ರಣಹದ್ದು ಹೊಂಚು ಹಾಕುತ್ತಾ...

ಶಿ.ಜು.ಪಾಶ ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಜುಬೇರ್ ಪಾಶ ಪತ್ರಕರ್ತರಾಗಿ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದವರು. ಎರಡು ಕವನ ಸಂಕಲನಗಳು ಹಾಗೂ ಒಂದು ಕಥಾ ಸಂಕಲನವನ್ನು ಹೊರತಂದಿದ್ದಾರೆ. ತಮ್ಮ ಇತ್ತೀಚಿನ ಕತೆಯೊಂದನ್ನು ಇಲ್ಲಿ ಓದುಗರ ಮುಂದಿರಿಸಿದ್ದಾರೆ.

Update: 2024-01-06 04:54 GMT
Editor : Ismail | Byline : ಶಿ.ಜು. ಪಾಶ

ಬದುಕು ಬೀದಿಗೆ ಬಿದ್ದು ಅವಳು ಸತ್ತೇ ಹೋಗಿರ್ತಾಳೆ ಅಂದುಕೊಂಡಿದ್ದೆ. ಬದುಕಿ ಬಿಟ್ಟಿದ್ದಾಳೆ. ಗಟ್ಟಿ ಜೀವ. ಬಿಟ್ಟಿ ಜೀವ ಅಲ್ಲವಾದ್ದರಿಂದ ಗಟ್ಟಿಯಾಗಿ ಉಳಿದಿರಬಹುದು. ಹತ್ತಿರಕ್ಕೆ ಸಾವು ಬಂದರೂ ಝಾಡ್ಸಿ ಒದ್ದೋಡ್ಸಿರಬಹುದು. ಯಾವ ದುಃಖ ಬಂದರೂ ದುಃಖದ ಹೆಗಲಿಗೆ ಆತು ಅತ್ತುಕರೆದವಳಲ್ಲ. ‘ಎದ್ನಡಿ’ ಎಂದು ದುಃಖಕ್ಕೆ ಗದರಿಸಿ ಓಡಿಸುವಳು. ಹೆಸರು ಹೇಳುವುದ ಮರೆತುಬಿಟ್ಟೆನಾ ಆಕೆಯ ವರ್ಣನೆಯಲ್ಲಿ; ಅವಳ ಹೆಸರೇನೋ ತಿಳಿಯದು- ನಾನಿಟ್ಟ ಹೆಸರು ಮೊಹಬ್ಬತ್. ಅವಳ ಪ್ರತಿಯೊಂದು ಬದುಕಿನ ಚರಣವೂ ಮೊಹಬ್ಬತ್ ಎಂಬ ಮಹಾ ಪ್ರೀತಿಯಿಂದಲೇ ಕೂಡಿರುವುದರಿಂದ ನಾನಿಟ್ಟೆ ‘ಮೊಹಬ್ಬತ್’ ಹೆಸರು. ಹೆಸರಲ್ಲೇನಿದೆ? ಆ ಹೆಸರಲ್ಲೇ ಇರುವುದು ಅವಳ ಇಟ್ಟ ಆಣೆ ಕೊಟ್ಟ ಭಾಷೆಯ ಸಮುದ್ರ ಬದುಕು.

‘ಕತ್ತರಿಸಿದಷ್ಟು ಮತ್ತೆ ಮತ್ತೆ ಚಿಗುರುತ್ತೀಯಲ್ಲ ಮೊಹಬ್ಬತ್, ಹೇಗೆ?’

ಪ್ರಶ್ನೆಗೆ ತನ್ನ ಅಂತರಂಗದ ಜೋಳಿಗೆಯಲ್ಲಿ ಉದ್ಭವಿಸುವ ಉತ್ತರ ಕೊಡುವಳು;

‘ಸಾವು ಅಗಲಿಸಲು ಪ್ರಯತ್ನಿಸುತ್ತಿದೆ. ದುಃಖಗಳೇ ಕತ್ತರಿಸಿಕೊಂಡ ಬದುಕನ್ನು ಹೊಲಿದು ಸಂಭ್ರಮಿಸುತ್ತಿವೆ. ನಾನು ನೆಪವಷ್ಟೇ’

ಉತ್ತರ ಕೇಳಿಯೇ ನಾಳೆಗೂ ಪ್ರಶ್ನೆ ಕೇಳುವವರು ಮೌನಕ್ಕೆ ಜಾರುವರು ಜಾಣ್ಮೆಯಿಂದ. ಈಗವಳದು ಹೊಸ ಉದ್ಯೋಗ. ಇವಳಷ್ಟು ಅದೂ ಇದೂ ಕೆಲಸ ಮಾಡಿ ದುಡಿದು ತಿಂದವರನ್ನು ನನ್ನಂತೆ ಕೋಟಿ ಜನ ನೋಡಿರಲಾರರು, ಅಷ್ಟೊಂದು ಉದ್ಯೋಗಗಳ ರುಚಿ ಕಂಡವಳು. ಹಾಲು ಕೊಡುವ ಹೆಣ್ಣು ಕತ್ತೆಯನ್ನು ಊರೆಲ್ಲ ಸುತ್ತಾಡಿಸಿಕೊಂಡು, ಅದರ ಹಾಲನ್ನು ಅಲ್ಲಲ್ಲೇ, ಜನ ಕೇಳಿದಲ್ಲಲ್ಲೇ ಹಿಂಡಿ ಮಿಲಿಗ್ರಾಮಿನ ಲೆಕ್ಕದಲ್ಲಿ ಕೊಟ್ಟು ದೊಡ್ಡ ದುಡ್ಡನ್ನೇ ದುಡಿದು ಸೀರೆ ಸೆರಗಿಗೆ ಸೇರಿಸಿ ಗಂಟಿಕ್ಕಿಕೊಳ್ಳುವಳು. ಸೀರೆಯನ್ನು ಇಂಥ ಕೆಲಸಗಳಿಗೆ ಸುಂದರವಾಗಿ ಬಳಸಿಕೊಳ್ಳುವ ಕಲೆಯೂ ಮೊಹಬ್ಬತ್ಗೆ ಸಿದ್ದಿಸಿಯಾಗಿತ್ತು.

ದಿಕ್ಕಿಗೊಂದು ದಿನ ಹರಿಸುವಳು. ಯಾವ ದಿಕ್ಕಿನಲ್ಲಿ ಯಾವ ದಿನ ಕಳೆದು ಹೋಗಿದೆ? ಚಿಂತಿಸುವವಳಲ್ಲ ಮೊಹಬ್ಬತ್. ಬದುಕನ್ನು ಕೇಳುವ ತಳಮಳದಲ್ಲೇ ಎಂದಿಗೂ ಕಾಣುವಳು. ನಾನು ಮೊದಲೇ ಕವಿ, ಕೇಳಿದೆ- ‘ನಿನ್ನೊಳಗಿನ ಭಾವ-ರೂಪಕಗಳು ಅರ್ಥವಾಗುತ್ತಿಲ್ಲ ನನಗೆ. ನನ್ನೊಳಗೆ ನೀ ಇಳಿಯುತ್ತಿದ್ದರೂ ಹೀಗೇಕೆ?’

ಅವಳ-ನನ್ನ ಮನಸ್ಸುಗಳ ಮಧ್ಯೆ ನದಿ ಹರಿಸುತ್ತಿದೆಯಾದರೂ ನೀರ ಸಪ್ಪಳ ಕೇಳಿಸುತ್ತಿಲ್ಲ. ನದಿ ದಡಗಳ ಮಿತಿ ದಾಟಿದರೆ ಹೇಗೆ? ಯೋಚಿಸುವೆ. ಇಲ್ಲಿ ಉಲ್ಲಂಘನೆ ಮುಖ್ಯವಲ್ಲ ಎನಿಸಿ ಸುಂದರವಾಗಿಯೇ ಪ್ರಶ್ನಿಸಿದೆ. ಮೊಹಬ್ಬತ್ ಮಾತಾಡಿದಳು, ಬಂದ ಗಿರಾಕಿಗೆ ಕತ್ತೆ ಹಾಲು ಹಿಂಡುತ್ತಾ,

‘ಕಣ್ಣುಗಳು ದಿಗಿಲಿಗೊಳಗಾದರೆ ಬಣ್ಣಗಳು ಬದುಕು ಬದಲಾಯಿಸುತ್ವೆ. ಆಗಷ್ಟೇ ಭಾವ, ರೂಪಕಗಳ ದ್ವಂದ್ವಗಳು. ನಿನಗೆ ನೀನೇ ಅರ್ಥವಾಗಿಲ್ಲ ಇನ್ನೂ, ನಾನೆಲ್ಲಿ ಅರ್ಥವಾಗುವೆ?’ ಹೃದಯ ನನ್ನದೇ ಬಸವಳಿದಂತೆ ಮಾತಾಡುವಳು. ಮಾತುಗಳಲ್ಲೇ ಸುಡುವಳು. ಕಣ್ಣ ನೋಟದಲ್ಲೇ ಬಿಸಿಗಾಳಿ ಬೀಸಿ ಮೈ ಕಂಪನಕ್ಕೆ ಸಿಲುಕಿಸುವಳು.

ಮೊಹಬ್ಬತ್ ಎಂದರೆ ಉಂಡು ಮಲಗುವ ದೇವರು ನನಗೆ. ಯಾವಾಗಿಂದಲೋ?!

ನನಗೆ ನನ್ನದೇ ಪ್ರಶ್ನೆ ಮತ್ತು ನನಗೆ ನಾನೇ ಆಶ್ಚರ್ಯ ಈ ವಿಷಯದಲ್ಲಿ.

ಯಾವುದನ್ನೂ ನಂಬಿ ಕೂರುವವಳಲ್ಲ; ಬದುಕನ್ನೂ ಸೇರಿಸಿ. ಅವಳಿಗವಳದೇ ಸಂಪ್ರದಾಯ. ಅವಳಿಗವಳದೇ ಕಟ್ಟುಪಾಡು, ಅವಳಿಗವಳದೇ ಸ್ವಾತಂತ್ರ್ಯ. ನಿಜ ನೋಡಿದರೆ; ಸಂಪ್ರದಾಯ, ಕಟ್ಟುಪಾಡು, ಸ್ವಾತಂತ್ರ್ಯ ಏನೆಂಬುದೇ ತಿಳಿಯದವಳು ಮೊಹಬ್ಬತ್ ಅಥವಾ ಎಲ್ಲವನ್ನೂ ಮೀರಿದವಳು.

‘ನೀನೊಂದು ಭಾಷೆಯಾಗಿದ್ದರೆ ಚೆಂದಿತ್ತು... ನಿನ್ನನ್ನು ಕಲಿತುಬಿಡುತ್ತಿದ್ದೆ...’ ಛೇಡಿಸಿದೆ.

‘ಕರುಳಿಗೆ ಹಸಿವಿನ ಭಾಷೆ ಗೊತ್ತು. ನೀನು ಕರುಳಾಗು ನಾನು ಹಸಿವಾಗುತ್ತೇನೆ’

-ನಗುವಳು ಆಕಾಶ ಅಲುಗಾಡಿದಂತೆ. ಭಾಷೆಗಳೆಲ್ಲ ಇವಳ ಮುಂದೆ ಮಂಡಿಯೂರಿ ಕುಳಿತು ಹೊಸ ಭಾಷೆ ಕಲಿಯುತ್ತಿರುವಂತೆ ನನಗೆ ಕಂಡು ಬರುವುದು. ಕತ್ತೆ ಮೇಯುವ ಹೊತ್ತಾಗಿ, ಬಾಲ ಮುದುರಿ ‘ಪುರ್...ಪುರ್...’ ಎಂದು ಅಟ್ಟುವಳು.

‘ಕತ್ತೆ ಹಾಲು ಕುಡಿ. ನೀ ಕುಡಿದರೆ ಕವಿತೆ ಉಸಿರಾಡುವುದು’

- ಮೊಹಬ್ಬತ್ ಹೀಗೆಯೇ ಮಾತಾಡುವುದು. ಜಗತ್ತಿನ ಯಾವುದರಿಂದಲೂ ಇವಳನ್ನು ಸಶಕ್ತವಾಗಿ ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಕಲ್ಲೆದೆಯಂತೆ ಕಾಣುವ ಮೊಹಬ್ಬತ್ ಕಫನ್ನಿನ ಬಟ್ಟೆಯಷ್ಟೇ ಮೃದು ಮೃದು.

ಒಮ್ಮೆ ಹೇಳಿದ್ದಳು-‘ಒಮ್ಮೆ ನನ್ನನ್ನು ದ್ವೇಷಿಸಿಬಿಡು. ನನ್ನೊಳಗಿನ ಕೆಟ್ಟದ್ದೇನೆಂದು ನೀನೂ ತಿಳಿದುಕೊಳ್ಳುವೆ, ನಾನೂ ಅರ್ಥಮಾಡಿಕೊಳ್ಳುವೆ’

‘ದ್ವೇಷಿಸುವುದೇ?!’

ಸಂತೆಯ ಗದ್ದಲದಲ್ಲಿಯೇ ಘರ್ಜಿಸಿದ್ದೆ. ಆ ಘರ್ಜನೆ ತರಕಾರಿ ಮಾರುವವರ ಕೂಗಿನ ಮಧ್ಯೆ ಏನೂ ಅಲ್ಲವಾಗಿ ಎಲ್ಲೋ ಕಳೆದುಹೋಗಿತ್ತು. ಹಾದಿ ತಪ್ಪಿದ ಅಸಂಖ್ಯ ಕೂಗುಗಳ ಮಧ್ಯೆ ನನ್ನ ಕೂಗು ಕೂಡ ಹಾದಿ ತಪ್ಪಿತ್ತೇನೋ? ನಾನು ಹೆಪ್ಪುಗಟ್ಟಿದಂತೆ ಮೌನವಹಿಸಿದೆ.

‘ಮೌನ ಎಂಬುದು ಕೂಡ ಒಂದು ಭಾಷೆಯೇ, ಕವಿ ಮಹಾಶಯ’- ತಿವಿದು ಮುಖಕ್ಕೆ ಮಾತಾಡುವಳು. ಹೀಗೆ, ಕೈ-ಮಾತುಗಳಿಂದ ತಿವಿಸಿಕೊಂಡಾಗಲೆಲ್ಲ ಘಾಸಿಗೊಂಡು ರಕ್ಷಣೆಗೆ ಅತ್ತ ಇತ್ತ ಇದ್ದಾರಾ ಯಾರಾದರೂ? ನೋಡುತ್ತೇನೆ. ಮನಸ್ಸಿಗೂ ರಕ್ತವೆಂಬುದಿದ್ದು, ಹೀಗೆ ತಿವಿದಾಗಲೆಲ್ಲ ಅದು ಹರಿಯುವುದಾಗಿದ್ದರೆ ಯಾರಾದರೂ ನೋಡುತ್ತಿದ್ದರೇನೋ? ಘಾಸಿ ಮನಸ್ಸಿನ ಆಳದ ಗಾಯ ಅರ್ಥ ಮಾಡಿಕೊಳ್ಳುತ್ತಿದ್ದರೇನೋ...

ಆದರೂ, ಮೊಹಬ್ಬತ್ ಕಾಣದಿದ್ದರೂ ಒಮ್ಮೊಮ್ಮೆ ದಿಗಿಲ ಹೆಗಲ ಮೇಲೆ ಕುಂತಂತಾಗುವುದು. ಭಾವಗಳ ಬಜಾರು ಎಲ್ಲೆಲ್ಲೋ ಉದ್ಭವಿಸಿ ಆತಂಕವಾಗುವುದು. ಡಾಂಬಾರಿನ ರಸ್ತೆಗಳಿಂದ ಹಿಡಿದು ಕಾಲುದಾರಿಗಳವರೆಗೂ ಹುಡುಕಾಡಿ ಹೆಜ್ಜೆ ಗುರುತೇನಾದರೂ ಮೂಡಿಸಿ ಹೋಗಿದ್ದಾಳಾ? ಪತ್ತೆದಾರಿಕೆ ಮಾಡುವೆನು. ಇದೆಲ್ಲ ಎಷ್ಟು ಬಾರಿ ಆಗಿಲ್ಲ... ಆದಾಗಲೆಲ್ಲ ಅದೇ ಅದೇ ಅನುಭವ, ಇನ್ನೇನು ಜೀವ ಹೋಗಿಬಿಡುತ್ತದೆ ಕಾಣದಿದ್ದರೆ ಎಂಬಂತೆ. ನಾನಿನ್ನು ಬದುಕಬೇಕೆಂದರೆ ನೆಪವಾಗಿಬಿಟ್ಟಳಾ ಇವಳು? ಬೆಂದು ಬಸವಳಿದು ದೂರದಿಂದ ಬರುತ್ತಿರುವಂತೆ ಕಾಣುವಳು. ಅದೆಲ್ಲೋ ಸೂರ್ಯ ಸಾಗುತ್ತಿದ್ದಾನೆ, ಇತ್ತ ಕಡೆ ಇವಳು ಬರುತ್ತಿದ್ದಾಳೆ; ಇಬ್ಬರೂ ಕೂಡಿ ಮಾತಾಡಿ ಹೊರಟರಾ ಅದ್ಯಾವುದೋ ಬಿಂದುವಿನಿಂದ? ಅನುಮಾನವಿದ್ದರೂ ನಡೆದು ಬರುತ್ತಿರುವ ದಾರಿಯಲ್ಲಿ ಕಲ್ಲು ಮುಳ್ಳುಗಳೇನಾದರೂ ಇವೆಯೋ? ಎಚ್ಚರಿಕೆವಹಿಸಿ ನೋಡುವುದು ನಾನೇನೇ! ನಾನೆಂಥವನು? ನಾನೇನು? ನಾನೇ ಪ್ರಶ್ನಿಸಿಕೊಂಡು ಹೊಳಪು ಕಳೆದುಕೊಳ್ಳುವೆನು. ಹೊಂಚು ಹಾಕುತ್ತಾ ಹರಿದು ಮುಕ್ಕಲು ಕೂತ ರಣಹದ್ದು ನಾನಲ್ಲ ತಾನೇ?

ಒಲವು ಸಂಬಂಧಗಳನ್ನು ಹುಡುಕುತ್ತಿತ್ತು. ಮುರಿದ ಸಂಬಂಧಗಳೆಷ್ಟು? ಗಬ್ಬೆದ್ದಿರುವ ಸಂಬಂಧಗಳೆಷ್ಟು? ಹುಡುಕಾಟ ಒಲವಿನದು ಜಾರಿಯಲ್ಲಿರುವಾಗಲೇ ನಿತ್ಯ ಹರಾಜು ಹಾಕುವಂತೆಯೇ ಮತ್ತೆ ಮಾತಾಡುತ್ತಾಳೆ- ‘ನನ್ನವನಂತ ಇರೋದೇ ನೀನು. ಸತ್ತರೆ ಮಸಣಕ್ಕೊಯ್ದು ಹಿಡಿಮಣ್ಣು ಹಾಕುವೆ ತಾನೇ?’

ಮತ್ತೆಂಥಾ ಮಾತಾಡಿಬಿಟ್ಟಳು. ಮೊಹಬ್ಬತ್ ಆಡುವ ಮಾತೇ ಇದೆಲ್ಲ!? ಸಿಟ್ಟು ಬಂದು ಕೇಳಿದೆ-

‘ಸೋತು ಬಿಟ್ಟೆಯಾ ಬದುಕಿಂದಾ?’

‘ಯಾವ ಮುಕುಟವೇರಿಸಿಕೊಳ್ಳಲು ಬದುಕಬೇಕಿದೆ ನಾನು?’

ತಟಕ್ಕನೇ ಪ್ರಶ್ನೆಗೆ ಉತ್ತರಿಸಲು ಪ್ರಶ್ನೆಯ ಬಾಣವನ್ನೇ ರಪ್ಪಂತ ಹೂಡುವಳು.

‘ಬೆಲ್ಲ ಬಿದ್ದರೆ ಇರುವೆಗೆ ಗೊತ್ತಾಗಿ ಹೋಗುತ್ತೆ. ಹೇಗೆ? ಅಂತ ಪ್ರಶ್ನಿಸುವುದು ಮೂರ್ಖತನ’

ಪ್ರಶ್ನಿಸದಂತೆ ತಡೆಹಿಡಿಯುವ ಪ್ರಯತ್ನವನ್ನು ಇಂಥ ಮಾತುಗಳಿಂದ ಮುಂದುವರಿಸುವಳು. ಸುಮ್ಮಸುಮ್ಮನೆ ಬದುಕಿದವಳಲ್ಲ, ಸುಮ್ಮಸುಮ್ಮನೆ ಮಾತಾಡುತ್ತಾಳಾ? ಸಹನೆ ಕಳೆದುಕೊಂಡಿದ್ದಾಳಾ ಎಂದರೆ ಮುಖದ ಮೇಲೆ ಮಂದಹಾಸ ಇದ್ದಂಗೇ ಇದೆ; ಎಲ್ಲರನ್ನೂ ಸೆಳೆಯುವಂತೆ!

‘ನಿನಗೇನಾಗಿದೆ? ಯಾಕೀಗ ಸಾವು ಮಸಣದ ಮಾತು? ಯಾರು ಸತ್ತರೂ ಮಸಣ ಸೌಭಾಗ್ಯ ಇದ್ದೇಯಿದೆ ಈ ಜಗತ್ತಲ್ಲಿ. ಸತ್ತವರ್ಯಾರನ್ನೂ ಕಣ್ಣಾರೆ ಕೊಳೆತು ಹೋಗಲು ಬಿಟ್ಟಿಲ್ಲ ನಮ್ಮ ಮನುಷ್ಯರು!’ ಧ್ವನಿಯಲ್ಲಿ ವ್ಯಂಗ್ಯವಿದ್ದರೂ ಬಿಗುಮಾನದಿಂದಲೇ ಹೇಳಿದೆ. ಕಿರು ನಗೆ ನಕ್ಕು,

‘ಅಣಕಿಸಿ ಮಾತಾಡಬೇಡವೋ ಕವಿ ಮಹಾಶಯ, ಬಯಸಿ ಬದುಕಿದಂತೆಯೇ ಬಯಸಿ ಸತ್ತುಬಿಡಬೇಕು. ಆಗಲೇ ನೋಡು, ಸಾವು ಸೋಲಿಸುವುದಿಲ್ಲ ನಮ್ಮನ್ನು’

ಮೊಹಬ್ಬತ್ಳ ಮಾತೆಲ್ಲ ಸ್ಮಶಾನ ವೈರಾಗ್ಯ ತಾಳಿ ಅನುಭವದ ಪಾತ್ರೆಯೊಳಗೆ ಬೇಯುತ್ತಿತ್ತು. ನೋವೇನಾಯಿತೀಗ ಇವಳಿಗೆ? ಹೀಗೇಕೆ ಸಾವಿನದೇ ಮಾತಾಡುತ್ತಿದ್ದಾಳೆ? ಗೊಂದಲಗಳೆಲ್ಲ ಚೂರಿಗಳಾಗಿ ಇರಿಯತೊಡಗಿದವು. ಮರುಗಿದರೆ ಮೌನದಲ್ಲೇ ಹತ್ಯೆ ಮಾಡುವಳು, ಪ್ರಶ್ನಿಸಿದರೆ ಮಾತಲ್ಲೇ ಕೊಂದು ಹಾಕುವಳು. ನನ್ನ ಸ್ಥಿತಿ ದೀಪ ಆರಿಸಿದ ಕತ್ತಲ ವೃತ್ತದಲ್ಲಿತ್ತು. ಯಾವುದೂ ಕಾಣದು! ಕಿನಾರೆ ಎಂಬುದು ಕೆರೆ, ನದಿ, ಸಮುದ್ರಕ್ಕಷ್ಟೇ ಸೀಮಿತವೇ? ನನಗೂ ಇರಬೇಕಲ್ಲ ಹುಡುಹುಡುಕಿದರೆ ಆ ಕಿನಾರೆಗಳಲ್ಲೆಲ್ಲ ಮೊಹಬ್ಬತ್ ಓಡಾಡಿಬಂದ ಹೆಜ್ಜೆ ಗುರುತುಗಳಿದ್ದವು. ಕೇವಲ ಹೆಜ್ಜೆ ಗುರುತುಗಳಿರುವ ಕಿನಾರೆಗಳಿಗಿಂತ ಮೊಹಬ್ಬತ್ ಪ್ರತ್ಯಕ್ಷವಾಗಿಯೇ ಇರುವ ಈ ಜಾಗವೇ ಸೂಕ್ತವೆಂದು ಭಾವಿಸಿ ಮೊಹಬ್ಬತ್ಳನ್ನು ಹುಡುಕುವೆನು.

ಪಿಸುಗುಟ್ಟುವಳು ಮೊಹಬ್ಬತ್ ಕಿವಿಯ ಬಳಿ ಬಂದು;

‘ಇಲ್ಲೇ ಇದ್ದೀನಲ್ಲ ಕವಿ ಮಹಾಶಯಾ...’

ಮುಟ್ಟಲು ಪ್ರಯತ್ನಿಸಿದೆ. ನೋಡಲು ಪ್ರಯತ್ನಿಸಿದೆ. ಕತ್ತಲಷ್ಟೇ ದಕ್ಕುತ್ತಿತ್ತು. ಕೂಗಿದೆ ನೆಮ್ಮದಿಕೆಟ್ಟು,

‘ಮೊಹಬ್ಬತ್... ಮೊಹಬ್ಬತ್...’

ಕೆಟ್ಟದಾಗಿ ಕಿರುಚಿದರೂ ಕೋಗಿಲೆಯಂತೆ ಧ್ವನಿ ನಿನ್ನದು ಎನ್ನುತ್ತಿದ್ದಳು. ನಾನೇ ಮಾಮರ, ನೀನು ಹಾಡುತ್ತಿರು, ಇಲ್ಲಿ ನೀನೇ ಕೋಗಿಲೆ ಎಂದು ಹುರಿದುಂಬಿಸುತ್ತಿದ್ದಳು. ಹೌದು, ಅವಳು ಮಾಮರ, ನಾನೇ ಕೋಗಿಲೆ ಎಂಬಂತೆ ಪರಿವರ್ತನೆಗೊಂಡು... ‘ಈಗೆಲ್ಲಿ ಮೊಹಬ್ಬತ್ ನೀನು?’ ಕೂಗುತ್ತಿದ್ದೇನೆ ಈಗ, ಕೋಗಿಲೆಯಂತೆ ಧ್ವನಿ ಕೇಳಿಸುತ್ತಿಲ್ಲವೇ ಈಗ? ನೀನು ಮಾಮರವಾಗಿ ಉಳಿದಿಲ್ಲವೇ ಈಗ? ಕೊನೆಯ ಬಾರಿ ಕೂಗಿ ಬಿಡುತ್ತೇನೆ, ಇದೇ ಕೊನೆ- ಮತ್ತೆ ಕೂಗುವುದಿಲ್ಲ, ಕೂಗುವುದೇ ಇಲ್ಲ...

‘ಮೊಹಬ್ಬತ್... ಮೊಹಬ್ಬತ್... ಮೊಹಬ್ಬತ್’

-ಎಲ್ಲರೂ ಬೆಳಕನ್ನೂ ಆರಿಸುವರು. ನಾನು ಸುತ್ತಲೂ ಕವಿದಿದ್ದ ಕತ್ತಲನ್ನು ಆರಿಸಿ ಕುಳಿತುಬಿಟ್ಟೆ. ಅವಾಗಲೇ ಗೊತ್ತಾಗಿದ್ದು; ಕತ್ತಲಿಗೆ ಹೆಚ್ಚು ಹೊತ್ತು ಬದುಕುವ ತಾಕತ್ತಿಲ್ಲ. ನನಗೆ ಸಮಜಾಯಿಷಿ ಕೊಟ್ಟುಕೊಂಡೆ. ಬೆಳಕು ಬೆತ್ತಲಾಗಿಸಿ ಬೀದಿಗೆಸೆದು ನಗುತ್ತಿತ್ತು. ದೂರದ ಮೂಲೆಯಲ್ಲಿ ಮೊಹಬ್ಬತ್ ಅಂಗಾತ ಮಲಗಿ ಗೊರಕೆ ಹೊಡೆಯುತ್ತಿದ್ದಳು.

ನಾನು ಎದ್ದ ಸದ್ದಿಗೆ ಅವಳೂ ಎದ್ದು ಕೂತಳು.

‘ಕವಿ ಮಹಾಶಯನೇ, ಒಂದು ಲೋಟ ಟೀ ಮಾಡಿಕೊಡು, ತಲೆಭಾರ ಯಾಕೋ’

ತಲೆ ಒತ್ತೊತ್ತಿಕೊಂಡೇ ಮನವಿ ಅರ್ಪಿಸಿದಳು.

‘ಮನುಷ್ಯರೆನಿಸಿಕೊಂಡವರಿಗೆ ಹಿಂಗೆ ತಲೆ ನೋಯುತ್ತಿರಬೇಕು. ನೋಯದಿದ್ದರೆ ಅವರು ಮನುಷ್ಯರೇ ಅಲ್ಲ. ನೀನೂ ಮನುಷ್ಯಳೇ ಎಂಬುದು ಗೊತ್ತಾಯ್ತಲ್ಲ ಈಗ ಮೊಹಬ್ಬತ್’

ತನ್ನ ಬದುಕಿಗೆ ತಾನೇ ಮೋಸ ಮಾಡಿಕೊಂಡಿದ್ದಾಳೆ ಎಂಬ ಭ್ರಮೆಯಲ್ಲಿ ನಾ ಮಾತಾಡುತ್ತಿದ್ದೆ. ಅವಳು ಬದಲಾಗಬೇಕು ಎಂಬುದು ನನ್ನ ಭಾವನೆ. ಬದಲಾವಣೆ ಯಾಕೆ? ಎಂಬುದು ಅವಳ ತನ್ನತನದ ಸೊಕ್ಕು. ಯಾವುದು ಸರಿಯೋ?

ಚಾ ತಂದು ಅವಳ ಕೈಗಿಟ್ಟೆ. ಮೆಲ್ಲಗೆ ಹಣೆ ಅದುಮಿದೆ. ಜ್ವರದ ಕಾವು. ‘ಡಾಕ್ಟರನ್ನು ಕಾಣುವ ಅಭ್ಯಾಸವಿದೆಯೋ?’- ಕೇಳಬೇಕೆನಿಸಿದರೂ ಕೇಳಲು ಹೋಗಲಿಲ್ಲ. ಬೆಣ್ಣೆಯ ಮಾತುಗಳಿಂದೆಲ್ಲ ದೂರವಿರುವ ಮೊಹಬ್ಬತ್ ಮಾತಾಡುವುದೆಲ್ಲ ಬಿಸಿ ತಾಗಿಸಿ ಬೆಣ್ಣೆಗೆ ತುಪ್ಪ ಮಾಡುವ ರೀತಿಯಲ್ಲೇ.

‘ಟೀ ಮಾಡೋದನ್ನು ಕಲಿತಿದ್ದೆಲ್ಲೋ ಕವಿ ಮಹಾಶಯನೇ?’- ತುಂಟ ನಗೆ ಬೀರಿ ಚಹಾ ಹೀರುತ್ತಲೇ ಪ್ರಶ್ನಿಸಿದಳು. ಚುಟುಕು ಉತ್ತರ ನನ್ನದು-

‘ಪರಿಸ್ಥಿತಿಯಿಂದ’

ಮುಚ್ಚಿದ ಬಾಗಿಲ ಸಂದಿನಿಂದ ಸೂರ್ಯ ಕಿರಣಗಳ ಗಾಡಿ ಏರಿ ಒಳಕ್ಕೆ ಬರಲು ಪ್ರಯತ್ನಿಸುತ್ತಿದ್ದ. ಬಂಧಗಳನ್ನು ಸಡಿಲಿಸಿಕೊಂಡು ನಾ ಅಲ್ಲಿಂದ ಹೊರಟೆ. ಯಾರಿಗೆ ಯಾರು ಗಾಯ ಮಾಡಿದರೋ? ವರ್ತಮಾನ ಇಬ್ಬರನ್ನೂ ತನಿಖೆಗೊಳಪಡಿಸಿ ತನ್ನ ಮುಂದಿನ ಚೇರುಗಳಲ್ಲಿ ಕೂರಿಸಿಕೊಂಡಿದೆ...

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಶಿ.ಜು. ಪಾಶ

contributor

Similar News

ಭಾವ - ವಿಕಲ್ಪ
ಕಥೆಗಾರ