ಜ.11: ಕುಂದಾಪುರದಲ್ಲಿ ರಾಷ್ಟ್ರ ಮಟ್ಟದ ರ್ಯಾಪಿಡ್ ಚೆಸ್ ಪಂದ್ಯಾಟ
ಕುಂದಾಪುರ, ಜ.9:ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್ ಕುಂದಾಪುರ ಮತ್ತು ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಶನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಹೊನಲು ಬೆಳಕಿನ ರಾಷ್ಟ್ರೀಯ ಮಟ್ಟದ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾಟ-2025 ಕೋಟೇಶ್ವರದ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜ.11ರಂದು ನಡೆಯಲಿದೆ ಎಂದು ಕಶ್ವಿ ಚೆಸ್ ಸ್ಕೂಲ್‌ನ ನರೇಶ್ ರಾವ್ ತಿಳಿಸಿದ್ದಾರೆ.
ಕೋಟೇಶ್ವರದ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆ ಯರು ಮತ್ತು ಪುರುಷ ರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರಲ್ಲದೇ, ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 400ಕ್ಕೂ ಅಧಿಕ ಚೆಸ್ ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಚೆಸ್ ಕುರಿತಂತೆ ನಾಡಿನ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ರ್ಯಾಪಿಡ್ ಚೆಸ್ ಪಂದ್ಯಾಟವನ್ನು ಆಯೋಜಿಸ ಲಾಗಿದ್ದು, ವಿವಿಧ ವರ್ಗಗಳ ವಿಜೇತರಿಗೆ 159 ಟ್ರೋಫಿಗಳನ್ನು ನೀಡಲಾಗುತ್ತಿದೆ. ವಿಜೇತರಿಗೆ ಒಟ್ಟಾರೆ ಯಾಗಿ 2 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದೆ. ಸ್ಪರ್ಧಿಗಳ ಜೊತೆ ಆಗಮಿಸುವ ಪೋಷಕರಿಗೂ ಪ್ರತ್ಯೇಕ ಸ್ಪರ್ಧೆಯನ್ನು ಆಯೋಜಿಸುತ್ತಿ ರುವುದು ಇಲ್ಲಿನ ವಿಶೇಷವಾಗಿದೆ ಎಂದು ನರೇಶ್ ರಾವ್ ತಿಳಿಸಿದರು.
ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಈ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅರ್ಜುನ್ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಗ್ರಾಂಡ್ ಮಾಸ್ಟರ್ ಪ್ರವೀಣ್ ಮಾಹದೇವ್ ತಿಪ್ಸೆ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಪ್ರತಿಭಾನ್ವಿತ ಚೆಸ್ ಪಟು ಹೊನ್ನಾವರದ ಸಮರ್ಥ ಜೆ.ರಾವ್ ಅವರನ್ನು ಪ್ರವೀಣ್ ತಿಪ್ಸೆ ಸನ್ಮಾನಿಸಲಿದ್ದಾರೆ ಎಂದರು.
ಪ್ರವೀಣ್ ತಿಪ್ಸೆ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಂಬೈನ ಉದ್ಯಮಿ ಆದರ್ಶ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕುಂದಾಪುರದ ಯುವ ಉದ್ಯಮಿ ಉದಯಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಯಡ್ತಾಡಿ ಗ್ರಾಪಂ ಅಧ್ಯಕ್ಷ ಎಚ್.ಪ್ರಕಾಶ ಶೆಟ್ಟಿ, ಕೆ.ಆರ್. ನಾಯ್ಕ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಶ್ವಿ ಚೆಸ್ ಸ್ಕೂಲ್‌ನ ಪರಶುರಾಮ ಕಾಮತ್ ಉಪಸ್ಥಿತರಿದ್ದರು.