ವಿಜಯಪುರ | ವೃಕ್ಷಥಾನ್ ಪಾರಂಪರಿಕ ಓಟ ; ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ಪೀಕರ್‌ ಯು.ಟಿ.ಖಾದರ್‌

Update: 2024-12-22 17:34 GMT

ವಿಜಯಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆಯೋಜಿಸಿದ ವೃಕ್ಷಥಾನ್ ಪಾರಂಪರಿಕ ಓಟ-2024 ರವಿವಾರ ಯಶಸ್ವಿಯಾಗಿ ಜರುಗಿತು.

21 ಕಿ.ಮೀ, 10 ಕಿ.ಮೀ ಹಾಗೂ 5 ಕಿ.ಮೀ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಪಾರಂಪರಿಕ ಓಟ ಕಾರ್ಯಕ್ರಮದಲ್ಲಿ ಹಲವು ಖ್ಯಾತನಾಮರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮ್ಯಾರಥಾನ್‌ಗೆ ಚಾಲನೆ ನೀಡಿದ ವಿಧಾನ ಸಭಾದ್ಯಕ್ಷರಾದ ಯು.ಟಿ.ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಅವರು 5 ಕಿ.ಮೀ. ಓಡಿ ಯುವಕರನ್ನು ಹುರಿದುಂಬಿಸಿದರು.

ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವ ಸಾರುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ರವಿವಾರ ಹಮ್ಮಿಕೊಂಡ ವೃಕ್ಷಥಾನ ಪಾರಂಪರಿಕ ಓಟದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತೋಷ ತಂದಿದೆ. ಭವಿಷ್ಯದಲ್ಲಿ ಪರಿಸರ ಹಾಗೂ ಭವ್ಯ ಸ್ಮಾರಕಗಳ ಸಂರಕ್ಷಣೆಯ ಆಶಯಗಳನ್ನೊಳಗೊಂಡ ಈ ಕಾರ್ಯಕ್ರಮದ ಉದ್ದೇಶ ಸಾಪಲ್ಯತೆ ಕಾಣಲಿ. ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಚ ಸುಂದರ ಪರಿಸರ ನಿರ್ಮಾಣ ಮಾಡುವ ಹೊಣೆ ನಮ್ಮದಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಪರಿಸರ ಹಾಗೂ ಪಾರಂಪರಿಕ ಸ್ಮಾರಕಗಳ ರಕ್ಷಣೆಯ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಪರಿಸರದ ಮಹತ್ವ ತಿಳಿಸಿಕೊಡುವುದು ಇಂದಿನ ಕಾಲಘಟ್ಟದ ಅಗತ್ಯವೂ ಆಗಿದೆ ಎಂದು ಹೇಳಿದರು.

ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್‌ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಗಿಡ-ಮರಗಳನ್ನು ಬೆಳೆಸಿ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡುವ ಮೂಲಕ ವಿಜಯಪುರದ ಐತಿಹಾಸಿಕ ಗತವೈಭವನ್ನು ಮರಳಿ ಪಡೆಯಲು ಪ್ರತಿಯೊಬ್ಬರು ಕೈ ಜೋಡಿಸುವಂತೆ ಅವರು ಕರೆ ನೀಡಿದರು.

ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ವಿಶ್ವ ಪ್ರಸಿದ್ಧ ಗೋಲಗುಂಬಜ್, ಇಬ್ರಾಹಿಂರೋಜಾ.ಅಸರ ಮಹಲ್, ಕುಮಟಿಗಿ ಬೇಸಿಗೆ ಅರಮನೆ, ಉಪ್ಪಲಿ ಬುರಜ್ ಸೇರಿದಂತೆ ಹಲವು ಸ್ಮಾರಕಗಳನ್ನು ಜಿಲ್ಲೆ ಹೊಂದಿದೆ. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ, ಅಭಿವೃದ್ಧಿಪಡಿಸಿ ಸ್ಮಾರಕಗಳ ಬಗ್ಗೆ ವ್ಯಾಪಕ ತಿಳುವಳಿಕೆ ಮೂಡಿಸಬೇಕು. ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಕ್ಷೇತ್ರ ಬೆಳವಣಿಗೆ, ವ್ಯಾಪಾರ ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತುಂಬಗಿ-ತಿಡಗುಂದಿ ಗ್ರಾಮದ ಶಾಂತಮ್ಮ ಹರನಾಳ, ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ಶಿವಾನಂದ ಕಟ್ಟಿಮನಿ, ಮ್ಯಾರಥಾನ್‌ ಓಟಗಾರ ನರೇನ್ ನಾಗಶೆಟ್ಟಿ ಹಾಗೂ ಪ್ರಾಚೀನ ಪರಂಪರೆಯ ಸಂರಕ್ಷಣೆರಾದ ಅಮೀನ ಹುಲ್ಲೂರ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗದ ಓಟಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪರಿಷತ್ತಿನ ಶಾಸಕರಾದ ಸುನೀಲಗೌಡ ಪಾಟೀಲ್‌, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೆಎಸ್‌ಡಿಎಲ್ ಎಂ.ಡಿ.ಪ್ರಶಾಂತ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸೌಮ್ಯ ಬಾಪಟ್, ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಕೆ. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವೃಕ್ಷ ಅಭಿಯಾನ ಪ್ರತಿಷ್ಠಾನದ ಮಹಾಂತೇಶ ಬಿರಾದಾರ, ಸಂಚಾಲಕರಾದ ಮುರುಗೇಶ ಪಟ್ಟಣಶೆಟ್ಟಿ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News