ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಕರೆ ನೀಡಿದ್ದ ವಿಜಯಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Update: 2024-12-30 15:23 GMT

ವಿಜಯಪುರ : ಡಾ.ಬಿ.ಆರ್.ಅಂಬೇಡ್ಕರ್‌ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಿನಾಮೆ ನೀಡುವಂತೆ ಒತ್ತಾಯಿಸಿ ಅಹಿಂದ ಒಕ್ಕೂಟ ಸೋಮವಾರ ಕರೆ ನೀಡಿದ್ದ ವಿಜಯಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಕಳೆದೆರಡು ದಿನಗಳಿಂದಲೂ ಒಕ್ಕೂಟದ ಪದಾಧಿಕಾರಿಗಳು ಸರಣಿ ಸಭೆ ನಡೆಸಿ ಬಂದ್‌ಗೆ ಬೆಂಬಲ ಕೋರಿದ್ದರು. ಸೋಮವಾರ ಈ ಬಂದ್‌ಗೆ ವ್ಯಾಪಕ ಬೆಂಬಲ ದೊರೆತಿದ್ದು, ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಗಾಂಧಿವೃತ್ತ, ಕೇಂದ್ರ ಬಸ್ ನಿಲ್ದಾಣ, ಕೆ.ಸಿ.ಮಾರುಕಟ್ಟೆಯಲ್ಲಿ ಜನ ಸಂಚಾರವಿಲ್ಲದೇ ಬಿಕೋ ಎನ್ನುವಂತಾಯಿತು.

ಸರಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕ್ ಹೊರತುಪಡಿಸಿ ಉಳಿದೆಲ್ಲ ಸೇವಾ-ಸಂಸ್ಥೆಗಳು ಬಹುತೇಕ ಬಂದ್ ಆಗಿದ್ದವು. ನಗರ ಸಾರಿಗೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆಟೋ ಸಂಚಾರ ಬೆರಳಣಿಕೆಯಷ್ಟಿತ್ತು. ಔಷಧ ಅಂಗಡಿ, ವೈದ್ಯಕೀಯ ಸೇವೆಗಳು ಎಂದಿನಂತೆ ಇದ್ದವು. ಪ್ರತಿಭಟನೆ ಸಾಗುವ ಮಾರ್ಗ ಮಧ್ಯದಲ್ಲಿರುವ ಪೆಟ್ರೋಲ್ ಪಂಪ್‌ಗಳು ಕೆಲ ಕಾಲ ಬಂದ್ ಆಗಿದ್ದವು. ಸರಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮೊದಲೇ ಮಾಡಲಾಗಿತ್ತು, ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ರಜೆ ಘೋಷಣೆ ಮಾಡಿದ್ದವು.

ವಿಜಯಪುರದ ಎಲ್‌ಬಿಎಸ್ ಮಾರುಕಟ್ಟೆ, ಸರಾಫ್ ಬಜಾರ್, ಜವಳಿ ಮಾರುಕಟ್ಟೆ, ಕೆ.ಸಿ. ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ಎಲ್ಲ ಭಾಗಗಳಲ್ಲಿಯೂ ಅಂಗಡಿ-ಮುಗ್ಗಟ್ಟು ಬಂದ್ ಆಗಿದ್ದವು. ಅಷ್ಟೇ ಅಲ್ಲದೇ ಜಲನಗರ, ಜಾಮೀಯಾ ಮಸೀದಿ, ಬಡಿಕಮಾನ್, ಆದರ್ಶನಗರ, ಬಂಜಾರಾ ಕ್ರಾಸ್ ಬಳಿಯ ಅನೇಕ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು.

ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು :

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಬಗ್ಗೆ ಅಪಮಾನಕರ ರೀತಿಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅಮಿತ್ ಶಾ ಅವರು ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿಯಾದರು. ಸಾವಿರಾರು ಸಂಖ್ಯೆಯ ಯುವಕರು, ಅಹಿಂದ ಒಕ್ಕೂಟದ ಪದಾಧಿಕಾರಿಗಳು ನೀಲಿ ವರ್ಣದ ಶಲ್ಯ ಧರಿಸಿ, ಕೈಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಹಿಡಿದು ಶ್ರೀಸಿದ್ದೇಶ್ವರ ದೇವಾಲಯದ ಎದುರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ ಅಮಿತ್ ಶಾ ಅವರ ವಿರುದ್ಧ ಘೋಷಣೆ ಕೂಗಿದರು.

ಸ್ಟೇಷನ್ ರಸ್ತೆ, ಮನಗೂಳಿ ಅಗಸಿ ಸೇರಿದಂತೆ ಪ್ರಮುಖ ರಸ್ತೆಯನ್ನು ಕೆಲಕಾಲ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News