ಅರ್ಥಮದ, ಅಹಂಕಾರಮದ, ಕುಲಮದ

Update: 2024-01-06 05:00 GMT

ಸಿದ್ದನಗೌಡ ಪಾಟೀಲ ಲೇಖಕರು, ಹೋರಾಟಗಾರರು, ಪ್ರಗತಿಪರ ಚಿಂತಕರು. ಹೊಸತು ನಿಯತಕಾಲಿಕೆ ಸಂಪಾದಕರು. ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ ಇದರಲ್ಲಿ ಕನ್ನಡ ಎಂ.ಎ. ಪದವಿ ಪಡೆದುಕೊಂಡು ಕನ್ನಡ ಕಾದಂಬರಿಗಳಲ್ಲಿ ವರ್ಗ ಸಂಘರ್ಷ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದವರು. ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕರಾಗಿದ್ದರು. 2002 ರಿಂದ 2012 ರವರೆಗೆ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2012 ರಿಂದ ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರು. ‘ನಾನು ಬಸ್ಯಾ ಅಂತ’, ‘ಸಾಕ್ಷಿಗಳು ಮಾರಾಟಕ್ಕಿವೆ’, ‘ಹೆಣದ ಬಟ್ಟೆ’, ‘ಬೀದಿ ನಾಟಕಗಳು’(25), ‘ನೆಲದುಳಿವು’ ಇವರ ಮುಖ್ಯ ಕೃತಿಗಳು.

ಹನ್ನೆರಡನೇ ಶತಮಾನದಲ್ಲಿ ಯುವ ವಚನಕಾರ ಚನ್ನಬಸವಣ್ಣನವರು ‘ಅರ್ಥಮದ ಅಹಂಕಾರ ಮದ, ಕುಲಮದ ಬಿಡದು’ ಎಂದು ಹೇಳಿದ್ದಾರೆ. ಆ ಕಾಲದಲ್ಲಿಯೂ ಸಹ ಈ ಮೂರು ಮದಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿದ್ದರಿಂದಲೇ ಅವರು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ. ಮಾನವ ಸಮಾಜದ ವಿಕಾಸದ ಹಂತದಲ್ಲಿ ಬುಡಕಟ್ಟು ಜೀವನ ವಿಧಾನ, ಆ ಜೀವನ ವಿಧಾನದಿಂದ ರೂಪುಗೊಂಡ ಸಂಸ್ಕೃತಿ ಸಾಮ್ರಾಜ್ಯಗಳ ಉಗಮದಿಂದ ನಾಶವಾಗಿದೆ. ಅಂದು ಬುಡಕಟ್ಟು ಪ್ರಜಾಸತ್ತೆಯನ್ನು ಉಳಿಸಿಕೊಳ್ಳಲೆಂದೇ ಬುದ್ಧ ನಿರಂತರ ಅಲೆದಾಡಿದ. ಪ್ರಭುತ್ವ ಸಾಮ್ರಾಜ್ಯವಾಹಿಗಳ ಕೈವಶವಾದಾಗ ಸಾಮ್ರಾಟರು ಅಹಂಕಾರಿಗಳಾಗುತ್ತಾರೆ. ಈ ಅಹಂಕಾರಿಗಳು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಕುಲವಾದಿ ಕುತಂತ್ರಗಳನ್ನು ಬಳಸುತ್ತಾರೆ. ಅದಕ್ಕೇ ಬಸವಣ್ಣನವರು ‘ಆನೀ ಬಿಜ್ಜಳಂಗಂಜುವೆನೇ ಅಯ್ಯಾ’ ಎಂದು, ‘ಹುಸಿಯು ಹಣ್ಣಾಯಿತು ಅರಸನಲ್ಲಿ’ ಎಂದು ಹೇಳುತ್ತಾರೆ. ಅಂದು ಸಾಮ್ರಾಜ್ಯಗಳು ಬೆಳೆದದ್ದು, ಯುದ್ಧಗಳು ನಡೆದದ್ದು ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ ಎಂಬುದು ವಾಸ್ತವ. ಆ ಕಾರಣಕ್ಕೆ ಸಂಪತ್ತಿನ ದಾಹ, ಅಧಿಕಾರದ ಅಹಂಕಾರ, ಕುಲವಾದೀ ನೀತಿ ಇವುಗಳನ್ನು ಪ್ರತ್ಯೇಕವಾಗಿ ನೋಡಲಾಗದು.

ಪ್ರಸ್ತುತ ಸಂದರ್ಭದಲ್ಲಿಯೂ ನಮ್ಮ ಸಮಾಜ ಈ ಮೂರು ಮದಗಳ ದಾಳಿಗೆ ಸಿಕ್ಕು ನರಳುತ್ತಿದೆ. ವಚನಗಾರ್ತಿ ಆಯ್ದಕ್ಕಿ ಲಕ್ಕಮ್ಮ ‘ಈಸಕ್ಕಿ ಆಸೆ ನಮಗೇಕಯ್ಯ’ ಎಂದು ಹೇಳುವ ಮಾತು ಸಂಪತ್ತಿನ ಕ್ರೋಡೀಕರಣಕ್ಕೆ ಪ್ರತಿಯಾಗಿ ಹೇಳಿದ ಪ್ರತಿಭಟನೆಯಾಗಿದೆ. ಈಗಿನ ಸಂದರ್ಭದಲ್ಲಿ ಭಾರತದ ಬಡವರ ಸಂಖ್ಯೆಯನ್ನು ಅಭಿವೃದ್ಧಿಯ ಮಾನದಂಡವಾಗಿ ನೋಡುತ್ತಿಲ್ಲ, ಬದಲಾಗಿ ಭಾರತದ ಶ್ರೀಮಂತರ ಪಟ್ಟಿಯನ್ನು ಅಭಿವೃದ್ಧಿಯ ಮಾನದಂಡವಾಗಿ ನೋಡಲಾಗುತ್ತಿದೆ. ಇದು ಅರ್ಥಮದದ ಮಾದರಿ. ಇಂದಿನ ಕಾರ್ಪೊರೇಟ್ ಕಂಪೆನಿಗಳು ನಾಗರಿಕರನ್ನು ಪ್ರಜೆಗಳನ್ನಾಗಿ ನೋಡುತ್ತಿಲ್ಲ ಅವರನ್ನು ಗ್ರಾಹಕರನ್ನಾಗಿ ನೋಡುತ್ತಿವೆ. ಪ್ರಜೆ ಗ್ರಾಹಕ, ಅಂದರೆ ಗಿರಾಕಿಯಾಗಿ ಬದಲಾದಾಗ ಕೊಳ್ಳುಬಾಕ ಸಂಸ್ಕೃತಿ ವ್ಯಾಪಕವಾಗಿ ಬೆಳೆಯುತ್ತದೆ. ಈ ಗ್ರಾಹಕ ಮನೋಭಾವ ಪ್ರಜೆಗಳ ಮಧ್ಯೆ ಪೈಪೋಟಿಯನ್ನು ಹುಟ್ಟು ಹಾಕುತ್ತದೆ. ಈ ಪೈಪೋಟಿಯಲ್ಲಿ ಹಣವಿದ್ದವನು ಸೌಲಭ್ಯವನ್ನು ಬಾಚಿಕೊಳ್ಳುತ್ತಾನೆ. ಹಣವಿಲ್ಲದವನು ಬೀದಿಗೆ ಬಿದ್ದು ತನ್ನ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಾನೆ. ಬೀದಿಗೆ ಬಿದ್ದವನು ಪ್ರಭುತ್ವದ ವಿರುದ್ಧ ಬಂಡೇಳುತ್ತಾನೆ. ಅಂಥ ಬಂಡಾಯವನ್ನು ದಮನ ಮಾಡಲು ಪೊಲೀಸು, ಸೈನ್ಯಕ್ಕಿಂತ ಪ್ರಬಲವಾದ ಅಸ್ತ್ರವೆಂದರೆ ಕುಲವಾದ, ಅಂದರೆ ಕೋಮುವಾದ. ಅಂತಹ ಕೋಮುವಾದವನ್ನು ಅಸ್ತ್ರವಾಗಿಸಲು ರಾಜಕೀಯ ಬಲ ಬೇಕು. ಆ ರಾಜಕೀಯ ಬಲ ಪ್ರಜಾಸತ್ತೆಯಿಂದ ಬರುವುದಿಲ್ಲ ಸರ್ವಾಧಿಕಾರಿಯಿಂದ ಮಾತ್ರ ಬರುತ್ತದೆ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ರೂಪುಗೊಂಡಿದ್ದು ಇಂಥ ಸಂದರ್ಭದಲ್ಲಿಯೇ. ಸರ್ವಾಧಿಕಾರಿ ಕಾರ್ಪೊರೇಟ್ಗಳ ಅಸ್ತ್ರವಾಗುತ್ತಾನೆ. ಕುಲವಾದ ಸರ್ವಾಧಿಕಾರಿಯ ಅಸ್ತ್ರವಾಗುತ್ತದೆ. ಸರ್ವಾಧಿಕಾರಿ ಅಹಂಕಾರಿಯಾಗುತ್ತಾನೆ. ಸರ್ವಾಧಿಕಾರಿಯ ಅಹಂಕಾರ ಕಾರ್ಪೊರೇಟ್ ಮಾಧ್ಯಮ ಗಳಿಂದ ಒಂದು ‘ಮೌಲ್ಯ’ವಾಗಿ ಬಿಂಬಿತವಾಗುತ್ತದೆ. ಸರ್ವಾಧಿಕಾರಿಯ ಕ್ರೌರ್ಯ ಶೌರ್ಯ ಎಂದು ಬಿಂಬಿಸಲ್ಪಡುತ್ತದೆ. ಕೋಮುವಾದಿ ಬಹುಸಂಖ್ಯಾತರ ಪ್ರತಿನಿಧಿಯೆಂದು ಬಿಂಬಿಸಿಕೊಂಡು ಅಲ್ಪ ಸಂಖ್ಯಾತರನ್ನು ಕೇಡುಗ ಜನಾಂಗವೆಂದು ವ್ಯಾಪಕ ಪ್ರಚಾರ ಮಾಡುತ್ತಾನೆ. ಸಂಪತ್ತಿನ ಲೂಟಿಕೋರರ ವಿರುದ್ಧ ಸಿಡಿದೇಳಬೇಕಾದ, ಬೀದಿಗೆ ಬಿದ್ದ ಪ್ರಜೆ ಸರ್ವಾಧಿಕಾರಿ ತೋರಿಸಿದ ಜನಾಂಗದ ವಿರುದ್ಧ ನಿಲ್ಲುತ್ತಾನೆ. ಆಗ ಸರ್ವಾಧಿಕಾರಿಯ ರಾಜಕೀಯ ಬಲ ನಿರಂತರ ಹೆಚ್ಚುತ್ತಾ ಹೋಗುತ್ತದೆ. ಇಂದು ಭಾರತದ ಸಂಸತ್ತಿನಲ್ಲಿ ಬಹುಮತದ ಅಹಂಕಾರ ಮದ ತಾಂಡವವಾಡಲು ಈ ಅರ್ಥಮದ, ಅಹಂಕಾರಮದ ಮತ್ತು ಕುಲಮದಗಳ ಒಳಹೆಣಿಕೆಯೇ ಪ್ರಧಾನ ಕಾರಣ.

ಕರ್ನಾಟಕದ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಮೂರು ಮದಗಳ ಒಳಹೆಣಿಕೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಐದು ದಶಕಗಳ ಹಿಂದೆ ಇಂದಿನ ಬಿಜೆಪಿಯು ಅಂದಿನ ಜನ ಸಂಘವಾಗಿತ್ತು. ಜನಸಂಘ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ವೇದಿಕೆ. ಅಂದು ಪ್ರಜಾಪ್ರತಿನಿಧಿ ವೇದಿಕೆಗಳಲ್ಲಿ ಜನಸಂಘದ ಪಾತ್ರ ನಗಣ್ಯ. ಕರ್ನಾಟಕದಲ್ಲಿ ಕೋಮು ಸಂಘರ್ಷದ ಕೆಲವೇ ಕೆಲವು ಪ್ರದೇಶಗಳಿದ್ದವು ಅವು ಯಾವ ಸ್ಥಳಗಳು ಎಂಬುದನ್ನು ಗಮನಿಸಬೇಕು.

ದಕ್ಷಿಣ ಕನ್ನಡ, ಹುಬ್ಬಳ್ಳಿ ಮತ್ತು ನಂತರದ ದಿನಗಳಲ್ಲಿ ಶಿವಮೊಗ್ಗ ಈ ನಗರಗಳನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗುತ್ತಿತ್ತು. ವಿಜಯಪುರ, ಕಲಬುರಗಿ, ರಾಯಚೂರು, ಬೀದರ್ ಇಂಥ ಪ್ರದೇಶಗಳಲ್ಲಿ ಮುಸ್ಲಿಮ್ ಜನಸಂಖ್ಯೆ ಅಪಾರ ಪ್ರಮಾಣದಲ್ಲಿದ್ದರೂ ಅಲ್ಲಿ ಹಿಂದೂ ಮುಸ್ಲಿಮ್ ಸಂಘರ್ಷ ಇರಲಿಲ್ಲ-ಈಗಲೂ ಇಲ್ಲ. ಕಾರಣ ಅಲ್ಲಿನ ಮುಸ್ಲಿಮರು ಬಹುತೇಕ ಬಡವರು. ಅವರು ತಮ್ಮ ಜೀವನೋಪಾಯಕ್ಕೆ ಬೀಡಿ ಕಟ್ಟುವ, ತರಕಾರಿ ಮಾರುವ, ಟಾಂಗಾ ಓಡಿಸುವ, ಸೈಕಲ್ ರಿಕ್ಷಾ ತುಳಿಯುವ, ಗ್ಯಾರೇಜ್ ನಡೆಸುವ ಇಂಥ ಕಾಯಕಗಳಲ್ಲಿ ತೊಡಗಿಕೊಂಡಿದ್ದರು. ಈಗಲೂ ಬಹುತೇಕ ಜಿಲ್ಲೆಗಳಲ್ಲಿ, ಅವರ ಸ್ಥಿತಿ ಅದೇ ಮಟ್ಟದಲ್ಲಿದೆ. ಆದರೆ ದಕ್ಷಿಣ ಕನ್ನಡ, ಉತ್ತರ ಕನ್ನಡದ ಭಟ್ಕಳ, ಹುಬ್ಬಳ್ಳಿ ನಗರ ಈ ಪ್ರದೇಶಗಳ ಮುಸ್ಲಿಮ್ ಯುವಕರು, ಕೆಲಸಗಾರರು ಮುಂಬೈ ಮತ್ತು ಅರಬ್ ದೇಶಗಳಿಗೆ ಹೋಗಿ ದುಡಿದು ಹಣ ಸಂಪಾದಿಸಿದರು. ಅವರು ಗಳಿಸಿದ ಹಣವನ್ನು ತಂದು ತಮ್ಮ ಊರುಗಳಲ್ಲಿ ವ್ಯಾಪಾರ, ಉದ್ದಿಮೆಗಳಲ್ಲಿ ತೊಡಗಿಸಿದರು. ಹಾಗೆ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಮುಸ್ಲಿಮರ ಸಂಖ್ಯೆ ಕಡಿಮೆ ಇದ್ದರೂ ಆ ಪ್ರದೇಶಗಳ ಸಾಂಪ್ರದಾಯಿಕ ವಾಣಿಜ್ಯ ವರ್ಗಕ್ಕೆ ಇದು ಸಹನೆಯಾಗಲಿಲ್ಲ. ಸಣ್ಣ ಪುಟ್ಟ ಕೆಲಸ, ದಿನಗೂಲಿ ಮಾಡಿಕೊಂಡಿದ್ದ ಒಂದು ಸಮುದಾಯ ದೊಡ್ಡ ಉದ್ದಿಮೆಗಳಿಗೆ ಕೈಹಾಕಿದ್ದು ಗುತ್ತೇದಾರಿ ವ್ಯಾಪಾರಿಗಳಿಗೆ ಲಾಭದ ಕೊರತೆಯಾಯಿತು. ಆಗ ಅವರಲ್ಲಿ ಕೆಲವರು ಮುಸ್ಲಿಮ್ ಜನಾಂಗವನ್ನು ವಿರೋಧಿಸುತ್ತಲೇ ಬೆಳೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ನಂತರ ಜನ ಸಂಘ, ಎಂಭತ್ತರ ದಶಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿದರು. ಇದು ಹಿಂದೂ ಮುಸ್ಲಿಮ್ ಸಂಘರ್ಷ ವ್ಯಾಪಕವಾಗಿ ಹರಡಲು ಕಾರಣವಾಯಿತು, ಇದು ಕರ್ನಾಟಕದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿತ್ತು. ಉದ್ಯಮ ಕ್ಷೇತ್ರದಲ್ಲಿ ನಡೆದ ಪೈಪೋಟಿ ಕೇವಲ ಆರ್ಥಿಕ ವಿದ್ಯಮಾನವಾಗಿ ಉಳಿಯದೆ ಸಾಮಾಜಿಕ ವಿದ್ಯಮಾನವಾಗಿ ಬದಲಾಯಿತು. ಕಳೆದ ಶತಮಾನದ ತೊಂಭತ್ತರ ದಶಕದಲ್ಲಿಯೇ ಮುಸ್ಲಿಮ್ ಅಂಗಡಿಗಳಲ್ಲಿ ವ್ಯಾಪಾರ ಮಾಡಬಾರದು, ಅವರ ಹೊಟೇಲ್ಗಳಿಗೆ ಹೋಗಬಾರದು, ಹಿಂದೂಗಳು ಹಿಂದೂಗಳ ಅಂಗಡಿಗಳಲ್ಲಿಯೇ ವ್ಯಾಪಾರ ಮಾಡಬೇಕು ಎಂಬ ಕರಪತ್ರಗಳು ಪ್ರಕಟವಾಗಿದ್ದವು. ಈಗ ಅಂಥ ಪ್ರಚಾರ ರಾಜ್ಯದ ಎಲ್ಲ ಕಡೆ ತೀವ್ರವಾಗಿದೆ. ಹಿಂದೂಗಳ ದೇವಸ್ಥಾನಗಳ ಜಾತ್ರೆ, ಹಬ್ಬಗಳಲ್ಲಿ ಮುಸ್ಲಿಮರು ಅಂಗಡಿಗಳನ್ನು ಹಾಕಬಾರದು ಎಂದು ಬಹಿರಂಗವಾಗಿಯೇ ಪ್ರಚಾರ ನಡೆದಿದೆ. ಧಾರವಾಡದ ಒಂದು ದೇವಸ್ಥಾನದಲ್ಲಿ ಕಲ್ಲಂಗಡಿ ಮಾರುವ ಮುಸ್ಲಿಮ್ ವ್ಯಾಪಾರಿಯ ಅಂಗಡಿಯನ್ನು ಧ್ವಂಸ ಮಾಡಲಾಯಿತು. ಇಂಥ ಘಟನೆಗಳು ಮೊದಲು ಕೆಲವೇ ನಗರಗಳಿಗೆ, ವ್ಯಾಪಾರಿ ಕೇಂದ್ರಗಳಿಗೆ ಸೀಮಿತವಾಗಿದ್ದರೆ ಇಂದು ರಾಜ್ಯದ ಬಹುತೇಕ ಕಡೆ ವಿಸ್ತರಿಸಿವೆ. ಇದು ಮೊದಲು ಆರಂಭವಾಗಿದ್ದು ರಾಜಕೀಯ, ಧಾರ್ಮಿಕ ಕಾರಣಗಳಿಗಿಂತಲೂ ಹೆಚ್ಚಾಗಿ ವಾಣಿಜ್ಯ ಕಾರಣಗಳಿಂದ ಎಂಬುದನ್ನು ಗಮನಿಸಬೇಕು.

ಉತ್ತರ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ಸಂದರ್ಭದಲ್ಲಿ ಹಿಂದೂ-ಮುಸ್ಲಿಮ್ ಸಂಘರ್ಷಗಳು ತೀವ್ರವಾಗಿಯೇ ನಡೆದಿದ್ದವು. ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಅಲ್ಲಿ ರಕ್ತ ಪಾತವಾಯಿತು, ಆದರೆ ದಕ್ಷಿಣ ಭಾರತದಲ್ಲಿ ಅಂತಹ ತೀವ್ರವಾದ ಸಂಘರ್ಷಗಳಿರಲಿಲ್ಲ. ಸ್ವಾತಂತ್ರ್ಯ ನಂತರ ಕರ್ನಾಟಕ ಒಂದು ಸೌಹಾರ್ದದ ನಾಡಾಗಿತ್ತು. ಎಂಭತ್ತರ ದಶಕದವರೆಗೆ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಹಲವಾರು ಭ್ರಷ್ಟಾಚಾರದ ಆರೋಪವನ್ನು ಹೊತ್ತಿತ್ತೇ ಹೊರತು ಕೋಮುವಾದಿ ಆಗಿರಲಿಲ್ಲ. ಬಹುತೇಕ ಮುಸ್ಲಿಮರು ಕಾಂಗ್ರೆಸ್ ಬೆಂಬಲಿಗರಾಗಿದ್ದರು. ಆ ಕಾರಣಕ್ಕೇ ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿತ್ತು. 1986ರಲ್ಲಿ ಶಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ಕೇಂದ್ರದ ಕಾಂಗ್ರೆಸ್ ಪಕ್ಷದ ಸರಕಾರ ರದ್ದುಗೊಳಿಸಿದಾಗ ಬಿಜೆಪಿ ಅದನ್ನು ವ್ಯಾಪಕ ಪ್ರಚಾರಕ್ಕೆ ಬಳಸಿಕೊಂಡಿತು. ಅದು ಕಾಂಗ್ರೆಸ್ ಪಕ್ಷ ಮಾಡಿದ ಪ್ರಮಾದವಾಗಿತ್ತು. ಜನಸಂಘ ಜನತಾ ಪಕ್ಷದಲ್ಲಿ ವಿಲೀನವಾಗಿ, ಕೇಂದ್ರ ಸರಕಾರದಲ್ಲಿ ಅಧಿಕಾರದ ಭಾಗವಾಗಿ ತನ್ನ ಪ್ರಭಾವವನ್ನು ವಿಸ್ತರಿಸಿ ಕೊಂಡಿತ್ತು. ನಂತರ ಜನತಾ ಪಕ್ಷದಿಂದ ಹೊರಬಂದು ಭಾರತೀಯ ಜನತಾ ಪಕ್ಷವಾಗಿ ತನ್ನ ಕೋಮುವಾದಿ ಕಾರ್ಯ ಸೂಚಿಯನ್ನು ಬಹಿರಂಗವಾಗಿಯೇ ಜಾರಿಮಾಡತೊಡಗಿತು. 1983ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಜನ ವಿರೋಧಿ ನೀತಿಗಳಿಂದ ಅಧಿಕಾರ ಕಳೆದುಕೊಂಡು ಜನತಾ ಪರಿವಾರ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ರಾಜಕೀಯ ಪಕ್ಷವಾಗಿ ಬೆಳೆಯಿತಾದರೂ ಒಳ ಜಗಳಗಳಿಂದ ಮತ್ತು ರಾಜ್ಯದ ರಾಜಕಾರಣದಲ್ಲಿ ಹಿಡಿತ ಸಾಧಿಸಿದ್ದ ಒಕ್ಕಲಿಗ-ಲಿಂಗಾಯತರ ಬಲಾಬಲದ ಸ್ಫರ್ಧೆಯಲ್ಲಿ ಜನತಾ ಪರಿವಾರ ಶಕ್ತಿಹೀನವಾಯಿತು. ಅದೇ ಸಂದರ್ಭದಲ್ಲಿ ಬಾಬರಿ ಮಸೀದಿ ಪತನವಾಗಿ ದೇಶದಾದ್ಯಂತ ಹಿಂದೂ-ಮುಸ್ಲಿಮ್ ಘರ್ಷಣೆಗಳು ನಡೆದವು. ಬಹುತೇಕ ಬಿಜೆಪಿ ಮತ್ತು ಸಂಘಪರಿವಾರದವರು ಈ ಘರ್ಷಣೆಯ ಪ್ರಾಯೋಜಕರಾಗಿ ತಾವು ಹಿಂದೂಗಳ ಏಕೈಕ ಪ್ರತಿನಿಧಿಗಳೆಂದು ಬಿಂಬಿಸಿಕೊಂಡರು. ಜನತಾ ಪರಿವಾರದ ವಿಘಟನೆಯ ಲಾಭವನ್ನು ಕರ್ನಾಟಕದಲ್ಲಿ ಬಿಜೆಪಿ ಪಡೆದು ರಾಜ್ಯದಲ್ಲಿ ಕೋಮುವಾದಿ ರಾಜಕಾರಣಕ್ಕೆ ಚಾಲನೆ ನೀಡಿತು. ಜನತಾಪರಿವಾರ ಒಡೆದು ಜನತಾದಳ ದೇವೇಗೌಡರ ನಿಯಂತ್ರಣಕ್ಕೆ ಹೋದಾಗ ರಾಜ್ಯದ ಲಿಂಗಾಯತ ಸಮುದಾಯ ರಾಜಕೀಯ ನಾಯಕತ್ವವಿಲ್ಲದೆ ಅಸಮಾಧಾನದಲ್ಲಿ ಮುಳುಗಿತ್ತು. ಆ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪನವರು ಲಿಂಗಾಯತರ ನಾಯಕನಾಗಿ ಹೊರಹೊಮ್ಮಿ ಜನತಾ ಪರಿವಾರದಲ್ಲಿದ್ದ ಬಹುತೇಕ ಲಿಂಗಾಯತ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡರು. ಇನ್ನೊಂದೆಡೆ ಬಾಬಾಬುಡಾನ್ ಗಿರಿಯಂಥ ಘಟನೆಗಳ ಮೂಲಕ ಸಂಘ ಪರಿವಾರ ಕೋಮುಧ್ರುವೀಕರಣದ ಕೆಲಸವನ್ನು ರಾಜ್ಯಾದ್ಯಂತ ನಡೆಸಿತು. ಪರಿಣಾಮವಾಗಿ ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಪರ್ಯಾಯವಾದ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಇಂದು ಕೋಮುವಾದವನ್ನೇ ತನ್ನ ರಾಜಕೀಯ ಕಾರ್ಯಸೂಚಿಯನ್ನಾಗಿ ಮಾಡಿಕೊಂಡ ಬಿಜೆಪಿ ಕೇವಲ ವ್ಯಾಪಾರಿ ಕೇಂದ್ರಗಳಲ್ಲಿದ್ದ ಸಂಘರ್ಷಗಳನ್ನು ರಾಜ್ಯದ ಸಾಮಾಜಿಕ, ರಾಜಕೀಯ ಕ್ಷೇತ್ರಗಳಿಗೆ ವಿಸ್ತರಿಸಿದೆ.

ಇಂದು ರಾಜ್ಯದಲ್ಲಿ ಕೋಮುವಾದ ಬೆಳೆಯಲು ಕಾಂಗ್ರೆಸ್ನ ಆಡಳಿತ ವೈಫಲ್ಯ ಒಂದು ಕಾರಣವಾದರೆ, ಕಾರ್ಪೋರೇಟ್ಗಳು, ಅವರ ಮಾಧ್ಯಮಗಳು ತಮ್ಮ ಹಿತಾಸಕ್ತಿಗಾಗಿ ಈ ವ್ಯಾಪಾರಿ ವರ್ಗದ ಪರವಾದ ಕೋಮುವಾದಿ ಬಿಜೆಪಿಯನ್ನು ಸಂಪೂರ್ಣ ಬೆಂಬಲಿಸಿದ್ದು, ಬೆಂಬಲಿಸುತ್ತಿರುವುದು ಇನ್ನೊಂದು ಕಾರಣ. ದೇಶದ ಮತ್ತು ರಾಜ್ಯದ ಜನಸಾಮಾನ್ಯರು ಕೋಮುವಾದಿಗಳಲ್ಲದಿದ್ದರೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು, ಕಾಶ್ಮೀರದಲ್ಲಿ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳು, ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಇಂಥ ಹಲವಾರು ಘಟನೆಗಳು ಮುಸ್ಲಿಮೇತರ ಜನರ ಮನಸ್ಸಲ್ಲಿ ಆತಂಕ ಮೂಡಿಸಿವೆ. ಪಾಕಿಸ್ತಾನದ ಭಯೋತ್ಪಾದಕರಿಗೂ ಭಾರತೀಯ ಮುಸ್ಲಿಮರಿಗೂ ಯಾವುದೇ ಸಂಬಂಧವಿರದಿದ್ದರೂ ಬಿಜೆಪಿ, ಸಂಘಪರಿವಾರ ಮತ್ತು ಬಹುತೇಕ ಮಾಧ್ಯಮಗಳು ಭಾರತದ ಮುಸ್ಲಿಮರನ್ನೂ ಭಯೋತ್ಪಾದಕರನ್ನೂ ಪಾಕಿಸ್ತಾನವನ್ನು ಒಂದೇ ಎಂಬಂತೆ ಬಿಂಬಿಸಿ ಹಿಂದೂ ಮುಸ್ಲಿಮರನ್ನು ವಿಘಟಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಇದು ಹೈದರಾಬಾದ್ ನಿಜಾಮನಿಗೂ ಹೈದರಾಬಾದನ್ನೇ ನೋಡಿರದ ಆ ಭಾಗದ ಸಾಮಾನ್ಯ ಮುಸ್ಲಿಮನಿಗೂ ಸಂಬಂಧ ಕಲ್ಪಿಸಿದಂತಿದೆ.

ಮಧ್ಯಪೂರ್ವದ ಇಸ್ಲಾಮ್ ಮೂಲಭೂತವಾದಿ ಸಂಘಟನೆಯಾದ ಐಎಸ್ಐಎಸ್ ಬೇರೆ, ಅಲ್ಲಿನ ಸಾಮಾನ್ಯ ಮುಸ್ಲಿಮರು ಬೇರೆ. ಅಫ್ಘಾನಿಸ್ತಾನದ ಅಮಾನವೀಯ ತಾಲಿಬಾನ್ ಆಡಳಿತಗಾರರು ಬೇರೆ, ಅಲ್ಲಿನ ಜನ ಸಾಮಾನ್ಯರು ಬೇರೆ, ಪಾಕಿಸ್ತಾನದ ಆಡಳಿತಗಾರರು ಬೇರೆ, ಅಲ್ಲಿನ ಬಡಜನತೆಬೇರೆ, ಭಾರತದಲ್ಲಿನ ಮತಾಂಧರು ಬೇರೆ, ಮತೀಯರು ಬೇರೆ, ಎಂಬ ತಿಳುವಳಿಕೆ ಇಂದು ವ್ಯಾಪಕವಾಗಿ ಬೆಳೆಯಬೇಕಿದೆ. ಅಂಥ ಒಂದು ಸಾಮಾನ್ಯ ತಿಳುವಳಿಕೆ ಕರ್ನಾಟಕದ ಜನಸಾಮಾನ್ಯರಿಗಿದೆ. ಆ ಕಾರಣಕ್ಕಾಗಿಯೇ ಈ ರಾಜ್ಯದಲ್ಲಿ ಎಷ್ಟೇ ಕೋಮುಪ್ರಚೋದನೆಗಳನ್ನು ಮಾಡಿದರೂ ಕೋಮುವಾದಿ ಪಕ್ಷ ನಮ್ಮ ರಾಜ್ಯದಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬರಲಾಗಿಲ್ಲ, ಇಂದು ಕಾಂಗ್ರೆಸ್ ಅಧಿಕಾರದಲ್ಲಿದೆ, ಭ್ರಷ್ಟಾಚಾರವಿಲ್ಲದ ಪಾರದರ್ಶಕ, ಪ್ರಾಮಾಣಿಕ ಆಡಳಿತ ನೀಡಿದರೆ ಕರ್ನಾಟಕದಲ್ಲಿ ಕೋಮುವಾದಕ್ಕೆ ತಡೆಯಾಗಬಹುದು. ಆದರೆ ಅಲ್ಲಿಯೂ ಭ್ರಷ್ಟರು, ಮೃದು ಹಿಂದುತ್ವವಾದಿಗಳು ಇರುವುದರಿಂದ ಕರ್ನಾಟಕಕ್ಕೆ ಜಾತ್ಯತೀತವಾದ, ಪ್ರಜಾಸತ್ತಾತ್ಮಕವಾದ ಒಂದು ಪರ್ಯಾಯ ರಾಜಕಾರಣದ ಅವಶ್ಯಕತೆ ಇದೆ.

ಚನ್ನಬಸವಣ್ಣ ಹೇಳಿದಂತೆ (ಕಾರ್ಪೊರೇಟ್ಗಳ) ಅರ್ಥಮದ, (ಬಹುಮತದ) ಅಹಂಕಾರಮದ, (ಜನಾಂಗೀಯ ದ್ವೇಷದ) ಕುಲಮದ ಇವೆಲ್ಲವೂ ಒಂದಕ್ಕೊಂದು ಪೂರಕವಾದ, ಒಂದು ಇನ್ನೊಂದನ್ನು ರಕ್ಷಿಸುವ, ಒಂದು ಇನ್ನೊಂದನ್ನು ಬೆಳೆಸುವ ಒಂದೇ ಬೇರಿನ ಹಲವು ವಿಷ ವೃಕ್ಷಗಳಾಗಿವೆ. ಸಂಪತ್ತಿನ ವಿಕೇಂದ್ರೀಕರಣಕ್ಕಾಗಿ, ನೈಜ ಪ್ರಜಾಸತ್ತೆಗಾಗಿ, ಸೌಹಾರ್ದ ಸಮಾಜಕ್ಕಾಗಿ ಏಕಕಾಲಕ್ಕೆ ಹೋರಾಡುವುದು ಭಾರತದ, ಕರ್ನಾಟಕದ ಜನತೆಯ ಮುಂದಿರುವ ದೊಡ್ಡ ಜವಾಬ್ದಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಸಿದ್ದನಗೌಡ ಪಾಟೀಲ

contributor

Similar News

ಭಾವ - ವಿಕಲ್ಪ
ಕಥೆಗಾರ