ಆಕಾಶದಿಂದ...

1953ರ ಜನವರಿ 18 ರಂದು, ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದರು. ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡರ ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವೀಧರರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲಿ ಹಾಗೂ ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ‘‘ಬೆಳ್ದಿಂಗ್ಳಪ್ಪನ ಪೂಜೆ’’ ಕೃತಿ ಹಾಗೂ ‘ನೀರು ಮತ್ತು ಪ್ರೀತಿ’ ಕಾದಂಬರಿ ಪ್ರಕಟಿಸಿದ್ದು, ಈ ಕಾದಂಬರಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Update: 2024-01-03 10:30 GMT

ಬೆಂಗಳೂರಿನಿಂದ ಅಟ್ಟೊವಾ ತಲುಪಲು ಬರೋಬ್ಬರಿ ಇಪ್ಪತ್ತಮೂರು ತಾಸು ಐದು ನಿಮಿಷಗಳ ಪ್ರಯಾಣ. ಕುತೂಹಲದಿಂದ ದೇವರಾಜಪ್ಪನವರು ಗೂಗಲ್‌ನಲ್ಲಿ ಹುಡುಕಿದಾಗ ಹನ್ನೆರಡು ಸಾವಿರದ ಒಂಬೈನೂರ ಎಂಬತ್ತೊಂದು ಕಿಲೋಮೀಟರ್ ಎಂದಿತ್ತು. ಐನೂರು ಆರುನೂರು ಜನರಿದ್ದ ದೊಡ್ಡ ಭರ್ತಿ ವಿಮಾನ. ಸೀಟುಗಳ ಹುಡುಕಾಟ, ಬ್ಯಾಗುಗಳ ಎಳೆದಾಟ, ಅವುಗಳನ್ನು ತುರುಕಲು ಕ್ಯಾಬಿನ್‌ಗಳಲ್ಲಿ ಜಾಗದ ಹುಡುಕಾಟ, ಜಾರುವ ಪ್ಯಾಂಟನ್ನು ಏರಿಸುವುದು, ಬೀಳುವ ಸೆರಗು ದುಪ್ಪಟ್ಟಾಗಳನ್ನು ಸಂಭಾಳಿಸುವುದು, ಇವೆಲ್ಲದರ ನಡುವೆ ಒಂದು ಕೈಯಲ್ಲಿ ಬ್ಯಾಗನ್ನು ಎಳೆಯುತ್ತಾ ಮತ್ತೊಂದು ಕೈಯಲ್ಲಿನ ಪೇಪರ್ ಕಪ್ಪಿನ ಜ್ಯೂಸೋ ಕಾಫಿಯೋ ತುಳುಕೀತು ಎಂದು ಯಾರನ್ನೂ ತಾಕಿಸಿಕೊಳ್ಳದಂತೆ ಹೆಜ್ಜೆಯ ಮೇಲೊಂದೆಜ್ಜೆ ಯಿಡುತ್ತ ತಮ್ಮ ಸೀಟುಗಳನ್ನು ಹುಡುಕುವ ಪ್ರಯಾಣಿಕರು. ಅವರುಗಳಿಗೆ ಸಹಾಯ ಮಾಡುತ್ತಿದ್ದ ಗಗನಸಖಿ/ಸಖರು. ಉದ್ಯೋಗ ನಿಮಿತ್ತ, ಪ್ರವಾಸ ಹೊರಟ ಗುಂಪುಗಳ ಗೌಜು ಗದ್ದಲ ಮೀನಿನ ಮಾರ್ಕೆಟ್ಟೋ ಎನಿಸುತ್ತಿತ್ತು. ವಿಮಾನದೊಳಕ್ಕೆ ಬಂದಬಂದವರೆಲ್ಲರ ಮೂತಿಗಳನ್ನು ಪರೀಕ್ಷಿಸಿ ನೋಡುವ ಕಣ್ಣುಗಳು. ಬಸ್ಸು, ರೈಲು ನಿಲ್ದಾಣಗಳಿಗಿಂತ ಅತ್ತತ್ತವೆನಿಸುವ ಗದ್ದಲ.

ಇಂಥ ಅನೇಕ ದೂರದ ಪ್ರಯಾಣ ಮಾಡಿದ ಅನುಭವ ವಿದ್ದರೂ ಒಂದೇ ಕಡೆ ಜಡವಾಗಿ ಕುಳಿತು ಕಾಲ ಕಳೆಯು ವುದು ಮಹಾ ಬೋರು. ಪುಸ್ತಕ, ಸುಡೊಕು, ಕ್ರಾಸ್ ವರ್ಡ್, ಚಾನಲ್‌ಗಳನ್ನು ಬದಲಿಸುತ್ತಾ ಅದೂ ಇದೂ ನೋಡುವುದು, ಹೊತ್ತುಗೊತ್ತೆನ್ನದೆ ಗಗನ ಸಖಸಖಿಯರ ಕಡೆ ಹಲ್ಲು ಕಿರಿದು ವೈನೋ ವಿಸ್ಕಿಯನ್ನೋ ತರಿಸಿ ಹೀರುತ್ತ ಆಗಾಗ್ಗೆ ಪೈಲೆಟ್‌ನ ಸೂಚನೆಗಳಿಗೆ ಯಾಂತ್ರಿಕವಾಗಿ ಸೀಟ್ ಬೆಲ್ಟನ್ನು ಹಾಕಿ ತೆಗೆದು ಮಾಡುತ್ತಾ, ತೂಕಡಿಸುತ್ತಾ, ಹೇಗೋ ಕಾಲವನ್ನು ದೂಡುತ್ತಾ, ಅರೆ ಮಂಪರಿನಲ್ಲಿ ಅವರಿವರ ಮಾತುಕತೆ, ಅನಾಗರಿಕ ಹಾಗೂ ನಾಗರಿಕ ಆಕಳಿಕೆಗಳ, ಸೀನುಗಳ ಹಾವಳಿ, ಮಕ್ಕಳ ಅಳು ಅರಚಾಟ ಕಿರುಚಾಟ ಇತ್ಯಾದಿ ಸಕಲೆಂಟು ಮಾನುಷ ಕ್ರಿಯೆಗಳನ್ನೂ ಕಣ್ಣಳತೆಯಲ್ಲಿ ಅನುಭವಿಸುತ್ತ ಇಪ್ಪತ್ತಮೂರು ತಾಸು ಕೂರುವುದೆಂದರೆ ನಿಜವಾದ ಹಿಂಸೆ. ಕೈಗಡಿಯಾರದ ಸಮಯವನ್ನು ಪೈಲೆಟ್ ಸೂಚಿಸುವ ಸಮಯಕ್ಕೆ ಹೊಂದಿಸಿಕೊಳ್ಳುವ ಅಯೋಮಯ ಹಗಲು ರಾತ್ರಿ. ಒಂದೇ ಕಡೆ ಕೂತು ಕೈಕಾಲುಗಳನ್ನು ಮರಗಟ್ಟಿಸಿಕೊಳ್ಳುವ ತಲೆನೋವು. ಒಮ್ಮೊಮ್ಮೆ ಎಮರ್ಜೆನ್ಸಿ ಬಾಗಿಲು ತೆಗೆದು ಸುಮ್ಮನೆ ಕೆಳಕ್ಕೆ ಧುಮಿಕಿಬಿಡಬೇಕನಿಸುತ್ತೆ. ಇಂಥದ್ದೆಲ್ಲಕ್ಕೂ ಈಸಲ ಮಾನಸಿಕವಾಗಿ ಸಿದ್ಧರಾಗಿದ್ದರು ದೇವರಾಜಪ್ಪ. ಎಕ್ಸಿಕ್ಯೂಟಿವ್ ಕ್ಲಾಸಾದ್ದರಿಂದ ಎರಡೇ ಸೀಟು, ತಮ್ಮದು ಕಿಟಕಿ ಪಕ್ಕದ್ದು, ಕಾಲು ನೀಡಿಕೊಳ್ಳಲು ಸಾಕಷ್ಟು ಅವಕಾಶವಿತ್ತು. ಆದಷ್ಟು ಶಾಂತ ಮನಸ್ಥಿತಿಯಲ್ಲಿ ತಮ್ಮ ಸೀಟಿನಲ್ಲಿ ಸ್ಥಾಪಿತರಾದರು.

ಪಕ್ಕದ ಸೀಟು ಖಾಲಿಯಿರಬಹುದೇ ಎಂಬ ಆಸೆ ಮನಸ್ಸಿನಲ್ಲಿ ಮೂಡುತ್ತಿದ್ದ ಗಳಿಗೆಯಲ್ಲೇ ಆ ಮಹಿಳೆ ತನ್ನೆರಡೂ ಕೈಗಳಲ್ಲಿದ್ದ ಬ್ಯಾಗುಗಳ ಸಮೇತ ಬಂದು ಸೀಟಿನ ಮುಂದೆ ನಿಂತು ಇವರೆಡೆಗೆ ನೋಡಿದಳು. ಅವಳ ಮುಖದ ಮೇಲೆ ಕಿಂಚಿತ್ತಾದರೂ ಫ್ರೆಂಡ್ಲೀ ಅನಿಸುವ ಮುಖಭಾವ ಅಥವಾ ಒಂದು ಸೋಶಿಯಲ್ ಸ್ಮೈಲ್ ಕೂಡ ಹುಟ್ಟಲಿಲ್ಲ. ಇವರೆಡೆಗಿನ ಅವಳ ಆ ನೋಟ ಹೇಗಿತ್ತೆಂದರೆ ಈ ಪ್ರಾಣಿ ಈ ಭೂಮಿಯ ಮೇಲೆ ಯಾಕಾದರೂ ಹುಟ್ಟಿ ಇದೇ ವಿಮಾನದ ಇದೇ ಸೀಟಿನಲ್ಲೇ ಯಾಕೆ ಕುಳಿತಿರುವುದೊ ಎಂಬ ಭಾವನೆಯನ್ನು ಢಾಳಾಗಿ ಸ್ಫುರಿಸುತ್ತಿತ್ತು. ತನ್ನ ಬ್ಯಾಗುಗಳನ್ನು ಕ್ಯಾಬಿನ್ನಿಗೆ ತುರುಕಿ ನಿಂತುಕೊಂಡೇ ಗಗನಸಖಿಗಾಗಿ ಕರೆಗುಂಡಿ ಒತ್ತಿದಳು. ಅವಸರದಲ್ಲಿ ಬಂದ ಅವಳ ಬಳಿ ಕಿಟಕಿ ಪಕ್ಕದ ಸೀಟು ಪ್ರಾಣಿಗಳಿಗೆ ತಕ್ಕುದಲ್ಲ, ಅದು ತನ್ನಂಥ ಮಜಬೂತು ದೇಹದ, ಗೌರವರ್ಣದ, ತುಟಿಯಂಚು ಮೀರದ ಲಿಪ್‌ಸ್ಟಿಕ್ಕುಳ್ಳ, ಧಿಮಾಕಿನ ಜೆಂಟಲ್ ಲೇಡಿಗೇ ಲಾಯಕ್ಕು ಎಂದು ಹೇಳಿದಳೆನಿಸುತ್ತದೆ. ಗಗನಸಖಿ ‘ಗಗನಸಖಿಯರಿಗೇ’ ವಿಶಿಷ್ಟವಾದ ನಗುವಿನಲ್ಲಿ ಇವರೆಡೆಗೆ ಬಾಗಿ ಕೇಳಿದಳು. ಒಮ್ಮೆಲೇ ಒತ್ತುಕೊಟ್ಟು ‘ಸ್ಸಾರಿ’ ಅಂದು ತಲೆಯಾಡಿಸಿದರು ದೇವರಾಜಪ್ಪ. ಅವಳು ಒಂದು ವೇಳೆ ನೇರವಾಗಿ ತನ್ನನ್ನೇ ಕೇಳಿದ್ದಿದ್ದರೆ ಖಂಡಿತವಾಗಿಯೂ ಬಿಟ್ಟುಕೊಡುತ್ತಿದ್ದೆ ಎಂಬ ಯೋಚನೆ ಸುಳಿಯಿತು. ಆದರೆ ಆ ಮಹಾತಾಯಿಗೆ ಪ್ರಾಣಿಗಳ ಭಾಷೆ ಗೊತ್ತಿರಲಿಲ್ಲ! ಒಮ್ಮೆ ಇವರತ್ತ ಕೆಕ್ಕರಿಸುತ್ತಾ ನೋಡಿ ದಬಾರನೆ ಕುಳಿತಾಗ ಅನಾಗರಿಕತೆಯೇ ಮೈವೆತ್ತು ಪಕ್ಕದಲ್ಲಿ ಕುಳಿತಂತಾಯಿತು.

 

ಕುಳಿತ ರಭಸಕ್ಕೆ ಇವರ ಆಸನವೂ ಕಂಪಿಸಿತಲ್ಲದೆ ಅವಳ ಮೊಣಕೈ ಇವರ ಮೊಣಕೈ ಮೇಲೆ ಬಿತ್ತು. ಇವರೇ ಆ ತಪ್ಪನ್ನು ಮಾಡಿದ್ದಾರೊ ಎಂಬಂತೆ ಆಕೆ ಅಸಂಬದ್ಧವಾಗಿ ಸಿಡುಕುತ್ತಾ, ಲೊಚಗುಡುತ್ತಾ ದುರುಗುಟ್ಟಿ ನೋಡಿದಳು. ಇದ್ಯಾವುದೋ ಊರುಮಾರಿ ಪಕ್ಕಕ್ಕೇ ವಕ್ಕರಿಸಿತಲ್ಲಾ ಎಂದು ಗಾಬರಿಯಿಂದ ವಿಚಲಿತರಾದರು. ಅವಳ ಸೀಟು, ಇಬ್ಬರ ನಡುವೆಯಿದ್ದ ಒಂದೇ ಆರ್ಮ್‌ರೆಸ್ಟ್ ಯಾವುದರ ಮೇಲೂ ಒಂದೇಒಂದು ಸೆಂಟಿಮೀಟರ್ ಕೂಡ ಅತಿಕ್ರಮಣ ಮಾಡದಂತೆ ಮುಂದಿನ ಇಪ್ಪತ್ತಮೂರು ತಾಸುಗಳ ಕಾಲ ಕುಳಿತಿರಬೇಕೆಂಬ ಜಾಗರೂಕತೆಯ ಅಗತ್ಯವನ್ನು ಮನಸ್ಸಿಗೆ ತಂದುಕೊಂಡರು ದೇವರಾಜಪ್ಪ.

ಟೇಕ್ ಆಫ್ ಸೂಚನೆಗಳು ಸಿಕ್ಕಾಗ ಸಾಮಾನ್ಯವಾಗಿ ಕಣ್ಣುಮುಚ್ಚಿ ಮಲಗಿಬಿಡುವುದೇ ಅವರ ಅಭ್ಯಾಸ. ನಿದ್ದೆಯಲ್ಲಿ ಆ ಹೆಂಗಸಿಗೆ ಆಕಸ್ಮಿಕವಾಗಿ ಕಾಲೋ ಕೈಯೋ ತಾಕೀತೆಂಬ ಎಚ್ಚರದಲ್ಲಿ ಎರಡೂ ಮಂಡಿಗಳನ್ನು ಜೋಡಿಸಿ, ಆದಷ್ಟು ಎಡಭಾಗಕ್ಕೆ ಸರಿದು ಕಿಟಕಿಯ ಕಡೆಗಿನ ವಿಮಾನದ ಗೋಡೆಗೆ ತಲೆಕೊಟ್ಟು ಮಲಗಿಬಿಟ್ಟರು.

ಗಗನಸಖಿ ಊಟಕ್ಕೆ ಎಚ್ಚರಗೊಳಿಸಿದ ವೇಳೆಗಾಗಲೇ ಹೆಂಗಸು ಊಟ ಶುರು ಮಾಡಿದ್ದಳು. ಗಗನಸಖನೊಬ್ಬ ಯಾವ ಡ್ರಿಂಕ್ ಬೇಕೆಂದು ಇವರನ್ನು ಕೇಳಿದ. ಇವರು ಒಮ್ಮೆ ಹೆಂಗಸಿನ ಕಡೆಗೆ ನೋಡಿದರು. ಅವಳೂ ಇವರೆಡೆಗೆ ತನ್ನ ನೋಟವನ್ನು ಹಾಯಿಸಿದಳು. ವಿಸ್ಕಿ ಎಂದು ಆತನಿಗೆ ಹೇಳುವ ಮುನ್ನ ಸ್ವಲ್ಪ ಯೋಚಿಸುವಂತಾಯ್ತು. ಇದನ್ನೇ ಒಂದು ನೆವ ಮಾಡಿಕೊಂಡು ಈ ಹೆಂಗಸೇನಾದರೂ ತಾಪತ್ರಯ ಒಡ್ಡಿಯಾಳು ಎಂಬ ಆಲೋಚನೆ ಸುಳಿಯಿತು. ಸಾಮಾನ್ಯವಾಗಿ ಕುಡಿದಾಗ ಕುಡಿಯದೇ ಇರುವಾಗಕ್ಕಿಂತಲೂ ಹೆಚ್ಚು ಪ್ರೀತಿಯಿಂದಲೂ, ನಾಗರಿಕತನದಿಂದಲೂ ಇರುತ್ತೇನೆಂದು ಯಾವಾಗಲೂ ಹೇಳುವ ಹೆಂಡತಿಯ ಮಾತು ದೇವರಾಜಪ್ಪನವರಿಗೆ ನೆನಪಾಗಿ ಗೊಂದಲ ಸ್ವಲ್ಪ ತಿಳಿಯಾಯಿತು. ಅವರು ಬಾಯಿಬಿಟ್ಟು ಕೇಳುವ ಮೊದಲೇ ವಿಸ್ಕಿ ಮತ್ತು ಐಸ್ ತುಂಬಿದ ಗ್ಲಾಸನ್ನು ಅವರೆಡೆಗೆ ಒಡ್ಡಿದ ಗಗನಸಖ ಸುಂದರವಾಗಿ ನಗುತ್ತಿದ್ದ. ಎರಡು ಮೂರು ವಿಸ್ಕಿ ಜೊತೆ ಊಟ

ಮುಗಿಸುವ ಹೊತ್ತಿಗೆ ವಿಮಾನದ ಹಿಂಭಾಗದಿಂದ ಎದ್ದುಬಂದ ಯುವತಿಯೊಬ್ಬಳು ಈಕೆಯನ್ನು ಮಾತಾಡಿಸಿದಳು. ಅವಳು ತಂದಿದ್ದ ಪುಟ್ಟ ಬ್ಯಾಗೊಂದನ್ನು ಇವಳು ಸೂಚಿಸಿದಂತೆ ತಲೆಯ ಮೇಲಿನ ಕ್ಯಾಬಿನ್‌ನಲ್ಲಿಟ್ಟು ಮಾತಿಗಿಳಿದಳು. ಗುಜರಾತಿಯೋ ರಾಜಾಸ್ಥಾನಿಯೋ, ಅವರ ಮಾತುಗಳಲ್ಲಿ ಕೆಲವು ಶಬ್ದಗಳಷ್ಟೇ ದೇವರಾಜಪ್ಪನವರಿಗೆ ತಿಳಿಯುತ್ತಿದ್ದವು. ಅಲ್ಲದೆ ಅವರಿಬ್ಬರೂ ಏನು ಮಾತಾಡುತ್ತಿದ್ದಾರೆಂಬುದನ್ನು ತಿಳಿದುಕೊಳ್ಳಬೇಕೆಂಬ ಯಾವ ಆಸಕ್ತಿಯೂ ಅವರಿಗಿರಲಿಲ್ಲ. ಈಕೆಯ ಊಟ ಮುಗಿಯುವವರೆಗೂ ಇದ್ದ ಆಕೆಯು ಗುಡ್‌ನೈಟ್ ಮಾಜೀ ಎಂದು ಹೇಳಿ ತನ್ನ ಸೀಟಿನ ಕಡೆಗೆ ಹೊರಟಳು. ಆಕೆ ‘ಮಾ’ ಎಂದು ಈಕೆಯನ್ನು ಕರೆದದ್ದು ದೇವರಾಜಪ್ಪನವರಲ್ಲಿ ಸ್ಪಲ್ಪ ಗಿಲ್ಟ್ ಫೀಲಿಂಗ್ ಉಂಟು ಮಾಡಿತು. ಅಮ್ಮ ಮಗಳು ಒಂದೇಕಡೆ ಕುಳಿತುಕೊಳ್ಳಬೇಕೆಂಬ ಆಸೆಯಿಂದ ತನ್ನ ಸೀಟಿನ ಮೇಲೆ ಇವಳ ಕಣ್ಣು ಬಿದ್ದಿದ್ದಿರಬಹುದು ಎಂಬ ಯೋಚನೆ ಮೂಡಿತು. ಆದರೆ ಅವರಿಬ್ಬರ ನಡುವೆ ಮುಖಲಕ್ಷಣ, ವಯಸ್ಸು ಯಾವುದೂ ತಾಳೆಯಾಗದಂತಿದ್ದ ಕಾರಣ ದೇವರಾಜಪ್ಪನವರ ಗಿಲ್ಟ್ ಗೊಂದಲ ತಕ್ಷಣವೇ ನಿವಾರಣೆಯಾಯಿತು. ಅಲ್ಲದೆ ಹೋಗುವ ಮುನ್ನ ಆಕೆ ತಮ್ಮ ಕಡೆಗೊಮ್ಮೆ ಎಸೆದ ನೋಟದಲ್ಲಿ ತಿರಸ್ಕಾರದ ಎಳೆಯೂ ಇತ್ತೆಂಬುದನ್ನಾಗಲೇ ಅವರ ಮನಸ್ಸು ಶೋಧಿಸಿಬಿಟ್ಟಿತ್ತು. ಈಕೆ ತನ್ನ ಬಗ್ಗೆ ಏನಾದರೂ ಹೇಳಿರಬಹುದು ಅನಿಸಿತು. ಮೊಣಕೈ ತಾಗಿಸದಂತೆ ಎಚ್ಚರದಲ್ಲಿ ದೇವರಾಜಪ್ಪ ಊಟ ಮುಗಿಸಿದರಾದರೂ ಹೆಂಗಸು ಲೊಚಗುಡುತ್ತಾ ಮಿಜಿಮಿಜಿ ಮಾಡುತ್ತಲೇಯಿದ್ದಳು. ಮನಸ್ಸಿನ ಯಾವುದೋ ಮೂಲೆಯಲ್ಲಿ ಮುಂದಿನ ಯಾವ ಹೊತ್ತಿಗಾದರೂ ಈಕೆ ಕೂಗಾಡಿ ನನ್ನ ಮಾನ ಹರಾಜಿಗಿಡುವವಳೇ ಸೈ ಎಂಬ ಆತಂಕವೂ ಸುಳಿದು ಹೋಯಿತು. ಮೊದಲಿನಂತೆ ಎಡಕ್ಕೆ ಸರಿದು ಮಲಗಿದರಾದರೂ ನಿದ್ದೆಗಣ್ಣಲ್ಲಿ ಅತ್ತಿತ್ತ ಹೊರಳಿ ಈಕೆಯ ಕೆಂಗಣ್ಣಿಗೆ ಗುರಿಯಾದೇನು ಎಂಬ ಎಚ್ಚರವಂತೂ ಇದ್ದೇ ಇತ್ತು. ಇಯರ್ ಫೋನ್ ಹಾಕಿಕೊಂಡು, ರಿಮೋಟ್ ಹಿಡಿದು ಚಾನೆಲ್‌ಗಳನ್ನು ತಿರುಗಿಸುತ್ತ ಕೂತರು. ಏಕಕಾಲಕ್ಕೆ ಎರಡು ಮೂರು ಸಿನೆಮಾಗಳನ್ನು ನೋಡುವುದು ಅವರಿಗೆ ಮೊದಲಿಂದಲೂ ರೂಢಿ. ಜಾಹೀರಾತು ಶುರುವಾದ ಕೂಡಲೇ ಬೇರೆ ಚಾನೆಲ್ ತಿರುಗಿಸುವುದು, ಅದರಲ್ಲಿ ಜಾಹೀರಾತು ಶುರುವಾದಾಗ ಇನ್ನೊಂದು ಚಾನೆಲ್ ಹೀಗೆ. ಅವರು ನೋಡುತ್ತಿದ್ದವುಗಳ ಕಡೆ ಆಗಾಗ ಕಣ್ಣು ಹಾಯಿಸುತ್ತಿದ್ದ ಹೆಂಗಸು ಲಿಪ್ ಸ್ಟಿಕ್ ತುಟಿಗಳನ್ನು ಒತ್ತಿ ಕಾಮನಬಿಲ್ಲಿನಾಕಾರಕ್ಕೆ ಬಾಗಿಸಿ ಅವರ ಅಭಿರುಚಿಯನ್ನು ವಿಮರ್ಶಿಸುತ್ತಿದ್ದಳು. ಆಕೆಯ ಮುಖದಲ್ಲೇಳುತ್ತಿದ್ದ ವಕ್ರಭಂಗಿಗಳು ಅವರಲ್ಲಿ ಕಿರಿಕಿರಿಯುಂಟು ಮಾಡುತ್ತಿದ್ದವು. ಒಂದು ರೀತಿಯಲ್ಲಿ ಅವರಿಬ್ಬರ ನಡುವೆ ಒಂದು ಮೌನ ಯುದ್ಧವೇ ನಡೆಯುತ್ತಿತ್ತು. ಟಿವಿ ಬಂದ್ ಮಾಡಿದರೆ ತಾನು ಸೋಲನುಭವಿಸಿದಂತಾಗುತ್ತದೆ ಅನಿಸಿತು ದೇವರಾಜಪ್ಪನವರಿಗೆ. ತನ್ನ ನಿದ್ದೆಗೆ ಭಂಗವುಂಟುಮಾಡುತ್ತಿರುವೆ ನೀನು ಎಂಬ ಕ್ರೋಧವನ್ನು ಅವಳು ಸೂಚಿಸುತ್ತಿದ್ದಳು. ಎಷ್ಟೋ ಹೊತ್ತಿನ ಬಳಿಕ ಸಮರ ವಿರಾಮ ಸಿಕ್ಕಂತಾಗಿ, ಆಕೆ ಆಕಡೆಗೆ ಕತ್ತು ಹೊರಳಿಸಿ ಗಾಢ ನಿದ್ದೆಯಲ್ಲಿರುವಂತೆ ಕಂಡಾಗ ಟಿವಿ ಬಂದ್ ಮಾಡಿ ಎಡಕ್ಕೆ ವಾಲಿಕೊಂಡು ಕಣ್ಣು ಮುಚ್ಚಿದ ದೇವರಾಜಪ್ಪನವರ ಮನಸ್ಸಿನಲ್ಲಿ, ತಮ್ಮ ಇಷ್ಟೊಂದು ವರ್ಷಗಳ ನೂರಾರು ಪ್ರಯಾಣಗಳಲ್ಲಿ ಇಂಥದ್ದೆಂದಾದರೂ ಆಗಿತ್ತೇ ಎಂಬ ಪರಾಮರ್ಶೆಗೆ ತೊಡಗಿದರು. ಇಂಥದ್ದೆಂದೂ ಆಗಿರಲೇ ಇಲ್ಲ. ಅಲ್ಲದೆ ಅಕ್ಕಪಕ್ಕ ಕುಳಿತು ಹಲವು ತಾಸುಗಳ ಪ್ರಯಾಣ ಮಾಡಿದ್ದ ಪುರುಷರ, ಸ್ತ್ರೀಯರ ಕೆಲವು ಚಿತ್ರಗಳೂ ಮೂಡಿ ಮರೆಯಾದವು. ಒಂದು ಪ್ರಯಾಣದಲ್ಲಿ ಪಕ್ಕ ಕುಳಿತ ಮರುಗಳಿಗೆಯಲ್ಲೇ, ‘ಬೆಂಗಳೂರಿನವರಾ? ಎಲ್ಲಿ ಬೆಂಗಳೂರಿನಲ್ಲಿ?’, ಎಂದು ಕಲಿತ ಕನ್ನಡದಲ್ಲಿ ಮಾತಾಡಿದ ಬಂಗಾಳಿ ಮಹಿಳೆಯ ಮುಖದಲ್ಲಿದ್ದ ಅತ್ಯಂತ ಪ್ಲೀಸಿಂಗ್ ಮಂದಹಾಸವನ್ನು ದೇವರಾಜಪ್ಪ ಎಷ್ಟು ವರ್ಷಗಳಾದರೂ ಮರೆತಿರಲಿಲ್ಲ.

‘ಬೆಂಗಳೂರಲ್ಲಿ ನೀವು ಎಲ್ಲಿರ್ತೀರಿ’, ಎಂದು ಕೇಳಿದಾಗ ಆಕೆ, ‘ನೀವು ಒಂದು ಸಲ ನಮ್ಮ ಫಾರಂಹೌಸ್‌ಗೆ ಬನ್ನಿ’, ಎಂದು ಆಹ್ವಾನಿಸಿ ಹೇಳಿದ್ದ ವಿಳಾಸ, ‘ಪ್ರೊಥೊಮ್’, ನಂಬರ್ ಒನ್, ಕನಕಪುರ ರೋಡ್, ಈಗಲೂ ಅವರಿಗೆ ಬಾಯಲ್ಲೇ ಇದೆ. ಒಂದು ಸಲ ಅವರ ಫಾರಂಗೆ ಹೋಗಬೇಕು ಎಂದು ಲೆಕ್ಕವಿಲ್ಲದಷ್ಟು ಸಲ ಅಂದುಕೊಂಡಿದ್ದರೂ ಹೋಗಿರಲಿಲ್ಲ. ಯಾವುದಾದರೂ ಕೆಲಸಗಳಿಗಾಗಿ ಕನಕಪುರದ ರಸ್ತೆಯಲ್ಲಿ ಓಡಾಡುತ್ತಿದ್ದಾಗಲೂ ‘ಪ್ರೊಥೊಮ್’ ಎಲ್ಲಿದೆ ಎಂದು ಕಾರು ನಿಲ್ಲಿಸಿ ವಿಚಾರಿಸಿರಲಿಲ್ಲ. ಈಗ ಸಹಪ್ರಯಾಣಿಕಳಾಗಿರುವ ಹೆಂಗಸು ಎಂದೂ ಮನುಷ್ಯ ಕುಲದಲ್ಲಿದ್ದವಳೇ ಅಲ್ಲ ಎಂದು ತೀರ್ಮಾನಿಸುತ್ತ ನಿದ್ದೆಗೆ ಜಾರಿದರು ದೇವರಾಜಪ್ಪ. ನಡುನಡುವೆ ಹಲವು ಬಾರಿ ಪೈಲೆಟ್ ಸೂಚನೆಗಳನ್ನು, ವಿವರಗಳನ್ನು ಕೊಡುತ್ತಿದ್ದ. ಅವ್ಯಾವೂ ಅಷ್ಟು ಸರಿಯಾಗಿ ದೇವರಾಜಪ್ಪನವರಿಗೆ ರಿಜಿಸ್ಟರ್ ಆಗದಿದ್ದರೂ ಫ್ಲೈಟ್‌ನಲ್ಲಿ ಯಾರಾದರೂ ಡಾಕ್ಟರ್ ಇದ್ದರೆ ದಯವಿಟ್ಟು ತಿಳಿಸಿ ಅನ್ನುವ ಸೂಚನೆ ಕೇಳಿಸಿದಾಗ ದೂರದ ವಿಮಾನ ಪ್ರಯಾಣದಲ್ಲಿ ಮೋಷನ್ ಸಿಕ್‌ನೆಸ್ ಆಗುವುದು ಕಾಮನ್, ಊಟ ತಿಂಡಿ ವಿಷಯದಲ್ಲಿ ಜಾಗ್ರತೆಯಿಂದಿಲ್ಲದೆ ಯಾರೋ ಎಡವಟ್ಟು ಮಾಡಿಕೊಂಡಿರಬೇಕೆಂದುಕೊಂಡು, ಮತ್ತೊಮ್ಮೆ ತಮ್ಮ ಕೈಕಾಲುಗಳೇನಾದರೂ ನಿದ್ದೆಗಣ್ಣಲ್ಲಿ ಪಕ್ಕದಾಕೆಯ ಕಡೆಗೆ ಚಾಚಿಕೊಂಡಿಲ್ಲವೆಂಬುದನ್ನು ಖಾತ್ರಿಮಾಡಿಕೊಂಡು ತಲೆತುಂಬಾ ಬ್ಲ್ಯಾಂಕೆಟ್ ಹೊದ್ದು ಎಡಕ್ಕೆ ವಾಲಿಕೊಂಡು ಮಲಗಿದರು.

ಗಾಢ ನಿದ್ದೆಯಲ್ಲಿದ್ದ ದೇವರಾಜಪ್ಪನವರ ಭುಜ ಹಿಡಿದು ಯಾರೋ ಜೋರಾಗಿ ಅಲುಗಾಡಿಸುತ್ತ, ಅವರು ತಲೆತುಂಬಾ ಹೊದ್ದಿದ್ದ ಬ್ಲ್ಯಾಂಕೆಟ್ಟನ್ನು ಎಳೆಯುತ್ತ ‘ಸುನಿಯೇ, ಸುನಿಯೇ..’ ಎನ್ನುತ್ತಿದ್ದರು. ಒಮ್ಮೆಲೇ ಗಾಬರಿಗೊಂಡ ದೇವರಾಜಪ್ಪ ಕಣ್ಣು ಬಿಟ್ಟಾಗ ವಿಮಾನದ ದೀಪಗಳ್ಯಾವೂ ಇಲ್ಲದೆ ಕಿಟಕಿಗಳಿಂದ ಬೆಳಗಿನ ಬೆಳಕು ಒಳಗೆ ಹರಿಯುತ್ತಿತ್ತು. ದೇವರಾಜಪ್ಪನವರಿಗೆ ಭಯಂಕರ ಆಶ್ಚರ್ಯವಾಗುವಂತೆ ಅವರ ತಲೆಯ ಮೇಲಿಂದ ಆಗತಾನೆ ಎಳೆದಿದ್ದ ಬ್ಲ್ಯಾಂಕೆಟ್ಟಿನ ಒಂದು ಹಿಡಿ ಇನ್ನೂ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಕೈಯಲ್ಲೇ ಇತ್ತು! ಆಕೆ ಸಾವಿರಾರು ವರ್ಷಗಳಿಂದ ದೇವರಾಜಪ್ಪನವರನ್ನು ಬಲ್ಲ ಸಂಬಂಧಿಕಳೋ, ನೆರೆಹೊರೆಯಾಕೆಯೋ ಎಂಬಂತೆ ಒಂದು ಅಮೋಘ ಮಂದಹಾಸ ಹೊತ್ತ ಮುಖದಲ್ಲಿ, ಹಿಂದಿ ಭಾಷೆಯಲ್ಲಿ, ನೇರವಾಗಿ ದೇವರಾಜಪ್ಪನವರ ಕಿವಿಗೇ ಮುಖವಿಟ್ಟು, ‘ನಿಮಗೆ ಗೊತ್ತಾಯ್ತಾ ರಾತ್ರಿ ಡಾಕ್ಟರಿಗಾಗಿ ಇವರೆಲ್ಲ ಹುಡುಕಾಡುತ್ತಿದ್ದರಲ್ಲಾ, ಒಬ್ಬರು ಡಾಕ್ಟರ್ ಇದ್ದರಂತೆ, ಫ್ಲೈಟಲ್ಲೇ ಒಂದು ಮಗು ಹುಟ್ಟಿದೆ! ಇದೀಗ ನನ್ನ ಸಹೇಲಿ ಬಂದು ನನಗೆ ಹೇಳಿ ಹೋದಳು’, ಎಂದು ತನಗೇ ಸುಸೂತ್ರ ಹೆರಿಗೆಯಾಯಿತೆಂಬ ಆನಂದದಲ್ಲಿ ಹೇಳಿದಳು! ದೇವರಾಜಪ್ಪನವರಿಗೆ ಇದ್ದಕ್ಕಿದ್ದಂತೆ ಬದಲಾದ ಆಕೆಯ ವರ್ತನೆ ಅರ್ಥವಾಗದೆ ಅಯೋಮಯವೆನಿಸಿತು. ಅದೇ ವೇಳೆಗೆ ಊಟದ ಹೊತ್ತಿನಲ್ಲಿ ಬಂದುಹೋಗಿದ್ದ ಮಹಿಳೆ ಬಂದು ಈಕೆಯ ಕಿವಿಯಲ್ಲಿ ಏನೋ ಉಸುರಿ ಕ್ಷಣದಲ್ಲಿ ಹಿಂದಿರುಗಿದಳು. ಅದೇ ಉಸುರಿನಲ್ಲಿ ಈಕೆ ಮತ್ತೆ ದೇವರಾಜಪ್ಪನವರ ಕಿವಿಯ ಬಳಿಗೆ ಮುಖವಿಟ್ಟು ಹಿಂದಿಯಲ್ಲಿ, ‘ಹೆಣ್ಣು ಮಗುವಂತೆ!’ ಎಂದು ಖುಷಿಯಿಂದ ಮುಖ ಅರಳಿಸುತ್ತ ಹೇಳಿದಳು. ಹೀಗೆ ಅನಿರೀಕ್ಷಿತ ಬದಲಾವಣೆಯ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಇನ್ನೂ ತಡವರಿಸುತ್ತಿದ್ದ ದೇವರಾಜಪ್ಪನವರು ತಮಗಿದ್ದ ಬಿಗಿಯನ್ನು ಸಡಿಲಿಸಿ, ‘ನಿಮ್ಮವರೇನು?’ ಎಂದರು. ನಗುನಗುತ್ತ ಆಕೆ ಅಲ್ಲವೆಂಬಂತೆ ತಲೆಯಾಡಿಸಿದಳು. ಇದೆಲ್ಲ ಮೊಗುಂ ಆಗಿಯೇ ಗಗನಸಖಿ/ಸಖರಿಗೆ ಮಾತ್ರ ಗೊತ್ತಿದ್ದ ಸುದ್ದಿ. ವಿಮಾನದ ಹಿಂಬದಿಯಲ್ಲಿ ಗಗನಸಖಿಯರು ಬ್ಲ್ಯಾಂಕೆಟ್‌ಗಳನ್ನು ಸುತ್ತಲೂ ಹಿಡಿದು ಮರೆಮಾಡಿದ್ದ ಭಾಗದಲ್ಲಿ ಡಾಕ್ಟರ್ ಒಂದಿಬ್ಬರು ಗಗನಸಖಿಯರ ಸಹಾಯದಿಂದ ಹೆರಿಗೆ ಮಾಡಿಸಿದ್ದರು. ಸುತ್ತಮುತ್ತಲ ಸೀಟುಗಳಲ್ಲಿ ಕುಳಿತಿದ್ದ ಕೆಲವೇ ಪ್ರಯಾಣಿಕರ ನಡುವಿನ ಗುಸುಗುಸು ಆಗಿತ್ತು. ವಿಮಾನದ ಮುಕ್ಕಾಲು ಭಾಗ ಪ್ರಯಾಣಿಕರಿಗೆ ಏನೂ ಗೊತ್ತೇ ಇಲ್ಲದೆ ಎಲ್ಲರೂ ನಿದ್ದೆಯಲ್ಲಿದ್ದರು. ಪಕ್ಕದಲ್ಲಿನ ಮಹಿಳೆಯ ಗೆಳತಿ ಬಂದು ಈಕೆಯ ಕಿವಿಯಲ್ಲಿ ಹೇಳಿದ್ದರಿಂದ ಮಾತ್ರ ವಿಮಾನದ ತೀರಾ ಮುಂಭಾಗದ

ಎಕ್ಸಿಕ್ಯೂಟಿವ್ ಕ್ಲಾಸಿನವರೆಗೆ ಸುದ್ದಿ ಮುಟ್ಟಿತ್ತು. ಅದೂ ಇವರಿಬ್ಬರಿಗೆ ಮಾತ್ರ! ದೇವರಾಜಪ್ಪನವರಿಗೆ ತಮ್ಮ ಕಿವಿಯನ್ನೂ ತಲುಪಿದ ಈ ಸುದ್ದಿ ಮತ್ತು ತಲುಪಿದ ಪವಾಡದ ಬಗ್ಗೆ ಮನಸ್ಸಿನಲ್ಲೆದ್ದಿದ್ದ ಗೊಂದಲವಿನ್ನೂ ಬಗೆಹರಿದಿರಲಿಲ್ಲ.

ಬೆಳಗ್ಗಿನ ವಂದನೆಗಳನ್ನು ತಿಳಿಸಿದ ಪೈಲೆಟ್ ಕೆನಡಾ ದೇಶದ ಗಡಿದಾಟಿ ಅಟ್ಟೊವಾ ಕಡೆಗೆ ಸಾಗಿರುವ ವಿಮಾನ ಎರಡು ತಾಸುಗಳಲ್ಲಿ ತಲುಪುತ್ತದೆ. ನಿಮಗೆ ಒಂದು ಸಿಹಿ ಸುದ್ದಿಯನ್ನು ತಿಳಿಸಲು ಸಂತೋಷ ಪಡುತ್ತೇನೆ. ನಾವು ಬೆಂಗಳೂರಿನಲ್ಲಿ ನಿಮ್ಮೆಲ್ಲರ ಜೊತೆ ಪ್ರಯಾಣ ಪ್ರಾರಂಭಿಸಿದಾಗ ನಿಮ್ಮ ಪೈಲೆಟ್ ಆದ ನಾನು ಮತ್ತು ನಮ್ಮ ಸಿಬ್ಬಂದಿ ಎಲ್ಲರೂ ಸೇರಿ ಐನೂರ ಹದಿನೇಳು ಜನರಿದ್ದೆವು. ಅಟ್ಟೊವಾದಲ್ಲಿ ವಿಮಾನದಿಂದ ಇಳಿಯುವಾಗ ನಮ್ಮ ಪ್ರಯಾಣಿಕರ ಸಂಖ್ಯೆ ಐನೂರ ಹದಿನೆಂಟು ಆಗಿರುತ್ತದೆ! ಶ್ರೀಮತಿ ಚಂದ್ರಿಕಾ ಅವರು ತಮ್ಮ ಮಗಳಿಗೆ ಜನ್ಮ ನೀಡಿದ್ದಾರೆ. ಡಾ. ಲಕ್ಷ್ಮೀಪತಿಯವರ ಸಕಾಲಿಕ ಮತ್ತು ಮಾನವೀಯ ನೆರವಿನಿಂದ ಇದು ಯಾವ ತೊಂದರೆಗಳೂ ಇಲ್ಲದೆ ಸಾಧ್ಯವಾಗಿದೆ. ಎಲ್ಲರ ಪರವಾಗಿ ಶ್ರೀಮತಿ ಚಂದ್ರಿಕಾ ಅವರಿಗೆ ಅಭಿನಂದನೆಗಳು. ಆಕೆಯ ಪುತ್ರಿಗೆ ಸುಸ್ವಾಗತ. ವಿಶೇಷವಾಗಿ ನಮ್ಮ ಹೀರೋ ಡಾ. ಲಕ್ಷ್ಮೀಪತಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಸುದ್ದಿಯನ್ನು ಅಧಿಕೃತವಾಗಿ ಪೈಲೆಟ್ ಹೇಳಿ ಮುಗಿಸುತ್ತಿದ್ದಂತೆಯೇ ವಿಮಾನಕ್ಕೆ ವಿಮಾನವೇ ಎದ್ದುನಿಂತು ‘ಓಹೋ...ಹುರ್ರೇ..ಹುರ್ರೇ’ ಎಂದು ವಿಮಾನ ಹಾರಿಹೋಗುವಂತೆ ಕೂಗತೊಡಗಿದರು! ಕುಳಿತಿದ್ದ ದೇವರಾಜಪ್ಪನವರ ಕಡೆಗೆ ನೋಡುತ್ತ ಅವರ ರೆಟ್ಟೆಹಿಡಿದು ಮೇಲೆದ್ದ ಮಹಿಳೆ ಎಲ್ಲರ ಸಂತೋಷದ ಉದ್ಗಾರಗಳಿಗೆ ದನಿಗೂಡಿಸುತ್ತಿದ್ದಳು! ದೇವರಾಜಪ್ಪ ತನ್ನ ರೆಟ್ಟೆಯನ್ನು ಹಿಡಿದಿದ್ದ ಮಹಿಳೆಯ ಕೈಯನ್ನು ದಿಟ್ಟಿಸಿ ನೋಡುತ್ತಿದ್ದರು.

ಅಟ್ಟೊವಾ ವಿಮಾನ ನಿಲ್ದಾಣದಲ್ಲಿ ಎಲ್ಲರಿಗಿಂತ ಮೊದಲು ತಾಯಿ-ಮಗು ಇಳಿಯಲು ಅನುವಾಗುವಂತೆ ಗಗನ ಸಖಿಯರು ಅನುವು ಮಾಡಿಕೊಟ್ಟರು. ನವ ನಾಗರೀಕಳನ್ನು ಸ್ವಾಗತಿಸಲು ಅಟ್ಟೊವಾ ನಗರದ ಮೇಯರ್ ವಿಮಾನದ ಮೆಟ್ಟಿಲುಗಳ ಬಳಿ ಹೂವುಗಳ ಬೊಕ್ಕೆ ಹಿಡಿದು ಕಾಯುತ್ತ ನಿಂತಿದ್ದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ಅಗ್ರಹಾರ ಕೃಷ್ಣಮೂರ್ತಿ

contributor

Similar News

ಭಾವ - ವಿಕಲ್ಪ
ಕಥೆಗಾರ