ಬಸವಣ್ಣನವರ ವಚನಗಳಲ್ಲಿ ಸಂಸ್ಕೃತದ ಬಳಕೆ ಮತ್ತು ನುಡಿಯ ತತ್ವ

Update: 2024-01-06 05:10 GMT

ಕಳೆದ ಇಪ್ಪತ್ಮೂರು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ, ರಂಗಭೂಮಿ ಮತ್ತು ಜನಪದ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ 30ಕ್ಕೂ ಅಧಿಕ ಸಂಶೋಧನಾ ಬರಹಗಳು ಪ್ರಕಟಣೆಗೊಂಡಿವೆ. ಕನ್ನಡ ಪರ ಮತ್ತು ಸಮಾಜಮುಖಿ ಚಿಂತನೆಗಳಿಗೆ ‘ಕನ್ನಡ ಸೇವಾ ರತ್ನ’, ‘ಸಬಲ ಮಹಿಳೆ’, ‘ಸಂಜೀವಿನಿ ಪ್ರಶಸ್ತಿ’, ‘ವಿದ್ಯಾ ಭೂಷಣ ರಾಜ್ಯ ಪ್ರಶಸ್ತಿ’ ಹಾಗೂ ನಾಟಕ ನಿರ್ದೇಶನಕ್ಕೆ ರಾಜ್ಯ ಮಟ್ಟದ ಉತ್ತಮ ನಿರ್ದೇಶಕಿ ಪ್ರಶಸ್ತಿ ಲಭ್ಯವಾಗಿದೆ. ಇವರ ಸಂಶೋಧನಾ ಮಹಾಪ್ರಬಂಧ ಬಸವಣ್ಣ ಮತ್ತು ಕುವೆಂಪು ಅವರ ಸಾಹಿತ್ಯದ ತಾತ್ವಿಕತೆ ಕುರಿತಾಗಿದೆ.

ಪ್ರಸ್ತುತ ಬೆಂಗಳೂರಿನ ಆರ್.ಸಿ.ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಡೊಂದರ ನಿರ್ಮಾಣದ ಹಿಂದೆ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸಂಗತಿಗಳಲ್ಲಿ ಭಾಷೆಯೂ ಒಂದು. ಭಾಷೆ ಸಂವಹನಕ್ಕೆ ಮಾತ್ರ ಎಂದು ವಿವರಿಸುವವರ ನಡುವೆ, ಅದು ಸಾಮಾಜಿಕ, ರಾಜಕೀಯ ಆಯಾಮಗಳುಳ್ಳದ್ದು ಎಂದು ದಾರ್ಶನಿಕ ಚಿಂತಕರು, ಚಳವಳಿಗಾರರು ಭಾವಿಸುತ್ತಾರೆ. ಭಾಷೆ ಪ್ರಮುಖವಾಗಿ ಸಂವಹನದ ಉದ್ದೇಶವನ್ನು ಹೊಂದಿರುತ್ತದೆ ಎಂದು ಭಾವಿಸಬಹುದಾದರೂ, ಆ ಭಾಷೆಯನ್ನು ಮಾತನಾಡುವ ಭಾಷಿಕನ ನೆನಪುಗಳಲ್ಲಿ ಅಗಾಧವಾದ ಜ್ಞಾನ ಸಂಪತ್ತು ಇರುತ್ತದೆ. ಭಾಷಿಕನೊಳಗೆ ದಾಖಲಾಗುವ ಜ್ಞಾನ ಸಂಪತ್ತು ಭಾಷೆಯೊಳಗಿನ ಆಸ್ತಿಯೂ ಆಗಿರುತ್ತದೆ. ಇದರ ಜೊತೆಗೆ ಒಂದು ಭಾಷಿಕ ಸಮುದಾಯವು ತನ್ನದೆ ಆದ ಅಭಿವ್ಯಕ್ತಿ ವಿಧಾನಗಳನ್ನು ರೂಢಿಸಿಕೊಂಡಿರುತ್ತದೆ.

ಭಾಷೆಯೊಂದಕ್ಕೆ ಮೇಲ್ನೋಟಕ್ಕೆ ಕಾಣುವ ಹಾಗೆ ಪ್ರಧಾನವಾಗಿ ಎರಡು ಸ್ವಭಾವಗಳಿರುತ್ತವೆ ಎಂದು ಚಿಂತಕ ಗೂಗಿ ವಾ ಥಿಯಾಂಗೊ ಹೇಳುತ್ತಾನೆ. ಆತ ಭಾಷೆಯನ್ನು ಸಂವಹನ ರೂಪಿ ಮತ್ತು ಸಂಸ್ಕೃತಿ ರೂಪಿ ಎಂದು ಅನುಕೂಲಕ್ಕಾಗಿ ವಿಭಜಿಸಿಕೊಂಡರೂ ಅಂತಿಮವಾಗಿ ಅವೆರಡೂ ಒಂದೇ ಮಾದರಿಗಳು ಎನ್ನುತ್ತಾನೆ. ಭಾಷೆಯ ಕಾರ್ಯಸ್ವರೂಪವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಈ ವಿಧಾನ ಹೆಚ್ಚು ಉಪಯುಕ್ತವಾಗಿದೆ. ಭಾಷೆಗೂ ನಿಜ ಜೀವನಕ್ಕೂ ಸಂಬಂಧವಿರುತ್ತದೆ. ಗೂಗಿ ತನ್ನ ‘‘ವಸಾಹತು ಪ್ರಜ್ಞೆ ಮತ್ತು ವಿಮೋಚನೆ’’ (ಅನುವಾದ: ಡಾ. ರಹಮತ್ ತರೀಕೆರೆ)ಯಲ್ಲಿ ನಿಜ ಜೀವನದ ಭಾಷೆಯೆಂದರೆ ಊಟ, ಬಟ್ಟೆ, ಮನೆಯಂಥ ನಿತ್ಯ ಬದುಕಿಗೆ ಬೇಕಾದ ಸಂಪತ್ತನ್ನು ಸೃಷ್ಟಿಸುವ ಮಾನವ ಸಮುದಾಯವು, ತನ್ನ ದುಡಿಮೆಯ ಪ್ರಕ್ರಿಯೆಯಲ್ಲಿ ತನ್ನೊಳಗೆ ಬೆಳೆಸಿಕೊಳ್ಳುವ ಅಗತ್ಯ ಸಂಬಂಧಗಳು...................ಅದು ಮಾನವ ಮಾನವರ ನಡುವಿನ ಸಂಬಂಧ ಗಳ ಅಭಿವ್ಯಕ್ತಿ - ಮಾನವ ಮಾತ್ರರಿಗೇ ವಿಶಿಷ್ಟ ಅಭಿವ್ಯಕ್ತಿ ಆಗಿದೆ ಎನ್ನುತ್ತಾನೆ.

ಗೂಗಿ ಹೇಳಿದಂತೆ ಸಮುದಾಯವೊಂದು ತನ್ನ ಭಾಷೆಯನ್ನು ಕಳೆದು ಕೊಳ್ಳುತ್ತಿದೆಯೆಂದರೆ ಅದು ತನ್ನ ಆರ್ಥಿಕತೆಯನ್ನೂ ಕಳೆದುಕೊಳ್ಳುತ್ತಿದೆಯೆಂದು ಅರ್ಥ. ಏಕೆಂದರೆ ಸಮುದಾಯದ ವಿಶಿಷ್ಟ ಕೌಶಲ್ಯವಾದ ವಸ್ತುಗಳ ಉತ್ಪಾದನೆ ಮತ್ತು ಹಂಚಿಕೆಯ ಗುಟ್ಟುಗಳನ್ನು ಯಜಮಾನ ಭಾಷೆಯೊಂದು ವಶಪಡಿಸಿಕೊಳ್ಳುತ್ತಿದೆಯೆಂದು ಅರ್ಥ. ಹೀಗೆ ಭಾಷೆಯನ್ನು ಬಿಟ್ಟುಕೊಟ್ಟು ತಬ್ಬಲಿಗಳಾಗುವ ಸಮುದಾಯಗಳ ಸಂಖ್ಯೆ ದಿನ ದಿನಕ್ಕೂ ಏರಿಕೆಯಾಗುತ್ತಿದೆ. ಇಂತ ವಿಷಮ ಸಂದರ್ಭದಲ್ಲಿ ನಾಡಿನಲ್ಲಿ ಜನಪರವಾದ ಸಮಾಜ ಮತ್ತು ಸಂಸ್ಕೃತಿಗಳನ್ನು ನಿರ್ಮಿಸಲು ಪ್ರಯತ್ನಿಸಿದ ದಾರ್ಶನಿಕರು ಈ ಸಮಸ್ಯೆಯನ್ನು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಈಗ ಹೆಚ್ಚಾಗಿದೆ.

ಭಾಷೆಯೊಂದು ಅತ್ಯಂತ ಪ್ರಮುಖ ಪಾತ್ರವಹಿಸುವುದು ಇಲ್ಲಿಯೆ. ವಿವಿಧ ರೂಪಗಳಲ್ಲಿ ಕಲಿತ ಅನುಭವಗಳನ್ನು ಮತ್ತು ಸೃಷ್ಟಿಸಿದ ಕಥನ ಗಳನ್ನು ದಾಖಲಿಸಿಕೊಂಡು ಮುಂದಿನ ತಲೆಮಾರುಗಳಿಗೆ ಅದನ್ನು ವರ್ಗಾಯಿ ಸುತ್ತದೆ. ರಾಷ್ಟ್ರಗಳ ನಿರ್ಮಾಣದಲ್ಲಿ ಭಾಷೆಯ ಪಾತ್ರ ದೊಡ್ಡದು. ರಾಷ್ಟ್ರ ನಿರ್ಮಾಣವೆಂದರೆ ನೆನಪುಗಳ ನಿರ್ಮಾಣ ಎಂದು ಕನ್ನಡದ ಖ್ಯಾತ ಚಿಂತಕ ಡಿ. ಆರ್ ನಾಗರಾಜ್ ಅವರು ತಮ್ಮ ರಾಷ್ಟ್ರೀಯತೆಯ ಮೇಲಿನ ಬರಹದಲ್ಲಿ ಚರ್ಚಿಸುತ್ತಾರೆ. ನೆನಪುಗಳನ್ನು ದಾಖಲಿಸುವುದು, ಹೊಸ ನೆನಪುಗಳನ್ನು ಸೃಷ್ಟಿಸುವುದು ಭಾಷೆಯೊಂದರ ಪ್ರಮುಖ ಉದ್ದೇಶ. ಭಾಷೆ ಸತ್ವಯುತವಾಗಿದ್ದಷ್ಟೂ ಈ ನೆನಪುಗಳ ಸೃಜನೆಯ ಕೆಲಸ ವೇಗವಾಗಿ ನಡೆಯುತ್ತಿರುತ್ತದೆ.

ಈ ವಿಚಾರದಲ್ಲಿ ವೈದಿಕ ಸಂಸ್ಕೃತಿಯ ಯಜಮಾನಿಕೆಗಳ ವಿರುದ್ಧ ಚಳವಳಿ ರೂಪಿಸಿದ ಬಸವಣ್ಣ ಸಂಸ್ಕೃತ ಭಾಷೆಯನ್ನು ಹೇಗೆ ಗ್ರಹಿಸಿದ್ದರು? ಸಂಸ್ಕೃತ ಭಾಷೆಯಲ್ಲಿ ಎಷ್ಟು ಆಳವಾದ ತಿಳಿವಳಿಕೆಯಿತ್ತು? ತಮ್ಮ ಅಭಿವ್ಯಕ್ತಿಗಳಲ್ಲಿ ಸಂಸ್ಕೃತವನ್ನು ಹೇಗೆ ಬಳಸಿದರು? ಯಾವ ಪ್ರಮಾಣದಲ್ಲಿ ಬಳಸಿದರು ಮತ್ತು ಅದನ್ನು ಯಾವಾಗ ಪ್ರಯೋಗಿಸಿದರು? ಸಂಸ್ಕೃತದ ಜೊತೆ ಯಾವ ರೀತಿ ಅನುಸಂಧಾನ ಮಾಡಿದರು? ಎಷ್ಟನ್ನು ತಿರಸ್ಕರಿಸಿದರು, ಯಾವ ಪ್ರಮಾಣದಲ್ಲಿ ಒಪ್ಪಿಕೊಂಡರು ಎಂಬುದರ ಕುರಿತು ಅಧ್ಯಯನ ಮಾಡುವುದು ಅಗತ್ಯವೆನ್ನಿಸುತ್ತದೆ. ಏಕೆಂದರೆ ಬಸವಣ್ಣ ವೈದಿಕ ಯಜಮಾನಿಕೆ, ತಾರತಮ್ಯವಾದ ಮುಂತಾದವುಗಳ ವಿರುದ್ಧ ಪರ್ಯಾಯವಾಗಿ ಸಮ ಸಮಾಜದ ಕನಸುಗಳನ್ನು ತೀವ್ರವಾಗಿ ಪ್ರತಿಪಾದಿಸಿದ್ದರು. ಬಸವಣ್ಣ ವೈದಿಕ ಸಂಸ್ಕೃತಿಯ ಎದುರು ಕನ್ನಡ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸಿದ್ದರು. ಸಂಸ್ಕೃತದ ಎದುರು ನಿಜ ಜೀವನದಲ್ಲಿ ಜನರಾಡುವ ಕನ್ನಡ ಭಾಷೆಯಲ್ಲಿ ತಮ್ಮ ಸಿದ್ಧಾಂತಗಳನ್ನು ಮಂಡಿಸಿದ್ದರು.

‘ನುಡಿದಡೆ ಮುತ್ತಿನ ಹಾರದಂತಿರಬೇಕು’, ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದು ಹೇಳುವ ಬಸವಣ್ಣನವರು ತಮ್ಮ ವಚನಗಳಲ್ಲಿ ಸಂಸ್ಕೃತದ ಅದರಲ್ಲೂ ವೇದ, ಉಪನಿಷತ್ತುಗಳ ಮಂತ್ರಗಳ ಪದಗಳು, ವಾಕ್ಯಗಳನ್ನು ಬಳಸುತ್ತಾರೆ. ಸ್ಥಾಪಿತ ವೈದಿಕ ಹಿತಾಸಕ್ತಿಗಳು, ವೇದ, ಶಾಸ್ತ್ರ, ತರ್ಕ, ಆಗಮಗಳನ್ನು ಶೋಷಣೆಯ ಸಾಧನ ಮಾಡಿಕೊಂಡಿದ್ದಾಗ ಬಸವಣ್ಣನವರು ಅವುಗಳನ್ನು ಹುಡಿ ಹುಡಿ ಮಾಡುತ್ತಾರೆ.

‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,

ತರ್ಕದ ಬೆನ್ನ ಬಾರನ್ನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ.

ಮಹಾದಾನಿ ಕೂಡಲ ಸಂಗಮದೇವಾ,

ಮಾದಾರ ಚೆನ್ನಯ್ಯನ ಮಗ ನಾನಯ್ಯಾ’ ಎನ್ನುತ್ತಾರೆ.

ವೇದ, ಪುರಾಣಗಳು, ಶಾಸ್ತ್ರಾದಿ ಆಗಮಗಳು ಸಮಾಜದಲ್ಲಿ ಶೋಷಣೆ, ತಾರತಮ್ಯಗಳ ಸಾಧನ ಮಾಡಿಕೊಂಡಿದ್ದಾಗ ಬಸವಣ್ಣನವರು ಈ ವಚನವನ್ನು ನುಡಿದಿದ್ದಾರೆ. ಶಾಸ್ತ್ರವು ಕರ್ಮವನ್ನು, ವೇದವು ಪ್ರಾಣಿವಧೆಯನ್ನು ನುಡಿಯುತ್ತಿವೆ ಹಾಗಾಗಿ ಅವುಗಳು ಘನವಲ್ಲ ಎನ್ನುತ್ತಾರೆ ಬಸವಣ್ಣನವರು. ಮತ್ತೊಂದು ವಚನದಲ್ಲಿ ಶಾಸ್ತ್ರವಾಗಲೆ ಕಾಲಕ್ಕೆ ಸೇರಿದೆ, ವೇದ ಹೊಸ ಕಾಲಕ್ಕೆ ಸಲ್ಲದೆ ನಡುಗುತ್ತಿದೆ, ತರ್ಕ ಮೂಕವಾಗಿದೆ ಎನ್ನುತ್ತಾರೆ. ವೈದಿಕರು ಯಾವ ಗ್ರಂಥಗಳನ್ನು ಅಪೌರುಷೇಯ, ಅಮೃತತ್ವ ಪ್ರಣೀತ ಎನ್ನುತ್ತಿದ್ದರೊ ಅವುಗಳೆಲ್ಲವೂ ಹೊಸ ಕಾಲದ ಸವಾಲುಗಳನ್ನು ಎದುರಿಸದೆ ಸೋಲುತ್ತಿವೆ ಎಂದು ಹೇಳಿ ಅವುಗಳ ತತ್ವಗಳಿಗೂ ಮುಪ್ಪು ಸಾವುಗಳಿವೆ ಎಂದು ಸಾಮಾನ್ಯೀಕರಿಸುತ್ತಾರೆ.

ವಿದ್ವಾಂಸರು ಸಾಮಾನ್ಯವಾಗಿ ಹೇಳುವ ಮಾತು; ಬಸವಣ್ಣನವರು ವೇದ ಪುರಾಣಗಳನ್ನು ತಿರಸ್ಕರಿಸಿದರು ಎಂದು. ಆದರೆ ಬಸವಣ್ಣನವರ ಮಾತುಗಳನ್ನು ನೋಡಿದರೆ ಅವರು ವೇದ, ಆಗಮ, ಶಾಸ್ತ್ರಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದಿಲ್ಲ, ನಿರಾಕರಿಸುವುದಿಲ್ಲ. ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ಆಗಮದ ಮೂಗನ್ನು ಕೊಯ್ವೆ, ತರ್ಕದ ಬೆನ್ನ ಬಾರನ್ನೆತ್ತುವೆ ಎನ್ನುವಾಗ ‘ಬಾ ನಿನ್ನ ಚರ್ಮ ಸುಲಿಯುತ್ತೇನೆ, ನಿನ್ನ ಅಹಂಕಾರ ಮುರಿಯುತ್ತೇನೆ’ ಎಂಬ ಧಾಟಿ ಕಾಣಿಸುತ್ತದೆ. ಅಂದರೆ ವೇದ, ಶಾಸ್ತ್ರ, ಆಗಮಗಳನ್ನು ನೆಪವಾಗಿಟ್ಟುಕೊಂಡು ಕೊಬ್ಬಿ ಕೂತಿದ್ದ ಪುರೋಹಿತಶಾಹಿಯ ಕಟು ಟೀಕೆಯಾಗಿ ಈ ಮಾತುಗಳನ್ನು ಬಸವಣ್ಣನವರು ಆಡಿದಂತಿದೆ. ಹಾಗಾಗಿ ಬಸವಣ್ಣನವರು ಸಂಸ್ಕೃತದ ವಿರೋಧಿಯಾಗಲಿ, ಸಂಸ್ಕೃತ ಗ್ರಂಥಗಳ ವಿರೋಧಿಯಾಗಲಿ ಆಗಿರಲಿಲ್ಲವೆಂದು ಕಾಣುತ್ತದೆ. ಹಾಗಾಗಿ ಅನೇಕ ವಚನಗಳಲ್ಲಿ ಅವರು ಸಂಸ್ಕೃತದ ಶ್ಲೋಕ, ಮಂತ್ರಗಳನ್ನು ವಚನಗಳಿಗೆ ಪೂರಕವಾಗಿ ಬಳಸಿದ್ದಾರೆ.

ಬಸವಣ್ಣನವರ ಸಂಸ್ಕೃತದ ಪ್ರಮಾಣ ಗ್ರಂಥಗಳ ತೀವ್ರ ವಿಮರ್ಶೆಯ ಹಿಂದೆ ಇರುವ ಧಾಟಿಯೆಂದರೆ, ತನಗೂ ನಿಮಗಿಂತ ಹೆಚ್ಚೇ ಶಾಸ್ತ್ರ, ಆಗಮ, ವೇದ, ಪುರಾಣ ಗ್ರಂಥಗಳ ಅರಿವು ಇದೆ, ಅವುಗಳ ಸಂಪೂರ್ಣ ತಿಳಿವಳಿಕೆ ಇದೆ ಎಂಬ ಆತ್ಮ ವಿಶ್ವಾಸದಲ್ಲಿ ವೈದಿಕ ಪುರೋಹಿತ ಶಾಹಿಗಳ ಅಖಾಡಕ್ಕೆ ಹೋಗಿ ಅವರನ್ನು ಮುಖಾಮುಖಿಗೊಳ್ಳುತ್ತಾರೆ. ವೈದಿಕ ಪುರೋಹಿತಶಾಹಿಗಳು ಸಂಸ್ಕೃತದ ಈ ಗ್ರಂಥಗಳನ್ನು ಆಧರಿಸಿ ಸಮಾಜವನ್ನು ವಿಭಜಿಸಿ ಶೋಷಣೆಗಾಗಿ ಬಳಸುತ್ತಿರುವ ಮೋಸವನ್ನು ಬಯಲುಗೊಳಿಸುತ್ತಾರೆ.

ಬಸವಣ್ಣನವರ ನಿಲುವಿಗೆ ಆಚೆ ಹೋಗುವ ಅಲ್ಲಮಪ್ರಭುಗಳು, ‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ, ಭಕ್ತಿಯೆಂಬುದು ತೋರುಂಬ ಲಾಭ’ ಎಂದು ಬಿಡುತ್ತಾರೆ. ಅಲ್ಲಮಪ್ರಭುಗಳು ಪುರೋಹಿತಶಾಹಿಯ ಎಲ್ಲ ಚೌಕಟ್ಟುಗಳನ್ನು ಅಪಮೌಲ್ಯೀಕರಿಸಿಬಿಡುತ್ತಾರೆ.

ಈ ವಿಚಾರದಲ್ಲಿ ಬಸವಣ್ಣನವರು ಅಲ್ಲಮಪ್ರಭುಗಳಷ್ಟು ಉಗ್ರ ನಿಲುವಿಗೆ ಹೋಗುವುದಿಲ್ಲ. ಸಂಸ್ಕೃತದ ಈ ಗ್ರಂಥಗಳ ಒಳಹೊಕ್ಕು ವಿಶ್ಲೇಷಣೆ ಮಾಡುತ್ತಾರೆ.

ಬಸವಣ್ಣನವರು ಬದುಕಿದ್ದ ಕಾಲದಲ್ಲಿ ಭಾಷೆಯೆಂಬುದು ಸಮಾಜದಲ್ಲಿ ಶೋಷಕನ ಪಾತ್ರವನ್ನು ಪಡೆದಿರಲಿಲ್ಲ. ರಾಜಪ್ರಭುತ್ವಗಳು ನಿರಂತರ ಬದಲಾಗುತ್ತಿದ್ದವು. ಗಡಿಗಳು ಸಹ ನಿರಂತರವಾಗಿ ಬದಲಾಗುತ್ತಿದ್ದವು. ರಾಜನ ಆಡಳಿತ ಮಾಧ್ಯಮವು ಬಹುತೇಕ ಸಾರಿ ಜನರ ಭಾಷೆಯೇ ಆಗಿರುತ್ತಿತ್ತು. ಜನರಿಗೆ ತಿಳಿದ ಭಾಷೆಯಲ್ಲಿ ಆಡಳಿತ ನಡೆಸಬೇಕೆನ್ನುವ ಅನಿವಾರ್ಯತೆಗಳೂ ಪ್ರಭುತ್ವಗಳಿಗೆ ಇರುತ್ತಿದ್ದ ಹಾಗೆ ಕಾಣುತ್ತದೆ. ಅಥವಾ ರಾಜನ ಭಾಷೆಯನ್ನು ಕಲಿತು ಜನರೊಂದಿಗೆ ವ್ಯವಹರಿಸುತ್ತಿದ್ದ ಮೇಲ್ಜಾತಿಗಳೂ ಇದ್ದವು. ಬಹುತೇಕ ಸಾರಿ ಸಂಸ್ಕೃತವು ಆಸ್ಥಾನದ ವಿದ್ವಾಂಸರಿಗೆ ತಿಳಿದ ಭಾಷೆಯೂ ಆಗಿರುತ್ತಿತ್ತು. ಜೈನ ಅರಸರ ಆಳ್ವಿಕೆಗಳ ನಂತರ ಕನ್ನಡದಲ್ಲಿ ಕೃತಿರಚನೆಗಳು ಪ್ರಾರಂಭವಾದವು.

ಈ ಹಿನ್ನೆಲೆಯಿಂದ ನೋಡಿದರೆ ಶರಣರು ಯಾವುದೇ ಒಂದು ಭಾಷೆಗೆ ವಿರುದ್ಧವಾಗಿಯೇನೂ ಇರಲಿಲ್ಲ. ಯಾಕೆಂದರೆ ಯಾವ ಭಾಷೆಯೂ ಜನಭಾಷೆಯನ್ನು ವಿರೋಧಿಸುವ ಕೆಲಸ ಮಾಡುತ್ತಿರಲಿಲ್ಲ. ಸಂಸ್ಕೃತವಂತೂ ಗ್ರಂಥಸ್ಥ ಭಾಷೆಯಾಗಿ ಹೋಗಿತ್ತು. ಅದು ಜನಭಾಷೆಯಾಗಿ ಉಳಿಯಲಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ಶರಣರ ಭಾಷಿಕ ನಿಲುವು ಸ್ಪಷ್ಟವಾಗುತ್ತದೆ.

ಹಾಗಾಗಿ ಬಸವಣ್ಣನವರು ನುಡಿದರೆ, ಮಾತನಾಡಿದರೆ ಹೇಗಿರಬೇಕು ಎಂದು ಹೇಳುತ್ತಾರೆಯೇ ಹೊರತು, ಯಾವ ಭಾಷೆಯನ್ನು ನುಡಿದರೆ, ಮಾತನಾಡಿದರೆ ಹೇಗಿರುತ್ತದೆ ಎಂದು ಹೇಳಲಿಲ್ಲ. ಹಾಗಾಗಿ ಸಂಸ್ಕೃತ ಗ್ರಂಥಗಳಲ್ಲಿನ ಉತ್ತಮ ಮಾತುಗಳನ್ನು ತೆಗೆದು ವಚನಗಳಲ್ಲಿ ಬಳಸಿಕೊಳ್ಳಲು ಅವರಿಗೆ ಯಾವ ಮುಜುಗರವೂ ಅನ್ನಿಸಲಿಲ್ಲ.

 

ಋಗ್ವೇದದಂತಹ ಗ್ರಂಥಗಳಲ್ಲಿ, ಶಿವಪುರಾಣದಂತಹ ಕೃತಿಗಳಲ್ಲಿನ ಶಿವ ಮತ್ತು ರುದ್ರನ ಪ್ರಾಮುಖ್ಯತೆಯನ್ನು ಸಾರುವ ಸಂಸ್ಕೃತ ಮಾತುಗಳನ್ನು ಬಸವಣ್ಣನವರು ಯಥೇಚ್ಛವಾಗಿ ಬಳಸುತ್ತಾರೆ. ‘‘ಪ್ರಣವ ಓಂ ನಮಃ ಶಿವಾಯ ಎಂದವು ಶೃತಿಗಳೆಲ್ಲಾ. ಪ್ರಣವ ಓಂ ಭರ್ಗೋ ದೇವ’ ಎಂದವು ಶೃತಿಗಳೆಲ್ಲ’’ ಎನ್ನುತ್ತಾರೆ. ಮುಂದುವರಿದು

‘‘ನೀವು ಹಿರಿಯರೆಂಬಿರಿ, ಕರ್ಮಿಗಳು, ನೀವು ಕೇಳಿರಿ,

ನಿಮ್ಮ ವೇದ ಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು?

ಓಂ ದ್ಯಾವಾ ಭೂಮೀ ಜನಯನ್ ದೇವ ಏಕಃ’

ಎಂದು ಶ್ರುತಿ ಸ್ಮತಿಗಳು ಸಾರುತ್ತಿದ್ದಾವು.

ವರ್ಣಾನಾಂ ಬ್ರಾಹ್ಮಣೋ ಗುರುಃ ಎಂಬುದು ಹುಸಿ,

ವರ್ಣಾನಾಂ ಗುರುಃ ನಮ್ಮ ಕೂಡಲ ಸಂಗನ ಶರಣರು’’ .

ಇದು ಬಸವಣ್ಣನವರ ನಿಲುವು. ವೇದ, ಶಾಸ್ತ್ರಗಳು ರುದ್ರ, ಶಿವನನ್ನು ದೈವ ಎನ್ನುವಾಗ ನಿಮ್ಮದು ದಾರಿ ತಪ್ಪಿಸುವ ನಿಲುವು ಎಂದು ಬ್ರಾಹ್ಮಣ ಪುರೋಹಿತಶಾಹಿಗಳಿಗೆ ಹೇಳುತ್ತಿದ್ದಾರೆ. ವರ್ಣಗಳಲ್ಲಿ ಬ್ರಾಹ್ಮಣನ ಸ್ಥಾನವೇ ಗುರು ಸ್ವರೂಪಿಯಾದುದು ಎನ್ನುವುದಕ್ಕೆ ಪ್ರತಿಯಾಗಿ ಜಾತಿ, ಮತಗಳನ್ನು ಮೀರಿ ಸೇರಿದ ಶರಣರೇ ನಿಜವಾದ ಗುರುಗಳು ಎಂದು ಹೇಳಿ ದೈವ ತತ್ವ, ಗುರು ತತ್ವಗಳಲ್ಲಿ ಪರ್ಯಾಯ ಚಿಂತನೆಗಳನ್ನು, ಪರ್ಯಾಯ ಪ್ರತಿಮೆಗಳನ್ನು ಮಂಡಿಸುತ್ತಾರೆ.

ಬಸವಣ್ಣನವರು ರುದ್ರನೊಬ್ಬನೆ ದೇವ, ವಿಷ್ಣುವಲ್ಲ ಎಂದು ಹೇಳಲೂ ಸಹ ಸಂಸ್ಕೃತ ಶ್ಲೋಕಗಳನ್ನು ಬಳಸುತ್ತಾರೆ.

‘‘ವಿಷ್ಣು ಕರ್ಮಿ ರುದ್ರ ನಿಷ್ಕರ್ಮಿ; ಕ್ರಮವನರಿಯದೆ ನುಡಿವಿರೊ!

ವೇದ ಶ್ರುತಿಗಳ ತಿಳಿಯಲರಿಯದೆ ವಾದ ಮಾಡುವರೆಲ್ಲ ಕೇಳಿ;

ವಿಷ್ಣು ನಾನಾಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ,

ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ!

ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ

------------------------------------------------

ದಿವೀವ ಚಕ್ಷುರಾತತಂ

ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂ ಸಃ ಸಮಿಂಧತೇ

ವಿಷ್ಣೋರ್ಯತ್ಪರಮಂ ಪದಂ

------------ ಕೂಡಲಸಂಗಮದೇವಾ ಎನ್ನುತ್ತಾರೆ.

ಬಸವಣ್ಣನವರು ಅಗತ್ಯ ಬಿದ್ದಾಗ, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು, ತನ್ನ ದೇವರು, ತನ್ನ ವಿಚಾರಗಳನ್ನು ಎತ್ತಿ ಹಿಡಿಯಲು ಹಾಗೂ ಸಂಸ್ಕೃತ ಗ್ರಂಥಗಳ ಒಳಗಿನ ಕೆಲವು ಉತ್ತಮಾಂಶಗಳನ್ನು ಎತ್ತಿ ತೋರಿಸಲು ಸಂಸ್ಕೃತ ಭಾಷೆಯನ್ನು ಬಳಸುತ್ತಾರೆ. ಬಸವಣ್ಣ ಸಂಸ್ಕೃತವನ್ನು ನಿರಾಕರಿಸುವುದಿಲ್ಲ. ಬದಲಿಗೆ ಸಂಸ್ಕೃತ ವಾಙ್ಮಯದೊಳಗಿನ ಉತ್ತಮ ಅಂಶಗಳನ್ನು ಗೌರವದಿಂದ ನೋಡುತ್ತಾರೆ. ಬಸವಣ್ಣನವರು ತಮ್ಮ ನಿಲುವುಗಳನ್ನು ಪ್ರತಿಪಾದಿಸಲು ಅನೇಕ ಸಂದರ್ಭಗಳಲ್ಲಿ ಸಂಸ್ಕೃತದ ನೆರವು ಪಡೆಯುತ್ತಾರೆ. ಮೂಲಕ್ಕೆ ಹೋಗಿ ನಿಜಾರ್ಥವನ್ನು ತಂದು ಪುರೋಹಿತಶಾಹಿಗಳ ಮುಂದೆ ಸವಾಲೊಡ್ಡುತ್ತಿದ್ದರು.

ಬಸವಣ್ಣನವರು ಸಂಸ್ಕೃತ ಭಾಷೆಯನ್ನು ನಿರಾಕರಿಸುವ ಕೆಲಸ ಮಾಡುವುದಿಲ್ಲ, ಆದರೆ ಕನ್ನಡ ನುಡಿ ಮತ್ತು ಮಾತಿನ ಪ್ರಾಮುಖ್ಯವನ್ನು ವಿವರಿಸುವುದರ ಮೂಲಕ ಕನ್ನಡಕ್ಕೆ ಸ್ಪಷ್ಟವಾಗಿ ದೊಡ್ಡ ಮಟ್ಟದಲ್ಲಿ ಅನನ್ಯತೆಯನ್ನು ತಂದುಕೊಡುವ ಕೆಲಸ ಮಾಡುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಪ್ರೇಮಾವತಿ ಎಸ್.ಕೆ

contributor

Similar News

ಭಾವ - ವಿಕಲ್ಪ
ಕಥೆಗಾರ