ಪ್ರಕೃತಿ ರಕ್ಷಕರಂತೆ ಕೆಲಸ ನಿರ್ವಹಿಸಿ: ನ್ಯಾ.ಅಬ್ದುಲ್ ರಹೀಮ್
ಕುಂದಾಪುರ, ಅ.1: ಮಹಾತ್ಮ ಗಾಂಧೀಜಿಯವರ ಪ್ರೇರಣೆಯಂತೆ ಸ್ವಚ್ಚತಾ ಕಾರ್ಯ ನಮ್ಮೆಲ್ಲರ ಜವಬ್ದಾರಿ. ಯುವ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ನಾವೆಲ್ಲ ಪ್ರಕೃತಿ ರಕ್ಷಕರು ಎಂಬಂತೆ ಕೆಲಸ ಮಾಡಬೇಕು ಎಂದು ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಹೇಳಿದ್ದಾರೆ.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಪುರಸಭೆ ಕುಂದಾಪುರ, ವಕೀಲರ ಸಂಘ ಕುಂದಾಪುರ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಆಂದೋಲನದ ಅಂಗವಾಗಿ ಕುಂದಾಪುರ ಕೋಡಿಲೈಟ್ ಹೌಸ್ ಬಳಿ ರವಿವಾರ ನಡೆದ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕುಂದಾಪುರ ಸಹಾಯಕ ಆಯುಕ್ತ ರಶ್ಮಿ ಎಸ್.ಆರ್. ಮಾತನಾಡಿ, ಕರಾವಳಿ ಜಿಲ್ಲೆಗಳು ಪ್ರವಾಸೋದ್ಯಮ ನಿಟ್ಟಿನಲ್ಲಿ ಸಮುದ್ರಕ್ಕೆ ಕೂಡ ಫೇಮಸ್. ನಮ್ಮ ಕಡಲು ತೀರ ಶುಚಿಯಾಗಿಟ್ಟುಕೊಂಡರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ನಾವು ಮಾದರಿಯಾಗುತ್ತೇವೆ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಕಳೆದ 5 ವರ್ಷಗಳಿಂದ 201 ವಾರದಲ್ಲಿ ಕಡಲ ತೀರ ಸ್ವಚ್ಛತೆ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದೆ. ಸ್ವಚ್ಚ ಕುಂದಾಪುರ- ಸ್ವಚ್ಚ ಉಡುಪಿ ಜಿಲ್ಲೆಗೆ ಎಲ್ಲರೂ ಸಹಕರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ, ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಾಜು ಎನ್. ಮಾತನಾಡಿದರು. ಕುಂದಾಪುರದ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ವೇತಾಶ್ರೀ, ಕುಂದಾಪುರ ವಕೀಲರ ಸಂಘದ ಕಾರ್ಯದರ್ಶಿ ಶ್ರೀನಾಥ್ ರಾವ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಪ್ರಮುಖರಾದ ಭರತ್ ಬಂಗೇರ, ಗಣೇಶ್ ಪುತ್ರನ್, ಶಶಿಧರ್, ಅರುಣ್, ಸಂತೊಷ್, ಬಂಟಕಲ್ಲು ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರೊಫೆಸರ್ ಜಯರಾಮ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತ ಧಾರಾದ ಆಶಾ ಶಿವರಾಮ ಶೆಟ್ಟಿ, ಸರಸ್ವತಿ ಪುತ್ರನ್, ರೆಡ್ ಕ್ರಾಸ್ ಕುಂದಾಪುರದ ಜಯಕರ ಶೆಟ್ಟಿ, ಶಿವರಾಮ ಶೆಟ್ಟಿ, ಕರಾವಳಿ ಕಾವಲು ಪಡೆ ನಿರೀಕ್ಷಕ ನಂಜಪ್ಪ, ಕೋಡಿಲೈಟ್ ಹೌಸ್ ಅಧಿಕಾರಿ ಸಿ.ಎಂ. ಸಾವಂತ್ ಮೊದಲಾದವರು ಉಪಸ್ಥಿತರಿದ್ದರು.