ವಕ್ಫ್ ವಿಚಾರ | ಸಿಬಿಐಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆಯಲಿ : ಯತ್ನಾಳ್‌

Update: 2024-12-15 16:42 GMT

ವಿಜಯಪುರ : "ವಕ್ಪ್‌ ಆಸ್ತಿ ಕಬಳಿಕೆ ಪ್ರಕರಣದಲ್ಲಿ ಮೌನವಾಗಿರುವಂತೆ ಅನ್ವರ್‌ ಮಾಣಿಪ್ಪಾಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ 150 ಕೋಟಿ ಕೊಡುವ ಆಮಿಷ ಒಡ್ಡಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವಂತೆ ಸಿಎಂ ಸಿದ್ದರಾಮಯ್ಯನವರು ಪ್ರಧಾನಿಗೆ ಪತ್ರ ಬರೆಯುವ ಬದಲಿಗೆ ನೇರವಾಗಿ ಅವರೇ ಸಿಬಿಐಗೆ ಪತ್ರ ಬರೆಯಬಹುದಿತ್ತು" ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ರವಿವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಬಿಐಗೆ ನೇರವಾಗಿ ಪತ್ರ ಬರೆಯುವ ಅಧಿಕಾರ ಮುಖ್ಯಮಂತ್ರಿಗಳಿಗೂ ಇದೆ. 150 ಕೋಟಿ ಹಗರಣ ಹೇಗೆ ಆಗಿದೆ ಎಂದು ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡಲಿ. ರಾಜ್ಯಪಾಲರಿಗೂ ಪತ್ರ ಬರೆಯಬಹುದಿತ್ತು" ಎಂದು ತಿಳಿಸಿದರು.

‘ಲಿಂಗಾಯತ ಪಂಚಮಸಾಲಿ ಸಮಾಜ ಎಂದೂ 2ಎ ಮೀಸಲಾತಿ ಬೇಡಿಲ್ಲ. ಈಗಾಗಲೇ 2ಎ ಪ್ರವರ್ಗದಲ್ಲಿರುವ 104 ಹಿಂದುಳಿದ ಸಮಾಜಗಳ ಹಕ್ಕು ಕಸಿದುಕೊಳ್ಳಲು ನಾವು ತಯಾರಿಲ್ಲ, ಅವರ ಬುಟ್ಟಿಗೆ ಕೈಹಾಕುವುದಿಲ್ಲ’ ಎಂದರು.

ಕಾಂಗ್ರೆಸ್‌ ಸರಕಾರ ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದುಹಾಕಿ, ಆ ಮೀಸಲಾತಿಯನ್ನು 2ಸಿ ಮತ್ತು 2ಡಿ ಎಂಬ ಹೊಸ ಪ್ರವರ್ಗಗಳನ್ನು ಸೃಷ್ಟಿಸಿ, ಲಿಂಗಾಯತರು, ಒಕ್ಕಲಿಗರು, ಮರಾಠರು, ಜೈನರು, ಕ್ರೈಸ್ತರು, ವೈಷ್ಣವರು, ಕುರುಬರು ಸೇರಿದಂತೆ ವಿವಿಧ ಸಮಾಜಗಳಿಗೆ ಹಂಚಿಕೆ ಮಾಡುವ ಸಂಬಂಧ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಹೊಸ ಸೂತ್ರ ಕಂಡುಹಿಡಿಯಲಾಗಿತ್ತು. ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ. ಮುಸ್ಲಿಮರಿಗೆ ಸಂವಿಧಾನ ಬಾಹಿರವಾಗಿ ನೀಡಿರುವ ಮೀಸಲಾತಿ ರದ್ದುಗೊಳಿಸಿ, ಅದರಲ್ಲಿ ನಾವು ಮೀಸಲಾತಿ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News