ಸೇವಾ ನಿವೃತ್ತಿ ಹೊಂದಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ ಮೊಗೇರ; ವಿವಿಧ ಶಿಕ್ಷಣ ಸಂಸ್ಥೆ ಮುಖಸ್ಥರಿಂದ ಶುಭ ಹಾರೈಕೆ

Update: 2024-08-01 09:08 GMT

ಭಟ್ಕಳ: ಕಳೆದ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿ ಜು.31 ರಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ವಿ.ಡಿ.ಮೊಗೇರ ನಿವೃತ್ತರಾಗಿದ್ದು ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಘಸಂಸ್ಥೆಗಳು ಪತ್ರಕರ್ತರು ಅಭಿನಂದಿಸಿ ನಿವೃತ್ತ ಜೀವನಕ್ಕೆ ಶುಭವನ್ನು ಕೋರಿದ್ದಾರೆ.

ಅಂಜುಮನ್, ನ್ಯೂ ಶಮ್ಸ್ ಸ್ಕೂಲ್, ಅಲಿ ಪಬ್ಲಿಕ್, ನೌನಿಹಾಲ್, ವಿದ್ಯಾಭಾರತಿ, ನ್ಯೂ ಇಂಗ್ಲಿಷ್, ಆನಂದಾಶ್ರಮ ಶಾಲೆಗಳ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು ವಿ.ಡಿ.ಮೊಗೇರ ರ ನಿವೃತ್ತ ಜೀವನಕ್ಕೆ ಶುಭವನ್ನು ಹಾರೈಸಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಕಳೆದೊಂದು ವರ್ಷಗಳಿಂದ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ತಮ್ಮ ಹಲವು ವಿನೂತನ ಶೈಕ್ಷಣಿಕ ಕಾರ್ಯಕ್ರಮಗಳಿಂದಾಗಿ ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಹೊಸತನದ ಛಾಪು ಮೂಡಿಸಿ ಗಮನ ಸೆಳೆದಿದ್ದರು. ಮೂಲತ: ಭಟ್ಕಳದ ತೆಂಗಿನ ಗುಂಡಿಯವರಾದ ಅವರು 1998ರಲ್ಲಿ ಕೆ. ಇ. ಎಸ್ (ಕರ್ನಾಟಕ ಶೈಕ್ಷಣಿಕ ಸೇವೆ) ಮಾಡಿ 1999 ರಲ್ಲಿ ಪ್ರೌಢಶಾಲಾ ಮುಖ್ಯಾಧ್ಯಾಪಕರಾಗಿ ನೇಮಕಾತಿ ಹೊಂದಿ ಯಲ್ಲಾಪುರ ತಾಲೂಕಿನ ಮಳವಳ್ಳಿ ಪ್ರೌಢಶಾಲೆಯಲ್ಲಿ 3 ವರ್ಷ,ತೆಂಗಿನ ಗುಂಡಿ ಪ್ರೌಢಶಾಲೆಯಲ್ಲಿ 4 ವರ್ಷ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಭಟ್ಕಳದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಯಾಗಿ 3 ವರ್ಷ,ಕುಮಟಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರಾಗಿ 6 ವರ್ಷ,ಬಳಿಕ 2022 ರಲ್ಲಿ ಭಡ್ತಿ ಹೊಂದಿ ಉಡುಪಿಯ ಡಿ.ವೈ ಪಿ.ಸಿ.ಯಾಗಿ ಸೇವೆ ಸಲ್ಲಿಸಿ, ಕಳೆದ ಒಂದು ವರ್ಷದಿಂದ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರತಿವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭಟ್ಕಳಕ್ಕೆ ಕಡಿಮೆ ಇರುತ್ತಿದ್ದುದನ್ನು ಗಮನಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮೊದಲ ದಿನದಿಂದಲೇ ಫಲಿತಾಂಶದ ಪ್ರಗತಿಗೆ ವಿಸ್ತೃತ ಯೋಜನೆಯೊಂದನ್ನು ರೂಪಿಸಿ ತಾಲೂಕಿನ 38 ಪ್ರೌಢಶಾಲೆಗಳಿಗೆ ಕನಿಷ್ಠ ಎರಡು ಸಲ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ತೇಜನ ಮತ್ತು ಮಾರ್ಗದರ್ಶನ ನೀಡಿದ್ದರಿಂದ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ತರಬೇತಿ ಕೊಡಿಸಿರುವುದು, ಪಾಲಕರ ಸಮಾವೇಶ ಮುಂತಾದ ಕಾರ್ಯಕ್ರಮಗಳಿಂದ ಭಟ್ಕಳ ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ 2ನೇ ಸ್ಥಾನ ಪಡೆಯುವಂತಾಗಿದೆ. ಇವರ ವಿನೂತನ ಪದ್ದತಿಯಿಂದ 38 ಪ್ರೌಢಶಾಲೆಗಳಲ್ಲಿ 21 ಪ್ರೌಢಶಾಲೆಗಳು 100ಕ್ಕೆ 100 ರಷ್ಟು ಫಲಿತಾಂಶ ಸಾಧಿಸುವಂತಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯ ಜತೆಗೆ ತಾಲೂಕು ಪಂಚಾಯತ್ ನ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಆಗಿಯೂ ಕಾರ್ಯನಿರ್ವಹಿಸಿ ಎರಡೂ ಜವಾಬ್ದಾರಿಗಳನ್ನೂ ವಿ ಡಿ ಮೊಗೇರ ಅವರು ಚಾಕಚಕ್ಯತೆಯಿಂದ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News