ಕರ್ನಾಟಕದಲ್ಲಿ ಬೌದ್ಧ ದಮ್ಮ

ವಿಕಾಸ್ ಆರ್ ಮೌರ್ಯ ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು ‘ಕಪ್ಪು ಕುಲುಮೆ’ ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. ‘ಕಪ್ಪು ಕುಲುಮೆ’ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಹಾಗೇ ‘ನೀಲವ್ವ’ ಎಂಬ ಕತಾಸಂಕಲನ ಹಾಗೂ ‘ಸಾವಿತ್ರಿ ಬಾಯಿ ಫುಲೆ ಮತ್ತು ನಾನು’ ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು ‘ಅಂಬೇಡ್ಕರ್ ಜಗತ್ತು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಜೀರುಂಡೆ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಬರೆದ ಬುದ್ಧಬೆಳಕು ನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಕರ್ನಾಟಕದಲ್ಲಿ ಕೋಮವಾದದ ವಿರುದ್ಧ ನಡೆದ ಬಹುಮುಖ್ಯ ಚಳವಳಿ ಚಲೋ ಉಡುಪಿಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ.

Update: 2024-01-02 10:47 GMT

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು ‘ಕಪ್ಪು ಕುಲುಮೆ’ ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. ‘ಕಪ್ಪು ಕುಲುಮೆ’ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಹಾಗೇ ‘ನೀಲವ್ವ’ ಎಂಬ ಕತಾಸಂಕಲನ ಹಾಗೂ ‘ಸಾವಿತ್ರಿ ಬಾಯಿ ಫುಲೆ ಮತ್ತು ನಾನು’ ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು ‘ಅಂಬೇಡ್ಕರ್ ಜಗತ್ತು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಜೀರುಂಡೆ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಬರೆದ ಬುದ್ಧಬೆಳಕು ನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಕರ್ನಾಟಕದಲ್ಲಿ ಕೋಮವಾದದ ವಿರುದ್ಧ ನಡೆದ ಬಹುಮುಖ್ಯ ಚಳವಳಿ ಚಲೋ ಉಡುಪಿಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ.

ಕ್ರಿ.ಶ. ೧೩ನೇ ಶತಮಾನದ ನಂತರ ಭಾರತದಿಂದ ಬೌದ್ಧ ದಮ್ಮವು ಕಣ್ಮರೆಯಾಯಿತು ಎಂದೇ ಭಾವಿಸಲಾಗಿತ್ತು. ಆದರೆ ‘ಡಗ್ಲಾಸ್ ಓಬರ್’ ಅವರು ತಮ್ಮ ‘ಡಸ್ಟ್ ಆನ್ ದ ತ್ರೋನ್’ ಕೃತಿಯಲ್ಲಿ ಬೌದ್ಧ ಕಣ್ಮರೆಯಾಗಿರಲೇ ಇಲ್ಲವೆಂದು ನಿರೂಪಿಸಿದ್ದಾರೆ. ಅದೇನೆ ಇರಲಿ, ಕರ್ನಾಟಕದಲ್ಲಿಯೂ ಬೌದ್ಧ ದಮ್ಮವು ನೆಲೆಸಿತ್ತೇ ಎಂಬ ಪ್ರಶ್ನೆಗೆ ಕಣ್ಮುಚ್ಚಿಕೊಂಡು ‘ಹೌದು’ ಎನ್ನಬಹುದಾಗಿದೆ. ಇಲ್ಲಿಯವರೆಗೆ ಆರ್.ಸಿ.ಹಿರೇಮಠ್, ಟಿ.ಮುರುಗೇಶಿ, ತಾಳ್ತಜೆ ವಸಂತಕುಮಾರ್, ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯಗಳ ಪುರಾತತ್ವ ಮತ್ತು ಉತ್ಖನನ ವಿಭಾಗಗಳು, ಭಾರತ ಮತ್ತು ಕರ್ನಾಟಕದ ಪುರಾತತ್ವ ಇಲಾಖೆ ಕೈಗೊಂಡಿರುವ ಸಂಶೋಧನೆ ಮತ್ತು ಉತ್ಖನನಗಳು ಕರ್ನಾಟಕದಾದ್ಯಂತ ಬಹಳ ವಿಶಾಲವಾಗಿ ಬೌದ್ಧ ದಮ್ಮವು ನೆಲೆಗೊಂಡಿತ್ತು ಎಂಬುದನ್ನು ತಿಳಿಸುತ್ತವೆ.

ಕರ್ನಾಟಕದಲ್ಲಿ ಬೌದ್ಧ ದಮ್ಮದ ಇತಿಹಾಸದ ಬಗ್ಗೆ ಹಲವು ಸಂಶೋಧಕರು ಬೆಳಕು ಚೆಲ್ಲಿದ್ದಾರಾದರೂ ಅವರ ಸಂಶೋಧನೆಗಳ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆದಿಲ್ಲ. ೧೯೫೬ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ರವರು ಬೌದ್ಧ ದಮ್ಮಕ್ಕೆ ಮರಳಿದ ನಂತರ ದಲಿತರೊಂದಿಗಿನ ಬೌದ್ಧ ದಮ್ಮದ ಸಂಬಂಧ ಮತ್ತೆ ಗಟ್ಟಿಗೊಳ್ಳಲು ಆರಂಭಿಸಿದೆಯಾದರೂ ಅದರ ಪ್ರಗತಿ ಸಮಾಧಾನಕರವಾಗಿಲ್ಲ. ಟಿಬೆಟ್ನಿಂದ ಭಾರತಕ್ಕೆ ವಲಸೆ ಬಂದ ಟಿಬೆಟ್ನ ‘ತಾಂತ್ರಿಕ’ ಬೌದ್ಧ ದಮ್ಮೀಯರು ಕರ್ನಾಟಕದ ಹಲವು ಕಡೆ ಪ್ರತ್ಯೇಕವಾಗಿ ನೆಲೆಸಿದ್ದಾರಾದರೂ ಕನ್ನಡ ನಾಡಿನಲ್ಲಿ ಬೌದ್ಧ ದಮ್ಮದ ಪ್ರಸಾರಕ್ಕೆ ಯಾವುದೇ ಮಹತ್ತರ ಕೊಡುಗೆಯನ್ನು ನೀಡಿಲ್ಲ. ಅದಕ್ಕೆ ಅವರ ಅಸ್ಥಿರ ಬದುಕು ಕಾರಣವಾಗಿರಬಹುದು. ಇದರ ಜೊತೆಗೆ ಅಂಬೇಡ್ಕರ್ ಅವರನ್ನು ತಮ್ಮ ವಿಮೋಚಕರೆಂದು ನಂಬಿಕೊಂಡಿರುವ ದಲಿತರೂ ಸಹ ತೆರೆದ ಕೈಗಳಿಂದ ಬುದ್ಧನನ್ನು ಅಪ್ಪಿಕೊಳ್ಳಲಿಲ್ಲ. ಇದಕ್ಕೆ ಮೀಸಲಾತಿ ಸೌಲಭ್ಯ ಸೃಷ್ಟಿಸಿರುವ ಅಸ್ಪಷ್ಟ ಮಾಹಿತಿಯೂ ಕಾರಣವಾಗಿದೆ. ಇನ್ನು ದಲಿತೇತರ ಪ್ರಗತಿಪರರು ಅತ್ತ ಹಿಂದೂ ಧರ್ಮದ ಸುಧಾರಣೆಯನ್ನೂ ಕೈಗೊಳ್ಳುತ್ತಿಲ್ಲ, ಇತ್ತ ಜಾತಿವಿನಾಶ ಹೋರಾಟವನ್ನೂ ಕೈಗೆತ್ತಿಕೊಳ್ಳುತ್ತಿಲ್ಲ. ಬಹುಶಃ ರಾಜಕೀಯ ಸ್ಥಿತ್ಯಂತರಗಳು ಅವರನ್ನು ಕಟ್ಟಿ ಹಾಕಿರಬಹುದು. ೨೧ನೇ ಶತಮಾನದ ಕರ್ನಾಟಕವು ಬೌದ್ಧ ದಮ್ಮಕ್ಕೆ ಸಂಬಂಧಿಸಿದಂತೆ ಇಂತಹ ‘ವಿಸ್ಮತಿ’ ಸ್ಥಿತಿಯಲ್ಲಿರುವಾಗ ಕನ್ನಡ ನೆಲದ ಮೇಲೆ ಬೌದ್ಧ ದಮ್ಮ ಬೀರಿದ ಪ್ರಭಾವವನ್ನು ತಿಳಿಯುವುದು ಹಾಗೂ ಬೌದ್ಧ ದಮ್ಮದ ಹೆಜ್ಜೆಗುರುತುಗಳನ್ನು ಗಟ್ಟಿಯಾಗಿ ತೋರಿಸುವುದು ಈ ಕಾಲಮಾನದ ತುರ್ತುಗಳಲ್ಲಿ ಒಂದೆನಿಸುತ್ತದೆ.

ಕನ್ನಡ ನಾಡಿನಲ್ಲಿ ಅಚ್ಚಳಿಯದೆ ಉಳಿದಿರುವ ಬೌದ್ಧ ದಮ್ಮದ ಹೆಜ್ಜೆಗಳನ್ನು ಗುರುತಿಸುವುದು ಖಂಡಿತವಾಗಿಯೂ ನಾಡಿಗೆ ತನ್ನದೇ ಆದಂತಹ ಹಿರಿಮೆಯನ್ನು ತಂದುಕೊಡುತ್ತದೆ ಹಾಗೂ ಸಮಾನತೆ ಸಾರಿದ ಪ್ರಾಚೀನತೆಯನ್ನು ನೆನಪಿಗೆ ತರುತ್ತದೆ. ಜೊತೆಗೆ ಅಂತಹ ವೈಭವದ ದಿನಗಳು ಮತ್ತೆ ಮರಳಬಾರದೇಕೆ ಎಂಬ ಹೆಬ್ಬಯಕೆ ಮೂಡಿಸುತ್ತದೆ.

ಕರ್ನಾಟಕದಲ್ಲಿ ಬೌದ್ಧ ದಮ್ಮ ಚರಿತೆಯು ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನು ಬೌದ್ಧ ದಮ್ಮಾವಲಂಬಿಯಾಗಿ ದಮ್ಮ ಪ್ರಚಾರಕ್ಕಾಗಿ ಭಿಕ್ಕುಗಳನ್ನು ಕಳುಹಿಸಿದಾಗಿನಿಂದ ಆರಂಭವಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಬೌದ್ಧ ದಮ್ಮದ ಚರಿತೆಯು ಸಾಮ್ರಾಟ್ ಅಶೋಕನ ಕಾಲಕ್ಕಿಂತಲೂ ಹಿಂದೆ ಹೋಗಿ ಬುದ್ಧನ ಕಾಲಕ್ಕೆ ನಿಲ್ಲುತ್ತದೆ. ‘ದಕ್ಷಿಣಪಥ’ ಪ್ರದೇಶವು ಪ್ರಾಚೀನ ಭಾರತದ (ಈಗಲೂ ಸಹ) ಉಜ್ಜೈನಿ ಹಾಗೂ ವಿಂದ್ಯಾ ಪರ್ವತದ ದಕ್ಷಿಣ ಭಾಗವಾಗಿತ್ತು. ನರ್ಮದಾ ನದಿಯು ದಕ್ಷಿಣಪಥದ ಉತ್ತರ ಭಾಗದ ಗಡಿ ಗುರುತಾಗಿತ್ತು. ಹಾಗಾಗಿ ಇಂದಿನ ‘ಕರ್ನಾಟಕ’ ಅಂದಿನ ದಕ್ಷಿಣಪಥದ ಬಹುಭಾಗವಾಗಿತ್ತು. ಈ ದಕ್ಷಿಣಪಥದಲ್ಲಿ ಬಹುಭಾಗದಲ್ಲಿ ಬೌದ್ಧ ದಮ್ಮವು ನೆಲೆಗೊಂಡಿತ್ತು ಎಂಬುದಕ್ಕೆ ನಮಗೆ ಬಹಳಷ್ಟು ಸಾಕ್ಷಿ ದೊರಕುತ್ತವೆ.

ಬೌದ್ಧ ದಮ್ಮದ ಆರಂಭಿಕ ಪ್ರಸಾರವು ಸಂಭವಿಸಿದ್ದು ಸುಮಾರು ಕ್ರಿ.ಪೂ. ೫೦೦ರಿಂದ ೩೫೦ರ ನಡುವೆಯಾಗಿತ್ತು. ಈ ಸಮಯದಲ್ಲಿಯೇ ಬೌದ್ಧ ದಮ್ಮವು ಪ್ರಾಚೀನ ಭಾರತದ ಪಶ್ಚಿಮ ಭಾಗದಿಂದ ದಕ್ಷಿಣಭಾಗದ ಪ್ರದೇಶ ಪ್ರತಿಷ್ಠಾನಕ್ಕೆ (ಪೈಠಾಣ) ಅಂದರೆ ಈಗಿನ ಔರಂಗಾಬಾದಿನ ಸುತ್ತಮುತ್ತ ಪ್ರಸಾರಗೊಂಡಿತು. ಸ್ವತಃ ಬುದ್ಧಗುರು ಈ ಭಾಗಕ್ಕೆ ಬಂದಿದ್ದರೆಂಬ ಕಥೆಗಳಿವೆ. ಈ ಕಥೆಗಳನ್ನು ನಂಬಲು ಗಟ್ಟಿಯಾದ ಪುರಾವೆಗಳಿಲ್ಲ ನಿಜ. ಆದರೆ ಬೌದ್ಧ ದಮ್ಮವು ದಕ್ಷಿಣಪಥದ ಇಂದಿನ ಕರ್ನಾಟಕ ಪ್ರದೇಶದಲ್ಲಿ ವ್ಯಾಪಕವಾಗಿ ನೆಲೆಗೊಂಡಿತ್ತು ಎಂಬುದಕ್ಕೆ ಸಾಕ್ಷ್ಯಗಳಿವೆ. ಬೌದ್ಧ ಸಾಹಿತ್ಯದ ಅತ್ಯಂತ ಪ್ರಾಚೀನ ಕೃತಿಯಾದ (ಕ್ರಿ.ಪೂ. ೫) ಹೀನಾಯಾನ ಪಂಥದ ‘ಸುತ್ತನಿಪಾತ’ವು ದಕ್ಷಿಣಪಥವನ್ನು ಉಲ್ಲೇಖಿಸುತ್ತಲ್ಲದೆ ‘ಗೋದಾವರಿ’ ನದಿತೀರದಲ್ಲಿ ಬೌದ್ಧ ದಮ್ಮ ಅಸ್ತಿತ್ವದಲ್ಲಿದ್ದ ಬಗ್ಗೆ ತಿಳಿಸುತ್ತದೆ. ಸುತ್ತನಿಪಾತದ ಒಂದು ಕತೆ ಇಂತಿದೆ: ‘‘ಉತ್ತರಭಾರತದ ಕೋಸಲ ರಾಜ್ಯದ ಶ್ರಾವಸ್ತಿಯ ಮೂಲನಿವಾಸಿಯಾಗಿದ್ದ ‘ಬಾವರಿ’ ಎಂಬ ಬ್ರಾಹ್ಮಣನು ದಕ್ಷಿಣಪಥದ ಗೋದಾವರಿ ತೀರದಲ್ಲಿ ಆಶ್ರಮ ನಿರ್ಮಿಸಿಕೊಂಡು ಜೀವಿಸುತ್ತಿದ್ದನು. ಒಮ್ಮೆ ಯಜ್ಞ ನೆರವೇರಿಸಿದ ಬಾವರಿಯು ತನ್ನಲ್ಲಿದ್ದ ಎಲ್ಲಾ ಸಂಪತ್ತನ್ನು ಇತರ ಬ್ರಾಹ್ಮಣರಿಗೆ ದಾನ ಮಾಡಿದನು. ಕೊನೆಯದಾಗೊಬ್ಬ ಬ್ರಾಹ್ಮಣನು ತಡವಾಗಿ ಬಂದ ಕಾರಣ ಆತನಿಗೆ ದಾನ ಮಾಡಲು ಏನೂ ಇರಲಿಲ್ಲ. ಕುಪಿತಗೊಂಡ ಆ ಬ್ರಾಹ್ಮಣನು ಏಳು ದಿನಗಳ ಒಳಗಾಗಿ ಬಾವರಿಯ ತಲೆ ಎರಡು ಹೋಳಾಗುವಂತೆ ಶಾಪವಿತ್ತು ಹೊರಟುಹೋದನು. ಇದಕ್ಕೆ ಹೆದರಿದ ಬಾವರಿಯು ಬುದ್ಧನಲ್ಲಿಗೆ ಹೋಗಿ ಬೌದ್ಧನಾದನು.’’ ಈ ಕತೆಯಲ್ಲಿ ಬಹುಮುಖ್ಯವಾಗಿ ಬಾವರಿಯು ಬುದ್ಧನಲ್ಲಿಗೆ ಪಯಣ ಬೆಳೆಸಿದ ದಾರಿಯನ್ನು ಸೂಚಿಸುತ್ತದೆ. ಅದು ಹೀಗಿದೆ: ‘‘ಗೋದಾವರಿ ತೀರದಲ್ಲಿದ್ದ ಆಶ್ರಮದಿಂದ-ಪ್ರತಿಷ್ಠಾನ-ನರ್ಮದಾ ತೀರದಲ್ಲಿದ್ದ ಮಾಹಿಷ್ಮತಿ-ಉಜ್ಜೈನಿ-ವಿದಿಶ-ಕೌಸಾಂಬಿ-ಶ್ರಾವಸ್ತಿ. ಇದರಿಂದಾಗಿ ಪ್ರತಿಷ್ಠಾನವು ಆಶ್ರಮದ ಉತ್ತರಭಾಗಕ್ಕಿತ್ತು ಎಂಬುದು ತಿಳಿಯುತ್ತದೆ. ಹಾಗಾಗಿ ಗೋದಾವರಿಯ ತೀರಪ್ರದೇಶಗಳಲ್ಲಿ ಬುದ್ಧನ ಬಗ್ಗೆ ತಿಳಿದಿದ್ದಾಗಿ ಕಂಡುಬರುತ್ತದೆ. ಬೌದ್ಧ ಸಾಹಿತ್ಯವು ಹೆಸರಿಸುವ ಹದಿನಾರು ಜನಪದಗಳಲ್ಲಿ ‘ಮೂಲಿಕ’ ಮತ್ತು ‘ಅಸ್ಸಕ’ ಜನಪದಗಳೂ ಸಹ ಇದ್ದವು. ‘ಪ್ರತಿಷ್ಠಾನ’ವು ಮೂಲಿಕ ಜನಪದಕ್ಕೆ ಸೇರಿದ ಪ್ರದೇಶವಾಗಿತ್ತು ಹಾಗೂ ‘ಬೋದಾನ’ವು ಅಂದರೆ ಇಂದಿನ ಕರೀಂನಗರದ ಪ್ರದೇಶವು ‘ಅಸ್ಸಕ’ ಜನಪದಕ್ಕೆ ಸೇರಿತ್ತು. ಹಾಗಾಗಿ ಈ ಎರಡೂ ಜನಪದಗಳು ದಕ್ಷಿಣಭಾರತಕ್ಕೆ ಸೇರಿದ್ದವು. ಇದರಿಂದ ತಿಳಿಯುವ ವಿಚಾರವೆಂದರೆ ಸಾಮ್ರಾಟ್ ಅಶೋಕನ ಕಾಲಘಟ್ಟಕ್ಕೂ ಮುಂಚೆ (ಕ್ರಿ.ಪೂ. ೩ ಕ್ಕೂ ಮುಂಚೆ) ದಕ್ಷಿಣ ಭಾರತದಲ್ಲಿ ಬೌದ್ಧ ದಮ್ಮ ವ್ಯಾಪಕವಾಗಿ ಹರಡಿತ್ತು ಎಂಬುದು.

ಬೌದ್ಧ ಗ್ರಂಥ ‘ಮಹಾಗೋವಿಂದ ಸುತ್ತ’, ‘ಅಂಗುತ್ತರನಿಕಾಯ’ ಮತ್ತು ‘ಭೀಮಸೇನ ಜಾತಕ’ಗಳು ‘ಬೋದಾನ’ವನ್ನು ಉಲ್ಲೇಖಿಸುತ್ತವೆ. ಈ ಬೋದಾನವು ಆದಿ ತೀರ್ಥಂಕರರು ತಮ್ಮ ಮಗ ಬಾಹುಬಲಿಗೆ ನೀಡಿದ್ದ ‘ಪೌದನಪುರ’ವೇ ಆಗಿದೆ. ಇದೇ ಪ್ರದೇಶ ಮಧ್ಯಕಾಲೀನ ಯುಗದಲ್ಲಿ ಎರಡನೇ ಅರಿಕೇಸರಿಯ ರಾಜಧಾನಿಯಾಗಿತ್ತು. ಈ ಅರಿಕೇಸರಿಯ ಸಂಸ್ಥಾನದಲ್ಲಿಯೇ ಆದಿಕವಿ ಪಂಪ ಕವಿಯಾಗಿದ್ದನು. ಹ್ಯುಯೆನ್ತ್ಸಾಂಗ್ ಉಲ್ಲೇಖಿಸಿರುವ ಪೋತಲಿ ಪರ್ವತದ ಮೇಲಿನ ‘ಪೊತಾಲಕ’ ಇದೇ ಆಗಿರಬಹುದು ಎಂದು ಬೌದ್ಧ ವಿದ್ವಾಂಸರಾದ ಆರ್.ಸಿ.ಹಿರೇಮಠ್ ಊಹಿಸುತ್ತಾರೆ.

ವಿನಯ ಪಿಠಕದ ‘ಚುಲ್ಲವಗ್ಗ’ವು ವೈಶಾಲಿಯಲ್ಲಿ ಥೇರ ‘ಯಸ’ ನೇತೃತ್ವದಲ್ಲಿ ನಡೆದ ಎರಡನೇ ಬೌದ್ಧ ಸಮ್ಮೇಳನದ (ಕ್ರಿ.ಪೂ. ೩೭೫) ಬಗ್ಗೆ ವಿವರ ನೀಡುತ್ತದೆ. ಈ ಸಮ್ಮೇಳನಕ್ಕೆ ದಕ್ಷಿಣಪಥದಿಂದ ಭಿಕ್ಕುಗಳು ಆಗಮಿಸಿದ್ದರು ಎಂದು ತಿಳಿಸುತ್ತದೆ. ಜೊತೆಗೆ ದಕ್ಷಿಣಪಥದ ವ್ಯಾಪಾರಿಗಳ ಬಗ್ಗೆಯೂ ಮಾಹಿತಿ ನೀಡುತ್ತದೆ. ಹಾಗಾಗಿ ಕ್ರಿ.ಪೂ. ೪ನೇ ಶತಮಾನದಷ್ಟೊತ್ತಿಗೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಬೌದ್ಧ ದಮ್ಮವ್ಯಾಪಕವಾಗಿ ನೆಲೆಯೂರಿತ್ತು ಎಂಬುದು ಇದರಿಂದ ಸ್ಪಷ್ಟಗೊಳ್ಳುತ್ತದೆ.

ಕ್ರಿ.ಪೂ.. ೨೪೧ರಲ್ಲಿ ಸಾಮ್ರಾಟ್ ಅಶೋಕನು ಥೇರ ‘ಮೊಗ್ಗಲಿಪುತ್ತ’ನ ನೇತೃತ್ವದಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ಪಾಟಲಿಪುತ್ರದಲ್ಲಿ ಆಯೋಜಿಸಿದ್ದನು. ಈ ಸಮ್ಮೇಳನವು ಸುಮಾರು ಒಂಭತ್ತು ತಿಂಗಳುಗಳ ಕಾಲ ನಡೆಯಿತು. ಬೌದ್ಧ ದಮ್ಮ ಗ್ರಂಥಗಳಾದ ‘ತಿಪಿಟಕ’ಗಳನ್ನು ಈ ಸಮ್ಮೇಳನದಲ್ಲಿ ಅಂತಿಮಗೊಳಿಸಲಾಯಿತು. ಸಮ್ಮೇಳನವು ಕೊನೆಗೊಂಡ ನಂತರ ಬೌದ್ಧ ದಮ್ಮ ಪ್ರಚಾರಕ್ಕೆ ಭಿಕ್ಕುಗಳನ್ನು ದೇಶ-ವಿದೇಶಗಳಿಗೆ ಕಳುಹಿಸಲಾಯಿತು. ಸಿಂಹಳದ್ವೀಪದ (ಶ್ರೀಲಂಕಾ) ಬೌದ್ಧ ಗ್ರಂಥ ‘ಮಹಾವಂಶ’ವು ಮೂರನೇ ಬೌದ್ಧ ಮಹಾ ಸಮ್ಮೇಳನ ನಡೆದ ನಂತರ ಅದರ ಅಧ್ಯಕ್ಷ ಥೇರ ಮೊಗ್ಗಲಿಪುತ್ತನು ಕಾರ್ತಿಕ ತಿಂಗಳಿನಲ್ಲಿ ಮಹಿಷಮಂಡಲಕ್ಕೆ ಮಹಾದೇವರನ್ನು, ಬನವಾಸಿಗೆ ರಕ್ಕಿತರನ್ನು, ಮಹಾರಾಷ್ಟ್ರಕ್ಕೆ ಮಹಾ ರಕ್ಕಿತನನ್ನು ಬೌದ್ಧ ದಮ್ಮದ ಪ್ರಚಾರಕ್ಕೆ ಕಳುಹಿಸಿಕೊಟ್ಟ ಬಗ್ಗೆ ಉಲ್ಲೇಖಿಸುತ್ತದೆ. ಮಹಿಷಮಂಡಲ, ಬನವಾಸಿ ಪ್ರದೇಶಗಳು ಇಂದಿನ ಕರ್ನಾಟಕದಲ್ಲಿಯೇ ಇವೆ. ಮಹಾರಾಷ್ಟ್ರ ಪ್ರದೇಶಗಳಲ್ಲಿಯೂ ಸಹ ಉತ್ತರ ಕರ್ನಾಟಕದ ಭಾಗಗಳಿದ್ದವು. ಹಾಗಾಗಿ ಹೆಚ್ಚೂ ಕಡಿಮೆ ಕರ್ನಾಟಕದ ಉತ್ತರ ಭಾಗದಿಂದ ಹಿಡಿದು ದಕ್ಷಿಣ ಭಾಗದವರೆಗೂ ಬೌದ್ಧ ದಮ್ಮ ಹರಡಿದ್ದರ ಬಗ್ಗೆ ಈ ಮೇಲಿನ ಗ್ರಂಥಗಳು ಪುರಾವೆ ನೀಡುತ್ತವೆ. ಬಹುಮುಖ್ಯವಾದ ವಿಚಾರವೇನೆಂದರೆ, ಮಹಾವಂಶವು ಶ್ರೀಲಂಕೆಯಲ್ಲಿ ಬೌದ್ಧ ದಮ್ಮ ‘ಸ್ಥಾಪಿಸಲು’ ಮಹಿಂದನನನ್ನು ಕಳುಹಿಸಿಕೊಡಲಾಯಿತು ಎನ್ನುತ್ತದೆಯಾದರೂ ಮಹಿಷಮಂಡಲ, ಬನವಾಸಿ ಮತ್ತು ಮಹಾರಾಷ್ಟ್ರದ ವಿಚಾರದಲ್ಲಿ ‘ಪ್ರಸಾರ ಮಾಡಲು’ ಎನ್ನುತ್ತದೆ. ಹಾಗಾಗಿ ಕರ್ನಾಟಕದ ಬಹುಭಾಗದಲ್ಲಿ ಅದಾಗಲೇ ಬೌದ್ಧ ದಮ್ಮ ನೆಲೆಯೂರಿತ್ತು ಎನ್ನುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಮಹಿಷಮಂಡಲವು ಈಗಿನ ಮೈಸೂರಿನ ಪ್ರದೇಶವೆಂಬುದರಲ್ಲಿ ಜಿಜ್ಞಾಸೆಗಳಿವೆ. ಕೆಲವು ವಿದ್ವಾಂಸರು ಮಹಿಷಮಂಡಲವು ನರ್ಮದಾ ನದಿ ತೀರದ ‘ಮಾಹಿಷ್ಮತಿ’ ಎಂದು ವಾದಿಸುವುದಿದೆ. ಆದರೆ ಬನವಾಸಿ ಮತ್ತು ಮಾಹಿಷ್ಮತಿಯು ನರ್ಮದಾ ನದಿಯ ಬಯಲಿನ ಆಸುಪಾಸಿರುವ ಪ್ರದೇಶಗಳಾಗಿರುವ ಕಾರಣ ಅದೊಂದೇ ಪ್ರದೇಶಕ್ಕೆ ಇಬ್ಬರು ಬೌದ್ಧ ಪ್ರಚಾರಕರನ್ನು ಕಳುಹಿಸುವ ಅವಶ್ಯಕತೆ ಇರಲು ಸಾಧ್ಯವಿಲ್ಲ ಎಂದು ವಾದಿಸುವ ‘ಹಿರೇಮಠ್’ ಅವರು ಮೈಸೂರೇ ಮಹಿಷಮಂಡಲವೆನ್ನುತ್ತಾರೆ. ಜೊತೆಗೆ ತುಮಕೂರಿನ ಬಳಿ ಹೆಬ್ಬಟ್ಟದಲ್ಲಿ ದೊರೆತಿರುವ ಕದಂಬರ ವಿಷ್ಣುವರ್ಮನ ಶಾಸನವು ‘ಹೆರ್ಬಟ್ಟವೆಂಬ ಅಗ್ರಹಾರವನ್ನು ಮಹಿಷ ವಿಷಯದಲ್ಲಿ ನಿರ್ಮಿಸಿ ಬ್ರಾಹ್ಮಣರಿಗೆ ದಾನ’ ಮಾಡಿದ್ದಾಗಿ ಹೇಳುತ್ತದೆ. ಹಾಗಾಗಿ ಮಾಹಿಷ್ಮತಿ ಮತ್ತು ಮಹಿಷ ಮಂಡಲ ಎರಡೂ ಒಂದೇ ಅಲ್ಲ. ಇನ್ನು ಚಂದ್ರಗುಪ್ತ ಮೌರ್ಯನ ಕಾಲಘಟ್ಟದಲ್ಲಿ ಬಂದ ಯಾತ್ರಿಕ ಮೆಗಾಸ್ತನೀಸ್ ಸಹ ತನ್ನ ಇಂಡಿಕಾ ಕೃತಿಯಲ್ಲಿ ದಖನ್ ಪ್ರದೇಶದಲ್ಲಿ ಬೌದ್ಧ ದಮ್ಮ ವಿಜೃಂಭಿಸುತ್ತಿತ್ತು ಎಂಬುದರ ಬಗ್ಗೆ ಸುಳಿವು ನೀಡಿದ್ದಾನೆ.

ಬೌದ್ಧ ಸಾಹಿತ್ಯವನ್ನು ಹೊರತುಪಡಿಸಿದರೆ ಅಶೋಕನ ಶಾಸನಗಳು ಕರ್ನಾಟಕದ ಬೌದ್ಧ ದಮ್ಮದ ಬಗ್ಗೆ ಬೆಳಕು ಚೆಲ್ಲುತ್ತವೆ. ಕ್ರಿ.ಪೂ. ೨೭೨ ರಿಂದ ೨೩೨ ರವರೆಗೆ ಸಾಮ್ರಾಟ್ ಅಶೋಕ ಪ್ರಾಚೀನ ಭಾರತದ ಬಹುಭಾಗವನ್ನು ಆಳಿದನು. ಆತನ ಆಡಳಿತದಲ್ಲಿ ಬರೆಸಿದ ಸುಮಾರು ೧೫೦ ಶಿಲಾಶಾಸನಗಳು ಭಾರತ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ನೇಪಾಳದಲ್ಲಿ ದೊರೆತಿವೆ. ಕರ್ನಾಟಕದಲ್ಲಿಯೂ ಕಿರುಶಾಸನಗಳು ದೊರೆತಿವೆ. ಇಡೀ ಭಾರತದಲ್ಲಿ ದೊರೆತಿರುವ ಅಶೋಕನ ಕಿರುಶಾಸನಗಳ ಸಂಖ್ಯೆ ೧೯. ಅವುಗಳಲ್ಲಿ ೧೨ ದಕ್ಷಿಣ ಭಾರತದಲ್ಲಿವೆ. ಇವುಗಳಲ್ಲಿ ಬರೋಬ್ಬರಿ ೧೦ ಕಿರುಶಾಸನಗಳು ಕರ್ನಾಟಕದಲ್ಲಿಯೇ ದೊರೆತಿವೆ. ರಾಯಚೂರು, ಚಿತ್ರದುರ್ಗ, ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ದೊರೆತಿರುವ ಅಶೋಕನ ಶಾಸನಗಳು ಕರ್ನಾಟಕವು ಬೌದ್ಧ ದಮ್ಮದ ನೆಲೆವೀಡಾಗಿತ್ತು ಎಂಬುದನ್ನು ತಿಳಿಸುತ್ತದೆ. ಇತ್ತೀಚೆಗೆ ಕಲಬುರ್ಗಿಯ ಚಿತ್ತೂರು ತಾಲೂಕಿನ ಸನ್ನತಿಯಲ್ಲಿ ದೊರೆತಿರುವ ಶಾಸನವನ್ನೂ ಸೇರಿಸಿಕೊಂಡರೆ ಕರ್ನಾಟಕಲ್ಲಿಯೇ ೧೭ ಅಶೋಕನ ಶಾಸನಗಳು ದೊರೆತಂತಾಗುತ್ತದೆ.

ಬೇರೆಡೆಗಳಲ್ಲಿ ದೊರೆತಿರುವ ಶಿಲಾಶಾಸನಗಳಿಗೆ ಹೋಲಿಸಿದರೆ ಕರ್ನಾಟಕದ್ದು ವಿಶಿಷ್ಟವಾಗಿ ನಿಲ್ಲುತ್ತದೆ. ಉದಾಹರಣೆಗೆ, ಮಸ್ಕಿಯಲ್ಲಿ ದೊರೆತಿರುವ ಶಾಸನವು ‘ದೇವನಾಂಪ್ರಿಯ’ ಮತ್ತು ‘ಅಶೋಕ’ ಎಂಬ ಎರಡೂ ಪದಗಳನ್ನು ಒಳಗೊಂಡಿದೆ. ಮಸ್ಕಿಯ ಈ ಶಾಸನ ದೊರಕುವವರೆಗೂ ಊಹೆಯಲ್ಲಿ ಮಾತ್ರ ದೇವನಾಂಪ್ರಿಯ ಎನ್ನುವುದು ಅಶೋಕನಿಗೆ ಸಂಬಂಧಿಸಿದ ಬಿರುದು ಎಂದು ತಿಳಿಯಲಾಗಿತ್ತು. ಮಸ್ಕಿಯ ಶಾಸನ ಅದಕ್ಕೆ ಪುರಾವೆ ಒದಗಿಸಿ ದೇವನಾಂಪ್ರಿಯ ಅಶೋಕನೇ ಎಂದು ಜಗತ್ತಿಗೆ ಸಾರಿದೆ.

ಅಶೋಕನ ನಂತರ ಶಾತವಾಹನರು ಸಹ ಬನವಾಸಿಯ ಮಹಾಯಾನ ಬೌದ್ಧ ಪಂಥಕ್ಕೆ ಉದಾರ ದೇಣಿಗೆ ನೀಡಿದ್ದಾರೆ. ವಿಹಾರ ಮತ್ತು ಸ್ತೂಪಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ವನವಾಸಿಯಲ್ಲಿ ಬೌದ್ಧ ದಮ್ಮದ ಪ್ರಮುಖ ಪಂಥಗಳಾದ ಹೀನಾಯಾನ, ಮಹಾಯಾನ ಮತ್ತು ವಜ್ರಯಾನ ಈ ಮೂರೂ ತತ್ವಜ್ಞಾನಗಳು ನೆಲೆಸಿದ್ದವು. ವಜ್ರಯಾನದ ಬೌದ್ಧ ದೇವತೆಗಳಾದ ಅವಲೋಕಿತೇಶ್ವರ, ತಾರಾ ಭಗವತಿ, ಯಕ್ಷಿಗಳು ಇಂದಿಗೂ ಸಹ ಬನವಾಸಿಯಲ್ಲಿ ಕಾಣ ಸಿಗುತ್ತವೆ. ಇಲ್ಲಿ ೧೯೭೧ರಲ್ಲಿ ನಡೆಸಿದ ಉತ್ಖನನದಿಂದ ಸ್ತೂಪಗಳು, ಮೈತ್ರೇಯ ಬುದ್ಧನ ಪ್ರತಿಮೆ ಮದುಕೇಶ್ವರ ದೇವಸ್ಥಾನದ ಬಳಿ ಪತ್ತೆಯಾಗಿವೆ. ಬಳ್ಳಿಗಾವಿ ಶಾಸನವೂ ಸಹ ಬುದ್ಧನೊಂದಿಗೆ ತಾಂತ್ರಿಕ ಬೌದ್ಧ ದಮ್ಮದ ದೇವತೆಗಳಾದ ತಾರಾದೇವಿ, ಕೇಶವದೇವ ಮತ್ತು ಲೋಕೇಶ್ವರದೇವರ ಹೆಸರನ್ನು ಉಲ್ಲೇಖಿಸುತ್ತದೆ. ಐಹೊಳೆಯಲ್ಲಿಯೂ ಬೌದ್ಧ ಚೈತ್ಯವಿದೆ. ಇಲ್ಲಿ ಬುದ್ಧನ ವಿಗ್ರಹವನ್ನೂ ಕೆತ್ತಲಾಗಿದೆ. ಹ್ಯೂಯೆನ್ ತ್ಸಾಂಗ್ ತಿಳಿಸುವಂತೆ ಬಾದಾಮಿಯು ಬೌದ್ಧ ಕೇಂದ್ರವಾಗಿತ್ತು. ಅಲ್ಲಿಯೂ ಸಹ ಸಂಘಾರಾಮ, ವಿಹಾರ ಮತ್ತು ಚೈತ್ಯಗಳನ್ನು ಕಂಡದ್ದಾಗಿ ಹೇಳುತ್ತಾನೆ. ೭೦ರ ದಶಕದ ನಂತರ ನಡೆಸಿದ ಉತ್ಖನನಗಳಿಂದ ಕರ್ನಾಟಕವು ಪ್ರಾಚೀನ ಬೌದ್ಧ ಕೇಂದ್ರವಾಗಿತ್ತು ಎಂಬುದು ಪದೇ ಪದೇ ಸಾಬೀತಾಗಿದೆ. ತೀರ ಇತ್ತೀಚಿನ ಎರಡು ಉತ್ಖನನ ಸ್ಥಳಗಳಾದ ‘ಸನ್ನತಿ’ ಮತ್ತು ‘ರಾಜಘಟ್ಟ’ ಕರ್ನಾಟಕದಲ್ಲಿ ಬೌದ್ಧ ದಮ್ಮ ಸಾಕಷ್ಟು ಗಟ್ಟಿಯಾಗಿಯೇ ನೆಲೆಯೂರಿತ್ತು ಎಂಬುದನ್ನು ಸಾರುತ್ತಿವೆ.

ಕಲಬುರ್ಗಿಯ ಚಿತ್ತಾಪುರ ತಾಲೂಕಿನ ಸನ್ನತಿ (ರಣಮಂಡಲ) ಯಲ್ಲಿ ದೊರಕಿರುವ ಸ್ತೂಪ, ವಿಹಾರ ಮತ್ತು ಪ್ರತಿಮೆಗಳು ಇತಿಹಾಸತಜ್ಞರನ್ನು ಕೈ ಬೀಸಿ ಕರೆಯುತ್ತಿದೆ. ಅಲ್ಲಿ ದೇಶದಲ್ಲಿಯೇ ಮೊಟ್ಟಮೊದಲಿಗೆ ಸಾಮ್ರಾಟ್ ಅಶೋಕನು ತನ್ನ ರಾಣಿಯರೊಂದಿಗೆ ನಿಂತಿರುವ ಪ್ರತಿಮೆ ದೊರಕಿದೆ. ಶಾತವಾಹನರ ಕಾಲದಲ್ಲಿ ಹೆಚ್ಚು ಉಚ್ಛ್ರಾಯ ಸ್ಥಿತಿ ತಲುಪಿದ್ದೆನ್ನಬಹುದಾದಂತಹ ಶಾಸನಗಳು ಇಲ್ಲಿ ದೊರೆತಿವೆಯಲ್ಲದೇ ಬನವಾಸಿಯನ್ನು ಉಲ್ಲೇಖಿಸಲಾಗಿದೆ.

ಬೆಂಗಳೂರಿನ ದೊಡ್ಡಬಳ್ಳಾಪುರ ಬಳಿ ಇರುವ ರಾಜಘಟ್ಟ ಬಳಿಯೂ ಸಹ ಬೌದ್ಧ ಸ್ತೂಪ ಪತ್ತೆಯಾಗಿದೆ. ಜೊತೆಗೆ ನೂರಕ್ಕೂ ಹೆಚ್ಚು ಪುಟ್ಟ ಸ್ತೂಪಗಳು ಪತ್ತೆಯಾಗಿದ್ದು ಮಹಾಯಾನ ಬೌದ್ಧ ತತ್ವದಲ್ಲಿ ಕಂಡುಬರುವ ಸ್ತೂಪಾರಾಧನೆಯು ಇಲ್ಲಿ ಪ್ರಸಿದ್ಧಿ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ಶಾಸನವೂ ದೊರಕಿದ್ದು ಹಲವು ಬುದ್ಧನ ಪ್ರತಿಮೆಗಳು ಕಂಡುಬಂದಿವೆ.

ಒಟ್ಟಾರೆ ಕರ್ನಾಟಕವು ಪ್ರಾಚೀನ ಕಾಲದಿಂದಲೂ ಬೌದ್ಧ ಕೇಂದ್ರವಾಗಿತ್ತು ಎನ್ನುವುದಕ್ಕೆ ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣ ಕರ್ನಾಟಕದವರೆಗೂ ಹಲವು ಸಾಕ್ಷಿ ಪುರಾವೆಗಳು ದೊರಕಿವೆ. ಇವು ಕೇವಲ ಪುರಾಣ ದಂತ ಕಥೆಗಳಲ್ಲದೆ ವೈಜ್ಞಾನಿಕವಾಗಿ ದೊರಕಿರುವ ಉತ್ಖನನ ಸಾಕ್ಷ್ಯಗಳಾಗಿವೆ. ಇದರ ಜೊತೆಗೆ ಬೌದ್ಧ ಸಾಹಿತ್ಯದಲ್ಲಿಯೂ ಸಹ ಕರ್ನಾಟಕದ ನೆಲೆವೀಡುಗಳ ಕುರಿತು ಸ್ಪಷ್ಟ ಉಲ್ಲೇಖಗಳಿವೆ. ವಚನ ಚಳವಳಿ, ನಾಥ-ದತ್ತ ಪಂಥ, ಸಿದ್ಧರು, ದೇವರ ಗುಡ್ಡಪ್ಪಂದಿರು, ನೀಲಗಾರರ ಮೇಲೆ ಬೌದ್ಧ ದಮ್ಮದ ಹೀನಾಯಾನ, ಮಹಾಯಾನ ಮತ್ತು ವಜ್ರಯಾನ ಪಂಥಗಳ ಗಾಢವಾದ ಪ್ರಭಾವವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಮತ್ತಷ್ಟು ಸಂಶೋಧನೆಗಳಾದರೆ ಕರ್ನಾಟಕದ ಇತಿಹಾಸವು ಮತ್ತಷ್ಟು ಪ್ರಾಚೀನಗೊಳ್ಳುವುದಲ್ಲದೇ ಬುದ್ಧನ ಬೆಳಕು ಕನ್ನಡ ನೆಲದಲ್ಲೆಲ್ಲಾ ಪಸರಿಸಿರುವ ಇತಿಹಾಸ ಕನ್ನಡಿಗರಿಗೆ ದಕ್ಕುವುದು ಖಡಾಖಂಡಿತ.

ಪರಾಮರ್ಶನ ಗ್ರಂಥಗಳು

ಬೌದ್ಧಾಯನ: ತಾಳ್ತಜೆ ವಸಂತಕುಮಾರ್

Buddhism in Karnataka: R C Hiremath

Buddhism in Coastal Karnataka: Prof. T. Murugeshi

Dust on the Throne : Douglas Ober

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಿಕಾಸ್ ಆರ್ ಮೌರ್ಯ

contributor

Similar News

ಭಾವ - ವಿಕಲ್ಪ
ಕಥೆಗಾರ