ಹೊರಳು ದಾರಿ ಹಿಡಿದ ಪ್ರಭುತ್ವ ಮತ್ತು ಸಿನೆಮಾ ಸಂಬಂಧಗಳು

ಕೆ.ಪುಟ್ಟಸ್ವಾಮಿ- ಹುಟ್ಟಿದ್ದು ಕನಕಪುರ ತಾಲೂಕಿನ ವರಗೆರಹಳ್ಳಿಯಲ್ಲಿ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಪದವಿ ಪಡೆದಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಿಲಿಟ್ ಪದವಿ ತಮ್ಮದಾಗಿಸಿಕೊಂಡಿದ್ದಾರೆ. ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವ ಇವರು, ಕರ್ನಾಟಕ ಸರಕಾರದ ವಾರ್ತಾ ಇಲಾಖೆ, ಅರಣ್ಯ, ಜೀವ ಪರಿಸರ, ಹಿಂದುಳಿದ ವರ್ಗಗಳ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೌಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

Update: 2024-01-03 09:38 GMT

ಕಳೆದ ವರ್ಷ ಎಪ್ರಿಲ್ ತಿಂಗಳ ಮಧ್ಯದಲ್ಲಿ ಉತ್ತರಾಖಂಡ ರಾಜ್ಯದ ಪುರಾತನ ನಗರಗಳ ಲ್ಲೊಂದಾದ ರೂರ್ಕಿಯಲ್ಲಿ ಕೋಮು ಸಂಘರ್ಷ ಸಂಭವಿಸಿತು. ಅದು ಹಿಂಸೆಗೆ ತಿರುಗಿ ಹಲವರು ಗಾಯಗೊಂಡರು. ಎಪ್ರಿಲ್ ಹದಿನಾರರಂದು ಹನುಮಾನ್ ಜಯಂತಿಯ ಅಂಗವಾಗಿ ಹಿಂದೂ ಸೇವಕರು ಹೊರಟಿದ್ದ ಶೋಭಾಯಾತ್ರೆಯ ಮೆರವಣಿಗೆ ಮೇಲೆ ಮಸೀದಿಯೊಂದರ ಮುಂದಿದ್ದ ಮುಸ್ಲಿಮ್ ಯುವಕರು ಕಲ್ಲು ತೂರಿದ ಕಾರಣ ಗಲಭೆ ಆರಂಭವಾಗಲು ಕಾರಣ ಎಂದು ಹಿಂದೂ ಸಂಘಟಕರ ಆರೋಪ. ಆದರೆ ಮಸೀದಿಯ ಮುಂದೆ ಮುಸ್ಲಿಮ್ ನಿಂದನೆಯ ಹಾಡು ಮತ್ತು ಘೋಷಣೆಗಳನ್ನು ನಿಲ್ಲಿಸಲು ಕೋರಿದ್ದರಿಂದ ಹಿಂಸಾಚಾರ ಶುರುವಾಯಿತೆಂಬುದು ಮುಸ್ಲಿಮ್ ಯುವಕರ ವಿವರಣೆ. ಹನುಮಾನ್ ಜಯಂತಿ ಮತ್ತು ರಮಝಾನ್ ಉಪವಾಸ ಒಂದೇ ಅವಧಿಯಲ್ಲಿ ಬಂದರೆ ಗಲಭೆಗಳು ಸಂಭವಿಸುವುದು ಸಾಮಾನ್ಯ ಎಂಬ ಪರಿಸ್ಥಿತಿ ಈಗ ದೇಶದೆಲ್ಲೆಡೆ ಉದ್ಭವವಾಗಿದೆ. ಅದರಂತೆ ಕಳೆದ ವರ್ಷ ನಡೆದ ಹಿಂಸಾಚಾರ ಘಟನೆ ರೂರ್ಕಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದೇ ಅವಧಿಯಲ್ಲಿ ದಿಲ್ಲಿ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಮುಂತಾದ ವಿಶೇಷವಾಗಿ ಉತ್ತರ ಭಾರತದ ಅನೇಕ ನಗರ ಹಳ್ಳಿಗಳಲ್ಲಿ ಕೋಮು ಸಂಘರ್ಷಗಳು ನಡೆದವು. ಆದರೆ ರೂರ್ಕಿಯ ಗಲಭೆಯ ವಿಶೇಷತೆ ಏನೆಂದರೆ ಹಿಂದೂ ನಾಯಕರು ಸಂಘಟಿತರಾಗಲು ವಿವೇಕ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ‘ಕಾಶ್ಮೀರ್ ಫೈಲ್ಸ್’ನಿಂದ ಪಡೆದುಕೊಂಡ ಪ್ರೇರಣೆ.

2022ರಲ್ಲಿ ಬಿಡುಗಡೆಯಾದ ‘ಕಾಶ್ಮೀರ್ ಫೈಲ್ಸ್’ ಚಿತ್ರವು ಪಾಕಿಸ್ತಾನಿ ಬೆಂಬಲಿತ ಮುಸ್ಲಿಮ್ ಉಗ್ರಗಾಮಿ ಗಳು 1990ರ ದಶಕದ ಆರಂಭದಲ್ಲಿ ಗುರಿಯಾಗಿಸಿಕೊಂಡ ಕಾಶ್ಮೀರಿ ಹಿಂದೂಗಳು (ಪಂಡಿತರ) ತಮ್ಮ ಜನ್ಮಭೂಮಿಯನ್ನು ತೊರೆದ ಪಟ್ಟ ಸಂಕಷ್ಟ ಪಡಿಪಾಟಲನ್ನು ಬಿಂಬಿಸುವ ಚಿತ್ರವೆಂದು ಪ್ರಚಾರ ಪಡೆದುಕೊಂಡಿತ್ತು. ಪ್ರತ್ಯೇಕತಾವಾದಿ ಆಂದೋಲನವು ತನ್ನ ಪರಾಕಾಷ್ಠೆ ತಲುಪಿದ ಸಂದರ್ಭದಲ್ಲಿ ಭಾರತ ಸರಕಾರ ಮತ್ತು ಕಾಶ್ಮೀರ್ ಪಂಡಿತರ ಸಂಘಟನೆಗಳು ಹತ್ಯೆಯಾದವರ ಸಂಖ್ಯೆಯನ್ನು ನೂರರ ಮಿತಿಯಲ್ಲಿ (30-80) ಹೇಳಿದರೂ ಚಿತ್ರವು ಸಾವಿರಾರು ಸಂಖ್ಯೆಯಲ್ಲಿ ಮಾರಣಹೋಮವಾಯಿತೆಂದು ತೋರಿಸಿತ್ತು. ಚಿತ್ರದ ಬಿಡುಗಡೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮುಸ್ಲಿಮರ ಬಹಿಷ್ಕಾರ ಮತ್ತು ಸೇಡು ತೀರಿಸಿಕೊಳ್ಳಲು ಕರೆ ನೀಡುವ ಸಂದೇಶಗಳು ವೈರಲ್ ಆದವು. ಬಲಪಂಥೀಯ ಆಡಳಿತರೂಢ ಸರಕಾರದ ನೇತಾರರು ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಗೆ ನೇರವಾಗಿ ಕರೆ ನೀಡಿದರು. ಬಿಜೆಪಿ ಆಡಳಿತದ ಕೆಲವು ರಾಜ್ಯಗಳಲ್ಲಿ ಚಿತ್ರ ವೀಕ್ಷಣೆಗೆ ತೆರಿಗೆ ವಿನಾಯಿತಿ ಸಹ ಘೋಷಣೆಯಾಯಿತು.

ಚಿತ್ರ ವಿಮರ್ಶಕರು ಈ ಪ್ರೊಪಗಾಂಡ ಸಿನೆಮಾದಲ್ಲಿನ ತೀವ್ರ ಪ್ರಮಾಣದ ಇಸ್ಲಾಮ್ ದ್ವೇಷದ ಬಗ್ಗೆ ಗಮನ ಸೆಳೆದು ಹಿಟ್ಲರ್ ಕಾಲದಲ್ಲಿ ಯಹೂದಿಗಳ ವಿರುದ್ಧ ನಾಝಿ ಪರ ನಿರ್ದೇಶಕರು ರೂಪಿಸಿದ ಡೈ ರಾಥ್ಶಿಲ್ಡ್ಸ್

ನಂಥ ಜನಾಂಗೀಯವಾದಿ ಸಿನೆಮಾಗೆ ಹೋಲಿಸಿದರು. ಅಮೆರಿಕದ ಟೈಂ ಪತ್ರಿಕೆಯು ಪರಮತವೈರವನ್ನು ಬಹಿರಂಗವಾಗಿಯೇ ಘೋಷಿಸುವಂಥ ಕೆಳಮಟ್ಟಕ್ಕೆ ಇಳಿದ ಭಾರತದ ಚಿತ್ರವೆಂದು ಕರೆಯಿತು. ಆ ಪತ್ರಿಕೆಯಲ್ಲಿ ಲೇಖನ ಬರೆದ ದೇಬಶಿಶು ರಾಯ್ ಚೌಧುರಿ ಅವರು ಕಾಶ್ಮೀರ್ ಫೈಲ್ಸ್ ಚಿತ್ರವು ‘ಸತ್ಯ’ವನ್ನು ಅನಾವರಣ ಮಾಡುತ್ತಿದೆಯೆಂದು ಜನ ಹೆಚ್ಚು ಹೆಚ್ಚು ನಂಬಿದಂತೆಲ್ಲಾ ಸಾಮಾಜಿಕ ಬಿಕ್ಕಟ್ಟು ಉಲ್ಬಣಿಸುವ ಸೂಚನೆಯನ್ನು ನೀಡಿದರು. ಕತ್ತಲಲ್ಲಿ ಸುಳ್ಳನ್ನು ಬಿತ್ತುವ ಚಿತ್ರಮಂದಿರಗಳು ಯುದ್ಧೋನ್ಮಾದವನ್ನು ಉತ್ಪಾದಿಸುವ ಕೇಂದ್ರಗಳಾಗುವ ಅಪಾಯದ ಬಗ್ಗೆ ಹಲವರು ಗಮನ ಸೆಳೆದರು.

ಬಹುಸಂಖ್ಯಾತರೇ ಆಡಳಿತ ನಡೆಸಬೇಕೆಂಬ ನಂಬಿಕೆಯ ತತ್ವವಾದ ಜನಾಂಗೀಯ ಬಹುಸಂಖ್ಯಾತಾವಾದ(ಮೆಜಾರಿಟೇರಿನಿಸಂ) ಮತ್ತು ಭಾರತೀಯ ಚಲನಚಿತ್ರರಂಗದ - ಮುಖ್ಯವಾಗಿ ಬಾಲಿವುಡ್- ನಡುವೆ ಇರುವ ಸಂಬಂಧವನ್ನು ಹುಡುಕುವ ಬೌದ್ಧಿಕ ಯತ್ನಗಳು ಕಾಶ್ಮೀರ್ ಫೈಲ್ಸ್ ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂತು. ಕೇಂದ್ರದಲ್ಲಿ ಒಂಭತ್ತು ವರ್ಷಗಳ ಹಿಂದೆ ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯವಾಹಿನಿಯ ಬಾಲಿವುಡ್ ಚಿತ್ರಗಳು ‘ರಾಷ್ಟ್ರೀಯತಾವಾದ’, ‘ದೇಶಭಕ್ತಿ’ ‘ಶತ್ರುಸಂಹಾರ’ದ ಆಶಯದ ಚಿತ್ರಗಳ ನಿರೂಪಣೆಯು ಹೊಸದೊಂದು ದಾರಿ ತುಳಿಯಿತು. 2014ರ ನಂತರದಲ್ಲಿ ಬಾಲಿವುಡ್ ಚಿತ್ರೋದ್ಯಮದಲ್ಲಿ ಸ್ಪಷ್ಟವಾಗಿ ಎದ್ದುಕಂಡ ಪ್ರವೃತ್ತಿ ಎಂದರೆ ಕೆಲವು ಪ್ರಕಾರ ಅಥವಾ ಶೈಲಿಗಳ ಚಿತ್ರಗಳ ಸಂಖ್ಯೆಯ ನಿರ್ಮಾಣದಲ್ಲಿ ಕಂಡ ಏರುಗತಿ. ಮುಖ್ಯವಾಗಿ ಕ್ರೀಡೆ, ಐತಿಹಾಸಿಕ ಚಿತ್ರಗಳು, ಯುದ್ಧದ ವಸ್ತುವನ್ನಾಧರಿಸಿದ, ಸಾಮಾಜಿಕ ಸಂದೇಶವೇ ಕೇಂದ್ರ ವಸ್ತುವಿನ ಮತ್ತು ರಾಜಕೀಯ ವ್ಯಕ್ತಿಗಳ ಜೀವನಾಧಾರಿತ ಚಿತ್ರಗಳು ಕಳೆದ ಅರವತ್ತು ವರ್ಷಗಳಲ್ಲಿ ಕಾಣದ ಪ್ರಮಾಣದಲ್ಲಿ ನಿರ್ಮಾಣಗೊಂಡವು. ಚಾರಿತ್ರಿಕ ವಸ್ತುವಿನ ಚಿತ್ರಗಳು ಭಾರತದ ಗತವೈಭವವನ್ನು, ವೀರಯೋಧರ ದೇಶಾಭಿಮಾನವನ್ನು ಸಮಕಾಲೀನ ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಹೇಳಲು ಹೊರಟರೆ(ಬಾಜೀರಾವ್ ಮಸ್ತಾನಿ, ಸಾಮ್ರಾಟ್ ಪೃಥ್ವಿರಾಜ್, ಪದ್ಮಾವತ್, ತಾನಾಜಿ, ಪಾಣೀಪತ್ ಇತ್ಯಾದಿ) ರಾಜಕೀಯ ವ್ಯಕ್ತಿಗಳ ಜೀವನ ಚರಿತ್ರೆಗಳು(ಆಕ್ಸಿಡೆಂಟ್ ಪ್ರೈಂ ಮಿನಿಸ್ಟರ್, ಸರ್ದಾರ್, ದಿ ತಾಷ್ಕೆಂಟ್ ಫೈಲ್ಸ್, ಠಾಕ್ರೆ, ಪಿಎಂ ನರೇಂದ್ರ ಮೋದಿ ಇತ್ಯಾದಿ) ಸೃಜನಶೀಲತೆಯನ್ನು ಗಟಾರಕ್ಕೆ ಎಸೆದು ಹೊಗಳಿಕೆ- ನಿಂದನೆಯ ಪ್ರಚಾರದ ಸರಕಿನಂತೆ ಬಿಕರಿ ಮಾಡಿದವು. ಕ್ರೀಡೆಯನ್ನು ಮತ್ತು ಕ್ರೀಡಾಪಟುಗಳನ್ನು ಆಧರಿಸಿದ ಚಿತ್ರಗಳು ಸಹ ದೇಶಭಕ್ತಿಯ ಪ್ರಚಾರದ ಸಾಮಗ್ರಿಗಳಂತೆ ರೂಪುಗೊಂಡವು(ಉದಾ. ಗೋಲ್ಡ್). ಚರಿತ್ರೆಯನ್ನು ಸರಿಪಡಿಸುವ ಇರಾದೆ ಹೊತ್ತ ಬಲಪಂಥೀಯರ ಗೀಳು ಇಲ್ಲಿನ ಚಾರಿತ್ರಿಕ ಸಿನೆಮಾಗಳ ಮೇಲೆ ಪ್ರಭಾವ ಬೀರಿರುವುದು ಸುಳ್ಳಲ್ಲ. ಆದರೆ ಈ ವರ್ಗದ ಚಿತ್ರಗಳಿಗಿಂತಲೂ ಸಾಮಾಜಿಕ ಸಂದೇಶದ ಹಣೆಪಟ್ಟಿ ಹೊತ್ತ ಚಿತ್ರಗಳು ಪ್ರೇಕ್ಷಕನ ಅರಿವಿಗೇ ಬಾರದಂತೆ ಸರಕಾರದ ಪ್ರಚಾರದ ಸರಕಾಗಿ ಬದಲಾಗಿರುವುದು 2014ರ ನಂತರ ಕಂಡು ಬಂದಿರುವ ವಿಶೇಷ.

 

 

ಆಡಳಿತಾರೂಢ ಸರಕಾರದ ಜನಪ್ರಿಯ ನೀತಿಗಳನ್ನು ಆಧರಿಸಿ ಚಲನ ಚಿತ್ರ ನಿರ್ಮಾಣಮಾಡುವುದು ಇತ್ತೀಚಿನ ವಿದ್ಯಮಾನವೇನಲ್ಲ. ಅದು ಚಿತ್ರರಂಗದ ಇತಿಹಾಸದಷ್ಟೇ ಹಳೆಯದು. ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಗರಿಗೆದರಿದ್ದ ಸಮಯದಲ್ಲಿ, ಗಾಂಧಿಯ ವಿಚಾರಧಾರೆಗಳು ಜನಮಾನಸದಲ್ಲಿ ಇಳಿಯತೊಡಗಿದ್ದಾಗ ಪರೋಕ್ಷವಾಗಿ ಆ ನಿಲುವನ್ನು ಬೆಂಬಲಿಸುವ ಚಿತ್ರಗಳು ತಯಾರಾಗುತ್ತಿದ್ದವು. ಮುಖ್ಯವಾಗಿ ಸಾಮಾಜಿಕ ಅಸಮಾನತೆಯ ವಿರುದ್ಧ ಗಾಂಧಿಯವರು ಕೈಗೊಂಡ ಅಸ್ಪಶ್ಯತೆಯ ನಿವಾರಣೆ, ಗ್ರಾಮಾಭಿವೃದ್ಧಿ, ಖಾದಿ ಇತ್ಯಾದಿ ವಿಷಯಗಳು ಚಿತ್ರಗಳ ವಸ್ತು ಮತ್ತು ನಿರೂಪಣೆಯಲ್ಲಿ ಹೆಚ್ಚು ಕಾಣಿಸಿಕೊಳ್ಳತೊಡಗಿದವು. ಗಾಂಧಿಯವರು ಸಾಮಾಜಿಕ ಮೇಲು ಕೀಳನ್ನು ತೊಡೆಯಲು ಸಾಮೂಹಿಕ ಪ್ರಾರ್ಥನೆ ಮತ್ತು ಸಂತರ, ಭಕ್ತಿ ಆಂದೋಲನದ ನಾಯಕರ ಕತೆಗಳ ಮೂಲಕ ಅರಿವನ್ನು ಮೂಡಿಸಲು ಯತ್ನಿಸಿದರಷ್ಟೆ. ಅದಕ್ಕೆ ಪೂರಕವಾಗಿ ಮೂವತ್ತು ನಲವತ್ತರ ದಶಕದಲ್ಲಿ ಸಂತರ ಬದುಕನ್ನಾಧರಿಸಿದ ಚಿತ್ರಗಳು, ಚಿತ್ರದ ನಿರೂಪಣೆಯ ಭಾಗವಾಗಿ ಭಕ್ತಿಗೀತೆಗಳು ಎಲ್ಲ ಭಾಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಕೆಯಾದದ್ದು ಕಾಕತಾಳೀಯವಲ್ಲ. ಹಾಗೆಯೇ ಅಸ್ಪಶ್ಯತೆಯ ವಸ್ತುಗಳ ಚಿತ್ರಗಳೂ ಸಹ ಸಾಮಾಜಿಕ ಸಂಚಲನೆಯನ್ನು ಮತ್ತು ಆಕ್ರೋಶವನ್ನೂ ಹುಟ್ಟುಹಾಕಿದವು. ಮೂವತ್ತರ ದಶಕದಲ್ಲಿ ತಮಿಳು ನಿರ್ಮಾಪಕ ಕೆ. ಸುಬ್ರಮಣ್ಯಂ ಅವರು ಜಾತಿಪದ್ಧತಿಯ ಅನಿಷ್ಟ, ಮಹಿಳಾ ಶೋಷಣೆ, ವರದಕ್ಷಿಣೆ ಮುಂತಾದ ಸಾಮಾಜಿಕ ಪಿಡುಗುಗಳು ಸರ್ವಭಾವ ಸಮಭಾವ, ತ್ಯಾಗ ಮತ್ತು ಶ್ರಮದ ಮಹತ್ವದ ಕುರಿತ ಚಿತ್ರಗಳನ್ನು ತೆರೆಗೆ ತಂದರು.(ತ್ಯಾಗ ಭೂಮಿ, ಭಕ್ತಚೇತ, ಸೇವಾಸದನ, ಬಾಲಯೋಗಿನಿ ಇತ್ಯಾದಿ) ಹಿಂದಿಯಲ್ಲಿಯೂ ಅಂಥ ಪ್ರಯೋಗಗಳು ನಡೆದವು(ಉದಾ. ಅಚ್ಯುತ್ ಕನ್ಯಾ, ಪುಕಾರ್). ಮುಂದೆ ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ರಾಷ್ಟ್ರೀಯ ನಿರ್ಮಾಣದ ಮಾಧ್ಯಮವಾಗಿ ಜನಪ್ರಿಯ ಚಲನಚಿತ್ರಗಳಿಗಿರುವ ಅಗಾಧವಾದ ಸಾಮರ್ಥ್ಯವನ್ನು ಮೊದಲು ಗುರುತಿಸಿದವರು ಪಂಡಿತ್ ನೆಹರೂ. ಅವರು ದೇಶದಲ್ಲಿ ಚಲನ ಚಿತ್ರರಂಗದ ಪರಿಸ್ಥಿತಿಯ ಅಧ್ಯಯನ ಮತ್ತು ಅದರ ಅಭಿವೃದ್ಧ್ದಿಗೆ ಪೂರಕವಾದ ಸಲಹೆಗಳನ್ನು ನೀಡಲು 1949ರಲ್ಲಿ ಸಂವಿಧಾನ ಸಭೆಯ ಸದಸ್ಯರಾದ ಎಸ್ ಕೆ ಪಾಟೀಲರ ನೇತೃತ್ವದಲ್ಲಿ ಚಿತ್ರ ವಿಚಾರಣಾ ಸಮಿತಿಯನ್ನು ರಚಿಸಿದರು. ಸಮಿತಿ ನೀಡಿದ ಅನೇಕ ಸಲಹೆಗಳಲ್ಲಿ ಉತ್ತಮ ಚಲನಚಿತ್ರಗಳನ್ನು ಪ್ರೋತ್ಸಾಹಿಸಲು ನಿಧಿಯ ಸ್ಥಾಪನೆ ಮತ್ತು ಪ್ರಶಸ್ತಿ ಪ್ರದಾನವೂ ಸೇರಿದ್ದವು. ಅದರಂತೆ ನೆಹರೂ ಅವರು 1954ರಲ್ಲಿ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಮತ್ತು 1960ರಲ್ಲಿ ಚಲನಚಿತ್ರ ಆರ್ಥಿಕ ನಿಗಮವನ್ನು ಸ್ಥಾಪಿಸಿದರು. ಅದಕ್ಕೂ ಮುನ್ನ ನೆಹರೂ ಅವರು 1952ರಲ್ಲಿಯೇ ಮೊದಲ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಘಟಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಚಿತ್ರ ನಿರ್ಮಾಪಕ ನಿರ್ದೇಶಕರಿಗೆ ನೇರವಾಗಿಯೇ ಕರೆ ನೀಡಿದ್ದರು. ಚಲನಚಿತ್ರಗಳು ಪ್ರೇಕ್ಷಕರಲ್ಲಿ ಉತ್ತಮ ಅಭಿರುಚಿಯನ್ನು ಬಿತ್ತಬೇಕೆಂದು ಸಹ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಅದರ ಹಿನ್ನೆಯಲ್ಲಿಯೇ ರಾಷ್ಟ್ರೀಯ ಪುನರ್ನಿರ್ಮಾಣದ ಅವಧಿಯಲ್ಲಿ ನೆಹರೂ ಪ್ರಣೀತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕಾಳಜಿಯ ಚಿತ್ರಗಳು ತೆರೆಕಂಡವು. ಇದಕ್ಕೆ ಹೇರಳ ಉದಾಹರಣೆಗಳು ದೊರೆಯುತ್ತವೆ. ಅದರ ಜೊತೆಯಲ್ಲಿಯೇ ದೋ ಬಿಘಾ ಜಮೀನ್, ಬಂದಿನಿ (ಬಿಮಲ್ ರಾಯ್), ನಯಾ ದೌರ್ (ಬಿ.ಆರ್. ಚೋಪ್ರಾ), ಮದರ್ ಇಂಡಿಯಾ(ಮಹಬೂಬ್ ಖಾನ್), ರಾಜ್ ಕಪೂರ್(ಶ್ರೀ 420,) ಮುಂತಾದ ಸಂವೇದನಾಶೀಲ ಚಿತ್ರಗಳ ಪರಂಪರೆ ಆರಂಭವಾಯಿತು. ಇವು ಪುರಾತನ ಮೌಢ್ಯವನ್ನು, ಸಾಮಾಜಿಕ ಅಸಮಾನತೆಗಳನ್ನು ಪ್ರಶ್ನಿಸುವ, ಆಧುನಿಕತೆಯನ್ನು ಬೆಂಬಲಿಸುವ, ಬಡವರ ಮತ್ತು ಮಹಿಳಾಪರ ನಿಲುವಿನ ಚಿತ್ರಗಳಾಗಿ ಹೊಸ ಮಾರ್ಗವೊಂದನ್ನು ತೆರೆದವು. ಇವುಗಳ ಮುಖ್ಯ ಉದ್ದೇಶ ಭಾರತದ ನೆಲ ಮತ್ತು ಜನರನ್ನು ಜೋಡಿಸುವ, ಪ್ರೀತಿ, ತ್ಯಾಗದ ಮಹತ್ವ ಮತ್ತು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಉದಾತ್ತ ಭಾವವನ್ನು ಉದ್ದೀಪಿಸುವುದಾಗಿತ್ತು. ಅದಕ್ಕೆಂದೇ ಕೃಷಿ, ಕೈಗಾರಿಕೆ, ಶಿಕ್ಷಣದ ಮಹತ್ವವನ್ನು ಸಾರುವ ಮತ್ತು ಸಂಸಾರದ ಒಗ್ಗಟ್ಟಿನ ಮೂಲಕ ದೇಶದ ಒಗ್ಗಟ್ಟನ್ನು ಸಾರುವ ಹೇರಳ ಸಂಖ್ಯೆಯ ಸಾಮಾಜಿಕ ಸಂಕಥನಗಳು ಚಿತ್ರರಂಗದಲ್ಲಿ ಆರಂಭವಾದವು.

ಸ್ವಾತಂತ್ರ್ಯ ನಂತರದ ಮೊದಲ ದಶಕದಲ್ಲಿ ಮುಂಬೈ ಕೇಂದ್ರಿತ ಹಿಂದಿ ಚಲನಚಿತ್ರಗಳು ಮನರಂಜನೆಯ ಮಾಧ್ಯಮವಾಗಿ ಒಂದು ಮಾದರಿ ಅಖಂಡ ಭಾರತೀಯ ಚಿತ್ರಗಳೆಂಬಂತೆ (ಪ್ಯಾನ್ ಇಂಡಿಯಾ)ಸಾರ್ವತ್ರಿಕ ಸ್ವರೂಪವನ್ನು ನೀಡಲು ಯತ್ನಿಸಿದವು. ಭಾರತದ ಶ್ರೀಮಂತ ಜಾನಪದ ಕಲೆ ಮತ್ತು ಹಾಲಿವುಡ್ನ ಚಿತ್ರಗಳ ನಿರೂಪಣ ಕ್ರಮವನ್ನು ಅಳವಡಿಸಿಕೊಂಡ ಹಿಂದಿ ಚಲನಚಿತ್ರಗಳು ಪ್ರಾದೇಶಿಕ ಭಾಷೆ ಮತ್ತು ಗಡಿಯನ್ನು ದಾಟಿ ವಿಸ್ತಾರ ಪಡೆದುಕೊಂಡದ್ದು ದಿಟ. ಆದರೆ ಕಾಲಾನಂತರದಲ್ಲಿ ಅದರ ಹಕ್ಕಿಗೆ ಸವಾಲೆಸೆದ ಇತರ ಭಾಷೆಯ ಚಿತ್ರಗಳು, ಮುಖ್ಯವಾಗಿ ಬಂಗಾಳ, ದಕ್ಷಿಣ ಭಾರತ ಭಾಷೆಗಳ ಚಿತ್ರಗಳು ತಮ್ಮದೇ ರೀತಿಯ ಭಾರತೀಯತೆಯ ಚಹರೆಗಳನ್ನು ಮೈಗೂಡಿಸಿಕೊಂಡವು.

 

ಆದರೆ ಒಂದು ರಾಜಕೀಯ ಸಿದ್ಧಾಂತದ ಮುಖವಾಣಿಯಾಗಿ ಚಲನಚಿತ್ರದ ಸಾಧ್ಯತೆಗಳನ್ನು ದುಡಿಸಿಕೊಂಡ ಶ್ರೇಯಸ್ಸು ತಮಿಳು ನಾಡಿನ ದ್ರಾವಿಡ ರಾಜಕೀಯ ಪಕ್ಷಕ್ಕೆ ಸಲ್ಲುತ್ತದೆ. ಅಣ್ಣ ಮತ್ತು ಕರುಣಾನಿಧಿಯವರು ತಾವು ನಂಬಿದ ರಾಜಕೀಯ ಸಿದ್ಧಾಂತಗಳಿಗೆ ಅನುಗುಣವಾಗಿ ನಾಟಕ ಮತ್ತು ಚಿತ್ರಕತೆಗಳನ್ನು ರಚಿಸಿ ರಂಗಭೂಮಿ ಮತ್ತು ಚಲನಚಿತ್ರವನ್ನು ದುಡಿಸಿಕೊಂಡರು. ತಮಿಳು ನಾಡಿನಲ್ಲಿ ಚಲನಚಿತ್ರರಂಗವು ಪಕ್ಷ ಸಿದ್ಧಾಂತದ ಕೈಗೊಂಬೆಯಾಗಿ ರೂಪಾಂತರಗೊಂಡದ್ದು ಒಂದು ಕಡೆಯಾದರೆ ರಾಜಕೀಯ ಮತ್ತು ಚಲನಚಿತ್ರರಂಗದ ನಡುವಿನ ಬಿಡಿಸಲಾಗದ ಸಂಬಂಧಗಳು ಮತ್ತೊಂದೆಡೆ ಕುತೂಹಲ ಹುಟ್ಟಿಸುತ್ತವೆ. ಅಲ್ಲದೆ ಆ ಸಿದ್ಧ ಜಾಡಿನಿಂದ ಕ್ರಮೇಣ ಮೈ ಕೊಡವಿಕೊಂಡು ಶೋಷಿತ ವರ್ಗದ ಪರವಾಗಿ ನಿಂತು ವ್ಯವಸ್ಥೆಯ ಲೋಪಗಳನ್ನು ಗಟ್ಟಿದನಿಯಲ್ಲಿ ಹೇಳುತ್ತಾ ವಿಶಿಷ್ಟ ಸಂಕಥನವೊಂದನ್ನು ತಮಿಳು ಚಿತ್ರರಂಗ ಹುಟ್ಟುಹಾಕಿದೆ. ಈ ಎಲ್ಲ ವಿದ್ಯಮಾನಗಳಿಂದ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಅಧ್ಯಾಯವನ್ನು ಉದ್ಘಾಟಿಸಿರುವ ತಮಿಳು ಚಿತ್ರರಂಗ ಆ ನಾಡಿನ ಆಧುನಿಕ ಚರಿತ್ರೆಯ ಒಂದು ಭಾಗವೇ ಆಗಿದೆ. ಅದೇ ಮತ್ತೊಂದು ದೀರ್ಘ ಚರ್ಚೆಗೆ ಎಡೆಮಾಡಿಕೊಡುತ್ತದೆ,

ನೆಹರೂ ಅವರ ಉದಾರವಾದಿ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಿಗೆ ಪೂರಕವಾಗಿ ಸ್ಪಂದಿಸಿದ ಚಿತ್ರರಂಗವು ಹಲವು ಪ್ರಗತಿಪರ ನೀತಿಗಳು ಮತ್ತು ಬಾಂಗ್ಲಾ ವಿಮೋಚನೆಯಲ್ಲಿ ತಳೆದ ಶ್ರೀಮತಿ ಇಂದಿರಾ ಗಾಂಧಿಯವರ ನೀತಿಗಳನ್ನೂ ಬೆಂಬಲಿಸಿತು. ಇಂಡೋ- ಪಾಕ್ ಸಮರದ ಸಮಯದಲ್ಲಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ನೀಡಿದ ಜೈ ಜವಾನ್, ಜೈ ಕಿಸಾನ್ ಘೋಷಣೆಯನ್ನು ಆಧರಿಸಿ ಮನೋಜ್ ಕುಮಾರ್ ಅವರು ‘ಉಪ್ಕಾರ್’ ಚಿತ್ರವನ್ನು ನಿರ್ಮಿಸಿದ್ದು ಇನ್ನೂ ಹಸಿರಾಗಿದೆ. ಆದರೆ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ, ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಹತ್ತಿಕ್ಕಿ, ಸರ್ವಾಧಿಕಾರವನ್ನು ಹೇರಿದ ಶ್ರೀಮತಿ ಗಾಂಧಿಯವರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ (1975-77) ಬಿಗಿ ಸೆನ್ಸಾರ್ಶಿಪ್ ಮೂಲಕ ಸಿನೆಮಾ ರಂಗವನ್ನು ಹತೋಟಿಯಲ್ಲಿಟ್ಟಿದ್ದರು. ಇಂದಿರಾ ಅವರಿಗೆ ಒಂದೆಡೆ ಚಿತ್ರರಂಗ ಮಣಿದು ಅವರ ನೀತಿಗಳಿಗೆ ಪೂರಕವಾದ ಚಿತ್ರಗಳನ್ನು ಮಾಡಿದರೆ ಕಿಸ್ಸಾ ಕುರ್ಸಿ ಕಾ ದಂತಹ ರಾಜಕೀಯ ವಿಡಂಬನೆಗಳೂ ಸರ್ವಾಧಿಕಾರಕ್ಕೆ ಪ್ರತಿಕ್ರಿಯೆಯಾಗಿ ಬಂದವು. ಇಂದಿರಾ ಅವರ ನಂತರ ಭಾರತೀಯ ಚಲನ ಚಿತ್ರರಂಗ ಹೆಚ್ಚು ಹೆಚ್ಚು ಸ್ವಾಯತ್ತವಾಗತೊಡಗಿ, ಅರ್ಥಪೂರ್ಣ ಚಿತ್ರಗಳನ್ನು ನಿರ್ಮಾಣ ಮಾಡುವ ಸಂವೇದನಾಶೀಲ ಚಿತ್ರ ನಿರ್ದೇಶಕರು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನೀತಿಗಳ ಸಾಫಲ್ಯ ವೈಫಲ್ಯಗಳನ್ನು ಕುರಿತು ಚಿತ್ರಗಳನ್ನು ಮಾಡತೊಡಗಿದರು.

 

ಇದರರ್ಥ ಚಿತ್ರ ನಿರ್ಮಾಪಕರು ಪ್ರಭುತ್ವದ ನೀತಿಗಳ ವಸ್ತುಗಳನ್ನು ಆಧರಿಸಿ ಚಿತ್ರ ಮಾಡುವ ಪ್ರವೃತ್ತಿಗೆೆ ಸಂಪೂರ್ಣ ವಿಮುಖರಾದರು ಎಂದರ್ಥವಲ್ಲ. ಸರಕಾರದ ನೀತಿಗಳ ಬಗ್ಗೆ ಚಿತ್ರ ನಿರ್ಮಿಸಿದರೂ ಅವು ಸರಕಾರದ ಪ್ರಚಾರದ ಸಾಮಗ್ರಿಯಾಗದೆ ಸಮಾಜದ ಹಲವು ಮಗ್ಗಲುಗಳನ್ನು ಸೂಕ್ಷ್ಮವಾಗಿ ಹುಡುಕುವ ಪ್ರಯತ್ನಗಳಾಗಿ ಹಲವು ನಿರ್ದೇಶಕರು ಗಮನ ಸೆಳೆದರು. ತುರ್ತು ಪರಿಸ್ಥಿತಿ ಕಾಲದಲ್ಲಿ ಗುಜರಾತಿನ ಹಾಲು ಉತ್ಪಾದಕರ ಸಹಕಾರಿ ಆಂದೋಲನವನ್ನು ಕುರಿತು ‘ಮಂಥನ್’ ಚಿತ್ರ ನಿರ್ದೇಶಿಸಿದ ಶ್ಯಾಮ್ ಬೆನೆಗಲ್ ಅವರ ಕುಸುರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಭೂಹೀನರಿಗೆ ಕೃಷಿ ಭೂಮಿಯನ್ನು ಹಂಚಿಕೆ ಮಾಡಿದ ಎಡರಂಗದ ಪ್ರಗತಿಪರ ಕಾರ್ಯಕ್ರಮ ಕುರಿತ ‘ಆರೋಹಣ್’(1982), ಆಂಧ್ರಪ್ರದೇಶದ ನೇಕಾರರ ಸಹಕಾರ ಆಂದೋಲನವನ್ನು ಕುರಿತ ‘ಸುಸ್ಮಾನ್’(1987) ಭಾರತೀಯ ರೈಲ್ವೆ ಸಂಸ್ಥೆಯ ಸಾಧನೆ ಬಿಂಬಿಸುವ ‘ಯಾತ್ರಾ’ (1986) ಹಾಗೂ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಆಧರಿಸಿ ರೂಪಿಸಿದ ‘ಭಾರತ್ ಏಕ್ ಖೋಜ್’(1988) ಟಿವಿ ಸರಣಿಯನ್ನು ಸಹ ನಿರ್ದೇಶಿಸಿದರು. ಆದರೆ ಇಂಥ ಪ್ರಯತ್ನಗಳು ಸರಕಾರದ ತುತ್ತೂರಿಯಾಗದೆ ತಮ್ಮ ಕಲಾ ಸ್ವಾಯತ್ತತೆಯನ್ನು ಉಳಿಸಿಕೊಂಡಿದ್ದವು. ಸರಕಾರದ ಜನವಿರೋಧಿ ನೀತಿಗಳ ಕುರಿತು ಅವು ಎಂದೂ ಬೆಂಬಲಿಸಲಿಲ್ಲ.

ಜಾಗತೀಕರಣದ ನಂತರ ಬಾಲಿವುಡ್ನ ಸಿನಿಮೋದ್ಯಮವು ಮಾತ್ರವಲ್ಲ ಇಡೀ ಭಾರತೀಯ ಚಲನಚಿತ್ರೋದ್ಯಮದ ದಿಕ್ಕೇ ಬದಲಾಯಿತು. ವ್ಯಾಪಾರಿ ಯಶಸ್ಸು ಚಿತ್ರಗಳ ಗುಣಮಟ್ಟದ ಮಾನದಂಡವಾಯಿತು. ಸರಕಾರದ ನೀತಿಗಳಿಗೆ ಪೂರಕವಾಗಿ ಚಿತ್ರ ಮಾಡುವ ಪ್ರಯತ್ನ ಲಾಭದಾಯಕವಾಗಿದ್ದರೆ ಮಾತ್ರ ಎನ್ನುವ ಸ್ಥಿತಿಗೆ ಚಿತ್ರ ನಿರ್ಮಾಣ ಬಂದು ನಿಂತಿತು.

ಆದರೆ ಈ ಚಿತ್ರವೂ 2014ರ ನಂತರ ಬದಲಾಯಿತು. ಸರಕಾರದ ಕಾರ್ಯಕ್ರಮಕ್ಕಿಂತಲೂ ಆಡಳಿತ ಪಕ್ಷವೊಂದು ನಂಬಿರುವ ರಾಜಕೀಯ ಸಿದ್ಧಾಂತಗಳಿಗೆ ಅನುಗುಣವಾದ ವಸ್ತು ಮತ್ತು ಪ್ರಭುತ್ವ ಅಬ್ಬರದ ಪ್ರಚಾರದಿಂದ ಜಾರಿಗೊಳಿಸಿದ ಕಾರ್ಯಕ್ರಮಗಳ ಪರವಾಗಿ ಹಲವು ನಿರ್ದೇಶಕರು ಚಿತ್ರಗಳನ್ನು ಮಾಡುತ್ತಾ ಹೋದರು. ಆರಂಭದಲ್ಲಿ ಹೇಳಿದಂತೆ ಈ ಚಿತ್ರಗಳು ಭಾರತದ ಚರಿತ್ರೆಯನ್ನು ಬದಲಾಯಿಸಿ ಬರೆಯಬೇಕೆನ್ನುವ ಪಕ್ಷವೊಂದರ ಹಂಬಲವನ್ನು ಪೋಷಿಸುವ ರೀತಿಯಲ್ಲಿ ಹಲವು ಐತಿಹಾಸಿಕ ಚಿತ್ರಗಳು ನಿರ್ಮಾಣಗೊಂಡವು. ಇತಿಹಾಸದ ಆಧಾರವಿಲ್ಲದ ‘ಪದ್ಮಾವತ್’ನಂಥ ಚಿತ್ರ ಕೂಡ ಐತಿಹಾಸಿಕ ಚಿತ್ರದ ಲೇಬಲ್ ಹೊತ್ತು ಬಂತು. ಭಾರತದ ಗತವೈಭವ ಸಾರುವ ಮತ್ತು ಸಮಕಾಲೀನ ಯುದ್ಧೋನ್ಮಾದವನ್ನು ಪ್ರಚೋದಿಸುವ ಚರಿತ್ರೆಯನ್ನು ತಿರುಚಿದ ಪಾಣೀಪತ್, ಕೇಸರಿ, ಮಣಿಕರ್ಣೀಕಾ, ಸಾಮ್ರಾಟ್ ಪೃಥ್ವಿರಾಜ್, ಪವನ್ಖಿಂಡ್ ಮುಂತಾದ ಚಿತ್ರಗಳು ಸಮಕಾಲೀನ ಕಣ್ಣಿನಲ್ಲಿ ಇತಿಹಾಸವನ್ನು ಕಟ್ಟಿಕೊಟ್ಟವು. ಮುಖ್ಯವಾಗಿ ಮುಸ್ಲಿಮ್ ಆಕ್ರಮಣಕಾರರ ಕ್ರೌರ್ಯ, ದೇಶಾಭಿಮಾನದಂಥ ಸಂಗತಿಗಳು ಇತಿಹಾಸದ ವಾಸ್ತವವನ್ನು ಮರೆಮಾಚುವುದರಲ್ಲಿ ಯಶಸ್ವಿಯಾದವು. ಆಕ್ಸಿಡೆಂಟ್ ಪ್ರೈಂ ಮಿನಿಸ್ಟರ್ ಮತ್ತು ಪಿಎಂ ನರೇಂದ್ರ ಮೋದಿಯಂಥ ಚಿತ್ರಗಳು ಯಾವ ಪಕ್ಷದ ಸಿದ್ಧಾಂತಗಳ ವಕ್ತಾರಿಕೆಗೆ ಬಳಕೆಯಾಗಿವೆ ಎಂಬುದು ಸ್ವಯಂ ವೇದ್ಯವಾಗಿವೆ.

ಇದಲ್ಲದೆ ಸಾಮಾಜಿಕ ಸಂದೇಶ ನೀಡುವ ಹಣೆಪಟ್ಟಿಯ ಚಿತ್ರಗಳು ಸಹ ಸೂಕ್ಷ್ಮವಾಗಿ ಅದೇ ಕೆಲಸವನ್ನು ಮಾಡುತ್ತಿವೆ. ಅಕ್ಷಯ ಕುಮಾರ್ ನಟ ಅಭಿನಯಿಸಿರುವ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಅಂಥ ಚಿತ್ರಗಳಲ್ಲೊಂದು. ಸರಕಾರದ ಸ್ವಚ್ಛ ಭಾರತ್ ಅಭಿಯಾನವನ್ನು ಪ್ರಚಾರ ಮಾಡುವ ದೃಷ್ಟಿಯಿಂದ ತೆಗೆದಿರುವ ಚಿತ್ರದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆಧುನಿಕ ಮಹಿಳೆ ಮದುವೆಯಾಗಿ ಬಂದ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಗಂಡನ ಮನ ಒಲಿಸಿದಾಗ ವಿರೋಧ ವ್ಯಕ್ತವಾಗುವುದು ಸಂಪ್ರದಾಯ ಶರಣ ಮನೆಯ ಯಜಮಾನನಿಂದ. ಅದಕ್ಕೆ ಮನುಸ್ಮತಿಯನ್ನು ಉದಾಹರಿಸಿ ಸಮರ್ಥನೆಯನ್ನು ಮಾಡುವ ದೃಶ್ಯವಿದೆ. ಆದರೆ ನಾಯಕ ಅದೇ ಮನುಸ್ಮತಿಯನ್ನು ಉಲ್ಲೇಖಿಸಿ ಶೌಚಾಲಯಕ್ಕೆ ಮುಂದಾಗುತ್ತಾನೆ. ಆದರೆ ತಲೆ ಮೇಲೆ ಮಲಹೊರುವ ಹೀನ ಪದ್ಧತಿಯ ಬಗ್ಗೆ ಈ ಚಿತ್ರ ಮಾತನಾಡುವುದಿಲ್ಲ. ಈ ದೇಶದ ಜಾತಿ ವ್ಯವಸ್ಥೆಯನ್ನು ಸ್ಥಿರಗೊಳಿಸಿದ ಮನುಸ್ಮತಿಯನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅವರು ಸುಟ್ಟುಹಾಕಿ ಪ್ರತಿಭಟಿಸಿದ್ದರು. ಅಂಬೇಡ್ಕರ್ ಅವರ ಚಿತ್ರ ನ್ಯಾಯಾಲಯದ ಗೋಡೆಯ ಮೇಲೆ ಮಸುಕಾಗಿ ಕಾಣುವುದನ್ನು ಬಿಟ್ಟರೆ ಈ ದೇಶ ಅನುಸರಿಸಿದ ಈಗಲೂ ಮಲ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಂಡು ಅಸು ನೀಗುತ್ತಿರುವ ಪ್ರಕರಣಗಳು ಎಲ್ಲಿಯೂ ಚರ್ಚಿತವಾಗುವುದಿಲ್ಲ. ಈ ವಿಷಯವನ್ನು ಜಾಣತನದಿಂದ ಮರೆಗೆ ಸರಿಸಿ ಸಮಸ್ಯೆಗೆ ಮನುಸ್ಮತಿಯಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಇದರ ಹಿಂದಿನ ರಾಜಕೀಯ ಕಾರ್ಯಸೂಚಿಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಸ್ವಚ್ಛ ಭಾರತದ ಬಗ್ಗೆ ಅರಿವು ಮೂಡಿಸುವ ಇಂಥ ಸಂದೇಶ ನೀಡುವ ಚಿತ್ರಗಳು ತನಗೆ ತಾನೇ ಅಪಾಯಕಾರಿಯಾಗಿ ಕಾಣುವುದಿಲ್ಲ. ಆದರೆ ಕಾಸ್ಮೆಟಿಕ್ ಪರಿಹಾರ ಹುಡುಕಿ ಸಮಸ್ಯೆಯ ಮೂಲವನ್ನು ಮರೆ ಮಾಚುವ ಹುನ್ನಾರವಿದೆ.

ಹಿಂದೂ ಬಹುಸಂಖ್ಯಾತರ ಪ್ರಾಬಲ್ಯವಾದವನ್ನು ಪುಷ್ಟೀಕರಿಸುವ, ಮೀಸಲಾತಿಯನ್ನು ಅಪಮಾನಿಸುವ, ಮುಸ್ಲಿಮ್ ಭಯೋತ್ಪಾದನೆಯನ್ನು ಬಿತ್ತುವ, ನೋಟು ಅಮಾನ್ಯೀಕರಣದ ನೀತಿಯನ್ನು ಬೆಂಬಲಿಸುವ ಸೂರ್ಯವಂಶಿ, ಹುರ್ದಂಗ್, ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಮೊದಲಾದ ಚಿತ್ರಗಳು ಸಾಮಾಜಿಕ ಸಂದೇಶ ಬಿತ್ತರಿಸುವ ನೆಪದಲ್ಲಿ ಪಕ್ಷವೊಂದರ ಸಿದ್ಧಾಂತದ ಪರ ಪ್ರಚಾರ ಮಾಡುವ ಚಿತ್ರಗಳಾಗಿ ಜನಪ್ರಿಯವಾಗಿವೆ.. ಇವು ಸಮಸ್ಯೆಯ ಎಲ್ಲ ಮಗ್ಗಲುಗಳನ್ನು ವಿಶ್ಲೇಷಿಸುವ ಬದಲು ಸೀಮಿತ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಜಾತಿ ಪದ್ಧತಿಯನ್ನು ಒಪ್ಪಿಸುವ, ಸರಕಾರದ ನಡೆಯನ್ನು ಸಮರ್ಥಿಸುವ ಪ್ರಚಾರ ಸಾಧನಗಳಾಗಿವೆ. ವಿಮರ್ಶಾತ್ಮಕ ದೃಷ್ಟಿಕೋನವಿಲ್ಲದ ಜಾತಿ, ಧರ್ಮ, ಗಂಡಾಳ್ವಿಕೆ ಮತ್ತು ನಿರಂಕುಶ ಅಧಿಕಾರವನ್ನು ಸೂಕ್ಷ್ಮವಾಗಿ ಸಮರ್ಥಿಸುವ ಪ್ರಯೋಗಗಳಂತೆ ಕಾಣುತ್ತವೆ. ಒಂದು ಕಾಲದಲ್ಲಿ ಸಾಮಾಜಿಕ ಸಮಾನತೆ, ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಮೂಡಿಸುವ, ದೇಶ ನಿರ್ಮಾಣದ ಕನಸುಗಳನ್ನು ಬಿತ್ತುವ (ಶಿಕ್ಷಣ ಸಹಕಾರ ತತ್ವ ಇತ್ಯಾದಿ) ಪ್ರಭುತ್ವದ ಉತ್ತಮ ನೀತಿಗಳ ಪ್ರಚಾರಕ್ಕೆ ಕೈಜೋಡಿಸಿದ್ದ ಚಿತ್ರಗಳು ಈಗ ಪಕ್ಷ ಸಿದ್ಧಾಂತಗಳ ಸಮರ್ಥನೆಯ ಕಾರ್ಯದ ಸಾಮಗ್ರಿಗಳಾಗಿ ಬಳಕೆಯಾಗುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಕೆ. ಪುಟ್ಟಸ್ವಾಮಿ

contributor

Similar News

ಭಾವ - ವಿಕಲ್ಪ
ಕಥೆಗಾರ