ಭಾರತದಲ್ಲಿ ಪತ್ರಕರ್ತೆಯರ ಸವಾಲುಗಳು
ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ಮಂಜುಳಾ ಅವರು ಪಿ.ಸಾಯಿನಾಥ್ ಅವರ PARI ಪೆಲೋಶಿಪ್ಗೆ ಆಯ್ಕೆಯಾದವರು. ಕಳೆದ ೧೫ ವರ್ಷಗಳಿಂದ ಕನ್ನಡದ ಸಮಯ, ರಾಜ್ ಟಿವಿ ಸುದ್ದಿವಾಹಿನಿಗಳಲ್ಲಿ ಚರ್ಚಾ ಕಾರ್ಯಕ್ರಮಗಳು, ಸಂದರ್ಶನಗಳನ್ನು ನಡೆಸುತ್ತಾ ಬಂದಿದ್ದಾರೆ. ಅನೇಕ ವಿಷಯಗಳ ಬಗ್ಗೆ ಅಧ್ಯಯನ ಲೇಖನಗಳನ್ನು ಬರೆದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯ ಡಿಜಿಟಲ್ ಚಾನಲ್ನಲ್ಲಿ ಹಿರಿಯ ನಿರೂಪಕಿಯಾಗಿ ಚರ್ಚೆ, ಸಂದರ್ಶನ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಚಿರಪರಿಚಿತರಾಗಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ರಾಂತಿ ಮಹಿಳೆಯರು ತಮ್ಮನ್ನು ತಾವು ಮಾಧ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಕಳೆದ ೧೦ ವರ್ಷಗಳಲ್ಲಿ ಭಾರತೀಯ ಮಾಧ್ಯಮದಲ್ಲಿ ಮಹಿಳೆ ಸಾಕಷ್ಟು ಮುಂದಕ್ಕೆ ಚಲಿಸಿದ್ದಾಳೆ ಇದೇ ಹೊತ್ತಿಗೆ ಅನೇಕ ಹಳೆ ಸವಾಲುಗಳ ಜೊತೆ ಹೊಸ ಸವಾಲುಗಳು ಎದುರಾಗಿವೆ.
ಹಿಂದೆ ಮುದ್ರಣ ಮಾಧ್ಯಮ ಮಾತ್ರ ಇದ್ದ ಕಾಲವಿತ್ತು, ಈಗ ಮಾಧ್ಯಮ ವಿಸ್ತಾರಗೊಳ್ಳುತ್ತಿದ್ದಂತೆ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಹೆಚ್ಚಾಗಿದೆ. ಆದರೆ ಪುರುಷ ಪ್ರಧಾನ ಸಮಾಜದ ಮಾಧ್ಯಮ ವ್ಯವಸ್ಥೆಯ ಒಳಗೂ ಮಹಿಳೆ ಲಿಂಗ ತಾರತಮ್ಯ ಎದುರಿಸಬೇಕಾಗಿದೆ ಅದು ಪುರುಷರಿಗಿಂತ ಕಡಿಮೆ ವೇತನ, ಭಡ್ತಿ, ಅವಕಾಶ, ಆದ್ಯತೆ ಇತ್ಯಾದಿ ವಿಧಗಳಲ್ಲಿ.
ಇತ್ತೀಚೆಗೆ ಹಿರಿಯ ವಿಜ್ಞಾನಿಯೊಬ್ಬರೂ ಪ್ರಸ್ತಾಪಿಸುವಂತೆ ಕೋವಿಡ್ ಸಂಕಷ್ಟ ಕಾಲದಲ್ಲಿ ಮಹಿಳಾ ಪತ್ರಕರ್ತರ ಕೊಡುಗೆ ಅಪಾರವಾಗಿತ್ತು, ಸಂಕಷ್ಟ ಕಾಲದಲ್ಲಿ, ತಳಮಟ್ಟದ ಸುದ್ದಿ ಮಾಡಿ ಭಾರತೀಯ ವೈದ್ಯಕೀಯ ವ್ಯವಸ್ಥೆಯ ಸ್ಥಿತಿ ಮತ್ತು ಕೋವಿಡ್ ನಿರ್ವಹಣೆ ಕುರಿತು ವಸ್ತುನಿಷ್ಠ,ಅತ್ಯುತ್ತಮ ಸತ್ಯ ವರದಿ ಮಾಡಿದರು. ಹಾಥರಸ್ ನಂತಹ ಮುಗಿದುಹೋಗುತ್ತಿದ್ದ ಸುದ್ದಿಗೆ ಜೀವ ನೀಡಿದವರು ಪತ್ರಕರ್ತೆ ತನುಶ್ರೀ ಪಾಂಡೆ ಈ ತರದ ಅನೇಕ ಪತ್ರಕರ್ತೆಯರು ಡಿಜಿಟಲ್ ಯುಗದಲ್ಲಿ ದಿಟ್ಟ ವರದಿಗಾರಿಕೆ ಮಾಡಿದ್ದಾರೆ. ಕಾರ್ಗಿಲ್ ಯುದ್ಧ, ಮುಂಬೈ ಭಯೋತ್ಪಾದಕ ದಾಳಿ ಸಹಿತ ದೇಶದ ಹಲವು ಪ್ರಮುಖ ಘಟನೆಗಳ ವರದಿ ಮಾಡಿರುವ ಬರ್ಖಾ ದತ್ ಕೊರೋನ ಕಾಲದಲ್ಲಿ ಇಡೀ ದೇಶ ಸುತ್ತಿ ಜನ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಡಿರುವ ವರದಿಗಾರಿಕೆ ಎಲ್ಲ ಪತ್ರಕರ್ತರಿಗೆ ಮಾದರಿ. ನ್ಯೂಸ್ ಲಾಂಡ್ರಿಯ ಮನಿಷಾ ಪಾಂಡೆ ವರದಿಗಾರ್ತಿಯಾಗಿ, ವಿಶ್ಲೇಷಕಿಯಾಗಿ, ವಿಡಂಬನಕಾರ್ತಿಯಾಗಿ ಗಮನ ಸೆಳೆಯುತ್ತಿದ್ದಾರೆ. ಅವರ ನ್ಯೂಸೆನ್ಸ್ ಕಾರ್ಯಕ್ರಮ ದೇಶದಲ್ಲೇ ಮಾಧ್ಯಮಗಳ ಕಾರ್ಯವೈಖರಿ ಕುರಿತ ಅತ್ಯುತ್ತಮ ವಿಮರ್ಶಾ ಕಾರ್ಯಕ್ರಮ.
ಯೂಟ್ಯೂಬ್ನಲ್ಲಿ ಸ್ವತಂತ್ರ ಮಹಿಳಾ ಪತ್ರಕರ್ತರ ಜೊತೆಜೊತೆಗೇ ಗರಿಮಾ, ಡಾ.ಮಾದ್ರಿ ಮೆಡುಸಾರಂತಹ ಕಾಮಿಡಿಯನ್ಗಳು, ವಿಡಂಬನಕಾರ್ತಿಯರೂ ನಮ್ಮ ರಾಜಕೀಯದ ಹುಳುಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ. ಇವರ ಕೆಲಸ ಪತ್ರಕರ್ತರ ವರದಿಗಾರಿಕೆ, ವಿಶ್ಲೇಷಣೆಗೆ ಪೂರಕವಾಗಿ ನಡೆಯುತ್ತಿದೆ. ಹಾಗೇ ನೋಡಿದರೆ ಪುರುಷ ಪತ್ರಕರ್ತರಿಗಿಂತಲೂ ಹೆಚ್ಚಿನ ಎದೆಗಾರಿಕೆ, ಪ್ರಾಮಾಣಿಕ ವೃತ್ತಿಧರ್ಮ ಪಾಲನೆ ಮಹಿಳಾ ಪತ್ರಕರ್ತರಲ್ಲೇ ಹೆಚ್ಚು. ಭ್ರಷ್ಟಾಚಾರದ ವಿಚಾರದಲ್ಲೂ ಮಹಿಳಾ ಪತ್ರಕರ್ತರ ಸಂಖ್ಯೆ ಕಡಿಮೆಯೇ. ಮಹಿಳಾ ಪತ್ರಕರ್ತರ ಸಂಖ್ಯೆ ಹಿಂದಿನಿಂದಲೂ ಇದ್ದರೂ ಸಂಖ್ಯೆ ಕಡಿಮೆ ಇತ್ತು, ಮತ್ತು ಈಗಿನ ರಾಜಕೀಯ ಆಯಾಮದ ಸವಾಲುಗಳ ಸಂಖ್ಯೆ ಕಡಿಮೆ ಇತ್ತು.
ಬರೀ ಮಾಧ್ಯಮದಲ್ಲಿ ಮಾತ್ರ ಮಹಿಳೆ ಸವಾಲು ಎದುರಿಸುತ್ತಿದ್ದಾಳಾ? ಖಂಡಿತ ಇಲ್ಲ, ಎಲ್ಲ ಕ್ಷೇತ್ರಗಳಲ್ಲೂ ಸವಾಲಿದೆ. ಹಾಗೇ ಭಾರತೀಯ ಮಾಧ್ಯಮ ಮಾತ್ರವಲ್ಲ ಪ್ರಪಂಚದ ಯಾವುದೇ ಭಾಗದ ಮಾಧ್ಯಮ ವ್ಯವಸ್ಥೆಯಲ್ಲೂ ಮಹಿಳಾ ಪತ್ರಕರ್ತರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ವಿಶ್ವ ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ವರದಿಯಂತೆ ಶೇ.೭೨ರಷ್ಟು ಮಹಿಳಾ ಪತ್ರಕರ್ತರು ಬೆದರಿಕೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದಾರೆ.
ರಿಪೋರ್ಟರ್ಸ್ ವಿತೌಟ್ ಬಾರ್ಡರ್ ವರದಿಯಂತೆ ಶೇ.೩೫ ಮಹಿಳಾ ಪತ್ರಕರ್ತರು ತಮ್ಮ ಕೆಲಸದ ಕಾರಣಕ್ಕೆ ಜೈಲುಶಿಕ್ಷೆ ಅನುಭವಿಸಬೇಕಾಗಿದೆ. ಭಾರತದಲ್ಲೂ ಪರಿಸ್ಥಿತಿ ಭಿನ್ನವೇನಿಲ್ಲ.
ಭಾರತೀಯ ಮಾಧ್ಯಮದಲ್ಲಿ ಮಹಿಳಾ ಪತ್ರಕರ್ತರ ಸವಾಲುಗಳನ್ನು ಮೂರು ಹಂತದಲ್ಲಿ ನೋಡಬಹುದು.
- ಕೌಟುಂಬಿಕ ಹಂತ
- ಸಂಸ್ಥೆಯ ಒಳಗಿನ ಹಂತ
- ರಾಜಕೀಯವಾಗಿ ಸಂಸ್ಥೆಯ ಹೊರಗಿನ ಹಂತ
ಮಹಿಳಾ ಪತ್ರಕರ್ತರು ಹೆಚ್ಚು ಅವಕಾಶಗಳನ್ನು ಕಂಡುಕೊಳ್ಳುತ್ತಾ ಇದ್ದರೂ, ಅದನ್ನು ಪಡೆಯಲು ಮೊದಲು ಕೌಟುಂಬಿಕ ಚೌಕಟ್ಟು ದಾಟಬೇಕಿದೆ. ಪತ್ರಿಕೋದ್ಯಮ ಮಹಿಳೆಯರ ಕ್ಷೇತ್ರವಲ್ಲ ಎನ್ನುವ ಮನೋಭಾವದಿಂದ ಸಂಪೂರ್ಣ ನಮ್ಮ ಸಮಾಜ ಹೊರಬಂದಿಲ್ಲ. ಇತ್ತೀಚಿನ ಟ್ರೋಲ್ಗಳಂತೂ ಮರ್ಯಾದಸ್ಥ ಹೆಣ್ಣುಮಕ್ಕಳಿಗೆ ಬೇಡ ಅಂತಲೇ ಪೋಷಕರು ಬಯಸುವ ಸ್ಥಿತಿ ಬಂದಿದೆ. ಕಾರ್ಪೊರೇಟ್ ದಿನಚರಿಯಂತೆ ಇರದೇ ಪತ್ರಕರ್ತರು ದಿನದ ೨೪ ಗಂಟೆಯೂ ಕೆಲಸದ ಸಮಯ ಅಂತಲೇ ಭಾವಿಸಬೇಕಾಗಿರುವುದರಿಂದ ಸಿದ್ಧ ಮಾದರಿಯ ಸಂಸಾರದ ಚೌಕಟ್ಟಿನ ಆಚೆ ಯೋಚಿಸುವ ಹೆಣ್ಣು ಮಕ್ಕಳಷ್ಟೇ ಇಲ್ಲಿ ಈಜಲು ಸಾಧ್ಯ.
ಹಾಗೋ ಹೀಗೋ ಆ ಎಲ್ಲ ಚೌಕಟ್ಟು ಮೀರಿ ಮಾಧ್ಯಮ ಸಂಸ್ಥೆಯ ಒಳಗೆ ಕಾಲಿಟ್ಟರೂ ಅಲ್ಲಿನ ಸಮಸ್ಯೆಗಳಿಂದ ಹೊರಹೋಗುವವರ ಸಂಖ್ಯೆಯೂ ದೊಡ್ಡದಿದೆ, ಲಿಂಗ ತಾರತಮ್ಯ ಇಲ್ಲೂ ಇದೆ. ಭಡ್ತಿ ನೀಡುವಾಗ,ವೇತನ ನೀಡುವಾಗ ಪತ್ರಕರ್ತೆಯರನ್ನು ಪರಿಗಣಿಸುವುದೇ ಕಡಿಮೆ. ಇವತ್ತಿಗೂ ಅತಿ ಹೆಚ್ಚಿನ ಮಾಧ್ಯಮ ಸಂಸ್ಥೆಗಳ ಸಂಪಾದಕರು ಅಥವಾ ಅತಿ ಉನ್ನತ ಸ್ಥಾನದಲ್ಲಿ ಇರುವವರು ಪುರುಷರೇ ಆಗಿದ್ದಾರೆ. ‘ಓ ವುಮಾನಿಯಾ’ ಮೂರನೇ ಆವೃತ್ತಿಯ ವರದಿ ಹೇಳುವಂತೆ ಭಾರತೀಯ ಮಾಧ್ಯಮದ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಪ್ರಮಾಣ ಶೇ.೧೩ರಷ್ಟಿದೆ. ೨೦೨೧ರಲ್ಲಿ ಈ ಪ್ರಮಾಣ ಶೇ.೧೦ರಷ್ಟಿತ್ತು.
ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಆಕೆ ದುರ್ಬಲಳು ಅಂತಲೇ ಲೆಕ್ಕ ಹಾಕಲಾಗುತ್ತದೆ, ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯೊಂದರಲ್ಲಿ ನನ್ನ ಸಹೋದ್ಯೋಗಿ ಯೊಬ್ಬರು ಹೇಳಿದ ಮಾತು ಒಂದು ಕ್ಷಣ ಯೋಚನೆಗೆ ಹಚ್ಚಿತ್ತು, ಮದುವೆಯಾದ ಹೆಣ್ಣುಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡರೆ ರಿಸ್ಕ್ ಜಾಸ್ತಿ, ಅದರಲ್ಲೂ ಮಕ್ಕಳಿದ್ದರೆ ಕಷ್ಟವಂತೆ, ಸಂಸಾರದ ಜವಾಬ್ದಾರಿ ಇರುವುದರಿಂದ ಆಕೆ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ, ಅವಧಿ ಮೀರಿದ ಕೆಲಸ ಮಾಡಿಸಲು ಸಾಧ್ಯವಿಲ್ಲ, ಮಕ್ಕಳ ಅನಾರೋಗ್ಯ, ಹಬ್ಬ-ಹರಿದಿನ ಜೊತೆಗೆ ಮೆಟರ್ನಿಟಿ ಅಂತ ರಜೆ ಬೇರೆ ಹೆಚ್ಚು. ಇವೆಲ್ಲ ರಗಳೆಗಿಂತ ಪುರುಷರು ಬೆಸ್ಟ್ ಅಂದಿದ್ದರು. ಆದರೆ ಟೆಲಿವಿಷನ್ ಲೋಕದಲ್ಲಿ ಸುದ್ದಿ ನಿರೂಪಣೆಗೆ ಚಂದದ ೨೦ ರಿಂದ ೨೫ ವರ್ಷ ವಯಸ್ಸಿನ ಅವಿವಾಹಿತ ಹೆಣ್ಣು ಮಕ್ಕಳಿಗೆ ಆದ್ಯತೆ,ಮಾಧ್ಯಮದಲ್ಲೂ ಮಹಿಳೆ ಒಂದು ಸರಕು ಅನ್ನೋದಕ್ಕೆ ಇದು ಉದಾಹರಣೆಯಷ್ಟೇ. ಇದೊಂತರ ಚಿತ್ರರಂಗದಲ್ಲಿ ಹೀರೋ ೫೦ ಆದರೂ ೨೦ ವರ್ಷದ ಹೀರೋಯಿನ್ ಬೇಕು ಅನ್ನೋ ತರ. ಪುರುಷ ನಿರೂಪಕರಿಗೆ ವಯಸ್ಸಿನ ನಿರ್ಬಂಧವಿಲ್ಲ, ಅಲ್ಲಿ ಪ್ರಬುದ್ಧತೆ, ಜ್ಞಾನ ಮುಖ್ಯವಾಗುತ್ತದೆ. ಆದರೆ ಮಹಿಳೆಯರ ವಿಚಾರಕ್ಕೆ ಬಂದರೆ ಇಲ್ಲಿ ಕೇವಲ ಸೌಂದರ್ಯ ಮುಖ್ಯವಾಗುತ್ತದೆ, ಕೆಲವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳಲ್ಲಿ ಈ ಚೌಕಟ್ಟು ಮೀರುವ ಪ್ರಯತ್ನ ಆಗುತ್ತಿದೆಯಾದರೂ ಇದಿನ್ನು ಹೆಚ್ಚಬೇಕಿದೆ.
ವೇತನದ ವಿಚಾರದಲ್ಲೂ ಪುರುಷ ಪತ್ರಕರ್ತರಿಗಿಂತ ಕಡಿಮೆಯೇ, ಅದರಾಚೆಗೆ ಗೌರವ ಅಂತ ಬಂದಾಗಲೂ ಮಹಿಳೆಯರು ಎರಡನೇ ದರ್ಜೆಯೇ. ೨೦೧೭ರ ಮಿಟೂ ಅಭಿಯಾನ ಸಂದರ್ಭದಲ್ಲಿ ಪತ್ರಕರ್ತೆಯರು ತಾವು ಅನುಭವಿಸಿದ ಕಹಿ ಅನುಭವ ಹಂಚಿಕೊಂಡಿದ್ದರು. ಭಾರತದಲ್ಲೂ ಮಹಿಳಾ ಪತ್ರಕರ್ತರು ಇದನ್ನು ಅನುಭವಿಸಿದ್ದಿದೆ, ಅವಕಾಶಕ್ಕಾಗಿ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಲೈಂಗಿಕ ಕಿರುಕುಳ, ಅಪಹಾಸ್ಯ, ಅಗೌರವ ಬರೀ ಸಂಸ್ಥೆಯ ಒಳಗೆ ಮಾತ್ರವಲ್ಲ ಹೊರಗೆ ವರದಿಗಾರಿಕೆಗೆ ಹೋದಾಗಲೂ ಅನುಭವಿಸುತ್ತಾರೆ, ಇತ್ತೀಚೆಗೆ ಬಿಜೆಪಿಯ ಅಣ್ಣಾಮಲೈ ಪತ್ರಕರ್ತೆಯನ್ನು ನಡೆಸಿಕೊಂಡ ರೀತಿ, ಕೇರಳದ ಬಿಜೆಪಿ ನಾಯಕ ಸುರೇಶ್ ಗೋಪಿ ವರದಿಗಾರ್ತಿಯ ಜೊತೆ ಅಸಭ್ಯವಾಗಿ ವರ್ತಿಸಿ ಪ್ರಕರಣ ದಾಖಲಾಗಿದ್ದು ಈ ಪಟ್ಟಿಗೆ ಸೇರುತ್ತದೆ. ಕರ್ನಾಟಕದಲ್ಲೇ ಬಿಜೆಪಿ ನಾಯಕ ಈಶ್ವರಪ್ಪ ಅವರಿಗೆ, ಓರ್ವ ಪತ್ರಕರ್ತೆ ಅತ್ಯಾಚಾರ ಘಟನೆ ಬಗ್ಗೆ ಪ್ರಶ್ನೆ ಮಾಡಿದಾಗ ‘ನೀವು ಮಹಿಳೆ,ಯಾರಾದರೂ ನಿಮ್ಮನ್ನು ಎಳೆದೊಯ್ದು ಅತ್ಯಾಚಾರ ಎಸಗಿದರೆ ನಾವೇನು ಮಾಡಲು ಸಾಧ್ಯ’ ಅಂತ ಪ್ರಶ್ನಿಸಿದ್ದರು. ಇನ್ನು ಕೆಲವು ರಾಜಕಾರಣಿಗಳು ಮತ್ತು ಇತರರ ವರ್ತನೆ ತೀರಾ ಅಸಹನೀಯವಾದದ್ದು.
ಈ ಮೇಲಿನ ಸವಾಲುಗಳನ್ನು ಮಹಿಳಾ ಪತ್ರಕರ್ತರು ಮೊದಲು ಎದುರಿಸಿದ್ದಾರೆ. ಆದರೆ ಕಳೆದ ೯-೧೦ ವರ್ಷಗಳ ಸವಾಲು ಹೊಸ ಆಯಾಮದ್ದಾಗಿದ್ದು, ಆನ್ಲೈನ್ ಮತ್ತು ಆಫ್ ಲೈನ್ ಎರಡು ಕಡೆಯಿಂದ ಸವಾಲು ಎದುರಿಸುತ್ತಿದ್ದಾರೆ, ಸರಕಾರದ ವಿಮರ್ಶೆ, ಟೀಕೆ ಪತ್ರಕರ್ತೆಯರಿಗೆ ಬಹಳ ದುಬಾರಿಯಾಗಿದೆ, ಉದಾಹರಣೆಗೆ ಕೋವಿಡ್ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಕೋವಿಡ್ ಪರಿಹಾರ ಕುರಿತ ಸುದ್ದಿಗಳಿಗಾಗಿ ಪತ್ರಕರ್ತೆ ಸುಪ್ರಿಯಾ ಶರ್ಮಾ ಮೇಲೆ ಪ್ರಕರಣ ದಾಖಲಿಸಲಾಯಿತು, ಇತ್ತೀಚೆಗೆ ತ್ರಿಪುರಾದಲ್ಲಿ ವರದಿಗಾರಿಕೆಗೆ ತೆರಳಿದ್ದ ಇಬ್ಬರು ಯುವ ಪತ್ರಕರ್ತೆಯರಿಗೆ ಪೊಲೀಸರೇ ತಡೆ ಒಡ್ಡಿದರು.
ಯುಪಿಯ ಹಾಥರಸ್ ಪ್ರಕರಣ ಬಯಲಿಗೆಳೆದ ಇಂಡಿಯಾ ಟುಡೆ ಪತ್ರಕರ್ತೆ ತನುಶ್ರೀ ಪಾಂಡೆ ಫೋನ್ ಆಡಿಯೋ ಲೀಕ್ ಮಾಡಲಾಯಿತು. ಪೆಗಾಸಸ್ ಮೂಲಕ ನಿಗಾ ವಹಿಸುತ್ತಿದ್ದ್ದ ಪಟ್ಟಿಯಲ್ಲಿ ನಿರಂತರ ತನಿಖಾ ವರದಿ ಮಾಡ್ತಿದ್ದ ಪತ್ರಕರ್ತೆ ರೋಹಿಣಿ ಸಿಂಗ್ ಹೆಸರೂ ಇತ್ತು. ಇವು ಪ್ರಭುತ್ವವೊಂದು ಹೇಗೆ ಮಹಿಳಾ ಪತ್ರಕರ್ತರನ್ನು ಗುರಿಯಾಗಿಸಬಲ್ಲದು ಎನ್ನುವುದನ್ನು ತೋರಿಸುತ್ತದೆ. ಪತ್ರಕರ್ತೆ ರಾಣಾ ಅಯ್ಯೂಬ್ಗೆ ವ್ಯವಸ್ಥೆ ನೀಡುತ್ತಿರುವ ಕಿರುಕುಳದ ಬಗ್ಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ದನಿಯೆದ್ದಿದೆ. ಇನ್ನು ವಸ್ತುನಿಷ್ಠ, ದಿಟ್ಟ ವರದಿಗಾರಿಕೆಗಾಗಿ ಅನೇಕ ಮಂದಿ ಪತ್ರಕರ್ತೆಯರು ಕೆಲಸ ಕಳೆದುಕೊಂಡಿದ್ದಾರೆ.ಬಹುತೇಕ ಮಾಧ್ಯಮ ಸಂಸ್ಥೆಗಳು ಕೆಲವು ಹಿತಾಸಕ್ತಿಗಾಗಿ ನಡೆಯುತ್ತಿರುವುದರಿಂದ ಒಂದು ರೀತಿಯ ಅಭದ್ರತೆಯಲ್ಲೇ ಇರಬೇಕಾಗಿದೆ. ಈ ಉಸಿರುಗಟ್ಟಿಸುವ ವಾತಾವರಣದಿಂದ ಹೊರ ಬಂದು ಸ್ವತಂತ್ರ ಮಾಧ್ಯಮ ಕಟ್ಟುವ ಪ್ರಯತ್ನವೂ ಆಗುತ್ತ್ತಿದೆ. ಅದಕ್ಕೆ ಡಿಜಿಟಲ್ ಮಾಧ್ಯಮ ಉತ್ತಮ ವೇದಿಕೆ ಆಗಿದೆ. ತಮ್ಮದೇ ವೆಬ್ಸೈಟ್, ಯುಟ್ಯೂಬ್ ಚಾನೆಲ್ ಮಾಡಿಕೊಂಡು ತಮ್ಮ ದಿಟ್ಟ ವರದಿಗಾರಿಕೆ ಮುಂದುವರಿಸಿದ್ದಾರೆ. ಧನ್ಯಾ ರಾಜೇಂದ್ರನ್, ಸಾಕ್ಷಿ ಜೋಶಿ, ಕುಂಕುಮ್ ಬಿನ್ವಾಲ್,ಕನ್ನಡದ ವಿಜಯಲಕ್ಷ್ಮೀ ಶಿಬರೂರು, ಬರ್ಖಾ ದತ್ ಇದರಲ್ಲಿ ಪ್ರಮುಖರು. ಉತ್ತರ ಪ್ರದೇಶದ ‘ಖಬರ್ ಲಹರಿಯಾ’ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತನ್ನ ವರದಿಗಳಿಂದ ಗಮನ ಸೆಳೆದಿದ್ದು, ಶೋಷಿತ ಸಮುದಾಯದ ಮಹಿಳೆಯರ ತಂಡ ನಡೆಸುತ್ತಿರುವ ಮಾಧ್ಯಮ ಸಂಸ್ಥೆ ಇದಾಗಿದೆ. ತಳ ಸಮುದಾಯದ ಭಿನ್ನ ವರದಿಗಳಿಂದ ಇದು ಹೆಸರಾಗಿದೆ. ಈ ತರದ ಉದಾಹರಣೆಗಳು ಕಡಿಮೆಯೇ.
ಇದೆಲ್ಲದಕ್ಕಿಂತ ಹೆಚ್ಚು ಪತ್ರಕರ್ತೆಯರು ಎದುರಿಸುತ್ತಿರುವ ಇಂದಿನ ದೊಡ್ಡ ಸವಾಲು ಟ್ರೋಲ್ ಆರ್ಮಿ ದಾಳಿ. ಪ್ರಭುತ್ವದ ಪರ ಮತ್ತು ಕೆಲವು ಸಿದ್ಧಾಂತದ ಗುಂಪುಗಳು ನಡೆಸುವ ಆನ್ಲೈನ್ ದಾಳಿಗೆ, ಬಹುತೇಕ ಪತ್ರಕರ್ತೆಯರು ತುತ್ತಾಗುತಿದ್ದಾರೆ. ಪತ್ರಕರ್ತೆ ಸ್ವಾತಿ ಚತುರ್ವೇದಿ ‘ಐ ಯಾಮ್ ಎ ಟ್ರೋಲ್’ ಎನ್ನುವ ಪುಸ್ತಕದಲ್ಲಿ ಹೇಗೆ ಈ ಟ್ರೋಲ್ ಆರ್ಮಿ ಕೆಲಸ ಮಾಡುತ್ತದೆ ಅನ್ನೋದನ್ನು ವಿವರವಾಗಿ ದಾಖಲಿಸಿದ್ದಾರೆ ಮತ್ತು ಈ ಟ್ರೋಲ್ ಮಾಡುವವರನ್ನು ಪ್ರಧಾನಿ ಮೋದಿ ಆಗಿನ ಟ್ವಿಟರ್ ಅಂದರೆ ಈಗಿನ ಎಕ್ಸ್ ನಲ್ಲಿ ಫಾಲೋ ಮಾಡುತ್ತಿರುವುದರ ಬಗ್ಗೆಯೂ ಅವರು ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಬರ್ಖಾದತ್, ರಾಣಾ ಅಯ್ಯೂಬ್, ನಿಧಿ ರಾಜ್ದಾನ್, ಸ್ವಾತಿ ಚತುರ್ವೇದಿ, ಸಾಕ್ಷಿ ಜೋಶಿ, ಸಾಗರಿಕ ಘೋಷ್, ಆರ್ಫಾ ಖಾನೂಮ್ ತರದ ಪತ್ರಕರ್ತೆಯರಿಗೆ ಅತ್ಯಾಚಾರ, ಕೊಲೆ, ಆ್ಯಸಿಡ್ ಎರಚುವ ಬೆದರಿಕೆ ಜೊತೆಗೆ ಅವರ ಫೋಟೊ, ವೀಡಿಯೊ ಮಾರ್ಫ್ ಮಾಡಿ ಕೆಲವು ಅಶ್ಲೀಲ ವೆಬ್ಸೈಟ್ಗೆ ಅವರ ಫೋನ್ ನಂಬರ್ ಅಪ್ಲೋಡ್ ಮಾಡಿದ ಉದಾಹರಣೆಗಳಿವೆ. ಈ ಹೊಸ ಸವಾಲುಗಳು ಕಳೆದ ೯ ವರ್ಷಗಳಲ್ಲಿ ಹೆಚ್ಚಾಗಿವೆ. ಇತ್ತೀಚೆಗೆ ಪತ್ರಕರ್ತೆ ಫಲ್ಕಿ ಶರ್ಮಾ ಉಪಾಧ್ಯಾಯ ನ್ಯೂಸ್ ರೂಂ ನಲ್ಲಿ ಮಹಿಳೆಯರ ಎದುರಿನ ಸವಾಲುಗಳ ಬಗ್ಗೆ ವಿವರವಾಗಿ ಮಾತಾಡಿದ್ದಾರೆ.
ಇಡೀ ವಿಶ್ವದಲ್ಲೇ ಮಹಿಳಾ ಪತ್ರಕರ್ತರ ಸವಾಲು ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆಗಳಾಗುತ್ತಿವೆ. ಭಾರತದಲ್ಲಿ ತುರ್ತಾಗಿ ಮಹಿಳಾ ಪತ್ರಕರ್ತರ ಹಕ್ಕುಗಳ ರಕ್ಷಣೆಗೆ ವಿಶೇಷ ಕಾನೂನಿನ ಅಗತ್ಯದ ಬಗ್ಗೆ ಪ್ರತಿಪಾದನೆಗಳಾಗಿವೆ. ಕೆಲಸದ ಭದ್ರತೆ, ಸುರಕ್ಷತೆ,ಸ್ವಾತಂತ್ರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಮಹಿಳಾ ಪತ್ರಕರ್ತರ ಮೇಲೆ ಆಗುತ್ತಿರುವ ಆನ್ಲೈನ್ ಮತ್ತು ಆಫ್ಲೈನ್ ದಾಳಿಗೆ ತಡೆ ಒಡ್ಡಬೇಕಿದೆ. ಸಂಸತ್ತು ಅಥವಾ ಸುಪ್ರಿಂ ಕೋರ್ಟ್ ಇದರ ಬಗ್ಗೆ ಎಂದು ಕಾರ್ಯಪ್ರವೃತ್ತವಾಗುವುದೋ ಕಾದು ನೋಡಬೇಕಿದೆ.