ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ 63 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳವು

Update: 2024-11-18 06:34 GMT

ಸಾಂದರ್ಭಿಕ ಚಿತ್ರ

ಮಣಿಪಾಲ, ನ.18: ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ವರದಿಯಾಗಿದೆ.

ಸಂಬಂಧಿಕ ಮದುವೆ ಕಾರ್ಯಕ್ರಮಕ್ಕಾಗಿ ಮುಂಬೈಯ ಅವಿನಾಶ್ ಎಂಬವರು ತಮ್ಮ ಕುಟುಂಬದವರೊಂದಿಗೆ ನ.15ರಂದು ರೈಲಿನಲ್ಲಿ ಮುಂಬೈಯಿಂದ ಉಡುಪಿಗೆ ಹೊರಟಿದ್ದರು. ಇವರು ಒಡವೆ ಹಾಗೂ ಬಟ್ಟೆಗಳಿದ್ದ 4 ಸೂಟ್ ಕೇಸ್ಗಳನ್ನು ಬೀಗ ಹಾಕದೇ ಜೀಪ್ ಲಾಕ್ ಮಾಡಿ ಸೀಟಿನ ಕೆಳಗೆ ಇಟ್ಟಿದ್ದರು.

ಇವರು ನ.16ರಂದು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಕಟಪಾಡಿ ಸಮೀಪದ ಮಣಿಪುರದಲ್ಲಿರುವ ಮನೆಗೆ ಹೋಗಿದ್ದು, ಸಂಜೆ ಬ್ಯಾಗ್ ತೆರೆದು ನೋಡಿದಾಗ 2 ಬ್ಯಾಗಿಗಳಲ್ಲಿಟ್ಟಿದ್ದ 63 ಲಕ್ಷ ರೂ. ಮೌಲ್ಯದ 900 ಗ್ರಾಂ ಚಿನ್ನಾಭರಣಗಳು ಕಳವಾಗಿರುವುದು ಕಂಡು ಬಂದಿದೆ. ಪನ್ವೆಲ್ ನಿಂದ ಕಂಕಾವಲಿ ರೈಲ್ವೆ ನಿಲ್ದಾಣದ ಮಧ್ಯೆ ಯಾರೋ ಕಳ್ಳರು ಕಳವು ಮಾಡಿರಬಹುದೆಂದು ದೂರಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ಆಗಿರುವುದರಿಂದ ಮುಂದೆ ಈ ಪ್ರಕರಣ ಸಂಬಂಧಪಟ್ಟ ಠಾಣೆಗೆ ವರ್ಗಾವಣೆಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News