ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ದಾಂಧಲೆ
ಉಡುಪಿ, ಡಿ.31: ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಬಂದ ಅಯ್ಯಪ್ಪ ಮಾಲಧಾರಿಗಳು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಘಟನೆ ಡಿ.29ರಂದು ರಾತ್ರಿ ವೇಳೆ ನಡೆದಿದ್ದು, ಈ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಬಂಧಿತರನ್ನು ಅಯ್ಯಪ್ಪಮಾಲಧಾರಿಗಳಾದ ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್‌ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಎಂದು ಗುರುತಿಸಲಾಗಿದೆ.
ಶ್ರೀಕೃಷ್ಣಮಠದ ಒಳಗೆ ಹಾಗೂ ಹೊರಗೆ ತೀವ್ರ ಜನಸಂದಣಿಯಿಂದ ನೂಕು ನುಗ್ಗಲು ಉಂಟಾಗಿದ್ದು, ಈ ವೇಳೆ ದೇವರ ದರ್ಶನಕ್ಕೆ ಬಂದಿದ್ದ ಸುಮಾರು 7-8 ಜನ ಅಯ್ಯಪ್ಪ ಮಾಲಾಧಾರಿಗಳು ದಾಂಧಲೆ ನಡೆಸಿದರೆನ್ನಲಾಗಿದೆ. ಅಲ್ಲದೆ ರಥಬೀದಿಯಲ್ಲಿ ನಡೆಯುವ ರಥೋತ್ಸವದ ದೇವರ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಕೃಷ್ಣಮಠದ ಮುಂಭಾಗದಿಂದ ಒಳಭಾಗಕ್ಕೆ ಬರುವ ವೇಳೆ ದಾಂಧಲೆ ನಡೆಸಿದ ಅಯ್ಯಪ್ಪ ಮಾಲಾಧಾರಿಗಳು ಕೃಷ್ಣಮಠದ ಸಿಬ್ಬಂದಿ ಜಗದೀಶ ಎಂಬವರಿಗೆ ಕೈಯಿಂದ ಹಲ್ಲೆ ಮಾಡಿದರು.
ಆತನನ್ನು ಅವರೆಲ್ಲರೂ ಸೇರಿ ಮೇಲೆತ್ತಿಕೊಂಡು ಶ್ರೀಕೃಷ್ಣ ಮಠದ ಗರ್ಭ ಗುಡಿಯ ಒಳಗಡೆ ಬಂದಿದ್ದು, ಆಗ ಮಠದ ದಿವಾನ ನಾಗರಾಜ ಆಚಾರ್ಯ, ಅಯ್ಯಪ್ಪಮಾಲಾಧಾರಿಗಳನ್ನು ತಡೆಯಲು ಪ್ರಯತ್ನಿಸಿದರು. ಆಗ ಅವರೆಲ್ಲ ನಾಗರಾಜ ಆಚಾರ್ಯರ ಮೇಲೂ ಹಲ್ಲೆಗೆ ಮುಂದಾದರೆನ್ನಲಾಗಿದೆ. ಈ ಸಂದರ್ಭ ಕೃಷ್ಣಮಠದಲ್ಲಿ ಭದ್ರತಾ ಕರ್ತವ್ಯ ಹಾಗೂ ಪಿಆರ್‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸಟೇಬಲ್ ರವೀಂದ್ರ ಗಲಾಟೆ ಮಾಡದಂತೆ ಅಯ್ಯಪ್ಪ ಮಾಲಧಾರಿಗಳನ್ನು ಸಮಾಧಾನ ಮಾಡಿ ತಡೆಯಲು ಹೋದರು.
ಈ ವೇಳೆ ಅಯ್ಯಪ್ಪ ಮಾಲಧಾರಿಗಳು ಪೊಲೀಸ್ ಸಿಬ್ಬಂದಿಗೆ ಕೈಯಿಂದ ಮುಖಕ್ಕೆ, ಮೈಕೈಗೆ, ಕೆನ್ನೆಗೆ ಹಲ್ಲೆ ಮಾಡಿದರು. ಇದರಿಂದ ಅವರಿಗೆ ಗಾಯ ಉಂಟಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾನ್ಸಟೇಬಲ್ ರವೀಂದ್ರ ನೀಡಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.