ವಿಜಯಪುರ | ಜಿಲ್ಲಾಸ್ಪತ್ರೆಯಿಂದ ಒಂದು ವರ್ಷದ ಮಗುವಿನ ಅಪಹರಣ

Update: 2024-11-24 04:33 GMT

ವಿಜಯಪುರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಕಂದಮ್ಮನನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ತನ್ನ ಇಬ್ಬರು ಮಕ್ಕಳೊಂದಿಗೆ, ತಾಯಿ ಪದ್ಮಾ ಪವಾರ್ ಜೊತೆಗೆ ವಿಜಯಪುರಕ್ಕೆ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ತಾಯಿ ಪದ್ಮಾ ಪವಾರ್ ಆರೋಗ್ಯ ಕೆಟ್ಟಿದೆ. ಹೀಗಾಗಿ ಮೂರು ದಿನಗಳ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 23ರ ಬೆಳಿಗ್ಗೆ 10-30ರಿಂದ 11ಗಂಟೆಯೊಳಗೆ ರಾಮೇಶ್ವರಿ ತಾಯಿ ಪದ್ಮಾಳ ಕಫದ ಪರೀಕ್ಷೆಗಾಗಿ ತಾಯಿ ಬಳಿ 1ವರ್ಷದ ಮಗು ಸಂದೀಪ್ ನನ್ನು ಬಿಟ್ಟು ಹೋಗಿದ್ದಳು.

ಈ ವೇಳೆ ಸಂದೀಪ್ ಎದ್ದು ಅಳಲಿಕ್ಕೆ ಶುರು ಮಾಡಿದಾಗ ಮತ್ತೋರ್ವ ಪರಿಚಿತ 10 ವರ್ಷದ ಹುಡುಗ  ಮಗುವನ್ನು ಎತ್ತಿ ಆಟವಾಡಿಸುತ್ತಿದ್ದ. ಇದನ್ನೇ ಗಮನಿಸಿದ ಅಪರಿಚಿತ ವ್ಯಕ್ತಿ ವಾರ್ಡ್ ನೊಳಗೆ ಬಂದು ಮಗುವನ್ನು ಎತ್ತಿ ಆಡಿಸಿದ್ದಾನೆ. ಆ ಬಳಿಕ ಹುಡುಗ ಮಗುವನ್ನು ಹೊರಗೆ ತೆಗೆದುಕೊಂಡು ಹೋದಾಗ ಅಪರಿಚಿತ ವ್ಯಕ್ತಿ ಮಗುವನ್ನು ಅಪಹರಿಸಿದ್ದಾನೆ. ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎಂದು ತಿಳಿದು ಬಂದಿದೆ.

ಅಪರಿಚಿತ ವ್ಯಕ್ತಿ ಇದೇ ವಾರ್ಡ್ ನ ಹೊರಗಡೆ ರಾತ್ರಿ ಮಲಗಿಕೊಂಡಿದ್ದ ಎನ್ನಲಾಗಿದ್ದು, ಯಾರೋ ರೋಗಿಯ ಸಂಬಂಧಿ ಇರಬೇಕು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಗುವಿನ ತಾಯಿ ರಾಮೇಶ್ವರಿ ಜಿಲ್ಲಾಸ್ಪತ್ರೆಯಲ್ಲಿರುವ ಪೊಲೀಸರಿಗೆ ಹಾಗೂ  ವೈದ್ಯರಿಗೂ ತಿಳಿಸಿದ್ದಾಳೆ. ಕೂಡಲೇ ಪೊಲೀಸರು ಜಿಲ್ಲಾಸ್ಪತ್ರೆ ಆವರಣದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣೆಗೆ ತೆರಳಿ ರಾಮೇಶ್ವರಿ ದೂರು ನೀಡಿದ್ದು, ಪೊಲೀಸರು ಮಗು ಅಪಹರಣವಾಗಿರುವ ಮಾಹಿತಿ ರವಾನಿಸಿ ಮಗು ಪತ್ತೆಗಾಗಿ ಬಲೆ ಬೀಸಿದ್ದಾರೆ.

ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿ ಮಗುವನ್ನು ಅಪಹರಿಸಿದ್ದಾನಾ ? ಅಥವಾ ಮಗುವನ್ನು ಅಪಹರಣ ಮಾಡುವ ಉದ್ದೇಶದಿಂದಲೇ ಕೃತ್ಯ ನಡೆಸಿದ್ದಾ? ಅಥವಾ ಇತ್ತೀಚೆಗೆ ರಾಮೇಶ್ವರಿ ಹಾಗೂ ಆಕೆಯ ಗಂಡ ರತನ್ ಸಾಳುಂಕೆ ಮಧ್ಯೆ ಜಗಳವಾಗಿದೆ ಎನ್ನಲಾಗಿದ್ದು,  ಈ ಹಿನ್ನೆಲೆಯಲ್ಲಿ ಮಗು ಅಪಹರಣವಾಗಿದೆಯೇ  ಎಂಬ ಅನುಮಾನ ವ್ಯಕ್ತವಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News