ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ವಿವಾದ: ವಿದ್ಯಾರ್ಥಿನಿಯರು, ಆಡಳಿತ ಮಂಡಳಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು

Update: 2023-07-26 12:01 GMT

ಮಲ್ಪೆ, ಜು.26: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಇಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸುಷ್ಮಾ ಜಿ.ಬಿ. ನೀಡಿದ ದೂರಿ ನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:509, 204, 175, 34 ಐಪಿಸಿ ಮತ್ತು 66(ಇ) ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಅಂಬಲಪಾಡಿಯಲ್ಲಿರುವ ಈ ಕಾಲೇಜಿನಲ್ಲಿ ಜು.18ರಂದು ಮಧ್ಯಾಹ್ನ ಎರಡನೇ ವರ್ಷದ ಡಿಪ್ಲೊಮೋ ಇನ್ ಆಪರೇಶನ್ ಥೀಯೇಟರ್ ಕೋರ್ಸ್ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಶೌಚಾಲಯಕ್ಕೆ ಹೋಗಿದ್ದು, ಆಗ ಅವಳ ಗೆಳತಿಯರಾದ ಎರಡನೇ ವರ್ಷದ ಡಿಪ್ಲೊಮೋ ಇನ್ ಆಪ್ಟೋಮೆಟ್ರಿ ಕೋರ್ಸ್‌ನ ಮೂವರು ವಿದ್ಯಾರ್ಥಿನಿಯರು ವಿಡಿಯೋ ಮಾಡಲು ಹೋಗಿ ಆಕಸ್ಮಿಕವಾಗಿ ಆ ವಿದ್ಯಾರ್ಥಿನಿಯ ಬದಲು ಬೇರೆ ವಿದ್ಯಾರ್ಥಿನಿಯ ವಿಡೀಯೋ ಮಾಡಿದ್ದಾರೆ. ಇದು ಆಕೆಯ ಗಮನಕ್ಕೆ ಬಂದ ಕೂಡಲೇ ಅವರ ಸಮಕ್ಷಮದಲ್ಲಿಯೇ ವೀಡಿಯೋ ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.

ಜು.19ರಂದು ವಿದ್ಯಾರ್ಥಿನಿಯರಿಂದ ಮೂರು ಮೊಬೈಲ್‌ಗಳನ್ನು ಕಾಲೇಜು ಆಡಳಿತ ಮಂಡಳಿಯವರು ತಮ್ಮ ವಶಕ್ಕೆ ಪಡೆದುಕೊಂಡಿರುವುದಾಗಿಯೂ ತಿಳಿದು ಬಂದಿದೆ. ಆದರೆ ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಲು ಯಾರೂ ಸಹ ದೂರನ್ನು ನೀಡಿರುವುದಿಲ್ಲ ಮತ್ತು ಸತ್ಯಾಂಶದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಜು.25ರಂದು ಆಡಳಿತ ಮಂಡಳಿಯವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಾವು ವಿಡಿಯೋ ಮಾಡಿದ್ದೇವೆ ಎಂದು ಮಕ್ಕಳು ತಪ್ಪೊಪ್ಪಿಗೆ ನೀಡಿದ್ದು, ಆ ಉದ್ದೇಶಕ್ಕೆ ಅವರನ್ನು ಅಮಾನತು ಮಾಡಿರುತ್ತೇವೆ ಎಂದು ತಿಳಿಸಿರುವ ಬಗ್ಗೆ ವರದಿಯಾಗಿದೆ ಎಂದು ಎಸ್ಸೈ ಸುಷ್ಮಾ ಜಿ.ಬಿ. ದೂರಿನಲ್ಲಿ ತಿಳಿಸಿದ್ದಾರೆ.

ಇದೊಂದು ಸಂಜ್ಷೇಯ ಅಪರಾಧ ಆಗಿರುವುದರಿಂದ, ಮಹಿಳೆಯ ಮಾನ ಮತ್ತು ಗೌರವಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ಅವಳ ಖಾಸಗಿತನದ ವಿಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ, ವಿಷಯ ತಿಳಿದ ಕೂಡಲೇ ಡಿಲೀಟ್ ಮಾಡಿರುವ ವಿದ್ಯಾರ್ಥಿನಿಯರ ವಿರುದ್ಧ ಹಾಗೂ ಆಡಳಿತ ಮಂಡಳಿಯ ವಿರುದ್ಧ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಈ ದೂರನ್ನು ನೀಡುತ್ತಿದ್ದೇನೆ. ಇದನ್ನು ಸ್ವೀಕರಿಸಿ, ದೂರು ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News