'ನಮ್ಮ ನೆಲ- ಜಲ- ಸಂಸ್ಕೃತಿ ರಕ್ಷಣೆ ಉತ್ತರ ಕನ್ನಡಿಗರಿಗೆ ಅಂಜಲಿ ಗ್ಯಾರಂಟಿ'

Update: 2024-04-03 14:56 GMT

ಶಿರಸಿ: ನಮ್ಮ ನೆಲ, ನಮ್ಮ ಜಲ ರಕ್ಷಣೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುವ ಹಂಬಲವಿದೆ; ಇದು ನನ್ನ ಗ್ಯಾರಂಟಿಯಾಗಿದ್ದು, ಇದಕ್ಕಾಗಿ ನಿಮ್ಮ ಆಶೀರ್ವಾದ ಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮನವಿ ಮಾಡಿದರು‌.

ಶಿರಸಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಜನರ ಜಮೀನು ನಮ್ಮವರಿಗೇ ಸಿಗಬೇಕು. ಅವರಿಗೆ ಅವರ ಹಕ್ಕು ದೊರಕಿಸಿಕೊಡುವ ಕಾರ್ಯ ಮಾಡಬೇಕಿದೆ. ನಮ್ಮ ಜನರಿಗೆ ಉದ್ಯೋಗ ದೊರಕಬೇಕಿದೆ. ಉತ್ತರ ಕನ್ನಡದ ವಿವಿಧ ಸಂಸ್ಕೃತಿಗಳನ್ನ ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಕಾರ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಈ ಸ್ಪರ್ಧೆಯಾಗಿದೆ ಎಂದರು.

ಇದು ಬಿಜೆಪಿ- ಕಾಂಗ್ರೆಸ್ ಚುನಾವಣೆಯಲ್ಲ, ಯಾರಿಗೂ ಅವಮಾನ ಮಾಡುವ ಚುನಾವಣೆಯಲ್ಲ. ಸೋಲು- ಗೆಲುವಿನ ಚುನಾವಣೆಯೂ ಅಲ್ಲ. ಬಡವರಿಗೆ ಆಗುತ್ತಿರುವ ಅನ್ಯಾಯಕ್ಕೆ ಸಂಸತ್ ನಲ್ಲಿ ಧ್ವನಿಯಾಗುವ ಚುನಾವಣೆ. ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಆರು ಬಾರಿ ಗೆದ್ದು ಬಂದಿರುವವರು. ಅವರು ಹಿರಿಯರು, ಅವರ ಮುಂದೆ ನಾನು ತುಂಬಾ ಚಿಕ್ಕವಳು. ಆದರೆ 25 ವರ್ಷಗಳಿಂದ ಜನಸೇವೆ ಮಾಡಿಕೊಂಡು ಬಂದಿದ್ದೇನೆ. ಜನರ ಕಷ್ಟ- ಸುಖಗಳನ್ನ ಅರಿತಿದ್ದೇನೆ ಎಂದ ಅವರು, ಖಾನಾಪುರಕ್ಕೂ ಶಿರಸಿಗೂ ಹೆಚ್ಚೇನು ವ್ಯತ್ಯಾಸವಿಲ್ಲ. ಅರಣ್ಯ ಅತಿಕ್ರಮಣ ಸಮಸ್ಯೆ ಎರಡೂ ಕಡೆ ಇದೆ. ಇಡೀ ಉತ್ತರಕನ್ನಡ ಜಿಲ್ಲೆಯ ಜನಕ್ಕೆ ಭರವಸೆ ನೀಡುತ್ತೇನೆ, ನಿಮ್ಮ ಧ್ವನಿಯಾಗಿ ಸಂಸತ್ ನಲ್ಲಿ ಮಾತಾಡುತ್ತೇನೆ. ಅರಣ್ಯ ಅತಿಕ್ರಮಣದ ಬಗ್ಗೆ ಮೊದಲ ಅಧಿವೇಶನದಲ್ಲೇ ಮಾತಾಡುತ್ತೇನೆ. ಇದಕ್ಕಾಗಿ ನಿಮ್ಮ ಕೈಗೆ ಕೈಜೋಡಿಸಿ ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ, ಹಳಿಯಾಳ ಶಾಸಕರಾದ ಆರ್.ವಿ.ದೇಶಪಾಂಡೆ ಮಾತನಾಡಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ರಾಷ್ಟ್ರಕ್ಕೆ ನೀಡಿದ ಪವಿತ್ರ ಗ್ರಂಥದಿಂದ ಪ್ರಜಾಪ್ರಭುತ್ವ ನಡೆಯುತ್ತಿದೆ. ಆದರೆ ಬಹುಮತ ಬಂದರೆ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆಂದು ಇಲ್ಲಿನ ಸಂಸದರು ಹೇಳುತ್ತಾರೆ. ಗ್ಯಾರಂಟಿಯನ್ನ ತಮಾಷೆ ಮಾಡಿದ್ದ ಪ್ರಧಾನಿ, ಈಗ 'ಯೇ ಮೋದೀ ಕೀ ಗ್ಯಾರಂಟಿ ಹೈ' ಎನ್ನುತ್ತಿದ್ದಾರೆ. ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಸಂಸದರು ಪ್ರಯತ್ನಿಸಿಲ್ಲ, ನೀವೂ ಕೇಳಿಲ್ಲ. ಪ್ರಧಾನಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು; ಆದರೀಗ ಇದು ಜ್ವಲಂತ ಸಮಸ್ಯೆಯಾಗಿ ಪರಿಣಮಿಸಿದೆ. ಕಾಂಗ್ರೆಸ್ ಸತ್ಯಕ್ಕೆ ದೂರವಾದುದನ್ನ ಹೇಳುವುದಿಲ್ಲ‌; ಹೇಳಿದ್ದನ್ನ ಮಾಡುತ್ತದೆ. ಡಾ.ಅಂಜಲಿ ಖಾನಾಪುರ, ಶಿರಸಿಯ ಅಭ್ಯರ್ಥಿಯಲ್ಲ; ಕಾಂಗ್ರೆಸ್ ಅಭ್ಯರ್ಥಿ, ಈ ಜಿಲ್ಲೆಯ ಅಭ್ಯರ್ಥಿ. ಅವರನ್ನ ಗೆಲ್ಲಿಸಿಕೊಂಡುವ ಬರುವ ಜವಾಬ್ದಾರಿ ನಮ್ಮೆಲ್ಲರದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಬಿಜೆಪಿಯವರು ಸುಳ್ಳನ್ನ ಬಿಟ್ಟು ಅಭಿವೃದ್ಧಿ ಮಾಡಿದ ಇತಿಹಾಸವಿಲ್ಲ. ನಾವು ಅಭಿವೃದ್ಧಿಗೆ ಇರುವವರಲ್ಲ ಎಂದು ಸಾರ್ವಜನಿಕವಾಗೇ ಅವರು ಹೇಳಿಕೊಂಡಿದ್ದಾರೆ. ಏನು ಮಾಡಿ ದರೂ ನಡೆಯುತ್ತದೆಂಬ ಸ್ಥಿತಿಗೆ ಬಿಜೆಪಿಗರು ಜಿಲ್ಲೆಯನ್ನ ತಂದಿಟ್ಟಿದ್ದಾರೆ. ಈಗಾಗಲೇ 30 ವರ್ಷ ಕಳೆದುಕೊಂಡಿದ್ದೇವೆ, ಮತ್ತೆ ಕಳೆದುಕೊಳ್ಳಬಾರದು. ಚುನಾವಣೆಗಾಗಿ ಮತ್ತೆ ಯಾವುದಾದರೂ ಸುಳ್ಳು ತಯಾರು ಮಾಡಿಕೊಂಡು ಬಿಜೆಪಿಗರು ಬರುತ್ತಾರೆ. ಅವರಲ್ಲಿ ಕಾರ್ಯಕರ್ತನಿಂದ ಹಿಡಿದು ಪ್ರಧಾನಿಯವರೆಗೂ ಎಲ್ಲರೂ ಸುಳ್ಳು ಹೇಳುವವರೇ. ಸತ್ಯ ಹೇಳಿದ್ದು ಇತಿಹಾಸವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

2005- 06ರಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರ ಕೊಟ್ಟಿದ್ದು ಬಿಟ್ಟರೆ ಈವರೆಗೆ ಆ ಸಮಸ್ಯೆ ಪರಿಹಾರವಾಗಿಲ್ಲ. ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಯಾಗಿ ಸಂಸದರು ಒಂದೇ ಒಂದು ದಿನ ಸಂಸತ್ ನಲ್ಲಿ ಕೇಳಿಲ್ಲ. ಹೀಗಾಗಿ ಯೋಚನೆ ಮಾಡಿ ಮತ ಹಾಕಬೇಕಿದೆ. ಅಂದು ಖಾಲಿ ಗ್ಯಾರಂಟಿ ಕಾರ್ಡ್ ತೋರಿಸಿ ಅಧಿಕಾರಕ್ಕೆ ಬಂದಿದ್ದೆವು. ಈಗ ಆ ಐದು ಗ್ಯಾರಂಟಿಯನ್ನ ಅನುಷ್ಠಾನ ಮಾಡಿ, ನುಡಿದಂತೆ ನಡೆದು ಮತ್ತೆ ಮತ ಕೇಳಲು ಬಂದಿದ್ದೇವೆ.‌ ಈ ಬಾರಿ ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನ ಗೆಲ್ಲಿಸಬೇಕಿದೆ ಎಂದು ಕೋರಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ, 10 ವರ್ಷಗಳಿಂದ ಅಧಿಕಾರ ನಡೆಸಿದ ಬಿಜೆಪಿಯ ಅಭಿವೃದ್ಧಿ ಶೂನ್ಯ. ಅಧಿಕಾರಕ್ಕಾಗಿ ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚಿ, ಸುಳ್ಳುಗಳಿಂದಲೇ ಜನರನ್ನ ನಂಬಿಸುತ್ತಾ ಬಂದಿರುವ ಬಿಜೆಪಿಯನ್ನ ಅಧಿಕಾರ ದಿಂದ ದೂರವಿಡಬೇಕೆಂಬ ಕೂಗು ಇಡೀ ದೇಶದಲ್ಲಿ ಕೇಳಿಬರುತ್ತಿದೆ. ದಿನಬಳಕೆಯ ವಸ್ತುಗಳ ದರ ಬಿಜೆಪಿಯ ಆಡಳಿತದಲ್ಲಿ ಗಗನಕ್ಕೇರಿದೆ. ಜಿಲ್ಲೆಯ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸಬೇಕಿದೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಶತಃಸಿದ್ಧ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿ, ಬಹಳ ಮಂದಿ ಆಕಾಂಕ್ಷಿಗಳಿದ್ದರೂ ಇದ್ದ ಟಿಕೆಟ್ ಒಂದೇ. ಆಕಾಂಕ್ಷಿಗಳಿದ್ದವರೆಲ್ಲ ಟಿಕೆಟ್ ಘೋಷಣೆಯಾದ ಬಳಿಕ ನಮ್ಮ ಅಭ್ಯರ್ಥಿಯನ್ನ ಬೆಂಬಲಿಸುತ್ತಿದ್ದಾರೆ. ಆರು ಬಾರಿ ಆರಿಸಿ ಬಂದರೂ ಬಿಜೆಪಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈಗಿನ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಆರು ಬಾರಿ ಆರಿಸಿ ಬಂದರೂ ಅಭಿವೃದ್ಧಿ ಶೂನ್ಯ. ಸಂಸದರ ಮಾತು ಹೆಚ್ಚು ಕೆಲಸ ಕಡಿಮೆ; ಕಾಗೇರಿಯ ವರದ್ದು ಮಾತೂ ಕಡಿಮೆ, ಕೆಲಸವೂ ಕಡಿಮೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಡಾ.ಅಂಜಲಿಯವರನ್ನ ಆರಿಸಿ ಸಂಸತ್ ಗೆ ಕಳುಹಿಸಬೇಕಿದೆ ಎಂದರು.

ವಕೀಲ ಜಿ.ಟಿ.ನಾಯ್ಕ ಮಾತನಾಡಿ, ಸುಳ್ಳು ಭರವಸೆ ನೀಡುತ್ತಿರುವ ಬಿಜೆಪಿ 10 ವರ್ಷ ದೇಶ ಆಳಿದೆ. ನಿಷ್ಕ್ರಿಯ ಸಂಸದರು 30 ವರ್ಷ ಜಿಲ್ಲೆಯನ್ನಾಳಿದ್ದಾರೆ. ಪಕ್ಕದ ಜಿಲ್ಲೆ ಅಭಿವೃದ್ಧಿಯಾದಷ್ಟು ನಮ್ಮ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಜಿಲ್ಲೆಯನ್ನ ಸಂಸತ್ ನಲ್ಲಿ ಪ್ರತಿನಿಧಿಸಬೇಕಾದವರು ಪ್ರತಿನಿಧಿಸಿಲ್ಲ. ದೇಶದ ಸಂವಿಧಾನ ಉಳಿಯಬೇಕು. ಸಾಲ ಮುಕ್ತವಾಗಿ ಸುಭದ್ರವಾಗಿರಬೇಕು. ಬಡ- ಹಿಂದುಳಿದ ವರ್ಗದವರ ಏಳ್ಗೆಯಾಗಬೇಕು. ರೈತರು ಸಬಲರಾಗಬೇಕಾದರೆ ಕಾಂಗ್ರೆಸ್ ನ ಬೆಂಬಲಿಸಬೇಕಿದೆ. ಅಚ್ಛೆ ದಿನ್ ಎಂಬ ಸುಳ್ಳು ಭರವಸೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗರು, ಪ್ರತಿಯೊಬ್ಬರಿಗೂ ಪಕ್ಕಾ ಮನೆ ಕೊಡುತ್ತೇವೆಂದು ಕಳೆದ ಚುನಾವಣೆಯಲ್ಲಿ ಭರವಸೆ ನೀಡಿ ಈಡೇರಿಸಿಲ್ಲ. ಸ್ವಿಸ್ ಬ್ಯಾಂಕ್ ನಲ್ಲಿನ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಜನರನ್ನ ನಂಬಿಸಿ ವಂಚಿಸಿದರು. 30 ವರ್ಷಗಳ ಕಾಲ ಸಂಸದರಾಗಿದ್ದವರು ಮಾಡಿದ್ದೇನಿಲ್ಲ ಎಂದರು.

ಅಭಿವೃದ್ಧಿಪರ ಸರ್ಕಾರ, ಅಭಿವೃದ್ಧಿ ಮಾಡುವವರನ್ನ ಅಧಿಕಾರಕ್ಕೆ ತರಬೇಕು. ಹಂಚಿದ ಗ್ಯಾರಂಟಿ ಕಾರ್ಡ್ ನಲ್ಲಿ ಭರವಸೆ ಯನ್ನ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ‌. ಮೋದಿ 10 ವರ್ಷಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿಲ್ಲ, ಈಗ ಮತ್ತೆ ಗ್ಯಾರಂಟಿ ಎಂದು ಬರುತ್ತಿದ್ದಾರೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುವ ಮೂಲಕ ಉತ್ತರ ಪಡೆಯಬೇಕಿದೆ. ಹೋರಾಟ ಮಾಡಿದ ರೈತರನ್ನ ಭಯೋತ್ಪಾದಕರೆಂದು ಸಂಬೋಧಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಚುನಾವಣೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರ್.ವಿ.ದೇಶಪಾಂಡೆ, ಮಂಕಾಳ ವೈದ್ಯ ಹಾಗೂ ಡಾ.ಅಂಜಲಿ ನಿಂಬಾಳ್ಕರ್ ಅವರನ್ನ ಸನ್ಮಾನಿಸಲಾಯಿತು.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಂಯೋಜಕ ನಾಗರಾಜ ನಾರ್ವೇಕರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ್ರು, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್, ಅಬ್ಬಾಸ್ ತೋನ್ಸೆ, ಜೆ.ಟಿ.ನಾಯ್ಕ, ವಿಶ್ವ, ಜಿ.ಎನ್.ಹೆಗಡೆ ಮುರೇಗಾರ್, ಸಂತೋಷ್ ಶೆಟ್ಟಿ, ದೀಪಕ್ ದೊಡ್ಡೂರು, ಎಂ.ಎನ್.ಭಟ್, ಶ್ರೀನಿವಾಸ್ ನಾಯ್ಕ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News