ಸಂಪೂರ್ಣ ಪಾನ ನಿಷೇಧ ರಾಜ್ಯದ ಮುಂದಿರುವ ಸವಾಲು

ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ಕಾರ್ಯಕರ್ತೆಯರಾಗಿ ಹಲವು ಆಂದೋಲಗಳಲ್ಲಿ ಭಾಗಿಯಾಗಿರುವ ಸ್ವರ್ಣಾಭಟ್ ಸುಮಾರು 7-8 ವರ್ಷಗಳಿಂದ ಮದ್ಯನಿಷೇಧ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Update: 2024-01-03 09:51 GMT

ಒಂದು ವಾರದ ಹಿಂದೆ ಪಾನಮತ್ತ ತಂದೆಯೊಬ್ಬ ನವಜಾತ ಶಿಶುವನ್ನು ಹಿಡಿದು ರಸ್ತೆ ತುಂಬಾ ಓಡಾಡಿಸಿದ್ದು ದೂರದ ರಾಜ್ಯದಲ್ಲಲ್ಲ ನಮ್ಮದೇ ಹಾವೇರಿಯ ಲಕ್ಮೇಶ್ವರದಲ್ಲಿ. ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರಿಗೆ ಡಯಾಲಿಸಿಸ್ ಮಾಡಿ ಆಕೆಯ ಸಾವಿಗೆ ಕಾರಣನಾದ ವೈದ್ಯ ನಮ್ಮದೇ ವಿಜಯಪುರದವನು. ಕುಡಿತ ಬಿಡು ಅಂದ ಪತ್ನಿಯ ಮೇಲಿನ ಸಿಟ್ಟಿಗೆ ತನ್ನ

7 ವರ್ಷದ ಮಗುವನ್ನು ಕೊಂದವನು ರಾಯಚೂರಿನವನು. ಕೊಪ್ಪಳದಲ್ಲಿ ಕುಡಿದು ಕುಪ್ಪಳಿಸಿ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಯುವಕರು ನೆರೆಹೊರೆಯವರೇ. ಕೇಸು ದಾಖಲಿಸಿ ಕೈ ತೊಳೆದುಕೊಳ್ಳುವ ಸರಕಾರ ಮದ್ಯ ಸರಬರಾಜು ಮಾಡಿದ ತಪ್ಪಿನ ನೈತಿಕ ಹೊಣೆಗಾರಿಕೆ ಹೊರಬೇಕಲ್ವೇ?.

ಮದ್ಯ ಸರಕಾರದ ದೃಷ್ಟಿಯಲ್ಲಿ ಆದಾಯದ ಮೂಲ. ಹೆಚ್ಚು ಹೆಚ್ಚು ಮದ್ಯ ಮಾರಾಟ ಮಾಡುವುದು, ಕುಡುಕರ ಸಂಖ್ಯೆ ಹೆಚ್ಚಿಸುವುದು ಇದರ ಗುರಿ. ಕೊಡುಕೊಳ್ಳುವ ವ್ಯವಹಾರಕ್ಕಷ್ಟೇ ಮದ್ಯದ ವಿಷಯ ಸೀಮಿತ. ಆದರೆ ಮದ್ಯ ಮಾರಾಟವನ್ನು, ಸೇವನೆಯನ್ನು ವೈಯಕ್ತಿಕ ನೆಲೆಗಟ್ಟಲ್ಲಿ ನೋಡಲಾಗದು. ಒಂದು ಕುಟುಂಬದ ಸುತ್ತ, ಒಂದು ಸಮಾಜದ ಸುತ್ತ ನೋಡಿದಾಗ ಮಾತ್ರ ನೀತಿ ನಿರೂಪಣೆಯ ಮಸೂರವನ್ನು ದಾಟಿದ ಭಾವನಾತ್ಮಕ ವಿಷಯವಾಗಿ ಕಂಡಿತು. ಇದು ಮಹಿಳೆಯರ ಬದುಕಿನ ಪ್ರಶ್ನೆ. ಮಕ್ಕಳ ಬದುಕಿನ ಪ್ರಶ್ನೆ. ನಮ್ಮನ್ನಾಳುವ ಸರಕಾರಗಳ ಆದಾಯದ ಹಪಾಹಪಿಯಿಂದಾಗಿ ಮದ್ಯ ಸೇವಿಸುವವರ ಸಂಖ್ಯೆ ಕಳೆದ 40 ವರ್ಷಗಳಲ್ಲಿ ವರ್ಷಕ್ಕೆ ಶೇ.18 ಜಾಸ್ತಿ ಆಗುತ್ತಿದೆ.

ಆರ್ಥಿಕ, ಸಾಮಾಜಿಕ, ದೈಹಿಕ, ಮಾನಸಿಕತೆಯ ಮೇಲಾಗುವ ದುಷ್ಪರಿಣಾಮಗಳ ಮೇಲೆ ಅನೇಕ ಅಧ್ಯಯನಗಳು ನಡೆದಿವೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋದ ಅಂಕಿ ಅಂಶ ಮತ್ತು ನಿಮ್ಹಾನ್ಸ್ ನ 2013 ರ ವರದಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಪ್ರತ್ಯೇಕವಾಗಿ ನಡೆಸಿದ ಮದ್ಯ ಸೇವನೆಯ ಪರಿಣಾಮಗಳ ಅಧ್ಯಯನ ಆಘಾತಕಾರಿ ಅಂಶಗಳನ್ನು ವರದಿ ಮಾಡಿದೆ. ಮಹಿಳೆಯರ ಮೇಲಿನ ಶೇ.75 ರಿಂದ 85ರಷ್ಟು ಹಿಂಸೆಗೆ, ರಾತ್ರಿ ಸಂಭವಿಸುವ ಒಟ್ಟು ಶೇ.40 ಅಪಘಾತಗಳಲ್ಲಿ 25 ರಿಂದ ಶೇ. 30ನಷ್ಟು ಅಪಘಾತಕ್ಕೆ ಮದ್ಯ ಸೇವನೆಯೇ ಕಾರಣ. ಶೇ.75 ರಷ್ಟು ಅತ್ಯಾಚಾರಿಗಳು ಮದ್ಯದ ದಾಸರೇ ಆಗಿದ್ದರು ಅನ್ನುತ್ತದೆ ವರದಿಗಳು. ಶೇ.90ರಷ್ಟು ಮದ್ಯವ್ಯಸನಿಗಳು ಕೆಲಸಕ್ಕೆ ಹೋಗುವುದಿಲ್ಲ, ಅನಾರೋಗ್ಯದಿಂದ ಸಾಯುವವರಲ್ಲಿ ಉಳಿದವರಿಗಿಂತ ಇವರ ಸಂಖ್ಯೆ 4 ಪಟ್ಟು ಹೆಚ್ಚು. ಮೆದುಳಿನ ಹಾನಿಗೆ ಒಳಗಾಗುವರಲ್ಲಿ ಶೇ 15 ರಷ್ಟು ಜನ ಮದ್ಯ ಸೇವನೆಯ ಚಟಕ್ಕೆ ಬಿದ್ದವರು. ಅಪಘಾತಗಳಿಂದ ಸಂಭವಿಸುವ ಸಾವು ನೋವು ವಿಕಲಾಂಗತೆಯಲ್ಲೂ ಮದ್ಯದ ಚಟಕ್ಕೆ ಬಿದ್ದವರದೇ ಮೇಲುಗೈ. ಇವಿಷ್ಟು ನೇರ ಹಾನಿಯಾದರೆ ಪರೋಕ್ಷವಾಗಿ ದಾಖಲೆಯಾಗದ ನಷ್ಟ ಬಹಳಷ್ಟು. ಮಕ್ಕಳು ಶಿಕ್ಷಣ ವಂಚಿತರಾಗುವುದು, ಸಮಾಜದಿಂದ ಹೊರಗುಳಿಯುವುದು, ಅವಮಾನ, ಶಿಕ್ಷಣದಲ್ಲಿ ನಿರಾಸಕ್ತಿ, ವಿವಾಹ ವಿಚ್ಛೇದನದಂಥ ಸಮಸ್ಯೆಗಳು - ಇತ್ಯಾದಿ.. ಭಾರತದಲ್ಲಿ ಶೇ.90 ಆಲ್ಕೋಹಾಲ್ ಭರಿತ ಮದ್ಯ (ಹಾರ್ಡ್ ಲಿಕ್ಕರ್) ಸೇವಿಸುವವರ ಸಂಖ್ಯೆಯೇ ಜಾಸ್ತಿ. ಇದು ಇನ್ನೂ ಅಪಾಯಕಾರಿ. (ಬೇರೆ ದೇಶಗಳಲ್ಲಿ ಇದು ಶೇ. 40 ಮಾತ್ರ.)

 

ಸಂವಿಧಾನದ 47ನೇ ಪರಿಚ್ಛೇದದಲ್ಲಿ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶಕ ತತ್ವಗಳ ಮೂಲಕ ಸ್ಪಷ್ಟವಾದ ದಾರಿಯನ್ನು ಸೂಚಿಸಿದೆ. ಜನರ ಪೌಷ್ಟಿಕಾಂಶದ ಮಟ್ಟ ಹೆಚ್ಚಿಸುವುದು, ಜನರ ಜೀವನ ಮಟ್ಟ ಎತ್ತರಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ಪ್ರಭುತ್ವದ ಮುಖ್ಯ ಕರ್ತವ್ಯವಾಗಬೇಕು. ಆರೋಗ್ಯಕ್ಕೆ ಹಾನಿಕಾರಕವಾಗುವ ಯಾವುದೇ ಮಾದಕ ವಸ್ತುಗಳನ್ನು ವೈದ್ಯಕೀಯ ಕಾರಣಗಳ ಹೊರತಾಗಿ ಪ್ರತಿಬಂಧಿಸಬೇಕು. ಆ ಮೂಲಕ ಮದ್ಯ ನೀತಿ ಜಾರಿಗೊಳಿಸಿ ಮದ್ಯ ನಿಷೇಧದತ್ತ ಸಾಗಬೇಕೆಂಬುದು ಅಂಬೇಡ್ಕರ್ ನಾಯಕತ್ವದಲ್ಲಿ ರಚಿಸಲಾದ ಸಂವಿಧಾನದ ಆಶಯವಾಗಿತ್ತು. ಇವು ಹಕ್ಕುಗಳಲ್ಲದೇ ಹೋದರೂ ಇವಕ್ಕೂ ಮಿಗಿಲಾದ ನೈತಿಕ ಅಂಶಗಳಾಗಿರುವುದರಿಂದ ಇವನ್ನು ಕಾನೂನಾಗಿಸಬಹುದು. ಆದರೆ ಇವೆಲ್ಲವನ್ನೂ ಮೀರಿ ಆನೆ ನಡೆದಿದ್ದೇ ದಾರಿ ಎಂದೇ ಸರಕಾರಗಳು ಸಾಗುತ್ತಿದೆ.

1787ರಲ್ಲಿ ಟಿಪ್ಪು ಸುಲ್ತಾನ್ ಸಂಪೂರ್ಣ ಪಾನ ನಿಷೇಧದ ನಿರ್ಧಾರ ಕೈಗೊಳ್ಳುತ್ತಾರೆ. ಆಗ ಹಣಕಾಸು ಮಂತ್ರಿಯಾಗಿದ್ದ ಮೀರ್ ಸಾಧಿಕ್ ಬೊಕ್ಕಸಕ್ಕಾಗುವ ನಷ್ಟದ ಬಗ್ಗೆ ಮಾತಾಡಿದಾಗ ಟಿಪ್ಪು ‘‘ಜನರ ಆರೋಗ್ಯ ಮತ್ತು ನೈತಿಕತೆಗಿಂತ ಬೊಕ್ಕಸ ತುಂಬುವ ಮದ್ಯದ ಆದಾಯ ಮುಖ್ಯವೇ’’ ಎಂದು ಪ್ರಶ್ನಿಸಿ ಪತ್ರ ಬರೆದ ದಾಖಲೆಗಳಿವೆ. ಮದ್ಯ ವಿರೋಧಿಯಾಗಿದ್ದ ಗಾಂಧಿ ‘ಮದ್ಯ ಮಾರಾಟದ ಆದಾಯವನ್ನು ಶಿಕ್ಷಣ, ಆರೋಗ್ಯದಂಥ ಸಾರ್ವಜನಿಕ ಸೇವೆಗಳಿಗೆ ಬಳಸುವುದು ಅಪರಾಧ. ಇಂಥ ಆದಾಯದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಿ ದೇಶ ಕಟ್ಟುತ್ತೇವೆ ಅನ್ನುವುದು ಭ್ರಮೆ. ಇದು ನೈತಿಕ ಮತ್ತು ದೈಹಿಕ ನಷ್ಟಕ್ಕೆ ಸಂಬಂಧಿಸಿದ ವಿಷಯ, ಮದ್ಯದ ಹಣ ಮುಟ್ಟಲೇ ಕೂಡದು’ ಎಂದು ಸ್ಪಷ್ಟವಾಗಿ ಹೇಳಿದ್ದರು. ವಿಪರ್ಯಾಸವೆಂದರೆ ಅಬಕಾರಿ ಇಲಾಖೆಗಳಲ್ಲಿ ಗಾಂಧಿ, ಅಂಬೇಡ್ಕರ್ ಫೋಟೊಗಳಿಗೆ ಹಾರ ಹಾಕಿ ಮದ್ಯ ಮಾರಾಟ ಹೆಚ್ಚಳಕ್ಕೆ ಚಿಂತನೆ ನಡೆಯುತ್ತದೆ.

ಪ್ರಜೆಗಳಿಗೆ ಮದ್ಯದ ಚಿಂತೆ-ಪ್ರಭುತ್ವಕ್ಕೆ ಆದಾಯದ ಚಿಂತೆ. ಆದಾಯದ ಬಲು ದೊಡ್ಡ ಸಂಪನ್ಮೂಲ ಮದ್ಯವೆಂದೇ ನಿರ್ಧರಿಸಿದೆ. ಹಾಗೇ ಜನರನ್ನೂ ನಂಬಿಸಿದೆ. 23-24 ರಾಜ್ಯ ಬಜೆಟ್ನ ಒಟ್ಟು ಮೊತ್ತ 3 ಲಕ್ಷ ಕೋಟಿಗೂ ಮಿಕ್ಕಿ. ಅಬಕಾರಿ ಇಲಾಖೆಯ ಆದಾಯದ ನಿರೀಕ್ಷೆ 35,000 ಕೋಟಿ. ಅಂದಾಜು ಒಟ್ಟು ಬಜೆಟ್ಟಿನ ಶೇ.9 ಭಾಗ.

ಆದರೆ ಸರಕಾರ ಮದ್ಯ ಪಾನಿಗಳ ಮತ್ತವರ ಕುಟುಂಬದ ಮೇಲೆ ಆಗುವ ಆರ್ಥಿಕ ಹೊರೆ, ಕುಡುಕರ ಸಾವಿನಿಂದ ಒಂಟಿ ಮಹಿಳೆಯರಿಗೆ ನೀಡಬೇಕಾಗಿರುವ ಪಿಂಚಣಿ, ಮದ್ಯ ಸೇವನೆಯಿಂದ ಮಹಿಳೆಯರ ಮೇಲಾಗುವ ಹಿಂಸೆ, ಅಪಘಾತಗಳು ಮತ್ತು ಅಪರಾಧಗಳಿಗಾಗಿ ಆಯಾ ಇಲಾಖೆಗಳು ವ್ಯಯಿಸುವ ಹಣ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮದ್ಯ ವ್ಯಸನಿಗಳ ಚಿಕಿತ್ಸಾ ವೆಚ್ಚ, ಇವರ ಮಕ್ಕಳ ಶೈಕ್ಷಣಿಕ, ಮಾನಸಿಕ ಸ್ಥಿತಿಗತಿಗಳ ಸುಧಾರಣೆಗೆ ಮನೋಚಿಕಿತ್ಸೆಗಾಗಿ, ಪುನರ್ವಸತಿಗಾಗಿ ಹೀಗೆ ಹತ್ತು ಹಲವು ಕಾರಣಗಳಿಗೆ ಆದಾಯಕ್ಕಿಂತ ದುಪ್ಪಟ್ಟು ಹಣವನ್ನು ಸರಕಾರ ವಿನಿಯೋಗಿಸಬೇಕಾಗಿದೆ ಎಂದು ಸರಕಾರದ ಪ್ರತಿಷ್ಠಿತ ಸಂಸ್ಥೆಗಳಾದ ನಿಮ್ಹಾನ್ಸ್, ಐಐಎಂ ನ ‘ಮದ್ಯ ಸೇವನೆ ಮತ್ತದರ ಪರಿಣಾಮಗಳು’ ಮೇಲೆ ನಡೆದಅಧ್ಯಯನದ ವರದಿಗಳೇ ಹೇಳುತ್ತವೆ. ಇವಾವುದರ ವಿವೇಚನೆ ಇಲ್ಲದ ಸರಕಾರಗಳು ಜನರಿಗೆ ಹೆಚ್ಚು ಹೆಚ್ಚು ಕುಡಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಕುಟುಂಬಗಳ ನೆಮ್ಮದಿ ಕೆಡಿಸಿ, ಮಕ್ಕಳ ಭವಿಷ್ಯಕ್ಕೆ ಕತ್ತರಿ ಹಾಕಿ ಮದ್ಯದ ಆದಾಯದಲ್ಲೇ ನಿಮಗೆ ಕಲ್ಯಾಣ ಕಾರ್ಯಕ್ರಮ ಕೊಡುತ್ತಿದ್ದೇವೆಂದು ನಂಬಿಸುವುದಿದೆಯಲ್ಲ ಮಹಾ ದ್ರೋಹ. ಭಾಗ್ಯಲಕ್ಷ್ಮೀ ಗೃಹಲಕ್ಷ್ಮೀ ಎಲ್ಲವೂ ಮಹಿಳೆಯರ ಬಾಯಿಮುಚ್ಚಿಸುವ ತಂತ್ರಗಾರಿಕೆಯೇ.

ಲಾಕ್ಡೌನ್ ಸಮಯದಲ್ಲಿ ಮದ್ಯ ಮಾರಾಟ ಬಂದ್ ಆದಾಗ ಸಾಕಷ್ಟು ಜನ ಮದ್ಯ ವ್ಯಸನಿಗಳು ಕುಡಿತದ ಚಟದಿಂದ ಹೊರ ಬಂದಿದ್ದರು. ಹೆಣ್ಣುಮಕ್ಕಳಲ್ಲಿ ಮತ್ತೆ ಉತ್ಸಾಹ ತುಂಬಿತ್ತು. ‘‘ನನ್ನಗಂಡ ಮತ್ತೆ ದುಡಿಲಿಕ್ಕೆ ಹೊಂಟಾನ್ರಿ (ನರೇಗಾ ಕೆಲ್ಸ ನಡೀತಾ ಇತ್ತು), ಒಂದಿಷ್ಟು ರೊಕ್ಕ ಎಲೆ ಅಡಿಕೆಗೆ ಬಳಸ್ಕೊಂಡು ಉಳ್ದಿದ್ದು ನನ್ ಕೈಯಾಗ ಕೊಡ್ತಾನ್ರಿ’’ ಅಂತ ಖುಷಿಲೇ ಹೇಳ್ಕೊತಿದ್ರು. ಆದರೆ ಆ ನಗು, ಖುಷಿ ಬಹಳ ದಿನ ಉಳಿಲಿಲ್ಲ. ಸರಕಾರಕ್ಕೆ ಕಾಂಚಾಣದ ಮುಂದೆ ಇವರ ಖುಷಿ ಕಾಣಿಸಲಿಲ್ಲ. ದಿನಸಿ ಅಂಗಡಿಗಳಿಗೂ ಮೊದಲೇ ಬಾರ್ ಗಳು ತೆರೆಯಲು ಅನುಮತಿ ಸಿಕ್ಕಿತ್ತು.

ಮದ್ಯ ವ್ಯಸನಿಗಳ ಉತ್ಪಾದನಾ ಶಕ್ತಿ ಕುಂಠಿತಗೊಳ್ಳುವುದರಿಂದ ರಾಜ್ಯ ಅಥವಾ ದೇಶಕ್ಕೆ ಆರ್ಥಿಕ ಹೊರೆ ಮತ್ತು ನಷ್ಟ ಎಂದು ಆರ್ಥಿಕ ತಜ್ಞರ ಅಂಕಿ ಅಂಶ ಸಾಬೀತು ಮಾಡುತ್ತಿದೆ. ದೇಶದ ಒಟ್ಟು ಜಿಡಿಪಿಯ ಶೇ.1.5ನಷ್ಟು ಮದ್ಯವ್ಯಸನಿಗಳ ದೈಹಿಕ ಉತ್ಪಾದನಾ ಶಕ್ತಿ ಕುಂದುವುದರಿಂದ ನಷ್ಟ ಉಂಟಾಗುತ್ತದೆ ಅನ್ನುತ್ತದೆ ತಜ್ಞರ ಅಧ್ಯಯನ. ಅಂದರೆ ರಾಜ್ಯದ ಜಿಎಸ್ಡಿಪಿ 26 ಲಕ್ಷ ಕೋಟಿ ಇದೆ, ಅದರ ಶೇ.1.5 ಅಂದರೆ ಅಂದಾಜು 39,000 ಕೋಟಿಯಷ್ಟು ಮದ್ಯಪಾನಿಗಳ ಸಾಮರ್ಥ್ಯ ಕುಂಠಿತವಾಗಿ ಉತ್ಪಾದನೆಯ ಮೇಲೆ ನೇರ ಹೊಡೆತ, ನಷ್ಟ. ಇನ್ನು ಹೆಂಡ ಸಂಬಂಧಿತ ಇತರ ಹಾನಿ ಉದಾ: ಅನಾರೋಗ್ಯ, (ನಮ್ಮ ದೇಶದಲ್ಲಿ ಜಿಡಿಪಿಯ ಶೇ.5ರಷ್ಟು ಅನಾರೋಗ್ಯಕ್ಕೆ ಮಾಡುವ ಖರ್ಚಲ್ಲಿ ಶೇ.1 ಮಾತ್ರ ಸರಕಾರ ಭರಿಸುತ್ತೆ, ಉಳಿದ ಶೇ.4 ತಮ್ಮ ತಮ್ಮ ಜೇಬಿನಿಂದಲೇ ಖರ್ಚು ಮಾಡುತ್ತಾರೆ. ಹಾಗಾಗಿ ಬಡತನ ಹೆಚ್ಚಲು ಇದೂ ಒಂದು ಕಾರಣ.) ಇಂದಿಗೂ ಶೇ.30 ರಷ್ಟು ಪುರುಷರಿಗಿಂತ ಕಡಿಮೆ ವೇತನ ಪಡೆಯುವ ಮಹಿಳೆ ಮೇಲೆ ಮನೆಯ ಗಂಡಸು ಸತ್ತಾಗ ಆರ್ಥಿಕ ಭಾರ, ಹಿಂಸೆ , ಅಪಘಾತ, ಅಪರಾಧಗಳ ವೆಚ್ಚವೂ ಸೇರಿದರೆ 60,000 ಕೋಟಿ ರೂ.ಗೂ ಮಿಕ್ಕಿ ರಾಜ್ಯ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ಇದು ಸರಳ ಲೆಕ್ಕಾಚಾರ, ಇವಲ್ಲದೇ ಕುಟುಂಬದ ನೆಮ್ಮದಿ ಹಾಳಾಗುವುದು, ವೈಯಕ್ತಿಕ ಮಾನಹಾನಿ, ಇವೆಲ್ಲವೂ ಇನ್ನೂ ದಾಖಲು ಮಾಡಿಲ್ಲ. ನಿವ್ವಳ ಸಂತೋಷ ಉತ್ಪಾದನೆಯ ಮಾನದಂಡಗಳನ್ನು ನೋಡಿದರೆ ನಾವು ಭೂತಾನ್ ದೇಶಕ್ಕಿಂತಲೂ ಕೆಳಗಿನ ಸ್ಥಾನದಲ್ಲಿದ್ದೇವೆ. ಸರಕಾರ ಆದಾಯದ ಕಥೆ ಹೇಳುತ್ತಿರುವುದೆಲ್ಲಾ ಕಟ್ಟುಕಥೆಗಳೇ. ಕಳ್ಳಭಟ್ಟಿ ಸಾರಾಯಿ, ಅಕ್ರಮ ಮದ್ಯ ಮಾರಾಟ ಎಲ್ಲವೂ ಸರಕಾರದ ನೆರಳಲ್ಲೇ ನಡೆಯುವ ಚಟುವಟಿಕೆಗಳು. ಅಧಿಕೃತ ಮದ್ಯ ಮಾರಾಟ ಚಾಲ್ತಿಯಲ್ಲಿರಬೇಕೆಂದರೆ ಇಂಥ ಗುಮ್ಮನ ತಂದು ಕೂರಿಸಬೇಕಲ್ವೇ?

ಗುಜರಾತ್ನಲ್ಲಿ 1947 ರಿಂದಲೇ ಮದ್ಯ ನಿಷೇಧ ಜಾರಿಯಲ್ಲಿದೆ. ಬಡ ರಾಜ್ಯವೆಂದೇ ಹೇಳಲಾಗುವ ಬಿಹಾರದಲ್ಲಿ ಮದ್ಯ ನಿಷೇಧವಾಗಿ 8-10 ವರ್ಷಗಳಾಯಿತು. ಐಐಎಂ ಬೆಂಗಳೂರು ಅಧ್ಯಯನ ವರದಿ ಆ ರಾಜ್ಯದ ಆರ್ಥಿಕತೆ ಮೇಲೆ ಇದು ಹೆಚ್ಚು ಪರಿಣಾಮ ಬೀರಿಲ್ಲ ಅನ್ನುತ್ತೆ, ಬದಲಿಗೆ ಬಡ ಕುಟುಂಬಗಳು ಮದ್ಯದಿಂದ ಉಳಿಸಿದ ಹಣವನ್ನು ದಿನ ನಿತ್ಯದ ಪದಾರ್ಥಗಳಿಗೆ ಖರ್ಚು ಮಾಡುತ್ತಾರೆ. ಆ ಮೂಲಕ ಪರೋಕ್ಷವಾಗಿ ಜಿಎಸ್ಟಿ ಹೆಚ್ಚುತ್ತಿದೆ ಎನ್ನುತ್ತದೆ ಈ ವರದಿ. ಜನರ ಉತ್ಪಾದನಾ ಸಾಮರ್ಥ್ಯವೂ ಅಧಿಕಗೊಂಡಿದೆ. ಲಕ್ಷದ್ವೀಪ ಸೇರಿದಂತೆ, ಮಣಿಪುರ, ನಾಗಾಲ್ಯಾಂಡ್ ರಾಜ್ಯಗಳು ಸಂಪೂರ್ಣ ಮದ್ಯ ನಿಷೇಧ ಮಾಡಿವೆ. ಇನ್ನು ಭಾಗಶ: ಮದ್ಯ ನಿಷೇಧ ಮಾಡಿದ ಮದ್ಯಪಾನ ನಿಯಂತ್ರಣ ನೀತಿ ರಚಿಸಿದ ತಮಿಳುನಾಡು ಮತ್ತು ಜಾರ್ಖಂಡ್ ರಾಜ್ಯಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ತಮಿಳುನಾಡಿನ ಸ್ಟಾಲಿನ್ ಸರಕಾರ ಸರಕಾರಿ ಸ್ವಾಮ್ಯದ ಮದ್ಯದಂಗಡಿಗಳನ್ನು ಹಂತ ಹಂತವಾಗಿ ಮುಚ್ಚುವ ನೀತಿಯ ಭಾಗವಾಗಿ 500 ಮದ್ಯದಂಗಡಿಗಳನ್ನು ಮುಚ್ಚಿದೆ. ರಾಜಸ್ಥಾನ, ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳು ಈಗಾಗಲೆೇ ಮದ್ಯ ಮಾರಾಟಕ್ಕೆ ಪರವಾನಿಗೆ ಕೊಡುವ ಅಥವಾ ರದ್ದುಪಡಿಸುವ ಪರಮಾಧಿಕಾರವನ್ನು ಗ್ರಾಮಸಭೆಗೆ ನೀಡುವ ಕಾನೂನನ್ನು ಅನುಷ್ಠಾನಗೊಳಿಸಿವೆ. ಕರ್ನಾಟಕ ರಾಜ್ಯದ ಪಂಚಾಯತ್ರಾಜ್ ಕಾನೂನಿನ 73ನೇ ತಿದ್ದುಪಡಿಯಲ್ಲಿ ಗ್ರಾಮಸಭೆಗಳಿಗೆ ಪರಮಾಧಿಕಾರ ನೀಡಲಾಗಿದೆ. ಆದರೆ ನಮ್ಮಲ್ಲಿ ಮದ್ಯದ ವಿಚಾರ ಬಂದಾಗ ಇದರ ಅನುಷ್ಠಾನ ಶೂನ್ಯ. ರಾಜಕೀಯ ಹಿತಾಸಕ್ತಿ ಇಲ್ಲ, ಪಂಚಾಯತ್ರಾಜ್ ಇಲಾಖೆ ಇದನ್ನು ಅನುಷ್ಠಾನಗೊಳಿಸಿ ಜನಮುಖಿಯಾಗಬೇಕು. ಇದು ಆಗಲೇ ಬೇಕಾದ ಕೆಲಸ. ಕರ್ನಾಟಕದಲ್ಲಿ 11,000 ಮದ್ಯದಂಗಡಿಗಳಿಗೆ 6,798 ಗ್ರಂಥಾಲಯಗಳಿವೆ ಅನ್ನುತ್ತದೆ ಸುದ್ದಿ ಮೂಲಗಳು. ನಮ್ಮಜನ ಪ್ರತಿನಿಧಿಗಳಿಗೆ ಜನಸಂಖ್ಯಾಧಾರಿತವಾಗಿ ಮದ್ಯದ ಅಂಗಡಿಗಳಿಲ್ಲ ಅನ್ನುವ ಕೊರಗಿತ್ತು. ಅದನ್ನು ನಿವಾರಿಸುವ ಪ್ರಯತ್ನದ ಫಲವೇನೋ ಈ ಅನುಪಾತ... ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ, ವೈದ್ಯಕೀಯ ಸೌಲಭ್ಯವಿಲ್ಲ, ಶಾಲೆಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ...ರಾಜಕಾರಣಿಗಳೇ ನೆನಪಿರಲಿ ಹೆಂಡ ಮಾರಾಟಕ್ಕೆ ಜೋತು ಬೀಳುತ್ತೇವೆ ಅನ್ನುವ ಹಠ ಕಲ್ಯಾಣ ರಾಜ್ಯದ ಕಲ್ಪನೆಗೆ ವ್ಯತಿರಿಕ್ತವಾದುದ್ದು.

ಮದ್ಯ ವ್ಯಸನಿಗಳು ಮದ್ಯವನ್ನಷ್ಟೇ ಕುಡಿಯುವುದಿಲ್ಲ. ಮಕ್ಕಳ ಕನಸು, ಕುಟುಂಬದ ನೆಮ್ಮದಿ, ಪಾಲಕರ ಮರ್ಯಾದೆ, ಸಮಾಜದ ಸ್ವಾಸ್ಥ್ಯಎಲ್ಲವನ್ನೂ ನುಂಗಿ ನೀರು ಕುಡಿಯುತ್ತಾರೆ. ಸರಕಾರವೂ ಮದ್ಯ ಮಾರಾಟ, ಆದಾಯ ಹೆಚ್ಚಳಕ್ಕೆ ಪೂರಕವಾದ ನೀತಿ ನಿರೂಪಣೆ ಮಾಡುತ್ತಲೇ ಮಹಿಳಾ ಸಶಕ್ತೀಕರಣವನ್ನು ಕೆಣಕುತ್ತಾ ಅಪಹಾಸ್ಯ ಮಾಡುತ್ತಲೇ ಇದೆ. ಭವಿಷ್ಯದಲ್ಲಿ ಒಂದು ದಿನ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ.

ಚುನಾವಣೆಗಳೇನು ಈ ದೇಶದಲ್ಲಿ ನಿಷೇಧಗೊಳ್ಳುವುದಿಲ್ಲವಲ್ಲ...

Sources: IIM,Bangalore Report

NCRB on Reasons for Violence on Women

NIMHANS Report

WHO Report

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ