ಜನಾಂದೋಲನಗಳ ಮೂಲಕ ಭಾರತದ ಉಳಿವು

ಹೀಗೆ ಎಷ್ಟು ದಿನ ನಮ್ಮ ಪ್ರಧಾನಿಯವರ ಮಾತುಗಳನ್ನು ತಿಂದು ಉಂಡು ಅನುಭವಿಸೋಣ? ಸಾಕು ಅನಿಸುತ್ತಿದೆ. ಸಂಘ ಪರಿವಾರದ ಹಿಂದುತ್ವದ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಬೇಕಿದೆ. ಈಗ 2024ರ ಚುನಾವಣೆ ನಮ್ಮ ಮುಂದಿದೆ. ಈಗಲಿಂದಲೇ ಜನಾಂದೋಲನಗಳು ಅರಳಿಮರದ ಕೆಳಗೆ, ಛಾವಡಿಯಲ್ಲಿ ಮಾತುಕತೆ ಆರಂಭಿಸಬೇಕಾಗಿದೆ. ಭಾರತ ಉಳಿಯಬೇಕು ಅಂದರೆ ಹಿಂದುತ್ವದ ಬಿಜೆಪಿ ಸೋಲಲೇಬೇಕಾಗಿದೆ.

Update: 2023-11-27 07:01 GMT

Photo: PTI

ಕರ್ನಾಟಕದಲ್ಲಿ- ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ ಯುವಜನ, ಮಹಿಳಾ ಸಂಘಟನೆಗಳು ಒಂದು ಸಮನ್ವಯ ಸಮಿತಿ ರೂಪಿಸಿಕೊಂಡು- ‘ಸಂಯುಕ್ತ ಹೋರಾಟ- ಕರ್ನಾಟಕ’ ಜನ್ಮ ತಾಳಿದ್ದು ಇದೆಯಲ್ಲಾ, ಇದು ಭಾರತದ ಇತರ ರಾಜ್ಯಗಳಿಗೂ ಮಾದರಿ ಆಗಬಹುದಾದ ಒಂದು ಬೆಳವಣಿಗೆ.

ಹೀಗೆಯೇ, ನೊಂದು ಬೆಂದು ದಿನನಿತ್ಯ ಬೇಯುತ್ತಿರುವ ರೈತ, ರೈತಕಾರ್ಮಿಕ ಮತ್ತು ಕಾರ್ಮಿಕರ ಸಂಕಷ್ಟಕ್ಕೆ ರಾಷ್ಟ್ರಮಟ್ಟದಲ್ಲಿ ದನಿಯಾದ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಡೆಸಿದ ವರ್ಷಾನುಗಟ್ಟಲೆಯ ಧೀರೋದ್ದಾತ ಹೋರಾಟವು ಈಗಾಗಲೇ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಈ ಹೋರಾಟದ ಕಾವನ್ನು ಎದುರಿಸಲಾಗದ ಕೇಂದ್ರ ಸರಕಾರವು, ಅನಿವಾರ್ಯವಾಗಿ ಆ ಹೋರಾಟದ ಬೇಡಿಕೆಗಳನ್ನು ಈಡೇರಿಸುವುದಾಗಿ ಮಾತು ಕೊಟ್ಟಿತು. ಆದರೆ ಮಾತುತಪ್ಪಿತು. ಕೇಂದ್ರ ಸರಕಾರದ ಈ ದ್ರೋಹದ ವಿರುದ್ಧ ಇಂದು ಕಿಸಾನ್ ಮೋರ್ಚಾ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ದೇಶಾದ್ಯಂತ 72 ಗಂಟೆಗಳ ಮಹಾ ಧರಣಿಗೆ ಕರೆ ನೀಡಿದೆ. ಈ ಕರೆಗೆ ನಮ್ಮ ರಾಜ್ಯದ ’ಸಂಯುಕ್ತ ಹೋರಾಟ- ಕರ್ನಾಟಕ’ವು ಜೊತೆಗೂಡುತ್ತಿದೆ. ಹೀಗೆ ಹೋರಾಟದ ಎಲ್ಲಾ ಸಂಘಟನೆಗಳೂ ತಾವು ವಿಶಾಲವಾಗುತ್ತಾ ಜೊತೆಜೊತೆಗೆ ಹೆಜ್ಜೆಗಳನ್ನಿಡುವುದೇ ಭಾರತದ ಉಳಿವಿಗೆ ಇರುವ ಏಕೈಕ ಮಾರ್ಗ ಅನ್ನಿಸುತ್ತಿದೆ.

ನಾನೀಗ ರೈತ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ- ಯುವಜನರ ಬವಣೆಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಈಗ ನನ್ನ ಚಿಂತೆ ಏನೆಂದರೆ, ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರಕಾರವೇ, ಧರ್ಮ- ಧರ್ಮಗಳ ನಡುವೆ, ಬಡವ- ಬಲ್ಲಿದರ ನಡುವೆ, ಜಾತಿ- ಜಾತಿಗಳ ನಡುವೆ ಕಂದಕ ತೋಡುತ್ತಾ ಉಲ್ಭಣಗೊಳಿಸುತ್ತಿದೆ. ಹೌದು, ಇಂದು ಸಂಘ ಪರಿವಾರದ ಚಾತುರ್ವರ್ಣ ಹಿಂದುತ್ವವು, ಬಹುತ್ವ ಭಾರತದ ಮೇಲೆಯೇ ಯುದ್ಧ ಸಾರಿದಂತೆ ಕಾಣಿಸುತ್ತಿದೆ. ಚಾತುರ್ವರ್ಣ ಹಿಂದುತ್ವದ ದಾಂಧಲೆಗೆ ಸಿಲುಕಿ, ವಿಶಾಲ ಹಿಂದೂ ಧರ್ಮ, ಮತ್ತಿತರ ಧರ್ಮಗಳು, ಪಂಥಗಳು, ನಂಬಿಕೆಗಳು ತತ್ತರಿಸುತ್ತಿವೆ. ಆಳ್ವಿಕೆಯ ದಬ್ಬಾಳಿಕೆಗೆ ಸಿಲುಕಿ ನ್ಯಾಯಾಂಗವೂ ಸೇರಿದಂತೆ ಸ್ವಾಯತ್ತ ಸಂಸ್ಥೆಗಳೂ ಅರೆಜೀವವಾಗಿ ಒದ್ದಾಡುತ್ತಿವೆ.

ಈ ರೀತಿಯಾಗುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರಕಾರವು 10ಶೇ. ಇರುವ ಮೇಲ್ಜಾತಿ/ ಮೇಲ್ವರ್ಗದ ಹಿತ ರಕ್ಷಿಸುತ್ತ ಉಳಿದ 90ಶೇ. ಜನಸ್ತೋಮವನ್ನು ಉಸಿರೆತ್ತದಂತೆ ತುಳಿಯುತ್ತಿದೆ. ಬಡವರ ಹೊಟ್ಟೆಗೆ ಹೊಡೆದು ಉಳ್ಳವರ ಬಾಯಿಗೆ ಹಾಕುತ್ತಿದೆ. ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಾರ್ಪೊರೇಟ್ ಕುಳಗಳ ಬಾಯಿಗೆ ಹಾಕುತ್ತಿದೆ. ಈ ಆಳ್ವಿಕೆಯು- ಕೃಷಿ, ಕಾರ್ಮಿಕ, ಅರಣ್ಯ, ಶಿಕ್ಷಣ ಕಾಯ್ದೆಗಳನ್ನು ಜನವಿರೋಧಿಯಾಗಿ ತಿರುಚಿಬಿಟ್ಟಿದೆ. ಈ ಆಳ್ವಿಕೆಗೆ ಸಿಲುಕಿ, ನ್ಯಾಯಾಂಗವೂ ಸೇರಿದಂತೆ ಸ್ವಾಯತ್ತ ಸಂಸ್ಥೆಗಳು ಅರೆಜೀವವಾಗಿ ಒಡ್ಡಾಡುತ್ತಿವೆ.

ಇದೆಲ್ಲದರ ಪರಿಣಾಮವಾಗಿ, ಕೃಷಿಕರು ಇದ್ದಬದ್ಧ ಭೂಮಿಯನ್ನು ಕಳೆದುಕೊಂಡು ಹೊಟ್ಟೆಪಾಡಿಗೆ ನಗರಗಳ ಬೀದಿಗೆ ಬೀಳುತ್ತಿದ್ದಾರೆ. ಮಾನವ ಸಂಪತ್ತಾಗಬೇಕಿದ್ದ ಯುವಜನತೆಯು ನಿರುದ್ಯೋಗದಿಂದ ಬಳಲುತ್ತ waste bodyಗಳಾಗುತ್ತಿದ್ದಾರೆ. ಕಾರ್ಮಿಕರ ರಕ್ಷಣೆಗಿದ್ದ ಕಾನೂನುಗಳೂ ಕಣ್ಮರೆಯಾಗುತ್ತಿವೆ. ಇನ್ನು ದಲಿತರು, ಆದಿವಾಸಿಗಳು, ಮಹಿಳೆಯರು ಹೊಸ ಹೊಸ ಶೋಷಣೆಯ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತಿದೆ.

ಭಾರತವನ್ನು ಇಲ್ಲಿಗೆ ತಂದಿಟ್ಟಿದ್ದಾರೆ- ಮನ್ ಕಿ ಬಾತ್‌ನ ನಮ್ಮ ಪ್ರಧಾನಿಗಳು! ಇವರು ತಮ್ಮ ಪರಮಾಪ್ತ ಅದಾನಿ, ಅಂಬಾನಿ ಮುಂತಾದ ಶತಕೋಟಿ ಮೇಲೆ ಕುಳಿತಿರುವ ಕುಟುಂಬಗಳಿಗೆ ಎಷ್ಟೆಷ್ಟು ಲಕ್ಷ ಲಕ್ಷ ಕೋಟಿ write off, ಅಂದರೆ ಹೆಚ್ಚೂಕಮ್ಮಿ ಸಾಲಮನ್ನಾ ಮಾಡಿದರು ಹಾಗೂ ಮತ್ತಿತರ ರಿಯಾಯಿತಿಗಳನ್ನು ನೀಡಿದರು, ಯಾವ ಯಾವ ಸಾರ್ವಜನಿಕ ಸಂಪತ್ತುಗಳನ್ನು ಅವರ ಬಾಯಿಗೆ ಹಾಕಿದರು ಎಂಬುದನ್ನು ಒಂದು ಸಲ ನೋಡಿದರೆ ಸಾಕು; ಮೋದಿಯವರ ನಿಜವಾದ ಮನಸ್ಸು ಏನು ಎಂದು ಅರ್ಥವಾಗುತ್ತದೆ.

ಇದು ಇನ್ನೂ ಅರ್ಥವಾಗಲು ಇನ್ನೊಂದು ಉದಾಹರಣೆ- ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್‌ಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಮಾದಿಗ ದಂಡೋರ ನಾಯಕ ಕೃಷ್ಣ ಮಾದಿಗ ಅವರು ಆಯೋಜಿಸಿದ್ದ ಬೃಹತ್ ಸಭೆಗೆ ಪ್ರಧಾನಿಯವರು ಬಂದರು. ಕೃಷ್ಣ ಮಾದಿಗ ಅವರು, ಚಕ್ರವರ್ತಿ ಮುಂದೆ ಕಳೆದ ಮೂವತ್ತು ವರ್ಷಗಳಿಂದಲೂ ಹೋರಾಡುತ್ತಿರುವ ಒಳಮೀಸಲಾತಿ ವೇದನೆಗೆ ಕಣ್ಣೀರಿಟ್ಟರು. ಚಕ್ರವರ್ತಿ ಮೋದಿಯವರು ಕೃಷ್ಣ ಅವರನ್ನು ಆಲಂಗಿಸಿ, ಸಂತೈಸಿ ಒಳಮೀಸಲಾತಿಗೆ ‘ವರದಿ’ ತಯಾರಿಸುವಂತೆ ‘ಆದೇಶ’ ನೀಡಿ ನಿರ್ಗಮಿಸಿದರು. ಆದರೆ ಇನ್ನೊಂದು ಕಡೆ, ಮೇಲ್ಜಾತಿಗೆ 3 ದಿನಗಳಲ್ಲೇ EWS ಮೀಸಲಾತಿಯನ್ನು ಕುರುಡಾಗಿ ನೀಡಿಬಿಟ್ಟರು. ಇದು ಮೋದಿಯವರ ಮನಸ್ಸಿನ ಮರ್ಮ. ಹೀಗಿದೆ ನಮ್ಮ ಪ್ರಧಾನಿಗಳ ನಡೆ ಮತ್ತು ನುಡಿ.

ಹೀಗೆ ಎಷ್ಟು ದಿನ ನಮ್ಮ ಪ್ರಧಾನಿಯವರ ಮಾತುಗಳನ್ನು ತಿಂದು ಉಂಡು ಅನುಭವಿಸೋಣ? ಸಾಕು ಅನಿಸುತ್ತಿದೆ. ಸಂಘ ಪರಿವಾರದ ಹಿಂದುತ್ವದ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಬೇಕಿದೆ. ಈಗ 2024ರ ಚುನಾವಣೆ ನಮ್ಮ ಮುಂದಿದೆ. ಈಗಿಂದಲೇ ಜನಾಂದೋಲನಗಳು ಅರಳಿಮರದ ಕೆಳಗೆ, ಛಾವಡಿಯಲ್ಲಿ ಮಾತುಕತೆ ಆರಂಭಿಸಬೇಕಾಗಿದೆ. ಭಾರತ ಉಳಿಯಬೇಕು ಅಂದರೆ ಹಿಂದುತ್ವದ ಬಿಜೆಪಿ ಸೋಲಲೇಬೇಕಾಗಿದೆ.

ಕೊನೆಯದಾಗಿ, ನಮ್ಮ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರಕಾರವು ತನ್ನ ಹಿಂದಿನ ಬಿಜೆಪಿ ಸರಕಾರದ ಜನವಿರೋಧಿ ಕೃಷಿ ಕಾಯ್ದೆ ಮುಂತಾದವುಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಂತು ನನಗೆ ಅರ್ಥವಾಗುತ್ತಿಲ್ಲ. ರಾಜ್ಯ ಸರಕಾರ ಈ ಕಡೆ ಕಣ್ಣೆತ್ತಿ ನೋಡಬೇಕು. ಇಲ್ಲದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈಗ ಬಿಜೆಪಿಗೆ ಹೇಳುತ್ತಿರುವ ಮಾತನ್ನೇ ಕಾಂಗ್ರೆಸ್ ಸರಕಾರಕ್ಕೆ ಹೇಳಬೇಕಾಗಿ ಬರುತ್ತದೆ.

ಹಾಗೇ ಹೋರಾಟದ ಗೆಳೆಯರಿಗೆ ಒಂದು ಕಿವಿಮಾತು- ಭಾರತದ ಸುಪ್ತ ಮನಸ್ಸಲ್ಲಿ ನೆಲೆಸಿರುವ ಗಾಂಧಿ, ಅಂಬೇಡ್ಕರ್ ಮತ್ತು ಸಂವಿಧಾನವನ್ನು ನಿರ್ನಾಮ ಮಾಡಲು ಚಾತುರ್ವರ್ಣ ಹಿಂದುತ್ವದ ನೂರಾರು ಸಂಘಗಳು ಹಾಗೂ ಬಿಜೆಪಿ ಸರಕಾರ ದಿನನಿತ್ಯ ಪ್ರಯತ್ನಿಸುತ್ತಿದ್ದವು. ಆದರೂ ಅಂಂ ಅಂದರೆ ಪೌರತ್ವ ಕಾಯ್ದೆ ಬದಲಾವಣೆ ಸಂದರ್ಭದಲ್ಲಿ ಸರಕಾರದ ವಿರುದ್ಧ ಭುಗಿಲೆದ್ದ ಹೋರಾಟಗಳಲ್ಲಿ ಈ ಗಾಂಧಿ, ಅಂಬೇಡ್ಕರ್, ಸಂವಿಧಾನ ಈ ಮೂವರು ಜೀವಂತ ಎಂಬಂತೆ ಎಲ್ಲಾ ಪ್ರತಿಭಟನಾ ಸಭೆಗಳಲ್ಲೂ ಪ್ರತ್ಯಕ್ಷರಾದರು; ಕತ್ತರಿಸಿದರೂ ಮತ್ತಷ್ಟು ಚಿಗುರುವ ಬೃಹತ್ ವೃಕ್ಷಗಳಂತೆ! ಈ ಸೋಜಿಗವು ಚಾತುರ್ವರ್ಣದ ಹಿಂದುತ್ವದ ಪರಿವಾರ ಮತ್ತು ಸರಕಾರವನ್ನು ಬೆಚ್ಚುವಂತೆ ಮಾಡಿತು. ಭಾರತದ ಎಲ್ಲಾ ಜನಾಂದೋಲನಗಳು ಈ ಮೂರು ಶಕ್ತಿಗಳನ್ನು ಗಮನಿಸಿ ಮುನ್ನಡೆಯಬೇಕು ಎಂದು ನನಗೆ ಅನ್ನಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದೇವನೂರ ಮಹಾದೇವ

contributor

Similar News