ಉಡುಪಿ: ಜ.11ರಂದು ಸಂವಿಧಾನ ಸಮ್ಮಾನ

Update: 2025-01-09 16:38 GMT

ಉಡುಪಿ, ಜ.9: ಸಿಟಿಜನ್ಸ್ ಫಾರ್ ಸೋಷಿಯನ್ ಜಸ್ಟೀಸ್ ಹಾಗೂ ದಲಿತ ಹಿಂದುಳಿದ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ಜ.11ರಂದು ಉಡುಪಿಯ ಪುರಭವನದಲ್ಲಿ ಸಂವಿಧಾನ ಸಮ್ಮಾನ ಅಭಿಯಾನ ನಡೆಯಲಿದೆ ಎಂದು ಸಂವಿಧಾನ ಸಮ್ಮಾನ ಸಮಿತಿಯ ವಿಭಾಗ ಸಂಚಾಲಕ ಕೆ. ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ನ.26ರಂದು ಪ್ರಾರಂಭಗೊಂಡ ಈ ಅಭಿಯಾನ ಜನವರಿ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಪ್ರತಿ ಜಿಲ್ಲಾ ಮಟ್ಟದಲ್ಲಿ ಇಂಥ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂವಿಧಾನದ ರಕ್ಷಕರೆಂದು ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ನಿಜ ಬಣ್ಣವನ್ನು ಈ ಅಭಿಯಾನದಲ್ಲಿ ಬಹಿರಂಗಗೊ ಳಿಸಿ ಜನರಿಗೆ ಸತ್ಯಸಂಗತಿಯನ್ನು ತಿಳಿಸಲಾಗುತ್ತಿದೆ ಎಂದರು. ಕಾಂಗ್ರೆಸ್ ಈವರೆಗೆ 75 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದರೆ, ಬಿಜೆಪಿ (22) ಸೇರಿ ಕಾಂಗ್ರೆಸೇತರ ಸರಕಾರಗಳು 31 ಬಾರಿ ತಿದ್ದುಪಡಿ ಮಾಡಿವೆ ಎಂದರು.

ಸಂವಿಧಾನ ಸಮ್ಮಾನ ಕಾರ್ಯಕ್ರಮ ಜ.11ರ ಬೆಳಗ್ಗೆ 10:30ಕ್ಕೆ ಪುರಭವನದಲ್ಲಿ ನಡೆಯಲಿದ್ದು, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆ ಮಾಡುವ ಅಣ್ಣಾಮಲೈ ಸಂವಿಧಾನದ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಕುಲ್‌ದಾಸ್ ಅವರು ಅಧ್ಯಕ್ಷತೆ ವಹಿಸಲಿದ್ದು, ಮೈಸೂರಿನ ಡಾ.ಪ್ರಫುಲ್ಲ ಮಲ್ಲಾಡಿ ಬಿಡುಗಡೆಗೊಳ್ಳುವ ‘ಸಂವಿಧಾನ ಬದಲಾಯಿಸಿದ್ದು ಯಾರು’ ಪುಸ್ತಕದ ಕುರಿತು ಮಾತನಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೇಶ್ಮಾ ಉದಯ ಶೆಟ್ಟಿ, ಶ್ರೀಕಾಂತ ನಾಯಕ್, ಚಂದ್ರ ಪಂಚವಟಿ ಹಾಗೂ ರತ್ನಾಕರ ಇಂದ್ರಾಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News