ಮಕ್ಕಳಿಂದ ಮಕ್ಕಳಿಗೆ ಹೊಡೆಸುವ ಶಿಕ್ಷಕರ ಮನಸ್ಥಿತಿ ಅಪಾಯಕಾರಿ: ಜಯಪ್ರಕಾಶ್ ಹೆಗ್ಡೆ
ಕುಂದಾಪುರ : ಶಿಕ್ಷಕರು ಒಬ್ಬ ವಿದ್ಯಾರ್ಥಿಗೆ ಇನ್ನೊಬ್ಬ ವಿದ್ಯಾರ್ಥಿಯಿಂದ ಹೊಡೆಸುವ ಬಗ್ಗೆ ವರದಿಗಳಾಗಿವೆ. ಹೊಡೆದ ಮಗುವಿನ ಪರಿಸ್ಥಿತಿ, ಪೆಟ್ಟು ತಿಂದ ಮಗುವಿನ ಸ್ಥಿತಿ ಬಗ್ಗೆ ಆಲೋಚಿಸಬೇಕು. ಕೊನೆಯಲ್ಲಿ ಕ್ಷಮೆ ಕೇಳಿದರೆ ಅದಕ್ಕೆ ಪರಿಹಾರ ಅಲ್ಲವೇ ಅಲ್ಲ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹೊಡೆಸಿ ಭಾವನೆಗಳನ್ನು ಕೆದುಕಿದಾಗ ಅದು ಶಾಶ್ವತವಾಗಿ ದ್ವೇಷದ ಭಾವನೆ ಬೇರೂರುವಂತೆ ಮಾಡುತ್ತದೆ. ಆ ಪರಿಸ್ಥಿತಿ ನಿರ್ಮಾಣ ಮಾಡದಂತೆ ನೋಡಿ ಕೊಳ್ಳಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ, ಶಿಕ್ಷಕರ ದಿನಾಚರಣೆ ಸಮಿತಿ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೆಲವು ಶಿಕ್ಷಕರ ನಡುವಿನ ಭಿನ್ನಾಭಿಪ್ರಾಯಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ. ಇದರ ಬಗ್ಗೆ ಜಾಗೃತೆ ವಹಿಸದಿದ್ದರೆ ನಾವು ಒಳ್ಳೆಯ ನಾಗರಿಕರನ್ನು ಸಮಾಜಕ್ಕೆ ಕೊಡಲು ಸಾಧ್ಯವಿಲ್ಲ. ನಮ್ಮ ಚಿಂತನೆ ಬದಲಾಗಬೇಕು. ಶಾಲೆಯ ವಾತಾವರಣ ಸರಿಪಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸೌಹಾರ್ದಯುತ ವಾತಾವರಣ ನಿರ್ಮಿಸುವ ಕಾರ್ಯ ಅತೀ ಅಗತ್ಯವಾಗಿದೆ ಎಂದರು.
ಮಕ್ಕಳಿಗೆ ಕಲಿಸುವುದೇ ಶಿಕ್ಷಣವಲ್ಲ. ಅದು ಕೇವಲ ಶಿಕ್ಷಣದ ಭಾಗ. ಶಿಕ್ಷಣದಲ್ಲಿ ಕ್ರೀಡೆ, ಕಲೆಯಿದೆ. ಮಕ್ಕಳ ಆಸಕ್ತಿದಾಯಕ ವಿಚಾರದಲ್ಲಿ ಉತ್ತೇಜಿಸುವುದು ತಂದೆ-ತಾಯಿ ಮಾಡಬೇಕು. ಈ ಬಗ್ಗೆ ಪೋಷಕರಿಗೆ ಮನವರಿಕೆ ಮಾಡುವ ಕೆಲಸ ಶಿಕ್ಷಕ ರಿಂದ ಆಗಬೇಕಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ಕೊಟ್ಟಾಗ ಮಕ್ಕಳ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ನಿವೃತ್ತ ಉಪನ್ಯಾಸಕ ಡಾ.ಶ್ರೀಕಾಂತ ರಾವ್ ಸಿದ್ದಾಪುರ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ವಹಿಸಿದ್ದರು. ನಿವೃತ್ತ ಶಿಕ್ಷಕರನ್ನು, ಕಳೆದ ಸಾಲಿನ ಜಿಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯಕ್, ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮೂರ್ತಿ ಎಂ.ಎನ್., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗಣೇಶ್ ಕುಮಾರ್ ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಭಂಡಾರಿ, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಪಾಲ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನವೀನ್ಚಂದ್ರ ಹೆಗ್ಡೆ ತೊಂಬತ್ತು, ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ನಾಯಕ್ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಸ್ವಾಗತಿಸಿದರು. ಬಿಐಇಆರ್‌ಟಿ ಶಂಕರ ಕುಲಾಲ್, ಸಂತೋಷ್, ಸುಕನ್ಯಾ ಕಾರ್ಯ ಕ್ರಮ ನಿರ್ವಹಿಸಿದರು. ಶಿಕ್ಷಕರಾದ ಸುಮನಾ, ರಾಜೇಶ್ ಅವರಿಂದ ಯಕ್ಷಗಾನ ಭಾಗವತಿಕೆ ನಡೆಯಿತು.