ವಿಶ್ವವಿದ್ಯಾನಿಲಯಗಳ ಮರು ಹುಟ್ಟಿನ ಸುತ್ತಮುತ್ತ...
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿಇಂಗ್ಲಿಷ್ ಎಂಎ ಪದವಿ ಪಡೆದಿರುವ ನಟರಾಜ್ ಹುಳಿಯಾರ್, ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಎಂಬ ವಿಷಯದ ಕುರಿತು ಪಿಎಚ್ಡಿ ಪದವಿ ಪಡೆದು, ಪ್ರಸ್ತುತ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಮತ್ತೊಬ್ಬ ಸರ್ವಾಧಿಕಾರಿ’, ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಎಂಬ ಕಥಾಸಂಕಲನಗಳನ್ನು; ‘ರೂಪಕಗಳ ಸಾವು’ ಎಂಬ ಕವಿತೆಗಳು; ‘ಶೇಕ್ಸ್ಪಿಯರ್ ಮನೆಗೆ ಬಂದ’ ಎಂಬ ನಾಟಕ; ‘ಗಾಳಿಬೆಳಕು’ ಎಂಬ ಲೇಖನಗಳ ಸಂಗ್ರಹ; ಇಂತಿ ನಮಸ್ಕಾರಗಳು-ಲಂಕೇಶ್ ಮತ್ತು ಡಿಆರ್ ನಾಗರಾಜ್ ಸೃಜನಶೀಲ ಕಥಾನಕ; ತೆರೆದ ಪಠ್ಯ, ಹಸಿರು ಸೇನಾನಿ, ಟೀಕೆಟಿಪ್ಪಣಿ ಭಾಗ-೧ ಮತ್ತು ೨, ಶೇಕ್ಸ್ಪಿಯರ್ ಸ್ಪಂದನ ಎಂಬ ಸಂಪಾದಿತ ಕೃತಿಗಳು; ಡಾ.ರಾಮಮನೋಹರ ಲೋಹಿಯಾ ಕೃತಿಗಳ ಕನ್ನಡಾನುವಾದಗಳ ಸಂಪಾದಿತ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ಗೆ ೨೦೦೭ನೆಯ ಇಸವಿಯಲ್ಲೊಂದು ದಿನ ಮನಮೋಹನ್ಸಿಂಗ್ ಸಂಪುಟದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರಿಂದ ಒಂದು ಅನಿರೀಕ್ಷಿತ ಫೋನ್ ಬಂತು. ಇಂಡಿಯಾದ ಚರಿತ್ರೆಯ ಹೆಮ್ಮೆಯ ವಿಶ್ವವಿದ್ಯಾನಿಲಯವಾಗಿದ್ದ ನಳಂದ ವಿಶ್ವವಿದ್ಯಾನಿಲಯವನ್ನು ಮರಳಿ ಕಟ್ಟುವ ಧೀಮಂತ ವಿದ್ವಾಂಸರ ಸಭೆಯ ಅಧ್ಯಕ್ಷತೆ ವಹಿಸಬೇಕೆಂಬ ಮುಖರ್ಜಿಯವರ ಆಹ್ವಾನವನ್ನು ಅಮಾರ್ತ್ಯ ಸೇನ್ ಒಪ್ಪಿಕೊಂಡರು. ಮೂರು ವರ್ಷಗಳ ಕೆಳಗಷ್ಟೇ ಬರೆದಿದ್ದ ನಳಂದ ವಿಶ್ವವಿದ್ಯಾನಿಲಯದ ಇತಿಹಾಸ ಕುರಿತ ಲೇಖನದಲ್ಲಿ ಎಂದಾದರೊಂದು ದಿನ ನಳಂದ ಮರುಜೀವ ಪಡೆಯಬಹುದೆಂದು ಸೇನ್ ಆಶಿಸಿದ್ದರು. ಆ ಕಾಲ ಹಟಾತ್ತನೆ ಬಂದಂತಿತ್ತು!.
ಬಿಹಾರ ರಾಜ್ಯದಲ್ಲಿರುವ ನಳಂದದಲ್ಲಿ ಇಪ್ಪತ್ತೊಂದನೆಯ ಶತಮಾನದ ಮಹತ್ವಾಕಾಂಕ್ಷೆಯ ವಿಶ್ವವಿದ್ಯಾನಿಲಯವನ್ನು ಕಟ್ಟುವ ಕನಸು ಕಂಡ ಏಶ್ಯದ ಹಲವು ದೇಶಗಳ ದೊಡ್ಡ ದೊಡ್ಡ ವಿದ್ವಾಂಸರು ಅಮಾರ್ತ್ಯ ಸೇನ್ ಜೊತೆಗೂಡತೊಡಗಿದರು. ನಳಂದದ ‘ಗಡಿಗೆರೆಗಳಿಲ್ಲದ ಜ್ಞಾನೋದಯ; ಎಲ್ಲರಿಗೂ ದಕ್ಕುವ ಜ್ಞಾನೋದಯ’ ಎಂಬ ಮಹಾನ್ ಬೌದ್ಧ ಆಶಯವನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ನನಸಾಗಿಸುವ ವಿಶ್ವವಿದ್ಯಾನಿಲಯವನ್ನು ಕಟ್ಟುವ ಮಹತ್ತರ ನಿರೀಕ್ಷೆಗಳು ಆ ವಿದ್ವಾಂಸರಲ್ಲಿದ್ದವು.
ಅಮಾರ್ತ್ಯ ಸೇನರ ಕಣ್ಣೆದುರು ನಳಂದದ ಹೆಮ್ಮೆಯ ಪುಟಗಳು ತೆರೆದುಕೊಳ್ಳತೊಡಗಿದ್ದವು: ‘೧೫೦೦ ವರ್ಷಗಳ ಕೆಳಗೆ ನಳಂದದಲ್ಲಿ ಕ್ಲಾಸುಗಳು ನಡೆಯುತ್ತಿದ್ದ ಕಾಲಕ್ಕೆ ಜಗತ್ತಿನಲ್ಲಿದ್ದ ಉನ್ನತ ವಿದ್ಯಾಭ್ಯಾಸದ ಕೇಂದ್ರ ಅದೊಂದೇ’ ಎಂಬುದು ನೆನಪಾಗುತ್ತದೆ. ವಿದೇಶಿ ದಾಳಿಕೋರರು ನಳಂದವನ್ನು ನಾಶ ಮಾಡಿದ ನಂತರದ ಕಾಲದಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ (೧೧೬೯) ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ (೧೨೦೯) ಹುಟ್ಟಿದ್ದವು. ನಳಂದದ ಬಗ್ಗೆ ಯೋಚಿಸುತ್ತಿದ್ದ ಅಮಾರ್ತ್ಯ ಸೇನ್ಗೆ, ಏಳನೆಯ ಶತಮಾನದಲ್ಲಿ ಚೀನಾದಿಂದ ನಳಂದಕ್ಕೆ ಓದಲು ಬಂದಿದ್ದ ಹ್ಯೂಯೆನ್ ತ್ಸಾಂಗ್ ವಿದ್ಯಾಭ್ಯಾಸ ಮುಗಿಸಿ ವಾಪಸ್ ಊರಿಗೆ ಹೊರಟು ನಿಂತ ಗಳಿಗೆ ನೆನಪಾಗುತ್ತದೆ:
ನಳಂದ ವಿಶ್ವವಿದ್ಯಾನಿಲಯದ ಪ್ರತಿಭಾಶಾಲಿ ವಿದ್ಯಾರ್ಥಿ ಹ್ಯೂಯೆನ್ ತ್ಸಾಂಗ್ಗೆ ‘ವಿಶ್ವವಿದ್ಯಾನಿಲಯದಲ್ಲೇ ಪ್ರಾಧ್ಯಾಪಕ ಹುದ್ದೆ ಕೊಡುತ್ತೇವೆ. ಇಲ್ಲೇ ಉಳಿಯಿರಿ’ ಎಂದು ಹಿರಿಯ ಪ್ರಾಧ್ಯಾಪಕರು ಹೇಳುತ್ತಾರೆ. ಅದಕ್ಕೆ ಹ್ಯೂಯೆನ್ ತ್ಸಾಂಗ್ ಉತ್ತರ: ‘‘...ಜ್ಞಾನೋದಯದ ಫಲವನ್ನು ಒಬ್ಬನೇ ಅನುಭವಿಸಬಾರದು; ನಾವು ಏನನ್ನಾದರೂ ಕಲಿತರೆ ಅದನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದು ನಮ್ಮ ಕರ್ತವ್ಯ’ ಎಂದು ಬುದ್ಧ ಹೇಳಿ ಕೊಟ್ಟಿದ್ದಾನೆ; ನಾನೀಗ ನಮ್ಮೂರಿಗೆ ಮರಳಿ ಬುದ್ಧ ಹೇಳಿದ ಆ ಕೆಲಸ ಮಾಡಬೇಕಾಗಿದೆ.’’
ಈ ಕಾಲದ ದೊಡ್ಡ ಅರ್ಥಶಾಸ್ತ್ರಜ್ಞರಾಗಿ ಬೆಳೆದು ತಮ್ಮ ಜ್ಞಾನದ ಫಲವನ್ನು ಲೋಕಕ್ಕೆಲ್ಲ ಹಂಚುವ ಅಮಾರ್ತ್ಯ ಸೇನ್ ಹೊಸ ಕನಸು ಹೊತ್ತು ಮತ್ತೆ ನಳಂದಕ್ಕೆ ಬಂದಾಗ, ದೇಶ ವಿದೇಶಗಳಲ್ಲಿ ತಾವು ಗಳಿಸಿದ ಜ್ಞಾನವನ್ನು ಈ ದೇಶದಲ್ಲಿ ಹಂಚುವ ಕರ್ತವ್ಯವೂ ಅವರ ಕಣ್ಣೆದುರು ಇತ್ತು. ತಾವೇ ಒಂದು ವಿಶ್ವವಿದ್ಯಾನಿಲಯದಂತಿರುವ ಅಮಾರ್ತ್ಯ ಸೇನ್ ನಳಂದದ ಮರುಹುಟ್ಟಿನ ಮುಂಚೂಣಿಯಲ್ಲಿರುವುದನ್ನು ಕಂಡು, ನಳಂದದ ಹೆಸರಿಗೂ, ‘ನಳಂದಕ್ಕೆ ಮರಳಿ ಬನ್ನಿ’ ಎಂಬ ಕರೆಗೂ ಪುಳಕಗೊಂಡು ಜಗತ್ತಿನ ಹಲವೆಡೆಯಿಂದ ಗಂಭೀರ ಪ್ರೊಫೆಸರುಗಳು ತಮ್ಮ ಅಂದಿನ ಸಂಬಳಕ್ಕಿಂತ ಅರ್ಧ ಸಂಬಳಕ್ಕೆ ಬರಲು ಸಿದ್ಧವಾದರು. ಅವತ್ತಿನ ಮನಮೋಹನ್ ಸಿಂಗ್ ಸರಕಾರ ವಿಶ್ವವಿದ್ಯಾನಿಲಯಕ್ಕೆ ಸಂಪೂರ್ಣ ಅಕಾಡಮಿಕ್ ಸ್ವಾತಂತ್ರ್ಯ ನೀಡಲು ಬದ್ಧವಾಗಿತ್ತು. ಪಾರ್ಲಿಮೆಂಟಿನಲ್ಲಿ ನಳಂದ ವಿಶ್ವವಿದ್ಯಾನಿಲಯದ ಅಕಾಡಮಿಕ್ ಸ್ವಾತಂತ್ರ್ಯವನ್ನು ರಕ್ಷಿಸುವ ಮಸೂದೆ ಪಾಸಾಯಿತು. ೨೦೨೧ರವರೆಗೂ ನಳಂದದ ಆರ್ಥಿಕ ಭದ್ರತೆಯ ಏರ್ಪಾಡೂ ಆಗಿತ್ತು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಶ್ವವಿದ್ಯಾನಿಲಯಕ್ಕೆ ಬೇಕಾದ ಭೂಮಿ ಮಂಜೂರು ಮಾಡಿದರು. ಪ್ರಾಚೀನ ಯುಗದ ನಳಂದದ ಕನಸು ಆಧುನಿಕೋತ್ತರ ಯುಗದಲ್ಲಿ ಸಾಕಾರವಾಗುವ ಕಾಲ ಬಂತು. ತರಗತಿಗಳೂ ಶುರುವಾದವು. ಅಷ್ಟೊತ್ತಿಗಾಗಲೇ, ಲೋಕದ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳ ಮಹತ್ವ ಬಲ್ಲವರಾಗಿದ್ದ ಸುಶಿಕ್ಷಿತ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸ್ವತಃ ಆಸಕ್ತಿ ವಹಿಸಿ ದೇಶದ ಉತ್ತಮ ಪ್ರತಿಭೆಗಳು ಇಂಡಿಯಾದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಇರಬೇಕೆಂದು ಕನಸು ಕಂಡಿದ್ದರು; ಆ ಕಾರಣದಿಂದ ಕೂಡ ಇಂಡಿಯಾದ ವಿಶ್ವವಿದ್ಯಾನಿಲಯಗಳ ಬೋಧಕರ ಸಂಬಳವನ್ನು ಹತ್ತಿರ ಹತ್ತಿರ ಎರಡು ಪಟ್ಟು ಹೆಚ್ಚಿಸಿದ್ದರು. ಮನಮೋಹನ್ ಸಿಂಗ್ ಸರಕಾರಕ್ಕೆ ಇದ್ದ ಶೈಕ್ಷಣಿಕ ವಲಯಗಳ ಏಳಿಗೆ ಹಾಗೂ ಸ್ವಾತಂತ್ರ್ಯ ಕುರಿತ ಪ್ರಾಮಾಣಿಕ ಬದ್ಧತೆ, ಕಾಳಜಿಗಳು ಮಹತ್ವ ಇವತ್ತು ಇನ್ನಷ್ಟು ಎದ್ದು ಕಾಣುತ್ತಿದೆ.
ಬಿಹಾರ ರಾಜ್ಯದಲ್ಲಿರುವ ನಳಂದದಲ್ಲಿ ಇಪ್ಪತ್ತೊಂದನೆಯ ಶತಮಾನದ ಮಹತ್ವಾಕಾಂಕ್ಷೆಯ ವಿಶ್ವವಿದ್ಯಾನಿಲಯವನ್ನು ಕಟ್ಟುವ ಕನಸು ಕಂಡ ಏಶ್ಯದ ಹಲವು ದೇಶಗಳ ದೊಡ್ಡ ದೊಡ್ಡ ವಿದ್ವಾಂಸರು ಅಮಾರ್ತ್ಯ ಸೇನ್ ಜೊತೆಗೂಡತೊಡಗಿದರು. ನಳಂದದ ‘ಗಡಿಗೆರೆಗಳಿಲ್ಲದ ಜ್ಞಾನೋದಯ; ಎಲ್ಲರಿಗೂ ದಕ್ಕುವ ಜ್ಞಾನೋದಯ’ ಎಂಬ ಮಹಾನ್ ಬೌದ್ಧ ಆಶಯವನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ನನಸಾಗಿಸುವ ವಿಶ್ವವಿದ್ಯಾನಿಲಯವನ್ನು ಕಟ್ಟುವ ಮಹತ್ತರ ನಿರೀಕ್ಷೆಗಳು ಆ ವಿದ್ವಾಂಸರಲ್ಲಿದ್ದವು.
ಮನಮೋಹನ್ ಸಿಂಗ್ ಸರಕಾರದ ನಿರ್ಗಮನದ ನಂತರದ ಅಕಾಡಮಿಕ್ ವಲಯಗಳನ್ನು ಯೋಜಿತವಾಗಿ ನಾಶ ಮಾಡುತ್ತಿರುವ ನಿತ್ಯದ ಭಯಾನಕ ಚಿತ್ರಗಳು ನಮ್ಮ ಕಣ್ಣ ಮುಂದೇ ಇವೆ. ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಕಾಲದಲ್ಲಿ ಅಮಾರ್ತ್ಯ ಸೇನ್ ನಳಂದದಿಂದ ಹೋಗುವಂತೆ ನೋಡಿಕೊಳ್ಳಲಾಯಿತು; ವಿಶ್ವವಿದ್ಯಾನಿಲಯದ ಅಕಾಡಮಿಕ್ ಸ್ವಾಯತ್ತತೆಗೆ ಧಕ್ಕೆ ಬಂತು. ಸರಕಾರದ ನಾಮನಿರ್ದೇಶಿತ ಸದಸ್ಯರ ಹಾವಳಿ ಶುರುವಾಯಿತು. ಬಾಯಿ ಬಿಟ್ಟರೆ ದೇಶದ ಗತ ಕಾಲದ ಮಾತಾಡುವ ಜನಕ್ಕೆ ದೇಶದ ಪ್ರಾಚೀನ ಯುಗದ ಹೆಮ್ಮೆಯನ್ನು ಮರಳಿ ಸ್ಥಾಪಿಸಹೊರಟಿದ್ದ ನಳಂದ ವಿಶ್ವವಿದ್ಯಾನಿಲಯದ ಏಳಿಗೆಯ ಬಗ್ಗೆ ಕನಿಷ್ಠ ಬದ್ಧತೆಯೂ ಇರಲಿಲ್ಲ. ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಗತಿ ಏನಾಗತೊಡಗಿತ್ತೋ ಅದೇ ಗತಿ ಜಗತ್ತಿನ ವಿಶ್ವವಿದ್ಯಾನಿಲಯಗಳಲ್ಲೇ ವಿಶಿಷ್ಟವಾಗಲು ಹೊರಟಿದ್ದ ನಳಂದ ವಿಶ್ವವಿದ್ಯಾನಿಲಯಕ್ಕೂ ಬರತೊಡಗಿತು.
ಈ ನಡುವೆ ಕೂಡ ನಳಂದದ ‘ಗಡಿಗೆರೆಗಳಿಲ್ಲದ ಜ್ಞಾನೋದಯ; ಎಲ್ಲರಿಗೂ ದಕ್ಕುವ ಜ್ಞಾನೋದಯ’ ಸ್ವತಂತ್ರ ಭಾರತದಲ್ಲಿ ಹಲವು ದಶಕಗಳ ಕಾಲ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಮೂಲ ಗುರಿಯಾಗಿತ್ತು ಎಂಬುದನ್ನು ಇವತ್ತು ಮತ್ತೆ ನೆನೆಯಬೇಕಾದ ಕಾಲ ಬಂದಿದೆ. ‘ಸ್ವಾಯತ್ತ’ ಎಂದುಕೊಳ್ಳುವ ಅನೇಕ ಪ್ರೈವೇಟ್ ಸಂಸ್ಥೆಗಳು ಹಣವಿದ್ದವರಿಗೆ, ಹಾಗೂ ಹಣ ಬರುವ ‘ಜ್ಞಾನ’ವನ್ನು ಹಂಚತೊಡಗಿರುವ ಕಾಲದಲ್ಲಿ ಗಡಿಗೆರೆಗಳಿಲ್ಲದ ಜ್ಞಾನೋದಯಕ್ಕಾಗಲೀ, ಎಲ್ಲರ ಜ್ಞಾನೋದಯಕ್ಕಾಗಲೀ ಅವಕಾಶವೆಲ್ಲಿದೆ? ಇವತ್ತಿಗೂ ದೇಶದ ಲಕ್ಷಾಂತರ ಕೆಳ ಮಧ್ಯಮ ವರ್ಗಗಳ ಮಕ್ಕಳ ಪಾಲಿಗೆ ಇರುವುದು ಸಾರ್ವಜನಿಕ ವಿಶ್ವವಿದ್ಯಾನಿಲಯಗಳೇ. ಆದರೆ ಅನೇಕ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಖಾಸಗಿ ವಲಯದ ಲಾಭಕೋರ ಮನಸ್ಸಿನ ಉಡಾಫೆ ಪ್ರಶ್ನೆಗಳಿಗೆ ಬಲಿಯಾಗತೊಡಗಿವೆ: ‘ಮಾನವಿಕ ವಿಜ್ಞಾನಗಳಿಂದ ಏನು ಪ್ರಯೋಜನ? ಅಷ್ಟಿಷ್ಟು ಭಾಷೆ ಕಲಿತರೆ ಸಾಕು, ಸಾಹಿತ್ಯದಿಂದ ಏನು ಪ್ರಯೋಜನ? ಶೇಕ್ಸ್ಪಿಯರ್, ಟ್ಯಾಗೋರ್ ಸಾಹಿತ್ಯ ಯಾಕೆ ಬೇಕು? ವ್ಯಾವಹಾರಿಕ ಇಂಗ್ಲಿಷ್ ಕಲಿತರೆ ಸಾಕು, ಕನ್ನಡದಿಂದ, ತಮಿಳಿನಿಂದ ಏನು ಪ್ರಯೋಜನ? ತಂತ್ರಜ್ಞಾನ ಕಲಿತರೆ ಸಾಕು, ವಿಜ್ಞಾನ ಅನಗತ್ಯ...’ ಇಂಥ ಹೊಣೆಗೇಡಿ ಮಾತುಗಳನ್ನು ಖಾಸಗಿ ವಲಯಗಳು ಎಲ್ಲರ ಮೇಲೂ ತೂರಿಬಿಡತೊಡಗಿವೆ.
ಈ ಮಾತುಗಳನ್ನು ದಡ್ಡ ತಂದೆ ತಾಯಂದಿರಂತೆ, ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಮಂದಿಯೂ ನಂಬತೊಡಗುತ್ತಾರೆ. ಜೊತೆಗೆ, ತಾವು ಬೋಧಿಸುವ ಅನೇಕ ವಿಷಯಗಳ ಕಲಿಕೆಯ ಮೂಲ ಉದ್ದೇಶಗಳನ್ನೇ ಹೊಸ ಹೊಸ ಪಠ್ಯಕ್ರಮ ಮಾಡುವವರು ಮರೆಯುತ್ತಾ ಹೋಗುತ್ತಾರೆ. ಬರಬರುತ್ತಾ ಮಾನವಿಕ ವಿಜ್ಞಾನಗಳ (ಹ್ಯುಮ್ಯಾನಿಟೀಸ್) ಮೂಲೋದ್ದೇಶಗಳೇ ಕಣ್ಮರೆಯಾಗುವುದನ್ನು ಟಿಮ್ ವುಡ್ನ ‘ಬಿಗಿನಿಂಗ್ ಪೋಸ್ಟ್ ಮಾಡರ್ನಿಸಂ’ ಪುಸ್ತಕ ನೆನಪಿಸುತ್ತದೆ: ಉದಾಹರಣೆಗೆ, ಸಮಾಜ ವಿಜ್ಞಾನಗಳು ಆರಂಭವಾದಾಗ ಅವು ಜನರನ್ನು ತಿದ್ದಲೆತ್ನಿಸಿದವು: ಪುರಾಣಗಳನ್ನು ಅತಿಯಾಗಿ ನಂಬಿ, ಅವನ್ನು ಅವಲಂಬಿಸುತ್ತಿದ್ದ ಸಮಾಜಗಳನ್ನು ಪುರಾಣಗಳ ಹಿಡಿತದಿಂದ ಬಿಡಿಸುವುದು ಹಾಗೂ ಜನರನ್ನು ಸ್ವತಂತ್ರವಾಗಿ, ವಿವೇಚನೆಯಿಂದ ಯೋಚಿಸಲು ಹಚ್ಚುವುದು ಸಮಾಜ ವಿಜ್ಞಾನಗಳ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು. ಥಿಯಾಲಜಿ ಅಥವಾ ಮತಧರ್ಮಶಾಸ್ತ್ರದ ಮೂಲಕ ನ್ಯಾಯಬದ್ಧತೆ ಪಡೆದು ಅಧಿಕಾರ ಚಲಾಯಿಸುತ್ತಿದ್ದ ಚರ್ಚು, ರಾಜಪ್ರಭುತ್ವಗಳ ಹಿಡಿತದಿಂದ ಜನರನ್ನು ಬಿಡಿಸುವುದು; ಸಾಮಾಜಿಕ ರಚನೆಗಳಾದ ವರ್ಗ, ಜಾತಿ ಇತ್ಯಾದಿಗಳು ದೇವರು ಸೃಷ್ಟಿಸಿದವಲ್ಲ; ಅವು ಸಹಜವಾಗಿ ವಿಕಾಸಗೊಂಡಂಥವೂ ಅಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದು ಕೂಡ ಮಾನವಿಕ ವಿಜ್ಞಾನಗಳ ಉದ್ದೇಶವಾಗಿತ್ತು. ಇದಕ್ಕೆ ಪೂರಕವಾಗಿ ವಿಜ್ಞಾನ, ವೈಚಾರಿಕತೆ, ವೈಜ್ಞಾನಿಕ ಮನೋಭಾವವನ್ನೂ ಕಲಿಸುವ ಗುರಿ ವಿಜ್ಞಾನಬೋಧನೆಗಿತ್ತು.
ದುರಂತವೆಂದರೆ, ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಈ ಮೂಲ ಉದ್ದೇಶಗಳೆಲ್ಲ ಹಿಂದೆ ಸರಿಯತೊಡಗಿವೆ. ಅವೆಲ್ಲ ಪಠ್ಯಗಳಲ್ಲಿದ್ದರೂ ಜಡ ವಿವರಗಳಾಗಿವೆ. ಕೊನೆಯ ಪಕ್ಷ ಇಂಡಿಯಾದ ಕೆಲವು ವಿಶ್ವವಿದ್ಯಾನಿಲಯಗಳಲ್ಲಾದರೂ ಮಾನವಿಕ ವಿಜ್ಞಾನಗಳ ಕೆಲಸವನ್ನು ಕ್ರಮೇಣ ಸಾಹಿತ್ಯ ಪಠ್ಯಗಳು ವಹಿಸಿಕೊಂಡವು. ಇವತ್ತಿಗೂ ಸಾಹಿತ್ಯದ ಆಳವಾದ ಬೋಧನೆಯ ಮೂಲಕ ಕೂಡ ಸ್ವತಂತ್ರ ಪ್ರವೃತ್ತಿಯ ವಿಚಾರವಂತ ಹುಡುಗ, ಹುಡುಗಿಯರು ಸೃಷ್ಟಿಯಾಗುವ ಪರಂಪರೆ ಕರ್ನಾಟಕದಲ್ಲಿದೆ. ಆದ್ದರಿಂದಲೇ, ಯಾವುದೇ ಬೋಧನಾ ವಿಷಯಗಳ ಮೂಲ ಗುರಿಗಳು ಕಾಲಕಾಲದ ಪಠ್ಯಗಳಿಂದ ಮಾಯವಾದರೂ ಅವು ಪ್ರತಿ ತಲೆಮಾರುಗಳ ಅಧ್ಯಾಪಕ, ಅಧ್ಯಾಪಕಿಯರ ತಲೆಗಳಲ್ಲಿ ಮುಂದುವರಿಯುತ್ತಲೇ ಇರಬೇಕಾಗುತ್ತದೆ.
ವಿಶ್ವವಿದ್ಯಾನಿಲಯಗಳಲ್ಲಿ ಸರಕಾರಗಳ ದುರುಳ ಹಸ್ತಕ್ಷೇಪ, ನೇಮಕಾತಿಗಳ ಭ್ರಷ್ಟಾಚಾರ ಇತ್ಯಾದಿಗಳು ವಿಶ್ವವಿದ್ಯಾನಿಲಯಗಳ ಪತನದ ಮೂಲದಲ್ಲಿರುವುದು ನಿಜ; ಆದರೆ ಇದಕ್ಕೆ ವಿಶ್ವವಿದ್ಯಾನಿಲಯಗಳ ಒಳಗಿದ್ದೇ ಅವುಗಳ ಸಾವಿಗೆ ಕಾರಣರಾದವರ ಕೊಡುಗೆಯೇನೂ ಕಡಿಮೆಯಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ದೊಡ್ಡ ಮಟ್ಟದ ಬೋಧಕ, ಬೋಧಕಿಯರಿಲ್ಲ ಎನ್ನುವ ರಾಗ ಹಳೆಯದು; ಆದರೆ ಇರುವವರನ್ನಾದರೂ ಪೊರೆಯುವ ಕೆಲಸ ನಡೆಯುತ್ತಿರಬೇಕಾಗುತ್ತದೆ. ಇಡೀ ವ್ಯವಸ್ಥೆಯನ್ನೇ ಜಡಗೊಳಿಸಿ ನಾಶ ಮಾಡುವ ಫ್ಯಾಶಿಸ್ಟ್ ಶಕ್ತಿಗಳು, ಅವುಗಳ ಹಿಂಬಾಲಕರು ವಿಜೃಂಭಿಸುತ್ತಿರುವಾಗಲೂ, ಪ್ರಯೋಗಾಲಯಗಳಲ್ಲಿ ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಿರುವ ವಿಜ್ಞಾನಿಗಳು, ಆರ್ಥಿಕತೆಯ ಬಗ್ಗೆ, ಸಮಾಜದ ಬಗ್ಗೆ ಆಳವಾದ ಸಂಶೋಧನೆ-ಚಿಂತನೆ ನಡೆಸಿ ಬರೆಯುತ್ತಿರುವ ಅಧ್ಯಾಪಕ, ಅಧ್ಯಾಪಕಿಯರು ಇನ್ನೂ ಇಲ್ಲಿದ್ದಾರೆ. ಮಕ್ಕಳಿಗೆ ಉತ್ತಮ ಸಂಶೋಧನಾ ಕ್ರಮಗಳನ್ನು, ಸಾಹಿತ್ಯ ವಿಮರ್ಶೆಯ ಕ್ರಮಗಳನ್ನು ಗಂಭೀರವಾಗಿ ಹೇಳಿಕೊಡುತ್ತಿರುವವರು ಇನ್ನೂ ವಿಶ್ವವಿದ್ಯಾನಿಲಯಗಳಲ್ಲಿದ್ದಾರೆ ಎಂಬುದನ್ನು ಮರೆಯದಿರೋಣ. ಆದರೆ ಇಂಥ ಗಂಭೀರ ಮಂದಿಗೆ ತಾವೀಗ ಅಲ್ಪಸಂಖ್ಯಾತರು, ತಮ್ಮಿಂದ ಏನಾದೀತು ಎಂಬ ಭಾವ ಮುತ್ತುತ್ತಿರುವುದು ಆತಂಕಕಾರಿಯಾಗಿದೆ.
ಇಂಥ ಮನಸ್ಥಿತಿಯ ಜನ ಹೊಸ ತಲೆಮಾರುಗಳಿಗೂ ತಮ್ಮ ಹತಾಶೆ, ಜಡತೆಗಳನ್ನು ಅಂಟಿಸತೊಡಗುತ್ತಾರೆ. ಪ್ರತೀ ತಲೆಮಾರಿನಲ್ಲೂ ಮುಕ್ತ ಮನಸ್ಸಿನ, ಹೊಸದನ್ನು ಕಲಿತು ತಮ್ಮ ಟೀಚಿಂಗಿಗೆ ಅಳವಡಿಸಿಕೊಳ್ಳಲು ಬಯಸುವ, ಗಂಭೀರ ಅಧ್ಯಾಪಕ, ಅಧ್ಯಾಪಕಿಯರಿರುತ್ತಾರೆ ಎಂಬ ಬಗ್ಗೆ ಹಿರಿಯ ಅಧ್ಯಾಪಕರೇ ನಂಬಿಕೆ ಕಳೆದುಕೊಳ್ಳಬಾರದು. ಹೊಸ ತಲೆಮಾರಿನ ಟೀಚರುಗಳಿಗಾಗಿ ನಡೆಸುವ ರಿಫ್ರೆಶರ್ ಕೋರ್ಸುಗಳಲ್ಲಿ ಗಂಭೀರ ವಿಷಯಗಳನ್ನು ಬಿತ್ತಿದಲ್ಲಿ, ಉತ್ತಮ ಬೆಳೆ ಬರಬಲ್ಲದು ಎಂಬ ಬಗ್ಗೆ ಹಿರಿಯರಿಗೆ ಅನುಮಾನವಿರಬಾರದು. ಹಿರಿಯರು, ನುರಿತವರು ಹೊಸ ಹೊಸ ಅಧ್ಯಯನ ಕ್ರಮ ಹಾಗೂ ಬೋಧನಾ ಕ್ರಮಗಳನ್ನು ಹೇಳಿಕೊಟ್ಟರೆ ಅವುಗಳಿಂದ ಹೊಸ ಟೀಚರುಗಳು ಸ್ಫೂರ್ತಿಗೊಂಡು ಹೊಸ ಉತ್ಸಾಹದಿಂದ ತರಗತಿಗಳಿಗೆ ಮರಳಬಲ್ಲರು.
ಆದ್ದರಿಂದಲೇ ಒಬ್ಬ ಮೇಷ್ಟ್ರು ಅಥವಾ ಒಬ್ಬ ಮೇಡಂ ಕೂಡ ತರಗತಿಗಳಲ್ಲಿ ಏನನ್ನಾದರೂ ಸೃಷ್ಟಿಸಬಲ್ಲರು ಎಂಬ ನಂಬಿಕೆಯ ಮರುಸ್ಥಾಪನೆ ಈಗ ಅತ್ಯಗತ್ಯ. ದಣಿವರಿಯದ ಪ್ರೊಫೆಸರ್ ಕಿ.ರಂ. ನಾಗರಾಜ್ ನೂರಾರು ಜನ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ವಿಮರ್ಶೆಯ ಕ್ಷೇತ್ರದತ್ತ ಕರೆದೊಯ್ದಿದ್ದಾರೆ; ಅವರಲ್ಲನೇಕರು ವಿಮರ್ಶಕರಾಗಿ ನೆಲೆಯೂರಲು ಪ್ರೇರಣೆಯಾಗಿದ್ದಾರೆ; ಆ ವಿಮರ್ಶಕ, ವಿಮರ್ಶಕಿಯರು ಕನ್ನಡ ಸಾಹಿತ್ಯದ ಗಂಭೀರ ಓದುಗರನ್ನು ರೂಪಿಸಿದ್ದಾರೆ. ಭದ್ರಾವತಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಪ್ರೊಫೆಸರ್ ಬಿ. ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿಯ ಮುಂಚೂಣಿ ನಾಯಕರಾಗುವ ಮೊದಲೇ ತರಗತಿಗಳಲ್ಲಿ ಸಮಾನತೆಯ ಆಶಯದ ಹುಡುಗ, ಹುಡುಗಿಯರನ್ನು ಸೃಷ್ಟಿಸುತ್ತಿದ್ದರು. ಇವೆರಡೂ ಕೇವಲ ಪ್ರಾತಿನಿಧಿಕ ಉದಾಹರಣೆಗಳಷ್ಟೇ. ವಿವಿಧ ವಿಭಾಗಗಳಲ್ಲಿ ಇಂಥ ನೂರಾರು ಮೇಷ್ಟ್ರು, ಮೇಡಂಗಳ ಉದಾಹರಣೆಗಳನ್ನು ನಾಡಿನುದ್ದಕ್ಕೂ ಕೊಡುತ್ತಾ ಹೋಗಬಹುದು. ಇಂಥ ಸಾವಿರಾರು ಟೀಚರುಗಳು ತಮ್ಮತಮ್ಮ ವೈಯಕ್ತಿಕ ನೆಲೆಯಲ್ಲಿ ತರಗತಿಗಳ ಹೊರಗೂ ಒಳಗೂ ಹೊಸ ಸಂವೇದನೆಯನ್ನು ಸೃಷ್ಟಿಸಿದ್ದಾರೆ. ಪ್ರತಿಯೊಬ್ಬ ಟೀಚರುಗಳ ಆಳವಾದ ಅಧ್ಯಯನ ಹಾಗೂ ಗಂಭೀರ ಬೋಧನೆಯ ಮೂಲಕವೇ ಉತ್ತಮ ಸಂವೇದನೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೃಷ್ಟಿಯಾಗುತ್ತಾರೆ. ಟೀಚಿಂಗಿನಲ್ಲಿ ತೊಡಗಿದವರಿಗೆ ತಮ್ಮ ಈ ವೈಯಕ್ತಿಕ ಶಕ್ತಿಯ ಬಗ್ಗೆ ನಂಬಿಕೆಯಿದ್ದರೆ ಮಾತ್ರ ತರಗತಿಗಳಲ್ಲಿ ಹೊಸ ಸಂವೇದನೆಯ ತಲೆಮಾರು ಸೃಷ್ಟಿಯಾಗುತ್ತದೆ.
ಕರ್ನಾಟಕದ ಸಂದರ್ಭವನ್ನೇ ನೋಡಿ: ನವ್ಯ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ ಹಾಗೂ ಸ್ತ್ರೀವಾದಿ ಸಾಹಿತ್ಯಗಳ ದೊಡ್ಡ ತಾತ್ವಿಕ ನೋಟಗಳು ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳ ವಲಯಗಳಿಂದಲೂ ಬಂದಿವೆ; ಅವು ನಾಡಿನಾದ್ಯಂತ ಸಾಹಿತ್ಯ ಹಾಗೂ ಸಾಹಿತ್ಯೇತರ ವಲಯಗಳಲ್ಲಿ ಹೊಸ ಚಿಂತಕ, ಚಿಂತಕಿಯರನ್ನು ಹುಟ್ಟು ಹಾಕಿವೆ. ಈ ವಲಯಗಳಾಚೆಗಿನ ನೂರಾರು ಜನರೂ ಇವರೊಂದಿಗೆ ಕೈ ಜೋಡಿಸಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಫಲಿತಗಳ ಏಳುಬೀಳುಗಳು ಏನೇ ಇದ್ದರೂ, ಅವು ಒಂದು ಮಟ್ಟದಲ್ಲಾದರೂ ಹೊಸ ಹೊಸ ವಿಶ್ಲೇಷಕರನ್ನು ಹುಟ್ಟು ಹಾಕುತ್ತಲೇ ಇವೆಯೆಂಬುದರ ಬಗ್ಗೆ ಮೊದಲು ಟೀಚರುಗಳು ಸಿನಿಕತೆ ಬಿಟ್ಟು ಯೋಚಿಸಬೇಕಾಗುತ್ತದೆ.
ವಿಶ್ವವಿದ್ಯಾನಿಲಯಗಳ ಪತನದ ಚರ್ಚೆ ಇವತ್ತಿನದಲ್ಲ. ರಾಮಮನೋಹರ ಲೋಹಿಯಾ ಜರ್ಮನಿಯ ಬರ್ಲಿನ್ ವಿಶ್ವವಿದ್ಯಾನಿಲಯಕ್ಕೆ ಪಿಎಚ್ಡಿ. ಥೀಸಿಸ್ ಸಲ್ಲಿಸಿ ೧೯೩೩ರಲ್ಲಿ ಭಾರತಕ್ಕೆ ಮರಳಿ ಬಂದಾಗ ಪಂಡಿತ್ ಮದನಮೋಹನ ಮಾಳವೀಯ ಬನಾರಸ್ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದರು. ಮಾಳವೀಯರಿಗೆ ಲೋಹಿಯಾರ ಅರ್ಹತೆ ಗೊತ್ತಿದ್ದರೂ, ಅವರಿಗೆ ಅಧ್ಯಾಪಕ ಹುದ್ದೆ ಕೊಡಲಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಲೋಹಿಯಾ, ಮುಂದೆ ಭಾರತದ ವಿಶ್ವವಿದ್ಯಾನಿಲಯಗಳ ಜಡತೆಯ ಬಗ್ಗೆ, ಅವನ್ನು ಹೊಸದಾಗಿ ರೂಪಿಸುವ ಬಗ್ಗೆ ಸದಾ ಬರೆಯುತ್ತಿದ್ದರು; ಲೋಕಸಭೆಯಲ್ಲೂ ಪಠ್ಯಪುಸ್ತಕಗಳ ಬಗ್ಗೆ ಮಾತಾಡುತ್ತಿದ್ದರು. ೧೯೫೮ರಲ್ಲಿ ಬನಾರಸ್ ವಿಶ್ವವಿದ್ಯಾನಿಲಯ ಕುರಿತು ಲೋಹಿಯಾ ಬರೆದ ಮಾತು: ‘ಗುಮಾಸ್ತರು, ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಆಡಳಿತಗಾರರನ್ನು ಉತ್ಪಾದಿಸುವ ಸಾಮರ್ಥ್ಯದ ಮೇಲೆ ಒಂದು ವಿಶ್ವವಿದ್ಯಾನಿಲಯದ ಸತ್ವಪರೀಕ್ಷೆಯಾಗುವುದಿಲ್ಲ. ಅದರ ಚೈತನ್ಯವೇನಿದ್ದರೂ, ಯಾವ ಪ್ರಮಾಣದಲ್ಲಿ ಅದು ವಿದ್ವಾಂಸರನ್ನು, ವಿಜ್ಞಾನಿಗಳನ್ನು, ಮುತ್ಸದ್ದಿಗಳನ್ನು, ಸಂಶೋಧಕರನ್ನು ರೂಪಿಸುತ್ತದೆ ಎಂಬುದರ ಆಧಾರದ ಮೇಲೆ ನಿಂತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಹೊಸ ಚಿಂತನೆಗಳ ಆವಿಷ್ಕಾರಕ್ಕೆ ಯಾವ ರೀತಿ ಅದು ವಾತಾವರಣ ನಿರ್ಮಾಣ ಮಾಡುತ್ತಿದೆ ಎಂಬುದರ ಮೇಲೆ ಅದರ ಸತ್ವ ಸಾಬೀತಾಗುತ್ತದೆ.’ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೊದಲ ದಶಕದಲ್ಲೇ ‘ಹೊಸ ಚಿಂತನೆಗಳ ಸಾಹಸ ಎಂಬುದು ಭಾರತದ ವಿಶ್ವವಿದ್ಯಾನಿಲಯಗಳಿಂದ ಹೊರಟು ಹೋಗಿದೆ’ ಎಂಬುದನ್ನು ಕಂಡ ಲೋಹಿಯಾ, ಆ ಸಾಹಸವನ್ನು ಮರಳಿ ಸೃಷ್ಟಿಸುವ ಮಾರ್ಗವನ್ನೂ ಸೂಚಿಸುತ್ತಾರೆ: ‘ಭಾರತದಾದ್ಯಂತ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಮ್ಮತದ ಚಿಂತನೆ ನಡೆಸಿ, ಒಮ್ಮತದ ಕ್ರಿಯೆಯ ಮೂಲಕ ತಮ್ಮ ವಿಶ್ವವಿದ್ಯಾನಿಲಯಗಳ ಆತ್ಮರಕ್ಷಣೆ ಹಾಗೂ ಸಮೃದ್ಧಿಗಾಗಿ ಪ್ರಯತ್ನಿಸಬೇಕು’ .
ಲೋಹಿಯಾ ಮಾತು ಹುಸಿಯಾಗಲಿಲ್ಲ. ಅಂದಿನಿಂದಲೂ ನೂರಾರು ಅಧ್ಯಾಪಕ, ಅಧ್ಯಾಪಕಿಯರು, ಲಕ್ಷಾಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೊಸ ಚಿಂತನೆಗಳ ಸೃಷ್ಟಿಯ ಕೆಲಸ ಮಾಡುತ್ತಲೇ ಬಂದಿದ್ದಾರೆ. ಇವತ್ತಿಗೂ ಅಧ್ಯಾಪಕ ವರ್ಗ, ವಿದ್ಯಾರ್ಥಿ ವರ್ಗಗಳು ಒಗ್ಗೂಡಿ ಈ ಕೆಲಸ ಮಾಡುವ ಸಾಧ್ಯತೆ ಇದೆ. ಆದರೆ ಈ ಕೆಲಸ ಕೈಗೆತ್ತಿಕೊಳ್ಳಲು ಅಧ್ಯಾಪಕ, ಅಧ್ಯಾಪಕಿಯರಲ್ಲಿ ಒಂದು ಮಟ್ಟದ ಸ್ವಾರ್ಥತ್ಯಾಗ ಕೂಡ ಅಗತ್ಯ. ನಿಜಕ್ಕೂ ಬುದ್ಧಿವಂತರಾದ ವಿಶ್ವವಿದ್ಯಾನಿಲಯಗಳ ಅನೇಕ ಅಧ್ಯಾಪಕ, ಅಧ್ಯಾಪಕಿಯರು ಸೆಮಿನಾರುಗಳ ಭಯದಲ್ಲಿ, ಅವುಗಳ ಅಕಾಡಮಿಕ್ ಒತ್ತಾಯ, ಒತ್ತಡಗಳ ಭಾರದಲ್ಲಿ ಕಳೆದು ಹೋಗಿ ತರಗತಿಗಳನ್ನು ಕಡೆಗಣಿಸುತ್ತಿರುವ ಅಪಾಯ ಕೂಡ ನಮ್ಮ ಮುಂದಿದೆ. ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಬಾಯುಪಚಾರದ ‘ಭೇಷ್’ ಎನ್ನಿಸಿಕೊಳ್ಳಲು ಅಗೆದು ತೆಗೆದು ರೆಫರ್ ಮಾಡಿದ ಪುಸ್ತಕಗಳ ಹೊರೆಗಿಂತ, ಒಂದು ಉತ್ತಮ ಚಿಂತನೆಯ ಮಾರ್ಗವನ್ನು ಅಥವಾ ಅಧ್ಯಯನ ವಿಧಾನವನ್ನು ಆದಷ್ಟು ಸರಳವಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮನದಟ್ಟು ಮಾಡಿ ಕೊಡಲು ಬಳಸುವ ವೇಳೆ ಹೆಚ್ಚಿನ ಸಾರ್ಥಕತೆಯನ್ನೂ, ದೀರ್ಘ ಕಾಲದ ಫಲವನ್ನೂ ನೀಡಬಲ್ಲದು ಎಂಬುದನ್ನು ನಾನು ಕಂಡುಕೊಂಡಿದ್ದೇನೆ.
ಇನ್ನು, ‘ನ್ಯಾಷನಲ್ ಅಸೆಸ್ಮೆಂಟ್ ಆ್ಯಂಡ್ ಅಕ್ರೆಡಿಶನ್ ಕೌನ್ಸಿಲ್’ (‘ನಾಕ್’) ತಯಾರಿಯಂತೂ ಟೀಚರುಗಳನ್ನು ಕೊಲ್ಲುತ್ತಿದೆ. ಫ್ಯಾಶಿಸ್ಟ್ ಸರಕಾರಿ ನೀತಿಗಳ ಮಧ್ಯಪ್ರವೇಶಗಳು ವಿಶ್ವವಿದ್ಯಾನಿಲಯಗಳಲ್ಲಿ ಹಾವಳಿ ನಡೆಸಿವೆ. ಆದರೂ, ಆಯಾ ಕಾಲದ ಸವಾಲುಗಳನ್ನು ಗ್ರಹಿಸಬಲ್ಲ, ಅಂಥ ಸವಾಲುಗಳನ್ನು ಎದುರಿಸಬಲ್ಲ ಪಠ್ಯಗಳನ್ನು ತಮ್ಮ ಪಠ್ಯಕ್ರಮದಲ್ಲಿ ತರುವ ಸ್ವಾತಂತ್ರ್ಯ ಹಾಗೂ ಸಾಧ್ಯತೆ ಪಠ್ಯ ರೂಪಿಸುವಲ್ಲಿ ಭಾಗಿಯಾಗುವ ಅಧ್ಯಾಪಕ, ಅಧ್ಯಾಪಕಿಯರಿಗೆ ಒಂದಲ್ಲ ಒಂದು ಬಗೆಯಲ್ಲಿ ಇದ್ದೇ ಇರುತ್ತದೆ. ತಾವು ಎಂದೋ ಮಾಡಿಕೊಂಡಿರುವ ಟಿಪ್ಪಣಿಗಳಿಗಾಗಿ ಹಳೆಯ ಪಠ್ಯಗಳನ್ನು ಉಳಿಸಿಕೊಳ್ಳುವ ಸೋಮಾರಿಗಳಿರುವ ಕಡೆ ಹೊಸತನ್ನು ಕಲಿಸುವ ಉತ್ಸಾಹ ಹುಟ್ಟುವುದಿಲ್ಲ; ತಾವೂ ಹೊಸತನ್ನು ಕಲಿತು, ಮುಂದೆ ಬೋಧಕ, ಬೋಧಕಿಯರಾಗಲಿರುವ ಹುಡುಗ, ಹುಡುಗಿಯರಿಗೂ ಹೊಸತನ್ನು ಕಲಿಸುವ ಆನಂದ ಹಾಗೂ ಸೃಜನಶೀಲತೆ ಅಂಥವರಲ್ಲಿ ಇರುವುದಿಲ್ಲ. ಕಲಿಸುವುದೂ ಕಲಿಕೆಯೇ ಎಂಬ ಸರಳ ವಿವೇಕ ಅಧ್ಯಾಪಕರಲ್ಲಿ ಮಾಯವಾಗತೊಡಗಿದರೆ ವಿಶ್ವವಿದ್ಯಾನಿಲಯಗಳು ಸಾಯಲಾರಂಭಿಸುತ್ತವೆ. ಈ ಕಾಲದ ತರಗತಿಗಳಿಗೆ ಬೇಕಾದ ವಸ್ತುಗಳು, ಪುಸ್ತಕಗಳು ಯಾವುವು, ಎಲ್ಲ ಕಾಲಕ್ಕೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಲಿಸಬೇಕಾದ ವಸ್ತುಗಳಾವುವು ಎಂಬ ಬಗ್ಗೆ ನಿರಂತರ ಚಿಂತನೆ, ಚರ್ಚೆಗಳು ಪ್ರತಿ ವರ್ಷ ತರಗತಿಗಳನ್ನು ನವೀಕರಣಗೊಳಿಸಬಲ್ಲವು.
ನಳಂದದ ಗ್ರಂಥಾಲಯ ಸುಟ್ಟ ದಾಳಿಕೋರರ ಕ್ರೌರ್ಯ ಇತಿಹಾಸಕ್ಕೆ ಸೇರಿ ಹೋಗಿದೆ; ಆದರೆ ಇವತ್ತು ಪುಸ್ತಕಗಳು-ಗ್ರಂಥಾಲಯಗಳಿಗೂ, ಅಧ್ಯಯನಕ್ಕೂ ಇರುವ ಸಂಬಂಧವನ್ನೇ ಸುಡುವ ಅಧ್ಯಾಪಕರು ತಲೆಮಾರುಗಳನ್ನೇ ನಾಶ ಮಾಡತೊಡಗುತ್ತಾರೆ. ಪಠ್ಯಪುಸ್ತಕಗಳಲ್ಲಿ ವಿಷ ತುರುಕುವ ಜಂತುಗಳು, ಅದರ ಬಗ್ಗೆ ಸರಿಯಾದ ಚರ್ಚೆ ಕೂಡ ಮಾಡಲಾಗದ ಅಧ್ಯಾಪಕ, ಅಧ್ಯಾಪಕಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿಶ್ವವಿದ್ಯಾನಿಲಯಗಳ ಹತ್ಯೆಯಲ್ಲಿ, ಸಾವಿನಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ. ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಂಡ ಮೂಲ ಧ್ಯೇಯೋದ್ದೇಶಗಳನ್ನು ಈ ಕಾಲಕ್ಕೆ ತಕ್ಕಂತೆ ಮರು ವಿವರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಹಾಗೂ ಮುಂದಿನ ಖಚಿತ ನಡೆಗಳು ಇವತ್ತಿಗೂ ವಿಶ್ವವಿದ್ಯಾನಿಲಯಗಳು ಸಾಯದಂತೆ ರಕ್ಷಿಸಬಲ್ಲವು. ಈ ಕೆಲಸಕ್ಕಾಗಿ ನಾವು ದೊಡ್ಡ ದೊಡ್ಡ ಟೀಮುಗಳನ್ನು ಕಟ್ಟಲು ಕಾಯಬೇಕಾಗಿಲ್ಲ. ಅದು ಒಬ್ಬ ಮೇಷ್ಟರಿಂದ, ಒಬ್ಬ ಮೇಡಂನಿಂದಲೂ ಶುರುವಾಗಬಹುದು!