ್ಕೆ ಸೂಕ್ತ ಬ್ಯಾರಿಕೇಡ್ ಗಳಿರಲಿಲ್ಲ. ಸೂಚನ ಫಲಕಗಳು ಸಹ ಅಪಘಾತದ ಸ್ಥಳದಲ್ಲಿ ಇರಲಿಲ್ಲ. ಅಪಘಾತ ನಡೆಸಿದ ಕಾರು ವೇಗದಿಂದ ಬಂದು ಬೈಕಿಗೆ ಗುದ್ದಿದೆ. ಗುತ್ತಿಗೆದಾರರು ಸಂಚಾರಿ ನಿಯಮ ಗಳನ್ನು ಉಲ್ಲಂಘಿಸಿರುವುದರಿಂದ ನಮ್ಮ ಮನೆ ಮಗನನ್ನು ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ಗರಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು ಎಂದು ಮೃತ ರಾಹುಲ್ರ ಮಾವ ಶ್ರೀಧರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಮೃತ ರಾಹುಲ್ ಅವರ ಶವವನ್ನು ಶಿವಪುರ ಪೇಟೆಯಲ್ಲಿ ಮೆರವಣಿಗೆ ಯಲ್ಲಿ ತರುವುದನ್ನು ಗಮನಿಸಿದ ಗುತ್ತಿಗೆದಾರರು, ಬ್ಯಾರಿಕೇಡ್ನ್ನು ಇರಿಸಿದರು. ಮೊದಲೇ ಈ ರೀತಿಯ ಸೂಚನ ಫಲಕ ಅಥವಾ ಬ್ಯಾರಿಕೇಡ್ ಅಳವಡಿಸಿದ್ದರೆ ಯುವಕ ನೊಬ್ಬನ ಪ್ರಾಣ ಉಳಿಯುತ್ತಿತು ಎಂದು ಸಾರ್ವಜನಿಕರು ನುಡಿದರು.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಮಾತನಾಡಿ, ಇಲ್ಲಿ ನಿರಂತರವಾಗಿ ಕಾಮಗಾರಿ ನಡೆಯುವಾಗ ನಿಯ ಮದ ಉಲ್ಲಂಘನೆ ನಡೆದಿದೆ. ಯಾವುದೇ ಸಮರ್ಪಕವಾದ ಸೂಚನ ಫಲಕಗಳಿಲ್ಲದೆ ಅನೇಕ ಅಪಘಾತಗಳು ನಡೆದಿದೆ. ರಿಫ್ಲೆಕ್ಟರ್ಗಳ ಅಗತ್ಯವಿದೆ. ಮುಂದೆ ಏನಾದರೂ ಇಲ್ಲಿ ಸಂಭವಿಸಿದರೆ ಸ್ಥಳದಿಂದ ಶವವನ್ನುಮುಟ್ಟಲು ಬಿಡುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಗರಿಷ್ಠ ಮಟ್ಟದಲ್ಲಿ ಪರಿಹಾರ ನೀಡುವ ತನಕ ಕದಲುವುದಿಲ್ಲ ಎಂದರು.
ಮನೆಗೆ ಆಧಾರಸ್ತಂಭವಾಗಿದ್ದ ಹಿರಿಯ ಮಗ ರಾಹುಲ್ ಅವರನ್ನು ಕಳೆದು ಕೊಂಡು ಕುಟುಂಬ ಕಂಗೆಟ್ಟಿದೆ. ಕಿರಿಯ ಮಗನಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿಕೊಡಬೇಕು. ಮನೆಯಲ್ಲಿ ತಾಯಿ ಒಬ್ಬರೇ ಇರುವುದರಿಂದ ಸ್ಥಳೀಯ ವಾಗಿ ಉದ್ಯೋಗ ಕಲ್ಪಿಸಿದರೆ ಒಳ್ಳೆಯದು ಎಂದು ಸ್ಥಳೀಯರಾದ ಇಂದಿರಾ ನುಡಿದರು.
ಅಪಘಾತ ನಡೆದು ತುಂಬಾ ಹೊತ್ತು 108 ಅಂಬುಲೆನ್ಸ್ ಸೇವೆಗೆ ಸಿಗದೇ ಗಾಯಾಳುವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಸ್ಥಳೀಯರಾದ ಶ್ರೀನಿವಾಸ್, ಇಂದಿರಾ, ಬಾಬು ಶೆಟ್ಟಿ, ಗುರು ಬಡಿಕಿಲ್ಲಾಯ, ಶ್ರೀಧರ ಶೆಟ್ಟಿ, ಶೀನ ಹಾಗೂ ಊರಿನ ಇತರರು ಉಪಸ್ಥಿತರಿದ್ದರು.