ಶಿರೂರು ಗುಡ್ಡ ಕುಸಿತ| ಇನ್ನೊಂದು ಲಾರಿಯ ಅವಶೇಷ ಪತ್ತೆ
ಕಾರವಾರ: ಗಂಗಾವಳಿ ನದಿಯಲ್ಲಿ ಕೇರಳ ಮೂಲದ ಅರ್ಜುನ್ ಹಾಗೂ ಬೆಂಝ್ ಲಾರಿಯ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಗೊಂಡು ಐದು ದಿನ ಕಳೆದಿದೆ. ಈ ವೇಳೆ ಟ್ಯಾಂಕರ್, ಸ್ಕೂಟಿ ಸೇರಿದಂತೆ ಇನ್ನೊಂದು ಲಾರಿಯ ಅವಶೇಷ ಪತ್ತೆಯಾಗಿದೆ.
ಶಿರೂರು ಗುಡ್ಡ ಕುಸಿತದಿಂದ ಅಂಕೋಲಾದ ಗಂಗಾವಳಿ ನದಿಯಲ್ಲಿ ಬಿದ್ದಿರುವ ಅವಶೇಷಗಳ ಪತ್ತೆ ಕಾರ್ಯವು ಐದನೆ ದಿನಕ್ಕೆ ಕಾಲಿಟ್ಟಿದೆ. ರವಿವಾರ ನೀರಿನಾಳದಿಂದ ಒಂದು ಲಾರಿಯ ಇಂಜಿನ್, ಸ್ಕೂಟಿ ಜೊತೆಗೆ ಸಂಜೆ ವೇಳೆ ಮೂಳೆಯೊಂದು ಪತ್ತೆಯಾಗಿದ್ದು, ಡಿಎನ್ ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಅದು ಜಾನುವಾರಿನ ಮೂಳೆ ಎಂದು ತಿಳಿಸಿದು ಬಂದಿದೆ.
ಕಾರ್ಯಾಚರಣೆ ವೇಳೆ ಪತ್ತೆಯಾದ ಲಾರಿಯ ಇಂಜಿನ್ ಬೆಂಝ್ ಲಾರಿಯದ್ದೋ ಅಥವಾ ತೇಲಿ ಹೋದ ಟ್ಯಾಂಕರ್ನದ್ದೋ ಎಂಬುದು ಇನ್ನು ಖಚಿತವಾಗಿಲ್ಲ. ಶನಿವಾರ ಕಾರ್ಯಾಚರಣೆಯಲ್ಲಿ ಟ್ಯಾಂಕರ್ನ ಕ್ಯಾಬಿನ್ನ ಭಾಗ ಹಾಗೂ ಟ್ಯಾಂಕರ್ನ ಎರಡು ಟಯರ್‌ಗಳು ಪತ್ತೆಯಾಗಿದ್ದವು.
ಸೋಮವಾರ ಅಂಕೋಲಾ ಶಿರೂರುನಲ್ಲಿ ಮುಂದುವರೆದ ಡ್ರೆಜ್ಜರ್ ಕಾರ್ಯಾಚರಣೆ ವೇಳೆ ಗಂಗಾವಳಿ ನದಿಯಲ್ಲಿ ಟ್ರಕ್ನ ಹಿಂಬದಿ ಟಯರ್ ಪತ್ತೆಯಾಗಿದೆ. ಹಿಂಬದಿ ಎಕ್ಸೆಲ್ ಸಹಿತ ನಾಲ್ಕು ಚಕ್ರಗಳು ಪತ್ತೆಯಾಗಿವೆ. ಯಾವ ಲಾರಿಗೆ ಸೇರಿದ್ದು ಎಂದು ಪರಿಶೀಲನೆ ಬಳಿಕ ಮಾಹಿತಿ ಲಭ್ಯವಾಗಬೇಕಾಗಿದೆ. ಇದುವರೆಗೆ ಶೋಧ ವೇಳೆ ಲಾರಿಯ ಹಲವು ಭಾಗಗಳು ಪತ್ತೆಯಾಗಿದ್ದು ಅರ್ಜುನ್ ಲಾರಿಯ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ಸೋಮವಾರ ಸಂಜೆ ವೇಳೆ ಮೇಜರ್ ಜನರಲ್ ಇಂದ್ರ ಬಾಲನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.