ಸತ್ಯದ ಪ್ರತೀಕವಾಗಿ ರಂಗಭೂಮಿ ಉಳಿಯಬೇಕು: ಟಿ.ಎಸ್.ನಾಗಾಭರಣ

Update: 2023-11-19 14:12 GMT

ಉಡುಪಿ : ರಂಗಭೂಮಿ ಎನ್ನುವುದೇ ಸತ್ಯ. ಆದರೆ ಬಹುತೇಕರು ರಂಗಭೂಮಿಯನ್ನು ಮಿಥ್ಯಕ್ಕೆ ಹೋಲಿಸುತ್ತಾರೆ. ವಾಸ್ತವ ದಲ್ಲಿ ಸುಳ್ಳಿನ ನಿಜವಾದ ಅರ್ಥವನ್ನು ಹಾಗೂ ಸುಳ್ಳನ್ನು ಸರಣಿಯೋಪಾದಿಯಲ್ಲಿ ತೆರೆದಿಡುವ ವೇದಿಕೆಯೇ ರಂಗಭೂಮಿ. ಅದಕ್ಕೆ ಸತ್ಯದ ಪ್ರತೀಕವಾಗಿರುವ ರಂಗಭೂಮಿ ಉಳಿಯಬೇಕು, ಅದನ್ನು ಎಲ್ಲರೂ ಸೇರಿ ಬೆಳೆಸಬೇಕು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಕನ್ನಡಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ಬೆಂಗಳೂರಿನ ನರಸಿಂಹರಾಜ ಕಾಲೋನಿಯ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಿರಿಯಡ್ಕದ ಅಮೋಘ ಮತ್ತು ಸಪ್ನ ಬುಕ್‌ಹೌಸ್ ಆಯೋಜಿಸಿದ ಕಲಾವಿದೆ ಪೂರ್ಣಿಮಾ ಸುರೇಶ್ ಅವರು ರಚಿಸಿದ ರಂಗಭೂಮಿ ಒಡನಾಟದ ಕಥನವನ್ನು ಹೇಳುವ ಕೃತಿ ‘ರಂಗ ರಂಗೋಲಿ’ ಯನ್ನು ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.

ಕಲೆ ಎನ್ನುವುದಕ್ಕೆ ಎಡ-ಬಲ ಸಂಸ್ಕೃತಿ ಇರುವುದಿಲ್ಲ. ಬದಲಾಗಿ ಎಡ-ಬಲ ಸಂಪ್ರದಾಯವನ್ನು ಮೀರಿ ಮಧ್ಯದ ಸಂಪ್ರದಾಯವನ್ನು ಬಿಂಬಿಸುವ ಕಲೆಗೆ ಯಾವುದೇ ಪಂಕ್ತಿಯ ರಂಗು ಹಚ್ಚಬಾರದು. ಕೃತಕ ಬುದ್ದಿಮತ್ತೆ ಎನ್ನುವುದು ಇಂದು ರಂಗವನ್ನು ನುಂಗುತ್ತಿದೆ. ಪೂರ್ಣಿಮಾ ಅವರ ಕೃತಿ ರಂಗಭೂಮಿ ಯನ್ನು ಪ್ರವೇಶಿಸುವವರಿಗೆ ಉತ್ತಮವಾದ ಪ್ರವೇಶಿಕೆಯಾಗಲಿದೆ ಎಂದರು.

ಕೃತಿಯ ಪರಿಚಯಿಸಿ ಮಾತನಾಡಿದ ಲೇಖಕಿ, ಪ್ರಾಧ್ಯಾಪಕಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ನಮ್ಮ ಸಮಗ್ರ ಶಿಕ್ಷಣದಲ್ಲಿ ರಂಗಭೂಮಿ ಇರಬೇಕು.ಶಿಕ್ಷಣ ಕ್ಷೇತ್ರದಿಂದ ನಾಟಕಗಳು ದೂರವಾಗುತ್ತಿವೆ. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿಯೂ ನಾಟಕದ ಶಿಕ್ಷಕರು ಇರಬೇಕು. ಪಠ್ಯವನ್ನು ನಾಟಕದ ಮೂಲಕ ತಿಳಿಸಿದರೆ ಹೆಚ್ಚು ಪರಿಣಾಮಕಾರಿ. ಅದನ್ನು ಪ್ರದರ್ಶನ ಮಾಡುವ ಮೂಲಕ ಮಕ್ಕಳಲ್ಲಿ ಧೈರ್ಯಬರುತ್ತದೆ. ಈ ಸತ್ಯವನ್ನು ಅರಿತುಕೊಂಡು ಶಿಕ್ಷಣದಲ್ಲಿ ರಂಗಾಭ್ಯಾಸಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಲೇಖಕಿ ಪೂರ್ಣಿಮಾ ಸುರೇಶ್, ರಂಗಭೂಮಿಯ ಅನುಭವ ನನ್ನನ್ನು ಸಾಕಷ್ಟು ಬೆಳೆಸಿದೆ. ಹೀಗೆ ಬೆಳೆಯುತ್ತಾ ಬಂದ ಕ್ರಮವನ್ನು ಈ ಕೃತಿಯಲ್ಲಿ ದಾಖಲಿಸುವ ಪ್ರಯತ್ನವನ್ನು ಮಾಡಿದ್ದೇನೆ. ಕಲಾವಿದೆಯಾಗಿ ನನಗೆ ಒಂದು ರಂಗಕೃತಿ ಅರಳುವ ಕ್ರಮ ಯಾವತ್ತೂ ಕುತೂಹಲ ಮೂಡಿಸುವ ಸಂಗತಿ. ಈ ಹಿನ್ನೆಲೆಯಲ್ಲಿಯೇ ಈ ಕೃತಿ ರೂಪುಗೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿಪ್ರೊ.ಎನ್.ಎಸ್.ಶ್ರೀಧರಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಲೆನಾಡಿನ ಖ್ಯಾತ ಗಾಯಕಿ ಭಾಗ್ಯಶ್ರೀ ಗೌಡ ಸುಗಮ ಸಂಗಿತ ಗಾಯನ ಪ್ರಸ್ತುತ ಪಡಿಸಿದರು. ಶ್ರೀನಾಥ್ ಜೋಶಿ ಸ್ವಾಗತಿಸಿ, ಎ. ಭಾರತಿ ಕಾರ್ಯಕ್ರಮವನ್ನು ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News