ಜ.13ರಿಂದ 17: ಚಿಕಿತ್ಸಕ ತತ್ತ್ವಶಾಸ್ತ್ರದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ

Update: 2025-01-09 16:36 GMT

ಉಡುಪಿ, ಜ.9: ಮಣಿಪಾಲದ ಮಾಹೆ ಹಾಗೂ ಜರ್ಮನಿಯ ಹಿಲ್ಡೆಶೈಮ್ ವಿವಿಗಳ ಜಂಟಿ ಆಶ್ರಯದಲ್ಲಿ ‘ಚಿಕಿತ್ಸಕ ತತ್ತ್ವ ಶಾಸ್ತ್ರ’ದ ಕುರಿತಂತೆ ಅಂತಾರಾಷ್ಟ್ರೀಯ ವೈದ್ಯಕೀಯ ಸಮ್ಮೇಳನವೊಂದನ್ನು ಜ.13ರಿಂದ 14ರವರೆಗೆ ಮಣಿಪಾಲದಲ್ಲಿ ಆಯೋಜಿಸಲಿದೆ ಎಂದು ಮಾಹೆಯ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಆಚಾರ್ಯ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಕ್ಲಿನಿಕಲ್ ಸೈಕಾಲಜಿ ವಿಭಾಗ ಹಾಗೂ ತತ್ತ್ವಶಾಸ್ತ್ರ ವಿಭಾಗವು ಜರ್ಮನಿಯ ಹಿಲ್ಡೆಶೈಮ್ ವಿವಿಗಳ ಸಹಯೋಗದೊಂದಿಗೆ ಚಿಕಿತ್ಸಕ ತತ್ತ್ವಶಾಸ್ತ್ರ ಕುರಿತು ಮೊದಲ ಸಮ್ಮೇಳನವನ್ನು ಆಯೋಜಿಸುತ್ತಿದೆ ಎಂದರು.

‘ಥೆರಪ್ಯೂಟಿಕ್ ಫಿಲಾಸಫಿ ಇನ್ ಗ್ಲೋಬಲ್ ಪರ್ಸ್ಪೆಕ್ಟಿವ್ಸ್’ ವಿಷಯದ ಕುರಿತ ಮೊದಲ ಸಮ್ಮೇಳನದೊಂದಿಗೆ ಮಣಿಪಾಲದಲ್ಲಿ ಸೆಂಟರ್ ಫಾರ್ ಥೆರಪ್ಯೂಟಿಕ್ ಫಿಲಾಸಫಿ (ಸಿಟಿಪಿ) ಕೇಂದ್ರದ ಉದ್ಘಾಟನೆಯೂ ನಡೆಯಲಿದೆ ಎಂದು ಅವರು ಹೇಳಿದರು. ಈ ಸಮ್ಮೇಳನ ಜ.13ರಿಂದ 17ರವರೆಗೆ ಎಂಐಟಿ ಗ್ರಂಥಾಲಯ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ನಡೆಯಲಿದೆ ಎಂದರು.

ವಿಶ್ವದಾದ್ಯಂತದಿಂದ ಬುರವ 30ಕ್ಕೂ ಅಧಿಕ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ವಿದೇಶಗಳ 15ಕ್ಕೂ ಅಧಿಕ ಮಂದಿ ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಲಿದ್ದಾರೆ ಸಮ್ಮೇಳನವು ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಪ್ರದಾಯಗಳ ಒಳನೋಟಗಳ ಮೇಲೆ ತತ್ವಶಾಸ್ತ್ರ ಮತ್ತು ಮಾನಸಿಕ ಚಿಕಿತ್ಸಕ ಅಭ್ಯಾಸಗಳ ನಡುವಿನ ಅಂತರ ಶಿಸ್ತೀಯ ಸಂವಾದವನ್ನು ನಡೆಸಲಿದೆ ಎಂದು ಡಾ.ಆಚಾರ್ಯ ವಿವರಿಸಿದರು.

ಜ.13ರಂದು ಬೆಲಗ್ಗೆ 9:30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಅಲ್ಲದೇ ಜರ್ಮನ್ ಹಿಲ್ಡೆಶೈಮ್ ವಿವಿಯ ಡಾ.ರಾಲ್ಫ್ ಎಲ್ಬರ್ಫೆಲ್ಡ್ , ಮಾಹೆಯ ಡಾ.ಕಾರ್ಲ್ ಸ್ಟಿಫನ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಮೊದಲನೇ ದಿನ ಚಿಕಿತ್ಸಕ ತತ್ತ್ವಶಾಸ್ತ್ರದ ಕುರಿತಂತೆ ಮನೋವಿಜ್ಞಾನ ಮತ್ತು ತತ್ವಶಾಸ್ತ್ರದ ನಡುವೆ ಚರ್ಚೆ ನಡೆಯಲಿದೆ. ಎರಡನೇ ದಿನ ಸಮಾಲೋಚನೆ ಮತ್ತು ಚಿಕಿತ್ಸಾ ವಿಧಾನಗಳ ಕುರಿತು, 3ನೇ ದಿನ ಕಲಾ ಚಿಕಿತ್ಸೆ ಮತ್ತು ತತ್ವಶಾಸ್ತ್ರ ಮತ್ತು ಮನೋವಿಜ್ಞಾನದಲ್ಲಿನ ಪ್ರಸ್ತುತ ಸಮಸ್ಯೆಗಳು, ತಾತ್ವಿಕ ಚಿಕಿತ್ಸೆ ಮತ್ತು ಬೌದ್ಧಧರ್ಮದ ಬೌದ್ಧ ಆಚರಣೆಗಳ ಕುರಿತು ಚರ್ಚೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜರ್ಮನ್ ಹಿಲ್ಡೆಶೈಮ್ ವಿವಿಯ ಡಾ.ರಾಲ್ಫ್ ಎಲ್ಬರ್ಫೆಲ್ಡ್, ಮಾಹೆಯ ಎಂಸಿಎಚ್‌ಪಿಯ ಸಹ ಪ್ರಾಧ್ಯಾಪಕಿ ಡಾ.ಶ್ವೇತಾ ಟಿ.ಎಸ್., ಡಾ.ಕಾರ್ಲ್ ಸ್ಟಿಫನ್ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News