ಉಡುಪಿ| ಕರ್ನಾಟಕ ವಾಲಿಬಾಲ್ ತಂಡದಿಂದ ದಲಿತ ವಿದ್ಯಾರ್ಥಿ ಹೊರಕ್ಕೆ

Update: 2024-12-15 14:33 GMT

(ಸುಜಿತ್)

ಉಡುಪಿ, ಡಿ.15: ಪದವಿ ಪೂರ್ವ ಮಹಾವಿದ್ಯಾಲಯಗಳ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ದಲಿತ ವಿದ್ಯಾರ್ಥಿಯನ್ನು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕೈಬಿಡಲಾಗಿದ್ದು, ಅವರ ಬದಲಿಗೆ ಬೇರೆ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಉಡುಪಿ ಜಿಲ್ಲಾಡಳಿತ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ತಾಲೂಕಿನ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಜಿತ್, ವಿಜಯಪುರ ಜಿಲ್ಲೆಯ ತಾಳಿಕೋಟಿ ಎಚ್.ಎಸ್. ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನ.4-5ರಂದು ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮೊದಲು ಇವರು ತಾಲೂಕು, ಜಿಲ್ಲಾ, ವಿಭಾಗ ಮಟ್ಟದಲ್ಲಿನ ಪಂದ್ಯಾಟದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ, ತಂಡ ಗೆಲ್ಲಿಸುವಲ್ಲಿ ಹೆಚ್ಚು ಪರಿಶ್ರಮ ಪಟ್ಟಿದ್ದರು ಎಂದರು.

ರಾಜ್ಯಮಟ್ಟದ ಪಂದ್ಯಾಟದಲ್ಲಿ ಇವರು ಸೆಮಿಫೈನಲ್‌ವರೆಗೆ ಒಟ್ಟು ಏಳು ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ್ದರು. ಆದರೆ ಹೆಬ್ಬೆರಳಿನ ಗಾಯದಿಂದ ಅವರಿಗೆ ಫೈನಲ್ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಫೈನಲ್‌ನಲ್ಲಿ ಉಡುಪಿ ತಂಡ ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ತಂಡದಿಂದ ಸುಜಿತ್ ಸೇರಿದಂತೆ ಆರು ಮಂದಿಯನ್ನು 12 ಮಂದಿಯ ಕರ್ನಾಟಕ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಡಿ.22ರಂದು ತೆಲಂಗಾಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಈ ತಂಡ ಭಾಗವಹಿಸಲಿದೆ.

ಆದರೆ ಇದೀಗ ಕೊನೆ ಕ್ಷಣದಲ್ಲಿ ಸುಜಿತ್ ಫೈನಲ್ ಪಂದ್ಯದಲ್ಲಿ ಆಡಿಲ್ಲ ಎಂಬ ಕಾರಣ ಇಟ್ಟುಕೊಂಡು, ತಂಡದಿಂದ ಕೈಬಿಟ್ಟು, ಕೇವಲ ಫೈನಲ್ ಪಂದ್ಯದಲ್ಲಿ ಮಾತ್ರ ಆಡಿದ ವಿದ್ಯಾರ್ಥಿಯೊಬ್ಬನನ್ನು ಸೇರಿಸಲಾಗಿದೆ. ರಾಜಕೀಯ ಪ್ರಭಾವ ದಿಂದ ಉಡುಪಿ ಜಿಲ್ಲಾಡಳಿತ ಶನಿವಾರ ತುರ್ತು ಸಭೆ ನಡೆಸಿ, ಸುಜಿತ್‌ನನ್ನು ಕೈಬಿಟ್ಟು ಬೇರೆ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳು ವಂತೆ ಶಿಪಾರಸ್ಸು ಮಾಡಿದೆ. ಅದರಂತೆ ಸುಜಿತ್‌ನನ್ನು ತಂಡದಿಂದ ಕೈಬಿಡಲಾಗಿದೆ. ಇದು ಜಿಲ್ಲಾಡಳಿತ ಮಾಡಿರುವ ಅನ್ಯಾಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಮುಖಂಡ ರಾದ ಅಣ್ಣಪ್ಪ ನಕ್ರೆ, ಶ್ಯಾಂ ಸುಂದರ್ ತೆಕ್ಕಟ್ಟೆ, ಶ್ರೀಧರ್ ಬೈಲೂರು, ಶಿವಾನಂದ ಬಿರ್ತಿ, ಸುಜಿತ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News