ಮೂರು ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ: ಉಡುಪಿ ಜಿಲ್ಲಾಧಿಕಾರಿ

Update: 2023-09-06 15:54 GMT

ಉಡುಪಿ, ಸೆ.6: ಜಲಜೀವನ್ ಮಿಷನ್ ಯೋಜನೆಯಡಿ 2024ರೊಳಗೆ ಜಿಲ್ಲೆಯ ಪ್ರತಿ ಮನೆಗೂ ಕುಡಿಯುವ ನೀರು ತಲುಪಿಸುವ ಗುರಿಯನ್ನು ಹೊಂದಿದ್ದು, ಇದು ಸಾಧ್ಯವಾಗಬೇಕಿದ್ದರೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಲಜೀವನ ಮಿಷನ್‌ಗಳ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖಾ ಕಾರ್ಯ ಚಟುವಟಿಕೆಗಳ ಸಮನ್ವಯ ಕಾರ್ಯಾಗಾರವನ್ನು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಲಜೀವನ್ ಮಿಷನ್‌ನಡಿ ಉಡುಪಿ ಒಂದೇ ಜಿಲ್ಲೆಗೆ 2,800 ಕೋಟಿ ರೂ.ಗಳ ಯೋಜನೆಗೆ ಬಂದಿದೆ. ಈ ಯೋಜನೆ ನಿಗದಿತ ಅವಧಿಗೆ ಅನುಷ್ಠಾನ ಗೊಂಡಾಗ ಇದರ ಸಂಪೂರ್ಣ ಲಾಭ ದೊರೆಯುವುದು ಜಿಲ್ಲೆಯ ಜನತೆಗೆ. ಕಾಮಗಾರಿ ಇದೇ ಡಿಸೆಂಬರ್ ಕೊನೆಯೊಳಗೆ ಮುಗಿಯಬೇಕಿದ್ದು, 2024ರ ಮಾರ್ಚ್ ಒಳಗೆ ಕಾರ್ಯಕ್ರಮ ಅನುಷ್ಠಾನಗೊಳ್ಳ ಬೇಕಾಗಿದೆ. ಆದರೆ ಭೂಸ್ವಾಧೀನವೂ ಸೇರಿದಂತೆ ಹಲವು ಸಮಸ್ಯೆಗಳು ಕುಡಿಯುವ ನೀರು ನೀಡುವ ಈ ಯೋಜನೆಯನ್ನು ಕಾಡುತ್ತಿವೆ ಎಂದರು.

ಕುಡಿಯುವ ನೀರಿನ ಪೈಪ್‌ಲೈನ್ ಹೋಗಲು ಜಾಗ ನೀಡುವಲ್ಲಿ ಒಂದು ಇಲಾಖೆ ವಿಳಂಬ ಮಾಡಿದರೆ ಅದರಿಂದ ನಷ್ಟ ವಾಗುವುದು ಸರಕಾರಕ್ಕೆ. ಇದರೊಂದಿಗೆ ತಳುಕು ಹಾಕಿಕೊಂಡಿರುವ ಆರ್ಥಿಕ ಚಟುವಟಿಕೆಗಳಿಗೂ ಇದರಿಂದ ತೊಂದರೆ ಯಾಗುತ್ತದೆ. ಹೀಗಾಗಿ ಯಾವುದೇ ಪೈಲ್ ಅಥವಾ ಪೇಪರ್ ಬಂದಾಗ ವಿಳಂಬ ಮಾಡದೇ ಕಾರ್ಯೋನ್ಮುಖರಾಗಿ. ಈ ಕುರಿತು ಸಕಾರಾತ್ಮಕ ಧೋರಣೆಯನ್ನು ಪ್ರದರ್ಶಿಸಿ ಎಂದು ಸಲಹೆ ನೀಡಿದರು.

2800 ಕೋಟಿ ರೂ.ಯೋಜನೆ: ಕಾರ್ಯಾಗಾರದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರಸನ್ನ ಎಚ್., ಜಲಜೀವನ್ ಮಿಷನ್‌ನಡಿ ವಾರಾಹಿ ನದಿಯಿಂದ ಜಿಲ್ಲೆಗೆ ಕುಡಿಯುವ ನೀರು ಸರಬರಾಜು ಮಾಡುವ ಮೂರು ಕಾಮಗಾರಿಗಳು 2800 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳ್ಳುತ್ತಿವೆ. ಇದು ಚಂದ್ರಯಾನಕ್ಕೆ ತಗಲಿದ ವೆಚ್ಚದ ಸುಮಾರು ನಾಲ್ಕು ಪಟ್ಟು ಆಗುತ್ತದೆ ಎಂದರು.

ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ 585 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕಾರ್ಕಳ, ಕಾಪು ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ 1600 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೊಂದಿಗೆ ಉಡುಪಿ ನಗರಕ್ಕೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಈ ಕಾಮಗಾರಿಗಳು 2024ರೊಳಗೆ ಪೂರ್ಣಗೊಳ್ಳಬೇಕಿದೆ. 2055ರ ಬಳಿಕ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಖರ್ಚು ಮಾಡದಂತೆ ಈ ಯೋಜನೆಗಳು ರೂಪಿಸಲ್ಪಟ್ಟಿವೆ. ಜನರ ಹಾಗೂ ಸರಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಗಳು ಅನುಷ್ಠಾನಗೊಳ್ಳುತ್ತಿವೆ ಎಂದರು.

ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಸುರಿಯುತಿದ್ದರೂ ಕಳೆದ ಬೇಸಿಗೆಯಲ್ಲಿ 138 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ನೀಡಿದ್ದೇವೆ. ಮೂರು ವರ್ಷಗಳ ಹಿಂದೆ 150 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಇದನ್ನು ತಪ್ಪಿಸಲು ವರ್ಷವಿಡೀ ಅತ್ಯಧಿಕ ನೀರು ಲಭ್ಯವಿರುವ ವಾರಾಹಿ ನದಿಯಿಂದ ಜಿಲ್ಲೆಯ ಮನೆಮನೆಗೆ ನೀರು ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

ಕಾರ್ಯಾಗಾರದಲಿಲ ಕುಂದಾಪುರ ಆರ್‌ಡಬ್ಲ್ಯುಎಸ್ ಸಹಾಯಕ ಇಂಜಿನಿಯರ್ ರವಿಶಂಕರ್ ಜಲಜೀವನ್ ಮಿಷನ್ ಯೋಜನೆಯ ಕುರಿತು ಮಾಹಿತಿ ನೀಡಿದರೆ, ಬೈಂದೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಗ್ಗೆ ಧಾರವಾಡ ಸುಪ್ರದಾ ಸಂಸ್ಥೆಯ ಶ್ರೀರಂಗ, ಕಾರ್ಕಳ, ಕಾಪು, ಹೆಬ್ರಿ ಯೋಜನೆ ಕುರಿತು ಬೆಂಗಳೂರಿನ ಎಸ್‌ಎನ್‌ಸಿಯ ಶ್ರೀಕಾಂತ್ ಮಾಹಿತಿ ನೀಡಿದರು.

ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ ಅವರು ಅರಣ್ಯ ಇಲಾಖೆಯ ಜವಾಬ್ದಾರಿ ಹಾಗೂ ಕಾರ್ಯವೈಖರಿ ಕುರಿತು, ಭೂದಾಖಲೆಗಳ ಉಪನಿರ್ದೇಶಕ ರವೀಂದ್ರ ಭೂಮಾಪನ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್‌ಓ ಗಣಪತಿ, ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಲಜೀವನ್ ಮಿಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ಜಿಲ್ಲೆಯ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಇಲಾಖೆಗಳ ವಿವಿಧ ದರ್ಜೆಯ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News