ದಲಿತ ಮಹಿಳಾ ಕಾರ್ಮಿಕರ ಮೇಲೆ ದೌರ್ಜನ್ಯ: ಕೋಟ ಠಾಣಾಧಿಕಾರಿ ವಜಾಕ್ಕೆ ಆಗ್ರಹಿಸಿ ದಸಂಸ ಪ್ರತಿಭಟನೆ

Update: 2023-10-18 15:38 GMT

ಉಡುಪಿ, ಅ.18: ಇದೇ ಅ.2ರಂದು ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸೊಂದರ ಸಂಬಂಧ ವಿಚಾರಣೆಗಾಗಿ ಠಾಣೆಗೆ ಕರೆಸಿ ಇಬ್ಬರು ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಕೋಟ ಠಾಣಾಧಿಕಾರಿ ಸುಧಾ ಪ್ರಭು ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ದಸಂಸ), ಸಿಐಟಿಯು, ಸಿಪಿಎಂ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಅ.28ರಂದು ಠಾಣೆಯೆದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿವೆ ಎಂದು ದಸಂಸದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.2ರಂದು ನೂಜಿ ಗ್ರಾಮದ ಕಿರಣ್‌ಕುಮಾರ್ ಶೆಟ್ಟಿ ಎಂಬವರ ಮನೆ ಕೆಲಸಕ್ಕಾಗಿ ತೆರಳಿದ್ದ ಸುಜಾತಾ ಮತ್ತು ಆಶಾ ಎಂಬವ ಕೂಲಿಕಾರ್ಮಿಕರನ್ನು ಮನೆಯಲ್ಲಿ ಕಳವಾಗಿತ್ತೆನ್ನ ಲಾದ ಚಿನ್ನದ ಬಳೆಯ ಬಗ್ಗೆ ವಿಚಾರಿಸಲು ಠಾಣೆಗೆ ಕರೆಸಿದ ಸುಧಾಪ್ರಭು ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟುಗಾಲಿನಿಂದ ಒದ್ದು, ಹಲ್ಲೆ ನಡೆಸಿ ಸಂಜೆ 6:30ರಿಂದ ರಾತ್ರಿ 9:30ರವೆರೆಗೆ ಠಾಣೆಯಲ್ಲಿರಿಸಿ ಚಿತ್ರಹಿಂಸೆ ನೀಡಿ ಬಳಿಕ ಮರುದಿನ ಬರುವಂತೆ ಮನೆಗೆ ಕಳುಹಿಸಿದ್ದರು ಎಂದರು.

ಮರುದಿನ ಇಬ್ಬರು ಮಹಿಳೆಯರು ಬೆಳಗ್ಗೆ 10:40ಕ್ಕೆ ಹಾಜರಾಗಿದ್ದು, ಅಪರಾಹ್ನದ ವೇಳೆ ಸುಧಾಪ್ರಭು ಅವರು ಕಿರಣ್ ಶೆಟ್ಟಿ ಅವರ ಕಾರಿನಲ್ಲಿ ಇಬ್ಬರನ್ನು ಅವರ ಮನೆಗೆ ಕರೆದೊಯ್ದು, ಹೊಡೆದು, ಹಲ್ಲೆ ನಡೆಸಿ ಕಾಲಿನ ಪಾದಗಳಿಗೆ ಲಾಠಿಯಿಂದ ಹೊಡೆದು, ಹೊಟ್ಟೆಗೆ ತುಳಿದು ನಡೆದಾಡಲು ಸಾಧ್ಯವಾಗದಂತೆ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದರು. ರಾತ್ರಿ ಇಬ್ಬರನ್ನು ಮನೆಗೆ ಕಳುಹಿಸುವ ವೇಳೆಗೆ ಬೆದರಿಸಿ, ಇಬ್ಬರಿಂದಲೂ ಬಲವಂತವಾಗಿ ಹೇಳಿಕೆಯನ್ನು ಪಡೆದುಕೊಂಡಿದ್ದರು ಎಂದರು.

ತೀವ್ರವಾಗಿ ಹಲ್ಲೆಗೊಳಗಾದ ಸುಜಾತ ಅವರನ್ನು ಬಳಿಕ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಒಳರೋಗಿಯಾಗಿ ಸೇರಿಸಲಾಯಿತು. ಅಲ್ಲಿ ಅವರಿಂದ ಎಲ್ಲಾ ಮಾಹಿತಿಗಳನ್ನು ಪೊಲೀಸರು ಪಡೆದುಕೊಂಡಿದ್ದರೂ ಇದುವರೆಗೆ ಸುಧಾ ಪ್ರಭು ಹಾಗೂ ಇತರರ ಮೇಲೆ ಎಫ್‌ಐಆರ್ ದಾಖಲಿಸಿಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿ ಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರೆ, ಹಲ್ಲೆ ನಡೆಸಿದ ಬಗ್ಗೆ ಪುರಾವೆ ಮತ್ತು ಸಾಕ್ಷಿಗಳನ್ನು ತನ್ನಿ ಎಂದು ಹೇಳಿದ್ದಾರೆ ಎಂದರು.

ಹೀಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಕಿರಣ್‌ಕುಮಾರ್ ಶೆಟ್ಟಿ ಹಾಗೂ ಸುಧಾ ಪ್ರಭು ಇಬ್ಬರನ್ನು ರಕ್ಷಿಸುತ್ತಿರುವುದು ಸ್ಪಷ್ಟವಾ ಗಿದೆ. ತಮಗೆ ಬಂದ ಮಾಹಿತಿಯಂತೆ ಕಳವಾಗಿತ್ತೆನ್ನಲಾದ ಚಿನ್ನದ ಆಭರಣ ಈಗಾಗಲೇ ಮನೆಯಲ್ಲಿ ಸಿಕ್ಕಿದ್ದು, ಕಿರಣ್ ಅವರು ಸುಜಾತರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ನೋಡಿಕೊಳ್ಳುವಂತೆ ತಿಳಿಸಿ 25ಸಾವಿರ ರೂ. ಹಣವನ್ನು ನೀಡಿದ್ದಾರೆ. ಹಾಗಿದ್ದರೆ ಬಡ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದು ಏಕೆ ಎಂಬುದಕ್ಕೆ ವಿವರಣೆ ನೀಡಬೇಕು ಎಂದೂ ಸುಂದರ ಮಾಸ್ತರ್ ಹೇಳಿದರು.

ಆದರೆ ಈವರೆಗೆ ಕಿರಣ್‌ ಕುಮಾರ್ ಆಗಲಿ, ಸುಧಾ ಪ್ರಭು ಆಗಲಿ ತಾವು ನಡೆಸಿದ ದೌರ್ಜನ್ಯಕ್ಕೆ ಇಬ್ಬರು ಮಹಿಳೆಯರ ಬಳಿ ಕ್ಷಮೆ ಯಾಚಿಸಿಲ್ಲ. ಮಹಿಳೆಯರಿಗಾಗಿರುವ ಅಮಾನವೀಯ ದೌರ್ಜನ್ಯ, ಮಾನಸಿಕ ಹಿಂಸೆಯ ಕಾರಣಕ್ಕಾಗಿ ಸಂಬಂಧಿತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅ.28ರಂದು ಕೋಟ ಠಾಣೆ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಸುದ್ಧಿಗೋಷ್ಠಿಯಲ್ಲಿ ದಸಂಸದ ಸಂಚಾಲಕರಾದ ಮಂಜುನಾಥ ಗಿಳಿಯಾರು, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ ತೆಕ್ಕಟ್ಟೆ, ವಾಸುದೇವ ಮುದೂರ್, ಶ್ರೀನಿವಾಸ ವಡ್ಡರ್ಸೆ, ವಿಶ್ವನಾಥ ಬೆಳ್ಳಂಪಳ್ಳಿ, ಸಿಪಿಎಂ ಪಕ್ಷದ ಬಾಲಕೃಷ್ಣ ಶೆಟ್ಟಿ, ಸುರೇಶ್ ಹಕ್ಲಾಡಿ, ಚಂದ್ರಶೇಖರ್, ಸಂತ್ರಸ್ತರಾದ ಸುಜಾತಾ ಮತ್ತು ಆಶಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News