ಉಡುಪಿ: ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ; ಪರಿಸರದಲ್ಲಿ ಇನ್ನೂ ಮಡುಗಟ್ಟಿದ ಆತಂಕ

Update: 2023-11-27 04:43 GMT

ಉಡುಪಿ, ನ.26: ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ನಡೆದು ಇಂದಿಗೆ 15 ದಿನಗಳಾದರೂ ಪರಿಸರದಲ್ಲಿ ಇನ್ನೂ ಆತಂಕ ಮಡುಗಟ್ಟಿದೆ.

ಈ ಭೀಕರ ಕಗ್ಗೊಲೆಯಿಂದ ಮಾನಸಿಕವಾಗಿ ಜರ್ಜರಿತರಾಗಿರುವ ಸ್ಥಳೀಯರು ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಇದರಿಂದ ಇವರೆಲ್ಲ ರಾತ್ರಿ ವೇಳೆ ಈ ಪರಿಸರದಲ್ಲಿ ಓಡಾಟಕ್ಕೂ ಭಯ ಪಡುತ್ತಿದ್ದಾರೆ. ಇಡೀ ಪರಿಸರದಲ್ಲಿ ಇನ್ನೂ ಕೂಡ ಮೌನ ಆವರಿಸಿದೆ.

ಕೊಲೆ ನಡೆದ ನೂರ್ ಮುಹಮ್ಮದ್ ಮನೆಯ ಸಮೀಪದಲ್ಲೇ ಇರುವ ಹಸೀನಾರ ಸಹೋದರ ಮನೆಯವರು ಕೂಡ ಮನೆಯಲ್ಲಿ ವಾಸ ಮಾಡುತ್ತಿಲ್ಲ. ಅದೇ ರೀತಿ ನೂರ್ ಮುಹಮ್ಮದ್ರ ಮನೆಯ ಸಮೀಪ ರಸ್ತೆ ಬದಿ ಇರುವ ಅಂಗಡಿಯವರೊಬ್ಬರು ಕಳೆದ 10 ದಿನಗಳ ಕಾಲ ಅಂಗಡಿಯನ್ನೇ ತೆರೆದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ಈ ಪರಿಸರದ ಜನತೆ ಇನ್ನೂ ಈ ಭೀಬತ್ಸ ಕೃತ್ಯದ ಆತಂಕದಿಂದ ಹೊರ ಬಂದಿಲ್ಲ.

ಸಿಸಿಟಿವಿ ಕ್ಯಾಮರಾ ಅಳವಡಿಕೆ: ಈ ಕೊಲೆ ನಡೆದ ಬಳಿಕ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಈ ಪರಿಸರದಲ್ಲಿ ಏಲ್ಲೂ ಸಿಸಿಟಿವಿ ಕ್ಯಾಮರಾ ಇಲ್ಲದೇ ಇರುವುದು ಬಹಳ ದೊಡ್ಡ ತೊಡಕಾಗಿತ್ತು. ಆರೋಪಿಯನ್ನು ಬಾಡಿಗೆ ಕರೆದುಕೊಂಡು ಬಂದ ರಿಕ್ಷಾ ಚಾಲಕ ಮಾಹಿತಿಯಂತೆ ಉಡುಪಿ ಕರಾವಳಿ ಬೈಪಾಸ್ನಲ್ಲಿರುವ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಯ ಓಡಾಟ ಪತ್ತೆಯಾಗಿತ್ತು.

ಇದೀಗ ನೇಜಾರು ತೃಪ್ತಿ ಲೇಔಟ್ ನ ನೂರ್ ಮುಹಮ್ಮದ್ ಅವರ ನೆರೆಮನೆಯವರು ತಮ್ಮ ಸುರಕ್ಷತೆಗಾಗಿ ಮನೆಯ ನಾಲ್ಕು ಸುತ್ತು ಸಿಸಿಟಿವಿ ಕ್ಯಾಮರಾ ಅವಳಡಿಕೆ ಮಾಡಲು ಮುಂದಾಗಿದ್ದಾರೆ. ನೂರ್ ಮುಹಮ್ಮದ್  ಮನೆಯ ಎದುರಿನ ಮನೆಯವರು ಈಗಾಗಲೇ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿಕೊಂಡಿದ್ದಾರೆ.

ಈ ಪರಿಸರದ ಝಕರಿಯಾ ಎಂಬವರ ಮನೆಯವರು ತಮ್ಮ ಮನೆಯಲ್ಲಿ ಹಾಳಾಗಿದ್ದ ಸಿಸಿಟಿವಿ ಕ್ಯಾಮರಾವನ್ನು ದುರಸ್ತಿ ಮಾಡಲು ಮುಂದಾಗಿದ್ದಾರೆ. ಪೊಲೀಸರು ಕೂಡ ಪರಿಸರದ ಮನೆಯವರಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳಲು ಸಲಹೆಗಳನ್ನು ಕೂಡ ನೀಡುತ್ತಿದ್ದಾರೆ. ಹೆಚ್ಚಿನ ಮನೆಯವರು ಆಸಕ್ತಿ ತೋರಿದ್ದು, ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮರವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಾರಿದೀಪಕ್ಕೆ ಒತ್ತಾಯ: ಕಳೆದ ಹಲವು ಸಮಯಗಳಿಂದ ಈ ಪರಿಸರದಲ್ಲಿ ದಾರಿದೀಪ ಇಲ್ಲದೆ ಜನ ಸಂಚಾರಕ್ಕೆ ತೀರಾ ತೊಂದರೆಯಾಗುತ್ತಿದೆ. ಈಗ ಈ ಕೊಲೆ ಪ್ರಕರಣ ನಡೆದ ಬಳಿಕ ಅಂತೂ ಜನ ದಾರಿದೀಪ ಇಲ್ಲದೆ ರಾತ್ರಿ ಹೊತ್ತು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ.

‘ಸ್ಥಳೀಯ ಗ್ರಾಪಂಗೆ ದಾರಿದೀಪ ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಕೇವಲ ಭರವಸೆ ಮಾತ್ರ ಬರುತ್ತಿದೆ. ಆದರೆ ಇನ್ನು ದಾರಿದೀಪ ಅಳವಡಿಸಿಲ್ಲ. ಇಲ್ಲಿ ಈಗಾಗಲೇ ನಡೆಯಬಾರದ ದುರ್ಘಟನೆ ನಡೆದಿದ್ದು, ಮುಂದೆ ಇಂತಹ ಯಾವುದೇ ಘಟನೆ ನಡೆಯದಂತೆ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳಬೇಕು’ ಎಂದು ಸ್ಥಳೀಯರಾದ ಝಕರಿಯಾ ಒತ್ತಾಯಿಸಿದ್ದಾರೆ.

ಸೆಂಟ್ರಲ್ ಜೈಲಿಗೆ ಪ್ರವೀಣ್ ಚೌಗುಲೆ ಸ್ಥಳಾಂತರಿಸಲು ಸಿದ್ಧತೆ

ಭದ್ರತೆಯ ದೃಷ್ಟಿಯಿಂದ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿರುವ ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಜೈಲಾಧಿಕಾರಿಗಳು ಸಿದ್ಧತೆಗಳನ್ನು ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ನ.22ರಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರವೀಣ್ ಚೌಗುಲೆಯನ್ನು ಗಂಭೀರ ಪ್ರಕರಣದ ಕಾರಣಕ್ಕೆ ಸುರಕ್ಷತೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಲ್ ಮತ್ತು ವಿಶೇಷ ಭದ್ರತೆಯೊಂದಿಗೆ ಇರಿಸಲಾಗಿದೆ. ಇದೀಗ ಜಿಲ್ಲಾ ಕಾರಾಗೃಹದಲ್ಲಿನ ಭದ್ರತೆ ಕೊರತೆಯ ಹಿನ್ನೆಲೆಯಲ್ಲಿ ಆತನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಬಂಧಿಖಾನೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಈಗಾಗಲೇ ಉಡುಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಇದೀಗ ಬಂಧಿಖಾನೆ ಇಲಾಖೆಯ ಮೇಲಾಧಿಕಾರಿಗಳ ಅನುಮತಿಗೆ ಅಧಿಕಾರಿಗಳು ಕಾಯುತ್ತಿದ್ದು, ಅಲ್ಲಿ ಅನುಮತಿ ಸಿಕ್ಕಿದ ಕೂಡಲೇ ಆತನನ್ನು ಹೆಚ್ಚು ಸುರಕ್ಷತೆ ಹಾಗೂ ಭದ್ರತೆ ಇರುವ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಒಟ್ಟು 8 ಸೆಂಟ್ರಲ್ ಜೈಲುಗಳಿದ್ದು, ಇವುಗಳ ಪೈಕಿ ಯಾವುದಾದರೂ ಜೈಲಿಗೆ ಅತನನ್ನು ಸ್ಥಳಾಂತರಿಸಲು ಮೇಲಾಧಿಕಾರಿಗಳು ಸೂಚಿಸಬಹುದಾಗಿದೆ. ಈತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಅಥವಾ ಬೆಳಗಾವಿ ಜೈಲಿಗೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಸೋಮವಾರ ಮೇಲಾಧಿಕಾರಿಗಳಿಂದ ಆದೇಶ ಬರಲಿದೆ ಎಂದು ಮೂಲಗಳು ತಿಳಿಸಿವೆ. ಮುಂದೆ ಈತನನ್ನು ಸೆಂಟ್ರಲ್ ಜೈಲಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕವೇ ಉಡುಪಿ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈಗಾಗಲೇ ಪೊಲೀಸ್ ಇಲಾಖೆ ನಗರದ ಹಲವು ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಲು ಪ್ರಸ್ತಾವವನ್ನು ಸಿದ್ಧಪಡಿಸುತ್ತಿದೆ. ಅದೇ ರೀತಿ ಖಾಸಗಿಯವರು ಕೂಡ ತಮ್ಮ ಮನೆ, ಅಂಗಡಿಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಮನವಿ ಮಾಡುತ್ತಿದ್ದೇವೆ. ಇದರಿಂದ ಅಪರಾಧಗಳು ನಡೆದಾಗ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಬಹಳಷ್ಟು ಸಹಕಾರಿ ಯಾಗುತ್ತದೆ.

| ಡಾ.ಕೆ.ಅರುಣ್, ಎಸ್ಪಿ ಉಡುಪಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News