ಉಡುಪಿ: ಪ್ರವಾಸಿ ತಾಣಗಳಿಗೆ, ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಇಲಾಖೆ ಸೂಚನೆ
ಉಡುಪಿ: ಜಿಲ್ಲೆಗೆ ವಿವಿಧ ರಾಜ್ಯಗಳಿಂದ, ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಶೈಕ್ಷಣಿಕ ಪ್ರವಾಸಕ್ಕೆಂದು ಆಗಮಿಸುವ ಶಾಲಾ ಮಕ್ಕಳನ್ನು ಕರೆತರುವ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಪ್ರವಾಸೋದ್ಯಮ ಇಲಾಖೆ ಕೆಲವು ಸೂಚನೆಗಳನ್ನು ನೀಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ.
ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಸಮುದ್ರ ತೀರದಲ್ಲಿ ಬಂದು ನೀರಿಗೆ ಇಳಿದು ನೀರಿನಲ್ಲಿ ಆಟ ಆಡುವುದು, ಸ್ನಾನ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಬರುವಂಥ ಪ್ರವಾಸಿಗರಿಗೆ ನೀರಿನ ಅಬ್ಬರದ ಬಗ್ಗೆ ತಿಳುವಳಿಕೆ ಇಲ್ಲದೇ ಇದ್ದು ನೀರಿಗೆ ಈಜಲು ಹೋಗಿ ಪ್ರಾಣಾಪಾಯ ತಂದುಕೊಳ್ಳುತ್ತಾರೆ.
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ನದಿ, ಜಲಪಾತಗಳು ಹಾಗೂ ಸಮುದ್ರದ ಅಲೆಗಳು ತುಂಬಾ ಅಪಾಯಕಾರಿಯಾಗಿ ರುವುದರಿಂದ ಇಂಥ ಸ್ಥಳಗಳಲ್ಲಿ ಪಾಲಕರು ತಮ್ಮ ಮಕ್ಕಳು ನೀರಿಗೆ ಇಳಿಯದಂತೆ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ಬರುವ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಆಗಮಿಸುವ ಶಿಕ್ಷಕರು / ಉಪನ್ಯಾಸಕರು ಹಾಗೂ ಮುಖ್ಯೋಪಾದ್ಯಾಯರು ತಮ್ಮ ಶಾಲಾ-ಕಾಲೇಜು ಮಕ್ಕಳಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆ ನೀಡುವಂತೆ ತಿಳಿಸಲಾಗಿದೆ.
ಇವರೆಲ್ಲರೂ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ, ಮಕ್ಕಳು, ಯುವಕ ಯುವತಿಯರು ನೀರಿಗೆ ಇಳಿಯದಂತೆ ನೋಡಿಕೊಳ್ಳಬೇಕು. ಪ್ರವಾಸದ ಸಂದರ್ಭದಲ್ಲಿ ಮಕ್ಕಳನ್ನು ಯಾವುದೇ ಅಪಾಯಕಾರಿ ಸ್ಥಳಗಳಿಗೆ ಕರೆದು ಕೊಂಡು ಹೋಗಬಾರದು ಹಾಗೂ ಎಲ್ಲಾ ಸ್ಥಳಗಳಲ್ಲಿ ಪ್ರವಾಸಿ ಉಸ್ತುವಾರಿ ವಹಿಸಿಕೊಂಡ ಸಿಬ್ಬಂದಿ ವಿದ್ಯಾರ್ಥಿಗಳ ಜೊತೆ ಇದ್ದು ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಡಕ್ಕೆ / ಹಾನಿಗೆ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿದ ಬೀಚುಗಳಲ್ಲಿ ‘ಬಾಥಿಂಗ್ ಝೋನ್’ ವ್ಯಾಪ್ತಿಯಲ್ಲಿ ಮಾತ್ರ ನೀರಿಗೆ ಇಳಿಯಬೇಕು. ಪ್ರವಾಸಿಗರ ಹಿತದೃಷ್ಟಿಯಿಂದ ಪ್ರೇಕ್ಷಣೀಯ ಸ್ಥಳಗಳಲ್ಲಿ ನಿಯೋಜಿಸಿದ ಪೊಲೀಸ್, ಲೈಫ್ ಗಾರ್ಡ್, ಪ್ರವಾಸಿಮಿತ್ರ ಹಾಗೂ ಭದ್ರತಾ ಸಿಬ್ಬಂದಿಗಳು ನೀಡುವ ಎಚ್ಚರಿಕೆಯ ಸೂಚನೆಯನ್ನು ಪಾಲಿಸುವ ಜೊತೆಗೆ ಪ್ರವಾಸಿ ತಾಣಗಳನ್ನು ದೂರದಿಂದಲೇ ವೀಕ್ಷಿಸಿ ಸಂಭ್ರಮಿಸಿ ಅಲ್ಲಿಂದ ಸುರಕ್ಷಿತವಾಗಿ ತೆರಳುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.