ಉಡುಪಿ: ಶಾಲೆಗೆ ಅನಧಿಕೃತ ಗೈರು; ಇಬ್ಬರು ಶಿಕ್ಷಕರ ಅಮಾನತು

Update: 2023-08-17 14:13 GMT

ಅಂಪಾರು ದಿನಕರ ಶೆಟ್ಟಿ

ಉಡುಪಿ, ಆ.17: ಮೇಲಾಧಿಕಾರಿಗಳ ಅನುಮತಿ ಪಡೆಯದೇ ಅನಧಿಕೃತವಾಗಿ ಶಾಲೆಗೆ ಗೈರುಹಾಜರಾಗಿರುವ ಕಾರಣಕ್ಕೆ ಆನಗಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹಾಗೂ ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಂಪಾರು ದಿನಕರ ಶೆಟ್ಟಿ ಹಾಗೂ ಅದೇ ಶಾಲೆಯ ಮುಖ್ಯೋಪಾಧ್ಯಾಯರಾದ ಜನಾರ್ದನ ಪಟಗಾರ್ ಅವರನ್ನು ಅಮಾನತು ಗೊಳಿಸಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಅಂಪಾರು ದಿನಕರ ಶೆಟ್ಟಿ ಅವರು ಮೇಲಾಧಿಕಾರಿಗಳಿಂದ ಅನುಮತಿ ಪಡೆಯದೇ ನಿರಂತರವಾಗಿ ಶಾಲೆಗೆ ಗೈರಾಗಿರುವುದಕ್ಕೆ ಹಾಗೂ ಜನಾರ್ದನ ಪಟಗಾರ ಅವರನ್ನು ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೇ, ದಿನಕರ ಶೆಟ್ಟಿ ಅವರಿಗೆ ಬೆಂಬಲ ನೀಡಿರುವುದಕ್ಕಾಗಿ ಅಮಾನತುಗೊಳಿಸಿರುವುದಾಗಿ ಗಣಪತಿ ತಿಳಿಸಿದ್ದಾರೆ.

ಸಹ ಶಿಕ್ಷಕರಾದ ಅಂಪಾರು ದಿನಕರ ಶೆಟ್ಟಿ ಅವರು ಅನಗಳ್ಳಿ ಶಾಲೆಗೆ ಪದೇ ಪದೇ ಅನಧಿಕೃತವಾಗಿ ಗೈರು ಹಾಜರಾಗುತ್ತಿರುವ ಬಗ್ಗೆ ಶಾಲೆ ವಿದ್ಯಾರ್ಥಿಗಳ ಹೆತ್ತವರು ಹಾಗೂ ಸ್ಥಳೀಯರು ಇಲಾಖೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕರು ಗೈರುಹಾಜರಾಗಿದ್ದು, ಮೇಲಾಧಿಕಾರಿಗಳಿಗೆ ಮಾಹಿತಿ ನೀಡದಿರುವುದು ಕಂಡುಬಂದಿತ್ತು. ವಿಷಯವನ್ನು ಮುಖ್ಯೋಪಾಧ್ಯಾಯರು ಸಹ ಮೇಲಾಧಿಕಾರಿಗಳ ಗಮನಕ್ಕೆ ತಾರದೇ, ಮಾಹಿತಿಯನ್ನು ಸಹ ನೀಡದಿರುವುದು ಬಹಿರಂಗಗೊಂಡಿತ್ತು.

ಇದೀಗ ಇಬ್ಬರನ್ನು ಅಮಾನತಿನಲ್ಲಿರಿಸಿದ್ದು, ಇಲಾಖಾ ವಿಚಾರಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News