ಭಟ್ಕಳ: ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಜೆ. ಸೈಯದ್ ಖಾಲಿದ್ ನಿಧನ
ಭಟ್ಕಳ: ಭಟ್ಕಳದ ಹಿರಿಯ ಸಾಮಾಜಿಕ ಹೋರಾಟಗಾರ ಹಾಗೂ ಮಜ್ಲಿಸ್ ಇಸ್ಲಾಹ್-ಒ-ತಂಝೀಮ್ ನ ಮಾಜಿ ಪ್ರಧಾನ ಕಾರ್ಯದರ್ಶಿ, ಎಸ್.ಜೆ. ಸೈಯದ್ ಖಾಲಿದ್ (85) ಶನಿವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಏಳು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಸುಮಾರು 28 ವರ್ಷಗಳ ಕಾಲ ಅಬುಧಾಬಿಯಲ್ಲಿ ಉದ್ಯೋಗಿಯಾಗಿದ್ದ ಸೈಯದ್ ಖಾಲಿದ್ ಅಲ್ಲಿ ನವಾಯತ್ ಸಮುದಾಯದ ಮರ್ಕಝಿ ಅನ್ ನವಾಯತ್ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಟ್ಕಳ ಮುಸ್ಲಿಮ್ ಜಮಾಅತೆ ಅಬುಧಾಬಿಯ ಎರಡು ಅವಧಿಯ ಕಾರ್ಯದರ್ಶಿಯಾಗಿ ಹಾಗೂ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂಜುಮನ್, ರಾಬಿತಾ ಸೂಸೈಟಿ ಸೇರಿದಂತೆ ಹಲವಾರು ಸಂಘನೆಗಳಲ್ಲಿ ಇವರು ತೊಡಗಿಸಿಕೊಂಡಿದ್ದರು
ಅವರ ನಿಧನಕ್ಕೆ ಭಟ್ಕಳ ಮುಸ್ಲಿಮ್ ಖಲೀಜ್ ಕೌನ್ಸಿಲ್ನ ಅಧ್ಯಕ್ಷ ಮುಹಮ್ಮದ್ ಫಾರೂಕ್ ಮಿಸ್ಬಾಹ್, ಪ್ರಧಾನ ಕಾರ್ಯದರ್ಶಿ ಅತಿಕುರ್ರಹ್ಮಾನ್ ಮುನಿರಿ, ಮಜ್ಲಿಸ್ ಇಸ್ಲಾಹ್-ಒ-ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ನದ್ವಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಇಂದು (ಶನಿವಾರ) ರಾತ್ರಿ 10 ಗಂಟೆಗೆ ಭಟ್ಕಳ ಜುಮಾ ಮಸೀದಿಯ ಹಳೆಯ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.