ಭಟ್ಕಳ| ಜಾನುವಾರು ಹತ್ಯೆ: ಅಂಗಾಂಗಗಳನ್ನು ಗೋಣಿಚೀಲದಲ್ಲಿ ಎಸೆದ ದುಷ್ಕರ್ಮಿಗಳು
Update: 2025-04-17 19:01 IST

ಭಟ್ಕಳ: ಹೆಬ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕನೀರ್-ವೆಂಕಟಾಪುರ ಹೊಳೆಯ ದಂಡೆಯಲ್ಲಿ ಜಾನುವಾರೊಂದನ್ನು ಹಿಂಸಾತ್ಮಕವಾಗಿ ಹತ್ಯೆ ಮಾಡಿ, ಅದರ ಅಂಗಾಂಗಗಳನ್ನು ಗೋಣಿಚೀಲದಲ್ಲಿ ಸುತ್ತಿ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಅಪರಿಚಿತರು ಜಾನುವಾರನ್ನು ಕೊಂದು, ಅದರ ಅಂಗಭಾಗಗಳನ್ನು ಮತ್ತು ಗರ್ಭದಲ್ಲಿದ್ದ ಕರುವಿನ ಭ್ರೂಣವನ್ನು ಗೋಣಿಚೀಲದಲ್ಲಿ ತುಂಬಿ, ಕುಕನೀರ್-ವೆಂಕಟಾಪುರ ಹೊಳೆಯ ದಂಡೆಯಲ್ಲಿ ಬಿಸಾಡಿದ್ದಾರೆ. ಬೀದಿ ನಾಯಿಯೊಂದು ಚೀಲವನ್ನು ಹರಿದು ತಿನ್ನಲು ಪ್ರಯತ್ನಿಸಿದಾಗ ಈ ಘಟನೆ ಸ್ಥಳೀಯರ ಗಮನಕ್ಕೆ ಬಂದಿದೆ.
ವಿಷಯ ತಿಳಿದ ಕೂಡಲೇ ಭಟ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಆರೋಪಿಗಳನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.